ಈ ವರ್ಷದ ಬಹುನಿರೀಕ್ಷಿತ ‘ಆರ್ಆರ್ಆರ್’ ಸಿನಿಮಾ (RRR Movie) ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಮಾ.25ರಂದು ಈ ಚಿತ್ರ ಅದ್ದೂರಿಯಾಗಿ ವಿಶ್ವಾದ್ಯಂತ ರಿಲೀಸ್ ಆಗಲಿದೆ. ಕರ್ನಾಟಕದಲ್ಲಿ ಕೆವಿಎನ್ ಪ್ರೊಡಕ್ಷನ್ ಸಂಸ್ಥೆಯು ‘ಆರ್ಆರ್ಆರ್’ ಸಿನಿಮಾದ ವಿತರಣೆ ಜವಾಬ್ದಾರಿಯನ್ನು ವಹಿಸಿಕೊಂಡಿದೆ. ರಾಜಮೌಳಿ ನಿರ್ದೇಶನದ ಈ ಸಿನಿಮಾ ಬಗ್ಗೆ ದೊಡ್ಡ ಮಟ್ಟದ ಹೈಪ್ ಸೃಷ್ಟಿ ಆಗಿದೆ. ಅಷ್ಟೇ ದೊಡ್ಡ ಮಟ್ಟದಲ್ಲಿ ಪ್ರೀ-ರಿಲೀಸ್ ಇವೆಂಟ್ (RRR Pre Release Event) ಮಾಡಲು ಸಿದ್ಧತೆ ನಡೆದಿದೆ. ಈ ಕುರಿತು ಮಾಹಿತಿ ನೀಡಲು ಕೆವಿಎನ್ ಸಂಸ್ಥೆಯ ವೆಂಕಟ್ ಕೊಣಂಕಿ ಅವರು ಭಾನುವಾರ (ಮಾ.13) ಸುದ್ದಿಗೋಷ್ಠಿ ಆಯೋಜಿಸಿದ್ದರು. ಈ ವೇಳೆ ಪ್ರೀ-ರಿಲೀಸ್ ಕಾರ್ಯಕ್ರಮದ ಬಗ್ಗೆ ಅವರು ಹಲವು ಮಾಹಿತಿ ಹಂಚಿಕೊಂಡರು. ರಾಮ್ ಚರಣ್, ಆಲಿಯಾ ಭಟ್, ಜ್ಯೂ. ಎನ್ಟಿಆರ್ ಮುಂತಾದ ಸ್ಟಾರ್ ಕಲಾವಿದರು ‘ಆರ್ಆರ್ಆರ್’ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಈ ಚಿತ್ರ ರಿಲೀಸ್ ಆಗುತ್ತಿದೆ. ವಿದೇಶದ ಹಲವು ಸ್ಕ್ರೀನ್ಗಳಲ್ಲಿ ಬಿಡುಗಡೆ ಆಗಲಿದೆ. ಮಾ.19ರಂದು ಚಿಕ್ಕಬಳ್ಳಾಪುರದ ಅಗಲಗುರ್ಕಿಯಲ್ಲಿ ಅದ್ದೂರಿಯಾಗಿ ನಡೆಯಲಿರುವ ಪ್ರೀ-ರಿಲೀಸ್ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಸಿಎಂ ಬಸವರಾಜ ಬೊಮ್ಮಾಯಿ (CM Basavaraj Bommai) ‘ಹ್ಯಾಟ್ರಿಕ್ ಹೀರೋ’ ಶಿವರಾಜ್ಕುಮಾರ್ ಆಗಮಿಸಲಿದ್ದಾರೆ.
‘ಬಾಹುಬಲಿ’ ಚಿತ್ರದ ಯಶಸ್ಸಿನ ಬಳಿಕ ರಾಜಮೌಳಿ ನಿರ್ದೇಶನ ಮಾಡಿರುವ ಸಿನಿಮಾ ಆದ್ದರಿಂದ ಸಹಜವಾಗಿಯೇ ನಿರೀಕ್ಷೆ ಜೋರಾಗಿದೆ. ಕನ್ನಡಕ್ಕೂ ಡಬ್ ಆಗಿ ‘ಆರ್ಆರ್ಆರ್’ ಚಿತ್ರ ಬಿಡುಗಡೆ ಆಗುತ್ತಿದೆ. ‘ಇದು ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದರೂ ಕೂಡ ಕರ್ನಾಟಕದಲ್ಲಿ ಪ್ರೀ-ರಿಲೀಸ್ ಇವೆಂಟ್ ಮಾಡುತ್ತಿರುವುದು ನಮ್ಮ ಹೆಮ್ಮೆ. ಇದು ಭಾರತದ ಅತಿ ದೊಡ್ಡ ಪ್ರೀ-ರಿಲೀಸ್ ಇವೆಂಟ್ ಆಗಿರಲಿದೆ. ಬೇರೆ ರಾಜ್ಯಗಳಿಂದಲೂ ಇದಕ್ಕೆ ಅಭಿಮಾನಿಗಳು ಬರಲಿದ್ದಾರೆ’ ಎಂದು ವೆಂಕಟ್ ಕೊಣಂಕಿ ಹೇಳಿದ್ದಾರೆ.
ಪ್ರೀ-ರಿಲೀಸ್ ಇವೆಂಟ್ನಲ್ಲಿ ಏನೆಲ್ಲ ಇರಲಿದೆ?
ಆರ್ಆರ್ಆರ್ ಸಿನಿಮಾದ ಪ್ರೀ-ರಿಲೀಸ್ ಕಾರ್ಯಕ್ರಮದಲ್ಲಿ ಪುನೀತ್ ರಾಜ್ಕುಮಾರ್ ಅವರಿಗೆ ನಮನ ಸಲ್ಲಿಸಲಾಗುತ್ತದೆ. 25 ಸಾವಿರ ಚದರ ಅಡಿಯ ಬೃಹತ್ ಎಲ್ಇಡಿ ಸ್ಕ್ರೀನ್ ಮತ್ತು 45 ಬೃಹತ್ ಲೇಸರ್ ಲೈಟ್ಗಳ ದೊಡ್ಡ ವೇದಿಕೆ ಸಿದ್ಧವಾಗುತ್ತಿದೆ. ಅನುಶ್ರೀ, ಅಕುಲ್ ಬಾಲಾಜಿ, ಸುಮಾ ಅವರು ಈ ಕಾರ್ಯಕ್ರಮದ ನಿರೂಪಣೆ ಮಾಡಲಿದ್ದಾರೆ. 2 ಲಕ್ಷ ಜನರು ಈ ಇವೆಂಟ್ನಲ್ಲಿ ಭಾಗವಹಿಸುವ ನಿರೀಕ್ಷೆ ಇದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಶಿವರಾಜ್ಕುಮಾರ್ ಅವರ ಜೊತೆಯಲ್ಲಿ ಚಿಕ್ಕಬಳ್ಳಾಪುರ ಶಾಸಕ, ಆರೋಗ್ಯ ಸಚಿವ ಕೆ. ಸುಧಾಕರ್ ಅವರು ಕೂಡ ಈ ಕಾರ್ಯಕ್ರಮದಲ್ಲಿ ಭಾಗಿ ಆಗಲಿದ್ದಾರೆ. ಸಂಗೀತ ನಿರ್ದೇಶಕ ಎಂ.ಎಂ. ಕೀರವಾಣಿ ಅವರು ಲೈವ್ ಕಾರ್ಯಕ್ರಮ ನೀಡಲಿದ್ದಾರೆ.
ಎಲ್ಲಿ ಸಿಗಲಿದೆ ಪಾಸ್?
ಈ ಕಾರ್ಯಕ್ರಮಕ್ಕೆ ಎಲ್ಲ ಅಭಿಮಾನಿಗಳಿಗೂ ಮುಕ್ತ ಆಹ್ವಾನ ನೀಡಲಾಗಿದೆ. ಕೆವಿಎನ್ ಸಂಸ್ಥೆಯ www.kvnproductions.co.in ವೆಬ್ ಸೈಟ್ ಮೂಲಕ ಪಾಸ್ಗಳನ್ನು ಉಚಿತವಾಗಿ ಪಡೆಯಬಹುದು. ಈ ಇವೆಂಟ್ ನಡೆಸಿಕೊಡುವ ಜವಾಬ್ದಾರಿಯನ್ನು ಜೆ ಮೀಡಿಯಾ ಸಂಸ್ಥೆ ವಹಿಸಿಕೊಂಡಿದೆ. ಇಡೀ ಕಾರ್ಯಕ್ರಮವೇ ಒಂದು ವಿಶ್ಯುವಲ್ ಟ್ರೀಟ್ ಆಗಿರಲಿದೆ ಎಂದು ವೆಂಕಟ್ ಕೊಣಂಕಿ ಅವರು ತಿಳಿಸಿದ್ದಾರೆ. ರಾಮ್ ಚರಣ್, ಆಲಿಯಾ ಭಟ್, ಜ್ಯೂ. ಎನ್ಟಿಆರ್, ಅಜಯ್ ದೇವಗನ್ ಸೇರಿದಂತೆ ಅನೇಕ ಕಲಾವಿದರು ಈ ಇವೆಂಟ್ನಲ್ಲಿ ಭಾಗವಹಿಸಲಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಈ ಮೊದಲೇ ‘ಆರ್ಆರ್ಆರ್’ ಚಿತ್ರ ರಿಲೀಸ್ ಆಗಬೇಕಿತ್ತು. ಆದರೆ ಕೊರೊನಾ ಕಾರಣದಿಂದ ಪದೇಪದೇ ಪೋಸ್ಟ್ಪೋನ್ ಆಗಿತ್ತು. ಈಗ ಚಿತ್ರದ ಬಿಡುಗಡೆಗೆ ಕಾಲ ಕೂಡಿಬಂದಿದ್ದು, ಮಾ.25ರಂದು ಅದ್ದೂರಿಯಾಗಿ ತೆರೆಕಾಣಲಿದೆ.
ಇದನ್ನೂ ಓದಿ:
‘ಆರ್ಆರ್ಆರ್’ ನಿರ್ಮಾಪಕನ ಖಾತೆಯಿಂದ ಪ್ರಭಾಸ್ಗೆ ವರ್ಗಾವಣೆ ಆಯ್ತು 50 ಕೋಟಿ ರೂಪಾಯಿ?
RRR: ರಾಮ್ ಚರಣ್, ಜ್ಯೂ. ಎನ್ಟಿಆರ್, ರಾಜಮೌಳಿ, ಆಲಿಯಾ ಇವರಲ್ಲಿ ಹೆಚ್ಚು ಸಂಭಾವನೆ ಪಡೆದವರು ಯಾರು?
Published On - 2:10 pm, Sun, 13 March 22