‘ಸಂಬರಾಲ ಏಟಿಗಟ್ಟು’ ಗ್ಲಿಂಪ್ಸ್ ಮೂಲಕ ಕನ್ನಡದಲ್ಲೂ ಅಬ್ಬರಿಸಿದ ಸಾಯಿ ದುರ್ಗಾ ತೇಜ್
ಅದ್ದೂರಿ ಬಜೆಟ್ನಲ್ಲಿ ‘ಸಂಬರಾಲ ಏಟಿಗಟ್ಟು’ ಪ್ಯಾನ್ ಇಂಡಿಯಾ ಸಿನಿಮಾ ನಿರ್ಮಾಣ ಆಗಿದೆ. ತೆಲುಗಿನ ಖ್ಯಾತ ನಟ ಸಾಯಿ ದುರ್ಗಾ ತೇಜ್ ಅವರು ಈ ಸಿನಿಮಾದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ. ರೋಹಿತ್ ಕೆ.ಪಿ. ಅವರು ನಿರ್ದೇಶನ ಮಾಡಿದ್ದು, ಐಶ್ವರ್ಯಾ ಲಕ್ಷ್ಮೀ ನಾಯಕಿಯಾಗಿ ನಟಿಸಿದ್ದಾರೆ.

ಟಾಲಿವುಡ್ನ ಖ್ಯಾತ ನಟ ಸಾಯಿ ಧರಮ್ ತೇಜ್ ಅವರು ಈಗ ಸಾಯಿ ದುರ್ಗಾ ತೇಜ್ (Sai Durgha Tej) ಎಂಬ ಹೆಸರಿನಿಂದ ಗುರುತಿಸಿಕೊಳ್ಳುತ್ತಿದ್ದಾರೆ. 2023ರಲ್ಲಿ ಅವರು ‘ವಿರೂಪಾಕ್ಷ’ ಸಿನಿಮಾದಿಂದ ಸೂಪರ್ ಸಕ್ಸಸ್ ಕಂಡಿದ್ದರು. ಈಗ ಅವರು ಮತ್ತೊಂದು ಅದ್ದೂರಿ ಸಿನಿಮಾದ ಮೂಲಕ ಜನರ ಎದುರು ಬರಲು ಸಜ್ಜಾಗಿದ್ದಾರೆ. ಈ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಆಗಲಿದೆ. ಹೌದು, ಸಾಯಿ ದುರ್ಗಾ ತೇಜ್ ನಟನೆಯ ‘ಸಂಬರಾಲ ಏಟಿಗಟ್ಟು’ (Sambarala Yeti Gattu) ಸಿನಿಮಾದ ಗ್ಲಿಂಪ್ಸ್ ಬಿಡುಗಡೆ ಆಗಿದೆ. ತೆಲುಗು, ಕನ್ನಡ, ತಮಿಳು, ಹಿಂದಿ, ಮಲಯಾಳಂ ಭಾಷೆಯಲ್ಲಿ ಗ್ಲಿಂಪ್ಸ್ ರಿಲೀಸ್ ಮಾಡಲಾಗಿದೆ.
‘ಪ್ರೈಮ್ ಶೋ ಎಂಟರ್ಟೈನ್ಮೆಂಟ್’ ಯೂಟ್ಯೂಬ್ ಚಾನೆಲ್ ಮೂಲಕ ‘ಸಂಬರಾಲ ಏಟಿಗಟ್ಟು’ ಸಿನಿಮಾದ ಗ್ಲಿಂಪ್ಸ್ ಬಿಡುಗಡೆ ಮಾಡಲಾಗಿದೆ. ಇದಕ್ಕೆ ಸಿನಿಪ್ರಿಯರಿಂದ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ. ಈ ಟೀಸರ್ನಲ್ಲಿ ಸಾಯಿ ದುರ್ಗ ತೇಜ್ ಅವರ ಭರ್ಜರಿ ಆ್ಯಕ್ಷನ್ ಕಾಣಿಸಿದೆ. ಇದು ಒಂದು ರಕ್ತಸಿಕ್ತ ಕಥೆ ಇರುವ ಸಿನಿಮಾ ಎಂಬುದಕ್ಕೆ ಟೀಸರ್ನಲ್ಲಿ ಝಲಕ್ ಕಾಣಿಸಿದೆ. ಮಾಸ್ ಅವತಾರದಲ್ಲಿ ಸಾಯಿ ದುರ್ಗ ತೇಜ್ ಅವರು ಪ್ರೇಕ್ಷಕರನ್ನು ರಂಜಿಸಲಿದ್ದಾರೆ.
‘ಸಂಬರಾಲ ಏಟಿಗಟ್ಟು’ ಸಿನಿಮಾದ ಗ್ಲಿಂಪ್ಸ್ನಲ್ಲಿ ಸಾಯಿ ದುರ್ಗಾ ತೇಜ್ ಅವರ ಲುಕ್ ತುಂಬಾ ರಗಡ್ ಆಗಿದೆ. ಅಸಾಮಾನ್ಯ ಫೈಟರ್ ರೀತಿ ಅವರು ಎಂಟ್ರಿ ನೀಡಿದ್ದಾರೆ. ಈ ರೀತಿ ರಗಡ್ ಲುಕ್ ಸಲುವಾಗಿ ಅವರು ಸಾಕಷ್ಟು ಪರಿಶ್ರಮ ಹಾಕಿದ್ದಾರೆ. ಕಬ್ಬಿಣದಂತೆ ದೇಹವನ್ನ ಹುರಿಗೊಳಿಸಿಕೊಂಡಿದ್ದಾರೆ. ಅವರ ಪರಿಶ್ರಮದ ಫಲ ಈ ಗ್ಲಿಂಪ್ಸ್ ವಿಡಿಯೋದಲ್ಲಿ ಕಾಣಿಸಿದೆ.
‘ಸಂಬರಾಲ ಏಟಿಗಟ್ಟು’ ಸಿನಿಮಾದ ಗ್ಲಿಂಪ್ಸ್:
‘ಹನುಮಾನ್’ ಸಿನಿಮಾ ಮೂಲಕ ಬ್ಲಾಕ್ ಬಸ್ಟರ್ ಹಿಟ್ ನೀಡಿದ ಕೆ. ನಿರಂಜನ್ ರೆಡ್ಡಿ ಮತ್ತು ಚೈತನ್ಯ ರೆಡ್ಡಿ ಅವರು ‘ಪ್ರೈಮ್ ಶೋ ಎಂಟರ್‌ಟೇನ್‌ಮೆಂಟ್’ ಮೂಲಕ ಈಗ ‘ಸಂಬರಾಲ ಏಟಿಗಟ್ಟು’ ಸಿನಿಮಾವನ್ನು ನಿರ್ಮಿಸಿದ್ದಾರೆ. ತೆಲುಗು, ಕನ್ನಡ, ಮಲಯಾಳಂ, ತಮಿಳು ಮತ್ತು ಹಿಂದಿ ಭಾಷೆಯಲ್ಲಿ ಈ ಸಿನಿಮಾ ಬಿಡುಗಡೆ ಆಗಲಿದೆ. ಕನ್ನಡದಲ್ಲಿ ಗ್ಲಿಂಪ್ಸ್ ನೋಡಿದ ಪ್ರೇಕ್ಷಕರು ಪಾಸಿಟಿವ್ ಆಗಿ ಕಮೆಂಟ್ ಮಾಡುತ್ತಿದ್ದಾರೆ.
ಇದನ್ನೂ ಓದಿ: ಸೋದರ ಮಾವನ ‘ಓಜಿ’ ಸಿನಿಮಾ ನೋಡಿ ಶಿಳ್ಳೆ ಹೊಡೆದ ಸಾಯಿ ಧರಮ್ ತೇಜ
ಈ ಸಿನಿಮಾದಲ್ಲಿ ಸಾಯಿ ದುರ್ಗಾ ತೇಜ್ ಅವರಿಗೆ ಜೋಡಿಯಾಗಿ ಐಶ್ವರ್ಯ ಲಕ್ಷ್ಮೀ ಅವರು ಅಭಿನಯಿಸಿದ್ದಾರೆ. ಜಗಪತಿ ಬಾಬು, ಶ್ರೀಕಾಂತ್, ಸಾಯಿ ಕುಮಾರ್, ಅನನ್ಯ ನಾಗಲ್ಲ ಮುಂತಾದವರು ಕೂಡ ಈ ಸಿನಿಮಾದ ಪಾತ್ರವರ್ಗದಲ್ಲಿ ಇದ್ದಾರೆ. ‘ಸಂಬರಾಲ ಏಟಿಗಟ್ಟು’ ಸಿನಿಮಾಗೆ ಯುವ ನಿರ್ದೇಶಕ ರೋಹಿತ್ ಕೆ.ಪಿ. ಅವರು ಆ್ಯಕ್ಷನ್-ಕಟ್ ಹೇಳಿದ್ದಾರೆ. ವೆಟ್ರಿವೇಲ್ ಪಳನಿಸ್ವಾಮಿ ಅವರ ಛಾಯಾಗ್ರಹಣ, ಬಿ. ಅಜನೀಶ್ ಲೋಕನಾಥ್ ಅವರ ಸಂಗೀತ ನಿರ್ದೇಶನ, ನವೀನ್ ವಿಜಯಕೃಷ್ಣ ಅವರ ಸಂಕಲನ ಈ ಸಿನಿಮಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




