‘ಸಲಾರ್’ ಸಿನಿಮಾ (Salaar Movie) ಅಭಿಮಾನಿಗಳಲ್ಲಿ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಸಾಲು ಸಾಲು ಸೋಲು ಕಂಡು ಪ್ರಭಾಸ್ ಅವರು ಹೈರಾಣವಾಗಿದ್ದಾರೆ. ಅವರಿಗೆ ಒಂದು ದೊಡ್ಡ ಗೆಲುವಿನ ಅವಶ್ಯಕತೆ ಇದೆ. ‘ಸಲಾರ್’ ಚಿತ್ರದಿಂದ ಅವರು ಗೆದ್ದು ಬೀಗುವ ಕನಸು ಕಂಡಿದ್ದಾರೆ. ಈಗಾಗಲೇ ರಿಲೀಸ್ ಆಗಿರೋ ಸಿನಿಮಾದ ಟ್ರೇಲರ್ ಗಮನ ಸೆಳೆದಿದೆ. ಟ್ರೇಲರ್ನಲ್ಲಿ ಪ್ರಭಾಸ್ ಎಂಟ್ರಿ ತಡವಾಗಿ ಆಗಿತ್ತು. ಸಿನಿಮಾದಲ್ಲೂ ಹಾಗೆಯೇ ಇರಲಿದೆ ಎನ್ನುವ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ. ಇದಕ್ಕೆ ನಿರ್ಮಾಪಕ ವಿಜಯ್ ಕಿರಗಂದೂರು ಅವರು ಸ್ಪಷ್ಟನೆ ನೀಡಿದ್ದಾರೆ.
ಸಾಮಾನ್ಯವಾಗಿ ಟ್ರೇಲರ್ಗಳ ಅವಧಿ ಎರಡರಿಂದ ಮೂರು ನಿಮಿಷ ಇರುತ್ತದೆ. ಚಿತ್ರದ ಬಗ್ಗೆ ನಿರೀಕ್ಷೆ ಹೆಚ್ಚಿಸುವಂತೆ ಮಾಡುವ ಜವಾಬ್ದಾರಿ ಟ್ರೇಲರ್ ಮೇಲೆ ಇರುತ್ತದೆ. ಈ ಕಾರಣದಿಂದಲೇ ಟ್ರೇಲರ್ನಲ್ಲಿ ಹೆಚ್ಚೆಚ್ಚು ಹೀರೋನ ತೋರಿಸುವ ಪ್ರಯತ್ನವನ್ನು ಎಲ್ಲರೂ ಮಾಡುತ್ತಾರೆ. ಆದರೆ, ‘ಸಲಾರ್’ ಸಿನಿಮಾದ ಟ್ರೇಲರ್ ಭಿನ್ನವಾಗಿತ್ತು. ಹೀರೋ ತಡವಾಗಿ ಎಂಟ್ರಿ ಕೊಡುತ್ತಾನೆ. ಸಿನಿಮಾದಲ್ಲೂ ಹೀಗೆಯೇ ಇರಬಹುದು ಎಂದು ಎಲ್ಲರೂ ಭಾವಿಸಿದ್ದರು. ಆದರೆ, ಹಾಗಿಲ್ಲ ಎನ್ನುತ್ತಾರೆ ನಿರ್ಮಾಪಕ ವಿಜಯ್ ಕಿರಗಂದೂರು.
‘ಟ್ರೇಲರ್ನಲ್ಲಿ ಹೀರೋ ಲೇಟ್ ಆಗಿ ಬರೋದನ್ನು ತೋರಿಸುವುದು ನಿಜಕ್ಕೂ ಬೋಲ್ಡ್ ನಿರ್ಧಾರ. ನಮ್ಮ ಟ್ರೇಲರ್ನಲ್ಲಿ ಕಥೆಯನ್ನು ಹೇಗೆ ಕಟ್ಟಿಕೊಡಲಾಗಿದೆ ಮತ್ತು ನಿರೂಪಣೆ ಹೇಗೆ ತೆರೆದುಕೊಳ್ಳುತ್ತದೆ ಎಂಬುದನ್ನು ಪ್ರಶಾಂತ್ ನೀಲ್ ಅವರು ತೋರಿಸಬಯಸಿದ್ದರು. ಸಿನಿಮಾದಲ್ಲಿ ಹೀರೋ ಎಂಟ್ರಿ ಲೇಟ್ ಆಗಲ್ಲ’ ಎಂದಿದ್ದಾರೆ ವಿಜಯ್.
ನಿರ್ಮಾಪಕ ವಿಜಯ್ ಕಿರಗಂದೂರು ಹಾಗೂ ನಿರ್ದೇಶಕ ಪ್ರಶಾಂತ್ ನೀಲ್ ಈ ಮೊದಲು ‘ಕೆಜಿಎಫ್’ ಹಾಗೂ ‘ಕೆಜಿಎಫ್ 2’ ಚಿತ್ರಗಳಲ್ಲಿ ಒಟ್ಟಾಗಿ ಕೆಲಸ ಮಾಡಿದ್ದಾರೆ. ಈಗ ‘ಸಲಾರ್’ ಚಿತ್ರವನ್ನು ತೆರೆಮೇಲೆ ತರಲು ಒಂದಾಗಿದ್ದಾರೆ. ಪ್ರಶಾಂತ್ ನೀಲ್ ಮೇಲೆ ವಿಜಯ್ ಅವರಿಗೆ ಸಂಪೂರ್ಣ ನಂಬಿಕೆ ಬಂದಿದೆ. ಹೀಗಾಗಿ, ನೀಲ್ ತೆಗೆದುಕೊಳ್ಳುವ ನಿರ್ಧಾರಗಳನ್ನು ಅವರು ಸ್ವಾಗತಿಸುತ್ತಾರೆ.
ಇದನ್ನೂ ಓದಿ: ‘ಡಂಕಿ’ ಎದುರು ‘ಸಲಾರ್’ ಬಿಡುಗಡೆ ಏಕೆ, ಶಾರುಖ್ ಮೇಲೆ ಹೊಂಬಾಳೆಗೆ ಏಕೀ ಸಿಟ್ಟು? ವಿಜಯ್ ಕಿರಗಂದೂರು ಹೇಳಿದ್ದು ಹೀಗೆ
‘ಸಲಾರ್’ ಚಿತ್ರದಲ್ಲಿ ಪ್ರಭಾಸ್ ಜೊತೆ ಶ್ರುತಿ ಹಾಸನ್, ಪೃಥ್ವಿರಾಜ್ ಸುಕುಮಾರನ್ ಮೊದಲಾದವರು ನಟಿಸಿದ್ದಾರೆ. ರವಿ ಬಸ್ರೂರು ಸಂಗೀತ ಸಂಯೋಜನೆ ಚಿತ್ರಕ್ಕೆ ಇದೆ. ಡಿಸೆಂಬರ್ 22ರಂದು ಈ ಸಿನಿಮಾ ಶಾರುಖ್ ಖಾನ್ ನಟನೆಯ ‘ಡಂಕಿ’ ಎದುರು ರಿಲೀಸ್ ಆಗಲಿದೆ. ‘ಡಂಕಿ’ ಡಿಸೆಂಬರ್ 21ರಂದು ರಿಲೀಸ್ ಆಗುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:00 am, Wed, 13 December 23