ನಟಿ ಸಮಂತಾ ಇತ್ತೀಚೆಗೆ ಸಾಕಷ್ಟು ಸುದ್ದಿಯಲ್ಲಿದ್ದಾರೆ. ಅವರ ವೈಯಕ್ತಿಕ ಜೀವನದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿದ್ದರೂ ಆ ಬಗ್ಗೆ ಅವರು ಮೌನ ವಹಿಸಿದ್ದಾರೆ. ನಾಗ ಚೈತನ್ಯ ಜತೆ ಸಮಂತಾ ವಿಚ್ಛೇದನ ಪಡೆದುಕೊಳ್ಳುತ್ತಿದ್ದಾರೆ ಎನ್ನುವ ವದಂತಿ ಅಭಿಮಾನಿಗಳಿಗೆ ಶಾಕ್ ನೀಡಿದೆ. ಎಲ್ಲಿಯೂ ಈ ಬಗ್ಗೆ ಉತ್ತರ ನೀಡುವ ಗೋಜಿಗೆ ಸಮಂತಾ ಹೋಗಿಲ್ಲ. ಇದು ವದಂತಿ ಎಂದು ಕೆಲವರು ವಾದಿಸುತ್ತಾ ಬರುತ್ತಿದ್ದರೂ ಇದು ಪದೇಪದೇ ಸುಳ್ಳಾಗುತ್ತಿದೆ. ಸಮಂತಾ-ನಾಗ ಚೈತನ್ಯ ವಿಚ್ಛೇದನ ಪಡೆಯಲಿದ್ದಾರೆ ಎನ್ನುವುದಕ್ಕೆ ಸಾಕ್ಷ್ಯ ಒದಗಿಸುವ ಸಾಕಷ್ಟು ವಿಷಯಗಳು ಸಿಗುತ್ತಿವೆ. ಇದಕ್ಕೆ ಈಗ ಹೊಸದೊಂದು ಸೇರ್ಪಡೆ ಆಗಿದೆ.
ನಾಗ ಚೈತನ್ಯ ಹಾಗೂ ಸಾಯಿ ಪಲ್ಲವಿ ನಟನೆಯ ‘ಲವ್ ಸ್ಟೋರಿ’ ಸಿನಿಮಾ ಟ್ರೇಲರ್ ಇಂದು (ಸೆಪ್ಟೆಂಬರ್ 13) ರಿಲೀಸ್ ಆಗಿದೆ. ಇದಕ್ಕೆ ಎಲ್ಲ ಕಡೆಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅನೇಕ ಸೆಲೆಬ್ರಿಟಿಗಳು ಈ ಟ್ರೇಲರ್ ಪೋಸ್ಟ್ ಮಾಡಿ, ಅದನ್ನು ವೀಕ್ಷಿಸುವಂತೆ ಅಭಿಮಾನಿಗಳ ಬಳಿ ಕೋರುತ್ತಿದ್ದಾರೆ. ಸಮಂತಾ ಕೂಡ ಈ ಬಗ್ಗೆ ಪೋಸ್ಟ್ ಮಾಡುತ್ತಾರೆ, ಈ ಮೂಲಕ ಎಲ್ಲಾ ವದಂತಿಗೆ ತೆರೆ ಎಳೆಯುತ್ತಾರೆ ಎಂದು ಅಭಿಮಾನಿಗಳು ಕಾದು ಕೂತಿದ್ದರು. ಆದರೆ, ಈ ನಿರೀಕ್ಷೆ ಸುಳ್ಳಾಗಿದೆ.
ಸಮಂತಾ ಇನ್ಸ್ಟಾಗ್ರಾಮ್ನಲ್ಲಿ ನಾನಾ ರೀತಿಯ ಸ್ಟೇಟಸ್ಗಳನ್ನು ಹಾಕಿಕೊಳ್ಳುತ್ತಿದ್ದಾರೆ. ಆದರೆ, ಅವರು ಎಲ್ಲಿಯೂ ‘ಲವ್ ಸ್ಟೋರಿ’ ಬಗ್ಗೆ ಉಲ್ಲೇಖ ಮಾಡಿ ಪೋಸ್ಟ್ ಮಾಡಿಲ್ಲ. ಇದು ಸಾಕಷ್ಟು ಅಚ್ಚರಿ ಮೂಡಿಸಿದೆ. ಅಲ್ಲದೆ, ಇದು ವಿಚ್ಛೇದನ ವದಂತಿಗೆ ಸಾಕ್ಷ್ಯ ಒದಗಿಸಿದಂತಾಗಿದೆ. ಈ ವಿಚಾರವನ್ನು ಅವರ ಅಭಿಮಾನಿಗಳು ಸಮರ್ಥಿಸಿಕೊಳ್ಳುತ್ತಿದ್ದಾರೆ. ‘ಗಂಡ ಎಂದ ಮಾತ್ರಕ್ಕೆ ಈ ಬಗ್ಗೆ ಪೋಸ್ಟ್ ಮಾಡಲೇಬೇಕೆಂದೇನೂ ಇಲ್ಲ ಎಂದು ಸಮಂತಾ ಪರ ಕೆಲವರು ವಕಾಲತ್ತು ವಹಿಸಿಕೊಂಡು’ ಬಂದಿದ್ದಾರೆ. ಇನ್ನೂ ಕೆಲವರು, ‘ಸಮಂತಾ-ನಾಗಚೈತನ್ಯ ವಿಚ್ಛೇದನ ಖಚಿತ’ ಎನ್ನುತ್ತಿದ್ದಾರೆ. ಸದ್ಯ, ಈ ವಿಚಾರಕ್ಕೆ ಅವರ ಕಡೆಯಿಂದಲೇ ಉತ್ತರ ಸಿಗಬೇಕಿದೆ.
ಇತ್ತೀಚೆಗೆ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಸಮಂತಾ ಅವರು ಅಕ್ಕಿನೇನಿ ಸರ್ನೇಮ್ಅನ್ನು ತೆಗೆದು ಹಾಕಿದ್ದರು. ಇದಾದ ನಂತರದಲ್ಲಿ ಅವರ ಸಂಸಾರದ ವಿಚಾರ ಸಾಕಷ್ಟು ಚರ್ಚೆ ಆಗುತ್ತಿದೆ. ನಾಗಾರ್ಜುನ ಇಡೀ ಕುಟುಂಬದ ಜತೆ ಇತ್ತೀಚೆಗೆ ಬರ್ತ್ಡೇ ಆಚರಿಸಿಕೊಂಡಿದ್ದಾರೆ. ಈ ಫೋಟೋಗಳು ಸೋಶಿಯಲ್ಮೀಡಿಯಾದಲ್ಲಿ ವೈರಲ್ ಆಗಿತ್ತು. ಆದರೆ, ಇಲ್ಲಿ ಸಮಂತಾ ಕಾಣಿಸಿರಲಿಲ್ಲ. ಈ ಬಗ್ಗೆಯೂ ಚರ್ಚೆಗಳು ನಡೆದಿದ್ದವು. ಆದರೆ, ಈ ಬಗ್ಗೆ ಯಾರಿಂದಲೂ ಸ್ಪಷ್ಟನೆ ಸಿಕ್ಕಿಲ್ಲ.
ಇದನ್ನೂ ಓದಿ: ಸಮಂತಾ ಡಿವೋರ್ಸ್ ವದಂತಿ ಬೆನ್ನಲ್ಲೇ ನಾಗ ಚೈತನ್ಯ-ಸಾಯಿ ಪಲ್ಲವಿ ಲವ್ ಸ್ಟೋರಿ ಮೇಲೆ ಕಣ್ಣಿಟ್ಟ ಸಿನಿಪ್ರಿಯರು
Published On - 3:57 pm, Mon, 13 September 21