Samantha: ಪದ್ಮಶ್ರೀ ಪ್ರಶಸ್ತಿಗೆ ಭಾಜನರಾದ ವೃಕ್ಷಮಾತೆ ತುಳಸಿ ಗೌಡ ಅವರ ಜೀವನ ಕತೆ ತಿಳಿದು ಸಮಂತಾ ಹೇಳಿದ್ದೇನು?
ಟಾಲಿವುಡ್ ನಟಿ ಸಮಂತಾ ಇತ್ತೀಚೆಗೆ ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ತುಳಸಿ ಗೌಡ ಅವರಿಗೆ ಗೌರವ ಸಲ್ಲಿಸಿದ್ದಾರೆ. ಈ ಕುರಿತ ಮಾಹಿತಿ ಇಲ್ಲಿದೆ.
ಟಾಲಿವುಡ್ ನಟಿ ಸಮಂತಾ ಅಕ್ಕಿನೇನಿ ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸುದ್ದಿಯಲ್ಲಿರುತ್ತಾರೆ. ಅಲ್ಲದೇ ಜಗತ್ತಿನ ಆಗುಹೋಗುಗಳಿಗೂ ಅವರು ತಮ್ಮ ಇನ್ಸ್ಟಾಗ್ರಾಂ ಸ್ಟೋರಿಯ ಮುಖಾಂತರ ಸ್ಪಂದಿಸುತ್ತಿರುತ್ತಾರೆ. ಇತ್ತೀಚೆಗೆ (ನವೆಂಬರ್ 8) ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಕರ್ನಾಟಕದ ಹೆಮ್ಮೆ ವೃಕ್ಷಮಾತೆ ಎಂದೇ ಎಲ್ಲರಿಂದ ಕರೆಯಲ್ಪಡುವ ತುಳಸಿ ಗೌಡ ಅವರ ಕುರಿತೂ ಸಮಂತಾ ಪೋಸ್ಟ್ ಹಂಚಿಕೊಂಡಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಉತ್ತರ ಕನ್ನಡ ಜಿಲ್ಲೆ ಅಂಕೋಲಾ ತಾಲೂಕಿನ ಹೊನ್ನಳ್ಳಿ ಎಂಬ ಪುಟ್ಟ ಗ್ರಾಮದ ತುಳಸಿ ಗೌಡ ಅವರಿಗೆ ಪರಿಸರ ಕ್ಷೇತ್ರದಲ್ಲಿನ ವಿಶೇಷ ಸಾಧನೆಗಾಗಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಅವರು ಪ್ರಶಸ್ತಿ ಸ್ವೀಕರಿಸುತ್ತಿರುವ ಚಿತ್ರಗಳು ಹಾಗೂ ಅವರ ಸಾಧಮೆ ದೇಶದ ಗಮನ ಸೆಳೆದಿದ್ದು, ಗಣ್ಯಾತಿಗಣ್ಯರು ಶುಭಕೋರುತ್ತಿದ್ದಾರೆ. ನಟಿ ಸಮಂತಾ ಕೂಡ, ಪೋಸ್ಟ್ ಒಂದರ ಮೂಲಕ ತುಳಸಿ ಗೌಡ ಅವರ ಸಾಧನೆಗೆ ಗೌರವ ಸಲ್ಲಿಸಿದ್ದಾರೆ.
ಇನ್ಸ್ಟಾಗ್ರಾಂನಲ್ಲಿ ನಿನ್ನೆ (ನವೆಂಬರ್ 10) ಸ್ಟೋರಿ ಹಂಚಿಕೊಂಡಿರುವ ಸಮಂತಾ, ಅದರಲ್ಲಿ ತುಳಸಿ ಗೌಡ ಅವರು ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರಿಂದ ಪ್ರಶಸ್ತಿ ಸ್ವೀಕರಿಸುತ್ತಿರುವ ಚಿತ್ರ ಹಂಚಿಕೊಂಡಿದ್ದಾರೆ. ಅದರಲ್ಲಿ ‘ಇದು ಪ್ರೇರಣಾದಾಯಿ’ ಎಂದು ಬರೆದುಕೊಂಡಿರುವ ಅವರು, ಈ ಮೂಲಕ ತಮ್ಮ ಕೋಟ್ಯಾಂತರ ಅಭಿಮಾನಿಗಳಿಗೆ ಸಂದೇಶ ರವಾನಿಸಿದ್ದಾರೆ. ಸಮಂತಾರ ಪೋಸ್ಟ್ ಎಲ್ಲರ ಗಮನ ಸೆಳೆದಿದ್ದು, ಅವರ ನಡೆಗೆ ಮೆಚ್ಚುಗೆ ವ್ಯಕ್ತವಾಗಿದೆ.
ಸಮಂತಾ ಹಂಚಿಕೊಂಡ ಸ್ಟೋರಿ ಇಲ್ಲಿದೆ:
ಹಾಲಕ್ಕಿ ಸಮುದಾಯದ ತುಳಸಿ ಗೌಡ ಅವರು ತಮ್ಮ ಸಮುದಾಯದಂತೆಯೇ ಆಧುನಿಕ ಜೀವನಶೈಲಿಯಿಂದ ದೂರ ಉಳಿದವರು. ಭೂಮಿಯನ್ನು ಪ್ರೀತಿಸುವ ಇವರು, ಬರಿಗಾಲಲ್ಲೇ ಕಾಡು- ಮೇಡು ಅಲೆದು ಮರಗಿಡಿಗಳನ್ನು ಕಾಯುತ್ತಿದ್ದರು. ಪ್ರಶಸ್ತಿ ಪ್ರದಾನ ಸಮಾರಂಭಕ್ಕೂ ಬರಿಗಾಲಲ್ಲೇ ತೆರಳಿ ಪ್ರಶಸ್ತಿ ಸ್ವೀಕರಿಸಿ ಅವರು ಗಮನ ಸೆಳೆದಿದ್ದರು. ಅವರನ್ನು ವೃಕ್ಷ ಮಾತೆ ಎಂದು ಕರೆಯಲು ಕಾರಣ, ಒಂದಲ್ಲಾ ಎರಡಲ್ಲಾ, ಲಕ್ಷಕ್ಕೂ ಅಧಿಕ ಮರಗಳನ್ನು ಬೆಳೆಸಿದ್ದಾರೆ. ತುಳಸಿಗೌಡಗೆ ಪರಿಸರ ಪ್ರೀತಿ ಎಷ್ಟಿದೆ ಎಂದರೆ, ಇವರನ್ನು ಮರಗಳ ವಿಜ್ಞಾನಿ ಎಂದೇ ಹೇಳಬಹುದು. ಯಾವ ಯಾವ ಗಿಡಗಳನ್ನು ಯಾವ ಋತುವಿನಲ್ಲಿ ನೆಡಬೇಕು, ಎಷ್ಟು ನೀರು, ಗೊಬ್ಬರ ಬೇಕು, ಯಾವ ಗಿಡಗಳು ಯಾವ ಸಂದರ್ಭದಲ್ಲಿ ಹೂವು ಹಣ್ಣು ಬಿಡುತ್ತದೆ, ಹೀಗೆ ಅರಣ್ಯದಲ್ಲಿನ ಸುಮಾರು 300ಕ್ಕೂ ಹೆಚ್ಚು ಪ್ರಭೇದದ ಮರಗಳ ಬಗ್ಗೆ ತುಳಸಿ ಅವರಿಗೆ ಮಾಹಿತಿ ಇದೆ. ಅರಣ್ಯದಲ್ಲಿನ ಪ್ರತಿ ಮರಗಳ ನಾಡಿ ಮಿಡಿತವನ್ನು ತುಳಸಿ ಹೇಳುತ್ತಾರೆ. ತನ್ನ ಸುತ್ತಮುತ್ತಲೂ ಯಾರು ಮರಗಳನ್ನು ಕಡಿಯದಂತೆ, ಮರಗಳನ್ನು ತನ್ನ ಮಕ್ಕಳಂತೆ ಸಾಕುತ್ತಾರೆ. ಇಂತಹ ಹಿರಿಯ ಜೀವಕ್ಕೆ, ವೃಕ್ಷಮಾತೆಗೆ ಪ್ರಶಸ್ತಿ ಬಂದಿದ್ದಕ್ಕೆ ಸಮಂತಾ ಗೌರವ ಸೂಚಿಸಿ, ಪ್ರೇರಣಾದಾಯಿ ವ್ಯಕ್ತಿತ್ವ ಅವರದ್ದು ಎಂದು ಹೊಗಳಿದ್ದಾರೆ.
ಇದನ್ನೂ ಓದಿ:
ಒಂದು ಸಿನಿಮಾಗೆ ಸಮಂತಾ ಪಡೆಯುವ ಸಂಭಾವನೆ ಇಷ್ಟೊಂದಾ; ಅಚ್ಚರಿ ಹೊರ ಹಾಕಿದ ಫ್ಯಾನ್ಸ್