ಹಿಂದೆ ತಪ್ಪು ಮಾಡಿರುವುದಾಗಿ ಒಪ್ಪಿಕೊಂಡ ನಟಿ ಸಮಂತಾ

|

Updated on: Jun 30, 2024 | 11:45 AM

ನಟಿ ಸಮಂತಾ ಋತ್ ಪ್ರಭು ತಾವು ಈ ಹಿಂದೆ ತಪ್ಪು ಮಾಡಿದ್ದಾಗಿ ಒಪ್ಪಿಕೊಂಡಿದ್ದಾರೆ. ಹಾಗೂ ಆ ತಪ್ಪನ್ನು ಮತ್ತೆ ಮುಂದಿನ ದಿನಗಳಲ್ಲಿ ಪುನರಾವರ್ತಿಸುವುದಿಲ್ಲ ಎಂದು ಸಹ ಹೇಳಿದ್ದಾರೆ.

ಹಿಂದೆ ತಪ್ಪು ಮಾಡಿರುವುದಾಗಿ ಒಪ್ಪಿಕೊಂಡ ನಟಿ ಸಮಂತಾ
Follow us on

ನಟಿ ಸಮಂತಾ ವಿಚ್ಛೇದನದ ಬಳಿಕ ಸಿನಿಮಾ ಹಾಗೂ ವೈಯಕ್ತಿಕ ಜೀವನದಲ್ಲಿ ಬಹಳ ಭಿನ್ನ ಹಾದಿ ತುಳಿದಿದ್ದಾರೆ. ವಿಚ್ಛೇದನದ ಆರಂಭದಲ್ಲಿ ಸಾಮಾಜಿಕ ನಿಂದನೆಗೆ ಒಳಗಾಗಿದ್ದ ನಟಿ ಸಮಂತಾ ಆ ನಂತರ ಅದರಿಂದ ಹೇಗೋ ಹೊರಬಂದರು. ಅದಾದ ಬಳಿಕ ಅವರಿಗೆ ತೀವ್ರ ಆರೋಗ್ಯ ಸಮಸ್ಯೆಗಳು ಕಾಡಲು ಆರಂಭಿಸಿತು. ಅನಾರೋಗ್ಯದ ನಡುವೆಯೂ ಸತತ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದ ನಟಿ ಸಮಂತಾ ಕಳೆದ ಒಂದು ವರ್ಷದಿಂದ ಸಿನಿಮಾದಿಂದ ಬಿಡುವು ಪಡೆದು ವೈಯಕ್ತಿಕ ಆರೋಗ್ಯದ ಕಡೆಗೆ ಗಮನ ಹರಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿಯೂ ಸಕ್ರಿಯರಾಗಿರುವ ಸಮಂತಾ, ಹಿಂದೆ ತಾವು ಮಾಡಿರುವ ತಪ್ಪಿನ ಬಗ್ಗೆ ಮಾತನಾಡಿದ್ದಾರೆ.

ಸ್ವತಃ ಸತತ ಅನಾರೋಗ್ಯಕ್ಕೆ ತುತ್ತಾಗಿದ್ದ ನಟಿ ಸಮಂತಾ ವ್ಯಾಯಾಮ, ಆಹಾರ ಕ್ರಮದ ಬದಲಾವಣೆಗಳಿಂದ ಮತ್ತೆ ಆರೋಗ್ಯವಂತರಾದರು. ಸಿನಿಮಾಗಳಿಂದ ಬಿಡುವು ಪಡೆದಿದ್ದ ಸಮಂತಾ ಈ ಸಮಯದಲ್ಲಿ ಪಾಡ್​ಕಾಸ್ಟ್ ಒಂದನ್ನು ಆರಂಭಿಸಿ ಆರೋಗ್ಯ ಮತ್ತು ಆಹಾರದ ಬಗ್ಗೆ ವಿವಿಧ ವಿಷಯಗಳನ್ನು ಹಂಚಿಕೊಳ್ಳಲು ಆರಂಭಿಸಿದರು. ವಿಶೇಷವಾಗಿ ಆಹಾರ ಕ್ರಮದ ಬದಲಾವಣೆ, ಗಟ್ ಆರೋಗ್ಯದ ಮಹತ್ವದ ಬಗ್ಗೆ ತಜ್ಞರೊಟ್ಟಿಗೆ ಚರ್ಚಿಸುತ್ತಿರುತ್ತಾರೆ. ಈ ಪಾಡ್​ಕಾಸ್ಟ್​ಗೆ ಟೇಕ್ 20 ಎಂದು ಹೆಸರಿಟ್ಟಿದ್ದಾರೆ.

ಪಾಡ್​ಕಾಸ್ಟ್​ನಲ್ಲಿ ಆರೋಗ್ಯಕ್ಕೆ ಅವಶ್ಯಕವಾದ ಆಹಾರ ಪದ್ಧತಿಗಳ ಬಗ್ಗೆ ಮಾತನಾಡಿದ್ದಾರೆ. ಆದರೆ ಸಮಂತಾರ ಅಭಿಮಾನಿಯೊಬ್ಬ, ‘ನೀವು ಈಗ ಆರೋಗ್ಯಕರ ಆಹಾರ ಪದ್ಧತಿ ಬಗ್ಗೆ ಮಾತನಾಡುತ್ತೀರಿ ಆದರೆ ನೀವೇ ಆರೋಗ್ಯಕರವಲ್ಲದ ಆಹಾರ, ತಿನಿಸು, ಪೇಯಗಳ ಜಾಹೀರಾತು ನೀಡಿದ್ದೀರಿ ಇದು ಸರಿಯೇ?’ ಎಂದು ಪ್ರಶ್ನೆ ಮಾಡಿದ್ದಾರೆ. ಕಮೆಂಟ್​ನಲ್ಲಿ ಬಂದ ಅಭಿಮಾನಿಯ ಪ್ರಶ್ನೆಯನ್ನು ಗಂಭೀರವಾಗಿ ತೆಗೆದುಕೊಂಡಿರುವ ನಟಿ ಸಮಂತಾ, ಪ್ರಶ್ನೆಗೆ ಉತ್ತರ ಸಹ ನೀಡಿದ್ದಾರೆ.

ಇದನ್ನೂ ಓದಿ:ಮಮ್ಮೂಟಿ ಜೊತೆ ಸಮಂತಾ ಸಿನಿಮಾ; ಆ್ಯಕ್ಷನ್ ಚಿತ್ರ ಒಪ್ಪಿಕೊಂಡ ನಟಿ

‘ಹೌದು, ನಾನು ಈ ಹಿಂದೆ ಕೆಲವು ತಪ್ಪುಗಳನ್ನು ಮಾಡಿದ್ದೇನೆ ಅದಕ್ಕೆ ಕಾರಣ ಆಗ ನನಗೆ ಅದರ ಬಗ್ಗೆ ಹೆಚ್ಚೇನೂ ಗೊತ್ತಿರಲಿಲ್ಲ. ಆದರೆ ಈಗ ಅದೆಲ್ಲ ತಿಳಿದ ಬಳಿಕ ನಾನು ಆ ರೀತಿಯ ಜಾಹೀರಾತು ಬ್ರ್ಯಾಂಡ್​ಗಳೊಟ್ಟಿಗೆ ಒಪ್ಪಂದ ಮಾಡಿಕೊಳ್ಳುವುದನ್ನೇ ನಿಲ್ಲಿಸಿದ್ದೇನೆ. ನಾನು ಏನು ಹೇಳುತ್ತೇನೆಯೋ ಅದರಂತೆ ಬದುಕಲು ಇಷ್ಟಪಡುತ್ತೇನೆ. ಆಡಿದ ಮಾತನ್ನು ಪಾಲಿಸುವುದರಲ್ಲಿ ವಿಶ್ವಾಸವಿಟ್ಟಿದ್ದೇನೆ. ದೇವರು ಒಳಿತು ಮಾಡುವ ವಿಶ್ವಾಸವಿದೆ’ ಎಂದಿದ್ದಾರೆ ಸಮಂತಾ.

ಸಮಂತಾ ಇದೀಗ ಬ್ರೇಕ್ ಬಳಿಕ ಮತ್ತೆ ಚಿತ್ರರಂಗಕ್ಕೆ ವಾಪಸ್ಸಾಗಿದ್ದಾರೆ. ‘ಮಾ ಇಂಟಿ ಬಂಗಾರಂ’ ಸಿನಿಮಾದಲ್ಲಿ ನಟಿಸಲಿದ್ದಾರೆ. ಸಿನಿಮಾದ ಪೋಸ್ಟರ್ ಬಿಡುಗಡೆ ಆಗಿದೆ. ‘ದಿ ಫ್ಯಾಮಿಲಿ ಮ್ಯಾನ್’ ಹೊಸ ಸೀಸನ್​ನಲ್ಲಿ ಸಮಂತಾ ನಟಿಸಲಿದ್ದಾರೆ. ಪ್ರಾಜೆಕ್ಟ್​ಗಳು ಘೊಷಣೆ ಆಗಿವೆ ಆದರೆ ಇನ್ನೂ ಚಿತ್ರೀಕರಣ ಪ್ರಾರಂಭವಾಗಿಲ್ಲ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ