ಐಸ್ಬಾತ್ ವಿಡಿಯೋ ಹಂಚಿಕೊಂಡ ಸಮಂತಾ: ಐಸ್ಬಾತ್ನಿಂದಾಗುವ ಲಾಭಗಳೇನು?
Icebath: ನಟಿ ಸಮಂತಾ ತಾವು 4 ಡಿಗ್ರಿ ತಣ್ಣಗಿನ ನೀರಲ್ಲಿ ಕುಳಿತಿರುವ ಚಿತ್ರ ಹಂಚಿಕೊಂಡಿದ್ದಾರೆ. ಈ ಐಸ್ಬಾತ್ ಏಕೆ ತೆಗೆದುಕೊಳ್ಳುತ್ತಾರೆ? ಇದರಿಂದಾಗುವ ಪ್ರಯೋಜನಗಳೇನು?

ನಟಿ ಸಮಂತಾ (Samantha) ತಮ್ಮ ಫಿಟ್ನೆಸ್ ಬಗ್ಗೆ ಅತಿಯಾದ ಕಾಳಜಿವಹಿಸುತ್ತಾರೆ. ಅನಾರೋಗ್ಯದ ನಡುವೆ ಸಹ ಜಿಮ್ ಮಾತ್ರ ತಪ್ಪಿಸುವುದಿಲ್ಲ ಸಮಂತಾ. ತಮ್ಮ ವ್ಯಾಯಾಮ, ಆಹಾರ ಹವ್ಯಾಸಗಳ ಬಗ್ಗೆಯೂ ಆಗಾಗ್ಗೆ ಚಿತ್ರ, ಮಾಹಿತಿಗಳನ್ನು ಸಮಂತಾ ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಸಮಂತಾ ತಾವು 4 ಡಿಗ್ರಿ ಸೆಲ್ಶಿಯಸ್ನ ಐಸ್ಬಾತ್ ತೆಗೆದುಕೊಂಡಿರುವ ವಿಡಿಯೋ ಹಂಚಿಕೊಂಡಿದ್ದಾರೆ. ಐಸ್ಗಳಿಂದ ತುಂಬಿದ ಟಬ್ನಲ್ಲಿ ಬರೋಬ್ಬರಿ 6 ನಿಮಿಷ ಕೂತಿದ್ದರಂತೆ ಸಮಂತಾ. ಅಂದಹಾಗೆ ಈ ಕ್ರೀಡಾಪಟುಗಳು, ಅತಿಯಾಗಿ ವ್ಯಾಯಾಮ ಮಾಡುವವರು, ಸೆಲೆಬ್ರಿಟಿಗಳು ಐಸ್ಬಾತ್ ಮಾಡುವುದು ಏಕೆ? ಅದರಿಂದಾಗುವ ಪ್ರಯೋಜನವೇನು?
ಐಸ್ಬಾತ್ ಮಾಡುವ ಪದ್ಧತಿ ಇತ್ತೀಚೆಗೆ ತುಸು ಹೆಚ್ಚಾಗಿದೆ. ಕೆಲ ವರ್ಷಗಳ ಹಿಂದೆ ಐಸ್ಬಕೆಟ್ ಚಾಲೆಂಜ್ ಚಾಲ್ತಿಗೆ ಬಂದಿತ್ತು. ಬಹಳ ವೈರಲ್ ಆಗಿದ್ದ ಈ ಚಾಲೆಂಜ್ ಆ ನಂತರದಲ್ಲಿ ಮರೆಯಾಯ್ತು. ಇದೀಗ ಐಸ್ಬಾತ್ ಬಹಳ ಜನಪ್ರಿಯಗೊಂಡಿದೆ. ಸ್ವಿಮ್ಮಿಂಗ್ ಮಾಡುವವರು, ಕಠಿಣವಾದ ಕ್ರೀಡೆಗಳಲ್ಲಿ ಪಾಲ್ಗೊಳ್ಳುವವರು, ಫುಟ್ಬಾಲ್ ಆಟಗಾರರು, ಅತಿಯಾಗಿ ಜಿಮ್ ಮಾಡುವವರು ಐಸ್ಬಾತ್ ಮಾಡುತ್ತಾರೆ.
ಹೀಗೆ ವಿಪರೀತ ಕೊರೆಯುವ ನೀರಿನಲ್ಲಿ ಸುಮ್ಮನೆ ಕೂರುವುದರಿಂದ ಕೆಲವು ಆರೋಗ್ಯ ಪ್ರಯೋಜನಗಳಿವೆ. ವ್ಯಾಯಾಮದಿಂದ ದಣಿದ ಮಾಂಸಖಂಡಗಳು ತ್ವರಿತವಾಗಿ ವಿಶ್ರಾಂತ ಸ್ಥಿತಿಗೆ ಹೋಗುತ್ತವೆ ಮತ್ತು ಮತ್ತೊಮ್ಮೆ ವ್ಯಾಯಾಮ ಮಾಡಲು ದೇಹ ಅಣಿಯಾಗುತ್ತದೆ. ಅಲ್ಲದೆ ಇದರಿಂದ ರಕ್ತಪರಿಚಲನೆ ಬೇಗ ಸುಲಲಿತವಾಗಿ ವ್ಯಾಯಾಮದಿಂದ ಎದುರಾಗುವ ಹೃದಯ ಸ್ಥಂಭನ ಸಾಧ್ಯತೆಗಳು ಬಹುಮಟ್ಟಿಗೆ ನಿವಾರಣೆಯಾಗುತ್ತದೆ.
ಇದನ್ನೂ ಓದಿ:Samantha: 12 ಕೋಟಿ ರೂಪಾಯಿ ಲಾಸ್ ಮಾಡಿಕೊಂಡ ಸಮಂತಾ; ಇದಕ್ಕೂ ಒಂದು ವರ್ಷ ಬ್ರೇಕ್ಗೂ ಇದೆ ಲಿಂಕ್
ದೇಹದ ಮೇಲಿನ ಹಿಡಿತ ಇದರಿಂದ ಹೆಚ್ಚಾಗುತ್ತದೆ. ಕೊರೆಯುವ ನೀರಿನಲ್ಲಿ ಕೂತಾಗ ಆಗುವ ನಡುಕದ ಅನುಭವ, ಉಸಿರಾಟದ ಏರಿಳಿತ, ಹೃದಯ ಬಡಿತಗಳು ಹೆಚ್ಚುತ್ತವೆ. ಹಾಗಾಗಿ ನಿಯಮಿತವಾಗಿ ಐಸ್ಬಾತ್ ತೆಗೆದುಕೊಳ್ಳುವುದರಿಂದ ಇವುಗಳನ್ನು ನಿಯಂತ್ರಿಸುವ ಕ್ಷಮತೆ ಹೆಚ್ಚುತ್ತದೆ ಆ ಮೂಲಕ ದೇಹದ ಮೇಲಿನ ವಿಶೇಷವಾಗಿ ಉಸಿರಾಟದ ಮೇಲಿನ ನಿಯಂತ್ರಣ ಹೆಚ್ಚುತ್ತದೆ. ಏಕಾಗ್ರತೆ ಹೆಚ್ಚುತ್ತದೆ. ಹೆಚ್ಚು ಫೋಕಸ್ಡ್ ಆಗಿ ಇರಲು ಇದು ಸಹಾಯಕಾರಿಯಾಗುತ್ತದೆ.
ಐಸ್ಬಾತ್ ತೆಗೆದುಕೊಳ್ಳುವುದರಿಂದ ಮಾಂಸಖಂಡಗಳ ಗಾಯಗಳು ಕಡಿಮೆ ಆಗುತ್ತವೆ. ಗಾಯಗಳಿಂದ ಆಗುವ ಊತವನ್ನು, ನೋವನ್ನು ಇದು ಕಡಿಮೆ ಮಾಡುತ್ತದೆ. ಐಸ್ಬಾತ್ ತೆಗೆದುಕೊಳ್ಳುವವರು ನಿದ್ರಾಹೀನತೆಯಿಂದ ಪಾರಾಗುತ್ತಾರೆ ಎನ್ನಲಾಗುತ್ತದೆ ಜೊತೆಗೆ ಐಸ್ಬಾತ್ನಿಂದಾಗಿ ರೋಗನಿರೋಧಕ ಶಕ್ತಿ ಹೆಚ್ಚುತದೆಯಂತೆ. ಆಟ ಆಡುವುದರಿಂದ, ವ್ಯಾಯಾಮ ಮಾಡುವುದರಿಂದ ದೇಹದ ಉಷ್ಣತೆ ಹೆಚ್ಚಾಗಿರುತ್ತದೆ ಆದರೆ ಐಸ್ಬಾತ್ನಿಂದ ದೇಹದ ಉಷ್ಣತೆ ಸರಿಯಾದ ಪ್ರಮಾಣಕ್ಕೆ ಬರುತ್ತದೆ.
ಸಮಂತಾ, ಈ ರೀತಿಯ ಪ್ರಯೋಗಗಳನ್ನು ದೇಹದ ಮೇಲೆ ಮಾಡುತ್ತಿರುತ್ತಾರೆ. ಐಸ್ಬಾತ್ ಜೊತೆಗೆ ಆಮ್ಲಜನಕದ ವಿಶೇಷ ಚಿಕಿತ್ಸೆಯನ್ನು ಸಮಂತಾ ತೆಗೆದುಕೊಳ್ಳುತ್ತಿದ್ದಾರೆ. ವಿಶೇಷವಾದ ಕೋಣೆಯೊಂದರಲ್ಲಿ ಕೂತು ಮಾಸ್ಕ್ ಮೂಲಕ ಶುದ್ಧ ಆಮ್ಲಜನಕ ಸೇವಿಸುವ ಪ್ರಕ್ರಿಯೆಗೆ ಸಮಂತಾ ಒಳಗಾಗುತ್ತಿದ್ದಾರೆ. ಇದರಿಂದ ಶ್ವಾಸಕೋಶದ ಆರೋಗ್ಯ ಉತ್ತಮವಾಗುತ್ತದೆ ಮತ್ತು ರೋಗನಿರೋಧಕ ಶಕ್ತಿ ಹೆಚ್ಚಳವಾಗುತ್ತದೆಯಂತೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ