ಮಕ್ಕಳೊಟ್ಟಿಗೆ ಲೈಂಗಿಕತೆ ಬಗ್ಗೆ ಮಾತು: ‘ಸೂಪರ್ ಡ್ಯಾನ್ಸ್’ಗೆ ಕಾನೂನು ಸಂಕಷ್ಟ
Reality Show: 'ಸೂಪರ್ ಡ್ಯಾನ್ಸರ್' ಡ್ಯಾನ್ಸ್ ರಿಯಾಲಿಟಿ ಶೋ ಕಾನೂನು ಸಂಕಷ್ಟಕ್ಕೆ ಸಿಲುಕಿದೆ. ಮಕ್ಕಳ ಮುಂದೆ ಲೈಂಗಿಕತೆ ಬಗ್ಗೆ ಮಾತನಾಡಿದ್ದಕ್ಕೆ ಶೋಗೆ ತಪರಾಕಿ ಹಾಕಲಾಗಿದೆ.
ರಿಯಾಲಿಟಿ ಶೋಗಳು (Reality Show) ಭಾರತೀಯ ಟಿವಿ ಪ್ರೇಕ್ಷಕರನ್ನು ವರ್ಷಗಳಿಂದಲೂ ರಂಜಿಸುತ್ತಲೇ ಬಂದಿವೆ. ಆದರೆ ಬರುಬರುತ್ತಾ ರಿಯಾಲಿಟಿ ಶೋ ರೂಪ ಬದಲಾಗಿದ್ದು, ಈಗಿನ ಬಹುತೇಕ ರಿಯಾಲಿಟಿ ಶೋಗಳಲ್ಲಿ ಸ್ಪರ್ಧಿಗಳ ಕಲೆ, ಪ್ರತಿಭೆಯ ಪ್ರದರ್ಶನಕ್ಕಿಂತಲೂ ಹೆಚ್ಚಾಗಿ ಮಾತು, ಕಳಪೆ ಗುಣಮಟ್ಟದ ಹಾಸ್ಯ, ಮೆಲೋಡ್ರಾಮಾಗಳೇ ಹೆಚ್ಚಾಗಿ ನಡೆಯುತ್ತವೆ. ಅದರಲ್ಲಿಯೂ ಕೆಲವು ರಿಯಾಲಿಟಿ ಶೋಗಳಲ್ಲಿ ಸ್ಪರ್ಧಿ, ನಿರೂಪಕ, ಜಡ್ಜ್ಗಳ ನಡುವೆ ನಡೆವ ಮಾತುಕತೆ ಸಭ್ಯತೆಯ ಎಲ್ಲೆ ಮೀರಿರುತ್ತವೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ (Social Media) ಆಗಾಗ್ಗೆ ಚರ್ಚೆ ನಡೆಯುತ್ತಿರುತ್ತದೆ. ಈ ನಡುವೆ ಇದೇ ಕಾರಣಕ್ಕೆ ಹಿಂದಿನ ಜನಪ್ರಿಯ ರಿಯಾಲಿಟಿ ಶೋಗೆ ಸಂಕಷ್ಟ ಎದುರಾಗಿದೆ.
ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಹಾಗೂ ಇನ್ನಿಬ್ಬರು ಜಡ್ಜ್ಗಳಾಗಿರುವ ‘ ಸೂಪರ್ ಡ್ಯಾನ್ಸ್ 3’ ರಿಯಾಲಿಟಿ ಶೋ ಕಳೆದ ಕೆಲ ವರ್ಷಗಳಿಂದ ಪ್ರಸಾರವಾಗುತ್ತಿದೆ. ಶೋನಲ್ಲಿ ಮಕ್ಕಳು ತಮ್ಮ ನೃತ್ಯ ಕಲೆಯನ್ನು ಪ್ರದರ್ಶಿಸುತ್ತಾರೆ. ಸೀಸನ್ನಲ್ಲಿ ಉತ್ತಮವಾಗಿ ನೃತ್ಯ ಮಾಡುವ ಒಬ್ಬ ಬಾಲಕ ಅಥವಾ ಬಾಲಕಿಗೆ ಪ್ರಶಸ್ತಿ ನೀಡಲಾಗುತ್ತದೆ. ಆದರೆ ಇತರೆ ಕೆಲವು ಶೋಗಳ ಮಾದರಿಯಲ್ಲಿಯೇ ಈ ಶೋನಲ್ಲಿಯೂ ಸಹ ಮಾತಿಗೆ ಹೆಚ್ಚು ಮಣೆ. ಮಕ್ಕಳ ಬಡತನ, ಪೋಷಕರ ಬಡತನಗಳನ್ನು ಕರುಳು ಹಿಂಡುವ ವಿಧಾನದಲ್ಲಿ ತೋರಿಸುವುದು ತುಸು ಹೆಚ್ಚು. ಜೊತೆಗೆ ಒಣ ಹಾಸ್ಯವೂ ಹೆಚ್ಚು.
ಇದನ್ನೂ ಓದಿ:ಸಿನಿಮಾ ಆಗುತ್ತಿದೆ ಶಿಲ್ಪಾ ಶೆಟ್ಟಿ ಪತಿಯ ಅಶ್ಲೀಲ ವಿಡಿಯೋ ಪ್ರಕರಣ: ಏನಿದು ವಿವಾದ?
ಇತ್ತೀಚಿನ ಎಪಿಸೋಡ್ ಒಂದರಲ್ಲಿ ಜಡ್ಜ್ಗಳು ಸ್ಪರ್ಧಿಯೊಬ್ಬನೊಟ್ಟಿಗೆ ಪರೋಕ್ಷವಾಗಿ ಸೆಕ್ಸ್ ಬಗ್ಗೆ ಮಾತನಾಡಿದ್ದರು. ಅಪ್ಪ-ಅಮ್ಮ ರೂಂನಲ್ಲಿ ಏನು ಮಾಡುತ್ತಾರೆ ಇತ್ಯಾದಿಗಳನ್ನು ಕೇಳಿ ನಕ್ಕಿದ್ದರು. ಇದು ಪ್ರಸಾರವೂ ಆಗಿತ್ತು. ಇದೇ ದೃಶ್ಯದಿಂದಾಗಿ ಈ ಶೋ ಇದೀಗ ಇಕ್ಕಟ್ಟಿಗೆ ಸಿಲುಕಿದ್ದು ರಾಷ್ಟ್ರೀಯ ಮಕ್ಕಳ ಹಕ್ಕು ರಕ್ಷಣಾ ಸಮಿತಿಯು ಸೋನಿ ಚಾನೆಲ್ಗೆ ನೊಟೀಸ್ ಕಳಿಸಿದ್ದು ಎಪಿಸೋಡ್ ಅನ್ನು ಒಟಿಟಿ ಹಾಗೂ ಇತರೆ ತನ್ನ ವೇದಿಕೆಗಳಿಂದ ಡಿಲೀಟ್ ಮಾಡುವಂತೆ ಸೂಚಿಸಿದೆ. ಎನ್ಸಿಪಿಸಿಆರ್ ಕಳಿಸಿರುವ ನೊಟೀಸ್ನಲ್ಲಿ ಅಪ್ರಾಪ್ತ ಮಕ್ಕಳಿಗೆ ಲೈಂಗಿಕತೆ ಕುರಿತಾಗಿ ಪ್ರಶ್ನೆಗಳನ್ನು ಕೇಳಿರುವ ಬಗ್ಗೆ ಹಾಗೂ ಮಕ್ಕಳ ಎದುರು ಲೈಂಗಿಕತೆ ಬಗ್ಗೆ ಮಾತನಾಡಿರುವುದನ್ನು ಟೀಕಿಸಲಾಗಿದ್ದು, ಉತ್ತರ ನೀಡುವಂತೆಯೂ ಸೂಚಿಸಲಾಗಿದೆ ಅಲ್ಲದೆ ಕಾರ್ಯಕ್ರಮ ನಿರ್ವಾಹಕರ ಸಾಮಾಜಿಕ ಜವಾಬ್ದಾರಿಯ ಬಗ್ಗೆಯೂ ಪ್ರಶ್ನೆ ಎತ್ತಲಾಗಿದೆ.
‘ಸೂಪರ್ ಡ್ಯಾನ್ಸ್ 3’ ಶೋನಲ್ಲಿ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ, ನಿರ್ದೇಶಕ ಅನುರಾಗ್ ಬಾಸು ಹಾಗೂ ಜನಪ್ರಿಯ ನೃತ್ಯ ನಿರ್ದೇಶಕಿ ಗೀತಾ ಮಾ ಅವರುಗಳು ಜಡ್ಜ್ಗಳಾಗಿದ್ದಾರೆ. ಈ ಶೋಗೆ ಬಾಲಿವುಡ್ನ ಹಲವು ಸ್ಟಾರ್ ನಟ-ನಟಿಯರು ಅತಿಥಿಗಳಾಗಿ ಆಗಮಿಸಿ ತಮ್ಮ ಸಿನಿಮಾಗಳ ಪ್ರಚಾರವನ್ನು ಮಾಡುತ್ತಾರೆ. ಶೋನಲ್ಲಿ ಭಾಗವಹಿಸುವ ಮಕ್ಕಳ ನೃತ್ಯ ಕಲೆಯ ಪ್ರದರ್ಶನದ ಜೊತೆಗೆ ಕುಟುಂಬದ ಬಗ್ಗೆ ಪೋಷಕರ ಬಗ್ಗೆ ಅತಿಭಾವುಕವಾಗಿ ಚರ್ಚೆ ಮಾಡಲಾಗುತ್ತದೆ. ಕೆಲವು ಬಾರಿ ತಮಾಷೆಯ ಹೆಸರಿನಲ್ಲಿ ಕೆಲವರ ಬಗ್ಗೆ ವ್ಯಂಗ್ಯ ಸಹ ಮಾಡಲಾಗುತ್ತದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ