ಸ್ಯಾಂಡಲ್ವುಡ್ ಖ್ಯಾತ ನಟ ದಿಗಂತ್ (Actor Diganth) ಕುತ್ತಿಗೆಗೆ ಬಲವಾದ ಪೆಟ್ಟು ಬಿದ್ದಿರುವ ಕಾರಣ ಆಸ್ಪತ್ರೆಗೆ ದಾಖಲಾಗಿದ್ದಾರೆ. ಗೋವಾದ ಸಮುದ್ರ ತಟದಲ್ಲಿ ಬ್ಯಾಕ್ ಫ್ಲಿಪ್ ಡೈವಿಂಗ್ ಹೊಡೆಯುವ ವೇಳೆ ದಿಗಂತ್ ಕುತ್ತಿಗೆಗೆ ಬಲವಾದ ಪೆಟ್ಟು ಬಿದ್ದಿದೆ. ಹೀಗಾಗಿ ಅವರನ್ನು ಗೋವಾದ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಗೋವಾದಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆಯುತ್ತಿದ್ದು, ಶೀಘ್ರದಲ್ಲೇ ಏರ್ ಲಿಫ್ಟ್ ಮೂಲಕ ಅವರನ್ನು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಕರೆತರಲಾಗುವುದು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ದಿಗಂತ್ ತಮ್ಮ ಕುಟುಂಬಸ್ಥರು ಹಾಗೂ ಆಪ್ತರೊಂದಿಗೆ ಕೆಲ ದಿನಗಳ ಹಿಂದೆ ಗೋವಾಗೆ ಟ್ರಿಪ್ ಹೋಗಿದ್ದರು. ಈ ವೇಳೆ ಸಮುದ್ರ ತೀರದಲ್ಲಿ ಮೋಜು ಮಸ್ತಿಯಲ್ಲಿ ತೊಡಗಿಸಿಕೊಂಡಿದ್ದ ವೇಳೆ ಈ ಅವಘಡ ಸಂಭವಿಸಿದೆ. ಬೀಚ್ನಲ್ಲಿ ಬ್ಯಾಕ್ ಫ್ಲಿಪ್ ಮಾಡುವಾಗ ಅಚಾನಕ್ಕಾಗಿ ಕೆಳಗೆ ಬಿದ್ದ ಪರಿಣಾಮ ಕುತ್ತಿಗೆ ಭಾಗಕ್ಕೆ ಬಲವಾದ ಪೆಟ್ಟು ಬಿದ್ದಿದೆ. ತಕ್ಷಣವೇ ಅವರನ್ನು ಗೋವಾದ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲದೆ ಅಲ್ಲಿ ಪ್ರಾಥಮಿಕ ಚಿಕಿತ್ಸೆಯನ್ನು ಪಡೆದಿದ್ದಾರೆ. ಇದೀಗ ತುಸು ಚೇತರಿಸಿಕೊಂಡಿದ್ದು, ಹೀಗಾಗಿ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಬೆಂಗಳೂರಿಗೆ ಕರೆತರಲಾಗುವುದು ಎಂಬುದು ಆಪ್ತರು ತಿಳಿಸಿದ್ದಾರೆ.
ಇನ್ನು ಗೋವಾ ಸಿಎಂ ಪ್ರಮೋದ್ ಸಾವಂತ್ ಅವರೊಂದಿಗೆ ಕುಟುಂಬಸ್ಥರು ಮಾತನಾಡಿದ್ದು, ಬೆಂಗಳೂರಿಗೆ ಕರೆತರಲು ಹೆಲಿಕಾಪ್ಟರ್ ವ್ಯವಸ್ಥೆ ಮಾಡಲಾಗಿದೆ. ಅದರಂತೆ ಸಂಜೆ 5 ಗಂಟೆ ವೇಳೆ ಅವರನ್ನು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಕರೆತರಲಾಗುವುದು ಎಂದು ದಿಗಂತ್ ಅವರ ಆಪ್ತ ಮೂಲಗಳು ತಿಳಿಸಿವೆ. ಇನ್ನು ದಿಗಂತ್ ಅವರೊಂದಿಗೆ ನಟಿ/ಪತ್ನಿ ಆಂದ್ರಿತಾ ರೇ ಕೂಡ ಇದ್ದಾರೆ.
ಸ್ಯಾಂಡಲ್ವುಡ್ನಲ್ಲಿ ದೂದ್ ಪೇಡಾ ಎಂದೇ ಖ್ಯಾತಿ ಪಡೆದಿರುವ ಡಿಂಪಲ್ ಹುಡುಗ ದಿಗಂತ್ ಸದ್ಯ ಗಾಳಿಪಟ-2 ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಯೋಗರಾಜ್ ಭಟ್ ನಿರ್ದೇಶಿಸಿರುವ ಈ ಚಿತ್ರವು ಶೀಘ್ರದಲ್ಲೇ ಬಿಡುಗಡೆಯಾಗಲಿದ್ದು, ಈ ಮೂಲಕ ಮತ್ತೊಮ್ಮೆ ಕನ್ನಡ ಚಿತ್ರರಂಗದಲ್ಲೇ ಛಾಪು ಮೂಡಿಸುವ ವಿಶ್ವಾಸದಲ್ಲಿದ್ದಾರೆ ದಿಗಂತ್.
ಇದಲ್ಲದೆ, ಮ್ಯಾರಿಗೋಲ್ಡ್ ಎನ್ನುವ ಮತ್ತೊಂದು ಚಿತ್ರದಲ್ಲೂ ಕಾಣಿಸಿಕೊಂಡಿದ್ದಾರೆ. ಹಾಗೆಯೇ ತೆಲುಗಿನ ಎವರು ಚಿತ್ರದ ಕನ್ನಡ ರಿಮೇಕ್ನಲ್ಲಿ ದಿಗಂತ್ ನಟಿಸುತ್ತಿದ್ದಾರೆ. ಅಲ್ಲದೆ ಎಡಗೈಯೇ ಅಪಘಾತಕ್ಕೆ ಕಾರಣ ಹಾಗೂ ತಿಮ್ಮಯ್ಯ ಅ್ಯಂಡ್ ತಿಮ್ಮಯ್ಯ ಹೆಸರಿನ ಮತ್ತೆರಡು ಚಿತ್ರಗಳನ್ನು ಒಪ್ಪಿಕೊಂಡಿದ್ದಾರೆ.
ಒಟ್ಟಿನಲ್ಲಿ ದೂದ್ ಪೇಡಾ ದಿಗಂತ್ ಕೈಯಲ್ಲಿ ಮೂರು-ನಾಲ್ಕು ಚಿತ್ರಗಳಿದ್ದು, ಇದೀಗ ಗಾಯಗೊಂಡಿರುವ ಕಾರಣ ಈ ಚಿತ್ರಗಳ ಚಿತ್ರೀಕರಣ ಮತ್ತಷ್ಟು ತಡವಾಗುವ ಸಾಧ್ಯತೆಯಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:35 pm, Tue, 21 June 22