ಪ್ರತಿಷ್ಠಿತ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವ (BIFFes) ಮತ್ತೆ ಬಂದಿದೆ. 15ನೇ ಬೆಂಗಳೂರು ಫಿಲಂ ಫೆಸ್ಟ್ ಕೆಲವೇ ದಿನಗಳಲ್ಲಿ ಪ್ರಾರಂಭವಾಗಲಿದ್ದು, ಈ ಬಾರಿಯ ಚಲನಚಿತ್ರೋತ್ಸವ ಹಲವು ಕಾರಣಗಳಿಗೆ ಮುಖ್ಯವಾದುದಾಗಿದೆ. ಈ ಬಾರಿ 50ಕ್ಕೂ ಹೆಚ್ಚು ರಾಷ್ಟ್ರಗಳಿಂದ. ಆಸ್ಕರ್ ಪ್ರಶಸ್ತಿಗೆ ನಾಮಾಂಕಿತವಾದ ಸಿನಿಮಾಗಳೂ ಸೇರಿದಂತೆ 200ಕ್ಕೂ ಹೆಚ್ಚು ಚಲನಚಿತ್ರಗಳು ಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳಲಿವೆ. ವಿಶ್ವದ ಪ್ರತಿಷ್ಠಿತ ಚಲನಚಿತ್ರೋತ್ಸವಗಳಲ್ಲಿ ಪಾಲ್ಗೊಂಡಿದ್ದ ಅತ್ಯುತ್ತಮ ಚಲನಚಿತ್ರಗಳು 15ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಭಾಗವಹಿಸುತ್ತಿವೆ. ಗೋಲ್ಡನ್ ಗ್ಲೋಬ್ ಪ್ರಶಸ್ತಿ ವಿಜೇತರು, ಕಾನ್ (ಫ್ರಾನ್ಸ್), ಬರ್ಲಿನ್(ಜರ್ಮನಿ), ಕಾರ್ಲೋ ವಿವಾರಿ(ಜೆಕ್‌ರಿಪಬ್ಲಿಕ್. ಲೊಕಾರ್ನೊ (ಸ್ವಿಟ್ಸರ್ಲೆಂಡ್), ರಾಟರ್‌ಡ್ಯಾಮ್ (ನೆದಲ್ಯಾಂಡ್), ಬೂಸಾನ್ (ದಕ್ಷಿಣ ಕೊರಿಯಾ), ಟೊರಂಟೋ (ಕೆನಡಾ) ದೇಶಗಳ ಚಿತ್ರೋತ್ಸವದಲ್ಲಿ ಭಾಗವಹಿಸಿ ಪ್ರಶಸ್ತಿ, ಮೆಚ್ಚುಗೆ ಪಡೆದ ಚಲನಚಿತ್ರಗಳು ಬೆಂಗಳೂರು ಚಿತ್ರೋತ್ಸವದಲ್ಲಿ ಒಂದೇ ಕಡೆ ಸಿನಿಮಾಪ್ರಿಯರಿಗೆ ದೊರೆಯುತ್ತವೆ.
ಏಷಿಯನ್ ಸ್ಪರ್ಧಾ ವಿಭಾಗ, ಚಿತ್ರಭಾರತಿ-ಭಾರತೀಯ ಸ್ಪರ್ಧಾ ವಿಭಾಗ, ಕನ್ನಡ ಸಿನಿಮಾ ಸ್ಪರ್ಧಾ ವಿಭಾಗ, ಸಮಕಾಲೀನ ವಿಶ್ವ ಸಿನಿಮಾ, ಕನ್ನಡ ಜನಪ್ರಿಯ ಸಿನಿಮಾ, ವಿಮರ್ಶಕರ ವಾರ: ಅಂತಾರಾಷ್ಟ್ರೀಯ ಚಲನಚಿತ್ರ ವಿಮರ್ಶಕರ ಒಕ್ಕೂಟ (ಫಿಪ್ರಸಿ) ಆಯ್ಕೆ ಮಾಡಿದ ಏಳು ವಿಶೇಷ ಸಮಕಾಲೀನ ಚಲನಚಿತ್ರಗಳ ಪ್ರದರ್ಶನ, ಜೀವನಾಧಾರಿತ ಚಿತ್ರಗಳು, ದೇಶ ಕೇಂದ್ರಿತ: ಜರ್ಮನಿಯ ಚಲನಚಿತ್ರಗಳ ವಿಶೇಷ ಪ್ರದರ್ಶನ, ಮಹಿಳಾ ಶಕ್ತಿ- ಮಹಿಳಾ ನಿರ್ದೇಶಕರ ಚಿತ್ರಗಳ ಪ್ರದರ್ಶನಗಳು ನಡೆಯಲಿವೆ. ಇದರ ಜೊತೆಗೆ ಭಾರತದ ಹಲವು ಉಪಭಾಷೆಗಳ ಸಿನಿಮಾಗಳ ಪ್ರದರ್ಶನವೂ ಆಗಲಿದೆ. ಕನ್ನಡ ಉಪಭಾಷೆಗಳಾದ ತುಳು, ಕೊಡವ, ಬಂಜಾರ, ಅರೆಭಾಷೆ, ಮಾರ್ಕೋಡಿ ಅಲ್ಲದೆ, ಈಶಾನ್ಯ ಭಾರತದ ಕರ್ಬಿ, ರಾಬಾ, ಗಾಲೋ ಮತ್ತು ವಾಕೆ ಈ ಭಾಷೆಯ ಸಿನಿಮಾಗಳ ಪ್ರದರ್ಶನ ಆಗಲಿವೆ. ಪುನರಾವಲೋಕನ ಇರಾನಿನ ನಿರ್ದೇಶಕ ಅಬ್ಬಾಸ್ ಕಿರೋಸ್ತಮಿ ಮತ್ತು ಹಿರಿಯ ನಿರ್ದೇಶಕರಾದ ಮೃಣಾಲ್‌ಸೇನ್, ಜೊತೆಗೆ ಶತಮಾನೋತ್ಸವ ಸ್ಮರಣೆಯೂ ಇರಲಿದೆ.
ಇದನ್ನೂ ಓದಿ:ಫೆ.29ರಿಂದ ಮಾ.7ರ ತನಕ 15ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ; ಇಲ್ಲಿದೆ ಮಾಹಿತಿ..
ಈ ಬಾರಿಯ ಚಲನಚಿತ್ರೋತ್ಸವದಲ್ಲಿ ಹಲವು ವೈಶಿಷ್ಟ್ಯಗಳಿವೆ. ಕನ್ನಡ ಚಲನಚಿತ್ರರಂಗಕ್ಕೆ 90 ವರ್ಷ ತುಂಬಲಿದ್ದು, ಈ ಸಂಭ್ರಮಾಚರಣೆಯನ್ನು ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಆಚರಿಸಲಾಗುತ್ತಿದೆ. ಕನ್ನಡ ಚಿತ್ರಗಳು ಪ್ರಸ್ತುತ ಸಂದರ್ಭದಲ್ಲಿ ವಿಶ್ವದ ಎಲ್ಲ ಕಡೆ ಜನಪ್ರಿಯವಾಗುತ್ತಿದ್ದು ಕನ್ನಡ ಚಿತ್ರರಂಗ ನಡೆದು ಬಂದ ದಾರಿ, ಹಾಗೂ ಕನ್ನಡದಲ್ಲಿ ಮೈಲುಗಲ್ಲು ಸ್ಥಾಪಿಸಿದ ಚಾರಿತ್ರಿಕ, ಸಾಂಸ್ಕೃತಿಕ ಮೌಲ್ಯಗಳನ್ನು ಪ್ರತಿವಾದಿಸುವ ವಿಶೇಷ ಚಲನಚಿತ್ರಗಳ ಉತ್ಸವವನ್ನು ಇದೇ ಸಂದರ್ಭದಲ್ಲಿ ಏರ್ಪಡಿಸಲಾಗಿದೆ. ಅಲ್ಲದೆ ಕರ್ನಾಟಕ ಎಂದು ನಾಮಕರಣಗೊಂಡ ನೆನಪಿಗೆ ಕರ್ನಾಟಕ 50 ಸುವರ್ಣ ಸಂಭ್ರಮ ಎಂಬ ಕಾರ್ಯಕ್ರಮದ ಮೂಲಕ ಕರ್ನಾಟಕದ ಹಿರಿಮೆಯನ್ನು ಸಾರುವ ಕಾರ್ಯಕ್ರಮ ಸಂಯೋಜಿಸಲಾಗಿದೆ.
ಮಾರ್ಚ್ 3ರಂದು ಕನ್ನಡದ ಮೊದಲ ವಾತ್ರ ‘ಸತಿ ಸುಲೋಚನ’ ಬಿಡುಗಡೆಯಾದ ದಿನ. ಅಂದಿನ ದಿನವನ್ನು ಸಿನಿಮಾ ದಿನವನ್ನಾಗಿ ಆಚರಿಸುತ್ತಿದ್ದು ಕನ್ನಡ ಚಿತ್ರರಂಗದ ಹಿರಿಮೆಯ ಬಗ್ಗೆ ವಿಚಾರ ಸಂಕಿರಣ, ಸಂವಾದ ನಡೆಯಲಿದೆ. ಮೃಣಾಲ್ ಸೇನ್ ಅವರನ್ನು ಕುರಿತು ಹೆಸರಾಂತ ಚಲನಚಿತ್ರ ನಿರ್ದೇಶಕ ಶೇಖರ್ ದಾಸ್ ವಿಶೇಷ ಉಪನ್ಯಾಸ ನೀಡಲಿದ್ದಾರೆ. ಕನ್ನಡ ಚಿತ್ರರಂಗದ ಸಂಗೀತ ನಿರ್ದೇಶಕರಾಗಿ ವರ್ಣಮಯ ಸಾಧನೆ ಮಾಡಿದ ವಿಜಯಭಾಸ್ಕರ್ ಅವರ ಶತಮಾನೋತ್ಸವ ಸ್ಮರಣೆ ಏರ್ಪಡಿಸಲಾಗಿದೆ. ಸಂಗೀತ ಮತ್ತು ವಿಜಯಭಾಸ್ಕರ್ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮವಿದೆ. ಜರ್ಮನಿಯ ಚಲನಚಿತ್ರ ಸಂಕಲನಕಾರ ಕಾಯ್ ಎರ್ಡ್ ಮನ್ ಅವರಿಂದ ಚಲನಚಿತ್ರ ಸಂಕಲನ ಕಾರ್ಯಾಗಾರ ನಡೆಯಲಿದೆ. ಈ ಕಾರ್ಯಕ್ರಮ ಬೆಂಗಳೂರಿನ ಗೋಥೆ ಇನ್‌ಸ್ಟಿಟ್ಯೂಟ್ ಹಾಗೂ ಮ್ಯಾಕ್ಸ್ ಮುಲ್ಲರ್ ಭವನದ ಸಹಯೋಗದೊಂದಿಗೆ ನಡೆಯುತ್ತದೆ. ಹೆಸರಾಂತ ರಂಗಕರ್ಮಿ, ಸಿನಿಮಾತಜ್ಞ, ನಿರ್ದೇಶಕ ಡಾ.ಜಬ್ಬಾರ್ ಪಟೇಲ್ ಅವರಿಂದ ಸಂವಿಧಾನ ಮತ್ತು ಭಾರತೀಯ ಸಿನಿಮಾ’ ಕುರಿತ ವಿಶೇಷ ಉಪನ್ಯಾಸ. ಚಲನಚಿತ್ರಗಳಲ್ಲಿ ಕೃತಕ ಬುದ್ಧಿಮತ್ತೆಯ ಸದುಪಯೋಗ ಕುರಿತಂತೆ ಉಪನ್ಯಾಸ ಸುಮಧುರ ಸಂಗೀತದ ಸಹಭಾಗಿತ್ವ ಶ್ರೀಮತಿ ನಿರುವಮಾ ಮನನ್ ರಾವ್ (ಮಾಜಿ ರಾಯಭಾರಿ, ಲೇಖಕಿ ಶ್ರೀಮತಿ ಇಂದಿರಾ ಚಂದ್ರಶೇಖರ್ ಮತ್ತು ಶ್ರೀ ಸುಧಾಕರ ರಾವ್ (ಕರ್ನಾಟಕ ಸರ್ಕಾರದ ಮಾಜಿ ಮುಖ್ಯ ಕಾರ್ಯದರ್ಶಿ) ಸಂವಾದ, ಸಾಕ್ಷ್ಯಚಿತ್ರ ಪ್ರದರ್ಶನ ನಡೆಯಲಿದೆ.
ಫೆಬ್ರವರಿ 29 ರಂದು ವಿಧಾನಸೌಧದ ಎದುರು ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಅವರು 15ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವನ್ನು ಉದ್ಘಾಟಿಸಲಿದ್ದಾರೆ. ಮಾರ್ಚ್ ಒಂದರಿಂದ ರಾಜಾಜಿನಗರದಲಿರುವ ಒರಾಯನ್ ಮಾಲ್‌ನ 11 ವರದೆಗಳಲ್ಲಿ ಪ್ರದರ್ಶನ ನಡೆಯಲಿದೆ. ಫೆಬ್ರವರಿ 7ರಂದು ಸಮಾರೋಪ ಸಮಾರಂಭ ಮತ್ತು ಏಷಿಯನ್, ಭಾರತೀಯ ಹಾಗೂ ಕನ್ನಡ ಸಿನಿಮಾ ಸ್ಪರ್ಧಾ ವಿಭಾಗಗಳ ವಿಜೇತರಿಗೆ ಪ್ರಶಸ್ತಿ ಪ್ರದಾನ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆಯಲಿದೆ. ಸಾರ್ವಜನಿಕರಿಗೆ 800 ರೂ, ಚಿತ್ರೋದ್ಯಮದ ಸದಸ್ಯರಿಗೆ 400 ರೂ, ಹಿರಿಯ ನಾಗರಿಕರಿಗೆ 400 ರೂ ಟಿಕೆಟ್ ದರ ನಿಗದಿಪಡಿಸಲಾಗಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ