ಶಿವಣ್ಣನ ಸಿನಿಜರ್ನಿಗೆ 38 ವರ್ಷ: 135 ಸಿನಿಮಾಗಳ ಬಳಿಕವೂ ಕಮ್ಮಿಯಾಗದ ಎನರ್ಜಿ
ಶಿವರಾಜ್ಕುಮಾರ್ ಅವರ ಮೊದಲ ಸಿನಿಮಾ ‘ಆನಂದ್’ ಸೆಟ್ಟೇರಿದ್ದು 1986ರ ಫೆ.19ರಂದು. ಅಂದಿನಿಂದ ಇಂದಿನ ತನಕ ಚಿತ್ರರಂಗದಲ್ಲಿ ಶಿವಣ್ಣ ಅವರು ಯಶಸ್ವಿಯಾಗಿ 38 ವರ್ಷಗಳನ್ನು ಪೂರೈಸಿದ್ದಾರೆ. ಅನೇಕರಿಗೆ ಅವರು ಸ್ಫೂರ್ತಿ ಆಗಿದ್ದಾರೆ. ಅವರು 38 ವರ್ಷ ಪೂರೈಸಿದ್ದಕ್ಕೆ ಫ್ಯಾನ್ಸ್ ಸಂಭ್ರಮಿಸುತ್ತಿದ್ದಾರೆ. ಕಾಮನ್ ಡಿಪಿ ಹಂಚಿಕೊಳ್ಳುವ ಮೂಲಕ ಅಭಿನಂದನೆ ತಿಳಿಸಲಾಗುತ್ತಿದೆ.
ಅಭಿಮಾನಿಗಳು ಪ್ರೀತಿಯಿಂದ ‘ಕರುನಾಡ ಚಕ್ರವರ್ತಿ’ ಎಂದು ಕರೆಯುವ ಶಿವರಾಜ್ಕುಮಾರ್ (Shivarajkumar) ಅವರಿಗೆ ಫೆಬ್ರವರಿ 19 ಎಂದರೆ ತುಂಬ ವಿಶೇಷ ದಿನ. ಯಾಕೆಂದರೆ, ಮೊದಲ ಬಾರಿ ಹೀರೋ ಆಗಿ ಶಿವರಾಜ್ಕುಮಾರ್ ಅವರು ಕ್ಯಾಮೆರಾ ಎದುರು ನಿಂತ ದಿನಾಂಕ ಅದು. ಹೌದು, 1986ರ ಫೆಬ್ರವರಿ 19ರಂದು ಶಿವಣ್ಣನ ಮೊದಲ ಸಿನಿಮಾ ‘ಆನಂದ್’ (Anand Kannada Movie) ಮುಹೂರ್ತ ನೆರವೇರಿತ್ತು. ಅಂದಿನಿಂದ ಇಂದಿಗೆ ಬಣ್ಣದ ಲೋಕದ ಜರ್ನಿಯಲ್ಲಿ ಅವರು 38 ವರ್ಷಗಳನ್ನು ಪೂರೈಸಿದ್ದಾರೆ. ಇದು ಸಣ್ಣ ಪಯಣವಲ್ಲ. ಇಂದಿಗೂ ಶಿವಣ್ಣ (Shivanna) ಅದೇ ಚಾರ್ಮ್ ಉಳಿಸಿಕೊಂಡಿದ್ದಾರೆ. ಈ ಸಾಧನೆಗಾಗಿ ಅವರಿಗೆ ಅಭಿಮಾನಿಗಳು ಹಾಗೂ ಅನೇಕ ಸೆಲೆಬ್ರಿಟಿಗಳು ಅಭಿನಂದನೆ ಸಲ್ಲಿಸುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಕಾಮನ್ ಡಿಪಿ ವೈರಲ್ ಆಗಿದೆ.
ಮೇರುನಟ ಡಾ. ರಾಜ್ಕುಮಾರ್ ಅವರ ಪುತ್ರನಾಗಿದ್ದರೂ ಕೂಡ ತಮ್ಮದೇ ರೀತಿಯಲ್ಲಿ ಶಿವಣ್ಣ ಗುರುತಿಸಿಕೊಂಡರು. ಮೊದಲ ಮೂರು ಸಿನಿಮಾಗಳ ಮೂಲಕ ಗೆಲುವು ಪಡೆದು ‘ಹ್ಯಾಟ್ರಿಕ್ ಹೀರೋ’ ಎನಿಸಿಕೊಂಡರು. ಅಂದಿನಿಂದ ಇಂದಿನತನಕ ಶಿವರಾಜ್ಕುಮಾರ್ ಅವರು ಹಿಂದಿರುಗಿ ನೋಡಿಲ್ಲ. ನೂರಾರು ಬಗೆಯ ಪಾತ್ರಗಳಿಗೆ ಜೀವ ತುಂಬುವ ಮೂಲಕ ತಮ್ಮ ಪ್ರತಿಭೆ ಏನು ಎಂಬುದನ್ನು ಶಿವಣ್ಣ ಸಾಬೀತುಪಡಿಸಿದ್ದಾರೆ. ಚಿತ್ರರಂಗದಲ್ಲಿ ಅವರಿಗೆ ಅವರೇ ಸಾಟಿ ಎನ್ನಬಹುದು.
Man Who is Ruling Sandalwood Since 38 years and has been an Inspiration of Million People😍❤️@NimmaShivanna 🐐👑#38YearsOfShivannaLegacy #Shivanna #Shivarajkumar #DrShivarajkumar #shivuaDDa pic.twitter.com/uAgTxjj8r4
— ಶಿವು ಅಡ್ಡ™ | shivu aDDa™ (@shivuaDDa) February 18, 2024
ಶಿವರಾಜ್ಕುಮಾರ್ ಅವರು 38 ವರ್ಷಗಳ ಈ ಸಿನಿಮಾ ಜರ್ನಿಯಲ್ಲಿ ಹಲವು ದಾಖಲೆಗಳನ್ನು ಬರೆದಿದ್ದಾರೆ. ‘ಓಂ’, ‘ಜೋಗಿ’, ‘ಜನುಮದ ಜೋಡಿ’, ‘ತವರಿಗೆ ಬಾ ತಂಗಿ’, ‘ಟಗರು’ ಮುಂತಾದ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ‘ನಿಂಗೆ ನಂಬರ್ಗಳೇ ಲೆಕ್ಕ ಇಲ್ಲಣ್ಣ..’ ಎಂದು ಅಭಿಮಾನಿಗಳು ಹಾಡಿ ಹೊಗಳುತ್ತಿದ್ದಾರೆ. ಶಿವಣ್ಣನ ದಿ ಬೆಸ್ಟ್ ಸಿನಿಮಾಗಳನ್ನು ನೆನಪಿಸಿಕೊಳ್ಳಲಾಗುತ್ತಿದೆ. ತಮ್ಮ ಇಷ್ಟದ ದೃಶ್ಯ, ಹಾಡು, ಡೈಲಾಗ್ಗಳನ್ನು ಫ್ಯಾನ್ಸ್ ಮೆಲುಕು ಹಾಕುತ್ತಿದ್ದಾರೆ.
Celebrating 38 years of ಶಿವಣ್ಣ ನಿಮ್ಗೆ number ಗಳೇ ಲೆಕ್ಕ ಇಲ್ಲಣ್ಣ!!!! 😎🔥@NimmaShivanna
#38YearsOfShivannaLegacy #Shivanna #Shivarajkumar #DrShivarajkumar pic.twitter.com/mCusuhanly
— KRG Connects (@KRG_Connects) February 19, 2024
ಈಗ ಶಿವರಾಜ್ಕುಮಾರ್ ಅವರಿಗೆ 61 ವರ್ಷ ವಯಸ್ಸು. ಈಗಲೂ ಕೂಡ ಅವರು ಹದಿಹರೆಯದ ಯುವಕನಂತೆ ಎನರ್ಜಿ ಉಳಿಸಿಕೊಂಡಿದ್ದಾರೆ. ಯಾವ ಹೊಸ ಹೀರೋಗೂ ಕಮ್ಮಿ ಇಲ್ಲದಂತೆ ಆ್ಯಕ್ಷನ್ ದೃಶ್ಯಗಳಲ್ಲಿ ಅವರು ನಟಿಸುತ್ತಾರೆ. ಶಿವಣ್ಣನ ಎನರ್ಜಿ ಬಗ್ಗೆ ಮಾತನಾಡದವರೇ ಇಲ್ಲ. ಎಷ್ಟೋ ಹೀರೋಗಳಿಗೆ ಅವರೇ ಸ್ಫೂರ್ತಿ. ಸಿನಿಮಾ ಕೆಲಸಗಳನ್ನು ಪಟಪಟನೆ ಮುಗಿಸುವ ಮೂಲಕ ಅವರು ಆ್ಯಕ್ಟೀವ್ ಆಗಿದ್ದಾರೆ. ಅನೇಕ ಸಮಾಜಮುಖಿ ಕೆಲಸಗಳ ಮೂಲಕವೂ ಜನರ ಹೃದಯ ಗೆದ್ದಿದ್ದಾರೆ. ಹಲವು ಪ್ರಾಜೆಕ್ಟ್ಗಳಲ್ಲಿ ಶಿವರಾಜ್ಕುಮಾರ್ ಬ್ಯುಸಿ ಆಗಿದ್ದಾರೆ. ಅವರ ಜೊತೆ ಸಿನಿಮಾ ಮಾಡಬೇಕು ಎಂದು ಅನೇಕ ನಿರ್ಮಾಪಕರು, ನಿರ್ದೇಶಕರು ಸಾಲುಗಟ್ಟಿ ನಿಂತಿದ್ದಾರೆ. 135ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿ ಅವರು ಮುನ್ನುಗ್ಗುತ್ತಿದ್ದಾರೆ. ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ.
ಇದನ್ನೂ ಓದಿ: ಶಿವರಾಜ್ ಕುಮಾರ್-ರಾಮ್ ಚರಣ್ ಸಿನಿಮಾಕ್ಕೆ ಎಆರ್ ರೆಹಮಾನ್ ಸಂಗೀತ
ಕನ್ನಡ ಮಾತ್ರವಲ್ಲದೇ, ಪರಭಾಷೆಯಲ್ಲೂ ಶಿವರಾಜ್ಕುಮಾರ್ ಅವರಿಗೆ ಬೇಡಿಕೆ ಸೃಷ್ಟಿ ಆಗಿದೆ. 2023ರಲ್ಲಿ ತೆರೆಕಂಡ ರಜನಿಕಾಂತ್ ನಟನೆಯ ತಮಿಳಿನ ‘ಜೈಲರ್’ ಸಿನಿಮಾದಲ್ಲಿ ಶಿವರಾಜ್ಕುಮಾರ್ ಮಾಡಿದ ನರಸಿಂಹ ಎಂಬ ಪಾತ್ರ ಸಖತ್ ಕ್ರೇಜ್ ಸೃಷ್ಟಿಸಿತು. 2024ರ ಜನವರಿ 12ರಂದು ಬಿಡುಗಡೆಯಾದ ‘ಕ್ಯಾಪ್ಟನ್ ಮಿಲ್ಲರ್’ ಚಿತ್ರದಲ್ಲಿ ಧನುಷ್ ಜೊತೆ ಶಿವರಾಜ್ಕುಮಾರ್ ಅವರು ತೆರೆ ಹಂಚಿಕೊಂಡರು. ಪರಭಾಷೆಯಿಂದ ಅವರಿಗೆ ಹಲವು ಆಫರ್ಗಳು ಬರುತ್ತಿವೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ