ಸೆಲೆಬ್ರಿಟಿಗಳಿಂದ ಸಾಮಾನ್ಯರವರೆಗೆ ಅಸಂಖ್ಯಾತ ಭಕ್ತರು ಆರಾಧಿಸುವ ದೈವ ಸಾಯಿ ಬಾಬಾ. ಈಗಾಗಲೇ ಬಾಬಾ ಕುರಿತು ಹಲವಾರು ಭಕ್ತಿಗೀತೆಗಳಿವೆ. ಅದರ ಜೊತೆಗೆ ಕನ್ನಡದ ಖ್ಯಾತ ನಿರ್ದೇಶಕ ಮತ್ತು ಗೀತರಚನಕಾರ ಕೆ. ರಾಮ್ ನಾರಾಯಣ್ (K Ram Narayan) ಅವರು 7 ಹೊಸ ಗೀತೆಗಳನ್ನು ರಚಿಸಿದ್ದಾರೆ. ಈ ಹಾಡುಗಳ ಮೂಲಕ ಸಾಯಿ ಬಾಬಾ (Sai Baba) ಅವರ ಗುಣಗಾನ ಮಾಡಲಾಗಿದೆ. ಈ ಭಕ್ತಿಗೀತೆಗಳಿಗೆ (Devotional Songs) ಎಸ್. ನಾಗು ಸಂಗೀತ ಸಂಯೋಜನೆ ಮಾಡಿದ್ದಾರೆ. ವಿಶೇಷ ಏನೆಂದರೆ ಈ ಹಾಡುಗಳನ್ನು ಹೇಳಿರುವುದು ಕನ್ನಡದ ಖ್ಯಾತ 7 ಮಂದಿ ಸಂಗೀತ ನಿರ್ದೇಶಕರು. ಹೌದು, ದೇವರ ಕಾರ್ಯಕ್ಕಾಗಿ ಇವರೆಲ್ಲರೂ ಒಂದಾಗಿದ್ದಾರೆ. ವಿ. ಮನೋಹರ್, ರವಿ ಬಸ್ರೂರು, ವೀರ್ ಸಮರ್ಥ್, ಧರ್ಮ ವಿಶ್, ಅನೂಪ್ ಸೀಳನ್, ಶ್ರೀಧರ್ ವಿ. ಸಂಭ್ರಮ್ ಹಾಗೂ ಆರ್.ಎಸ್. ಗಣೇಶ್ ನಾರಾಯಣ್ ಅವರು ತಲಾ ಒಂದು ಗೀತೆಗೆ ಧ್ವನಿ ನೀಡಿದ್ದಾರೆ.
ಚಿತ್ರಸಾಹಿತಿ, ನಿರ್ದೇಶಕ ಕೆ. ರಾಮ್ ನಾರಾಯಣ್ ಅವರು ಅಪ್ಪಟ ಶಿರಡಿ ಸಾಯಿ ಬಾಬಾ ಭಕ್ತ. ಸದ್ಯ ಅವರ ನಿರ್ದೇಶನದಲ್ಲಿ ‘ರಾಜಮಾರ್ತಾಂಡ’ ಮತ್ತು ‘ಅಬ್ಬರ’ ಸಿನಿಮಾಗಳು ಮೂಡಿಬರುತ್ತಿವೆ. ಈ ಚಿತ್ರದ ಕೆಲಸಗಳಲ್ಲಿ ಬ್ಯುಸಿ ಇದ್ದರೂ ಕೂಡ ಅವರು ಬಿಡುವು ಮಾಡಿಕೊಂಡು ‘ಸಾಯಿ ನನ್ನಯ್ಯ’ ಶೀರ್ಷಿಕೆಯಲ್ಲಿ ಏಳು ಹಾಡುಗಳನ್ನು ರಚಿಸಿದ್ದಾರೆ. ಈ ಭಕ್ತಿಗೀತೆಗಳು 7 ಸಂಗೀತ ನಿರ್ದೇಶಕರಿಗೆ ಮೆಚ್ಚುಗೆ ಆಗಿದೆ. ಹಾಗಾಗಿ ಅವರೆಲ್ಲರೂ ಧ್ವನಿ ನೀಡಲು ಒಪ್ಪಿಕೊಂಡರು. ಎಲ್ಲರೂ ಭಕ್ತಿ ಭಾವದಿಂದ ಹಾಡಿದ್ದೂ ಅಲ್ಲದೇ ತಂಡಕ್ಕೆ ಶುಭ ಕೋರಿದ್ದಾರೆ.
ಇದನ್ನು ಓದಿ: Spiritual: ಗುರುವಾರದಂದೂ ಸಾಯಿ ಬಾಬಾರ ಈ 12 ಮಂತ್ರವನ್ನು ಜಪಿಸಿ
ಗುರುವಾರ (ಜೂನ್ 16) ವಿ. ಮನೋಹರ್ ಹಾಡಿರುವ ‘ಸಾಯಿ ನನ್ನಯ್ಯ’ ಶೀರ್ಷಿಕೆಯ ಮೊದಲ ಗೀತೆಯನ್ನು ಬಾಬಾ ಸನ್ನಿಧಿಯಲ್ಲಿ ಬಿಡುಗಡೆ ಮಾಡಲಾಗಿದೆ. ಆರೆಂಜ್ ಆಡಿಯೋಸ್ ಯೂಟ್ಯೂಬ್ ಚಾನೆಲ್ ಮೂಲಕ ಈ ಹಾಡು ರಿಲೀಸ್ ಆಗಿದೆ. ಇದೇ ರೀತಿ ಪ್ರತಿ ಗುರುವಾರ ಬೇರೆ ಬೇರೆ ಸೆಲೆಬ್ರಿಟಿಗಳಿಂದ ಒಂದೊಂದು ಹಾಡನ್ನು ಬಿಡುಗಡೆ ಮಾಡಿಸಲು ತಂಡ ಸಿದ್ಧವಾಗಿದೆ.
ಇದನ್ನೂ ಓದಿ: 1998ರಲ್ಲಿ ಸತ್ಯ ಸಾಯಿ ಬಾಬಾರ ಭೇಟಿ ಮಾಡಿದ್ದೆ, ಅವರ ಪುಸ್ತಕ ಓದಿ ಮಾಂಸಾಹಾರ ತ್ಯಜಿಸಿದೆ: ಸಿಎಂ ಬೊಮ್ಮಾಯಿ
ವಿಶೇಷ ಏನೆಂದರೆ ಈ ಹಾಡುಗಳನ್ನು ಪುನೀತ್ ರಾಜ್ಕುಮಾರ್ ಅವರಿಗೆ ಅರ್ಪಿಸಲಾಗಿದೆ. ‘ಇದೊಂದು ಉತ್ತಮ ಪ್ರಯತ್ನ. ನಾವು 7 ಸಂಗೀತ ನಿರ್ದೇಶಕರು ಒಂದಾಗಿರುವುದು ವಿಶೇಷ. ಕೆ. ರಾಮ್ ನಾರಾಯಣ್ ಅವರ ಸಾಹಿತ್ಯ ತುಂಬ ಚೆನ್ನಾಗಿದೆ’ ಎಂದು ವಿ. ಮನೋಹರ್ ಮೆಚ್ಚುಗೆ ಸೂಚಿಸಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.