‘777 ಚಾರ್ಲಿ’ಗೆ ಪ್ರಶಸ್ತಿ: ಶ್ರಮಕ್ಕೆ ಸಿಕ್ಕ ಫಲವೆಂದ ರಕ್ಷಿತ್ ಶೆಟ್ಟಿ-ಕಿರಣ್ ರಾಜ್

|

Updated on: Aug 24, 2023 | 10:49 PM

777 Charlie: ರಕ್ಷಿತ್ ಶೆಟ್ಟಿ ನಟಿಸಿ, ನಿರ್ಮಾಣ ಮಾಡಿರುವ 777 ಚಾರ್ಲಿಗೆ ಅತ್ಯುತ್ತಮ ಕನ್ನಡ ಪ್ರಶಸ್ತಿ ಲಭಿಸಿದೆ. ಈ ಖುಷಿಯ ಸುದ್ದಿಗೆ ರಕ್ಷಿತ್ ಶೆಟ್ಟಿ ಹಾಗೂ ನಿರ್ದೇಶಕ ಕಿರಣ್ ರಾಜ್ ಪ್ರತಿಕ್ರಿಯೆ ನೀಡಿರುವುದು ಹೀಗೆ.

777 ಚಾರ್ಲಿಗೆ ಪ್ರಶಸ್ತಿ: ಶ್ರಮಕ್ಕೆ ಸಿಕ್ಕ ಫಲವೆಂದ ರಕ್ಷಿತ್ ಶೆಟ್ಟಿ-ಕಿರಣ್ ರಾಜ್
Follow us on

ರಕ್ಷಿತ್ ಶೆಟ್ಟಿ (Rakshit Shetty), ನಿರ್ಮಾಣ ಮಾಡಿದ್ದ ‘777 ಚಾರ್ಲಿ‘ (777 Charlie) ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ದೊಡ್ಡ ಹಿಟ್ ಆಗಿದ್ದು ಮಾತ್ರವೇ ಅಲ್ಲದೆ, ವಿಮರ್ಶಕರ ಮೆಚ್ಚುಗೆಯನ್ನೂ ಗಳಿಸಿತ್ತು. ಇದೀಗ 69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯ ಅತ್ಯುತ್ತಮ ಕನ್ನಡ ಸಿನಿಮಾ ಪ್ರಶಸ್ತಿಗೆ ಭಾಜನವಾಗಿದೆ. ತಮ್ಮ ಸಿನಿಮಾಕ್ಕೆ ಪ್ರಶಸ್ತಿ ಬಂದಿರುವ ಖುಷಿಯನ್ನು ನಟ ರಕ್ಷಿತ್ ಶೆಟ್ಟಿ ಟ್ವೀಟ್ ಮೂಲಕ ವ್ಯಕ್ತಪಡಿಸಿದ್ದಾರೆ. ಇನ್ನು ಕಿರಣ್ ರಾಜ್ ಸಹ ಕುಟುಂಬದೊಟ್ಟಿಗೆ ಸಂಭ್ರಮಾಚರಣೆ ಮಾಡಿದ್ದಾರೆ.

ತಮ್ಮ ಸಿನಿಮಾಕ್ಕೆ ಪ್ರಶಸ್ತಿ ಬಂದ ಬಳಿಕ ಟ್ವೀಟ್ ಮಾಡಿರುವ ನಟ, ನಿರ್ಮಾಪಕ ರಕ್ಷಿತ್ ಶೆಟ್ಟಿ, ”ಈ ಸುದ್ದಿ ನನಗೆ ತಂದಿರುವ ಖುಷಿ, ಸಂತಸವನ್ನು ಪದಗಳಲ್ಲಿ ವಿವರಿಸುವುದು ಕಷ್ಟ. ಖುಷಿಯಿಂದ ಭಾವಪರವಶನಾಗಿರುವ ಈ ಹೊತ್ತಿನಲ್ಲಿ, ವಿನಮ್ರನೂ ಆಭಾರಿಯೂ ಆಗಿದ್ದೇನೆ. ಜೊತೆಗೆ ಈ ಪ್ರಶಸ್ತಿ ನಮಗೆ ಹೆಚ್ಚಿನ ಜವಾಬ್ದಾರಿಯನ್ನು ತಂದಿದೆ. ನಮ್ಮ ಪರಮವಃ ಸ್ಟುಡಿಯೋಸ್​ಗೆ ಇದು ಬಹಳ ಹೆಮ್ಮೆಯ ಕ್ಷಣ, ಜೊತೆಗೆ ನಿರ್ದೇಶಕ ಕಿರಣ್ ರಾಜ್​ಗೂ ಅಭಿನಂದನೆ. ಪಟ್ಟ ಶ್ರಮಕ್ಕೆ ಪ್ರತಿಫಲ ದೊರೆತಿದೆ” ಎಂದಿದ್ದಾರೆ.

ಪ್ರಶಸ್ತಿ ಘೋಷಣೆಯ ಲೈವ್ ಅನ್ನು ಮಂಗಳೂರಿನ ಸ್ವಗೃಹದಲ್ಲಿ ಅಮ್ಮನ ಜೊತೆ ಕೂತು ವೀಕ್ಷಿಸಿದ ನಿರ್ದೇಶಕ ಕಿರಣ್ ರಾಜ್, ಪ್ರಶಸ್ತಿ ಬಂದ ಖುಷಿಯನ್ನು ಕುಟುಂಬದವರೊಡನೆ ಹಂಚಿಕೊಂಡಿದ್ದಾರೆ. ಬಳಿಕ ಟಿವಿ9ಗೆ ಪ್ರತಿಕ್ರಿಯೆ ನೀಡಿರುವ ಕಿರಣ್, ”ಪ್ರಶಸ್ತಿ ಸಿಕ್ಕಿರುವುದು ಬಹಳ ಖುಷಿ ತಂದಿದೆ. ಇಡೀ ತಂಡಕ್ಕೆ ‘ಚಾರ್ಲಿ’ ತುಂಬಾ ವಿಶೇಷವಾದ ಸಿನಿಮಾ. ಸುಮಾರು ವರ್ಷ ಇಡೀ ತಂಡ ಈ ಸಿನಿಮಾಕ್ಕಾಗಿ ಶ್ರಮ ಹಾಕಿದೆ. ದೊಡ್ಡ ಮಟ್ಟದಲ್ಲಿ ಜನ ಸಿನಿಮಾ ನೋಡಿ ಯಶಸ್ಸು ತಂದುಕೊಟ್ಟಿದ್ದಾರೆ. ಈಗ ರಾಷ್ಟ್ರಮಟ್ಟದಲ್ಲಿ ಗೌರವ ಸಿನಿಮಾಕ್ಕೆ ಗೌರವ ಸಿಕ್ಕಿದೆ” ಎಂದಿದ್ದಾರೆ.

ಇದನ್ನೂ ಓದಿ:ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಗೆದ್ದ ಸಿನಿಮಾ, ನಟ-ನಟಿ, ತಂತ್ರಜ್ಞರಿಗೆ ಸಿಗುವ ಹಣವೆಷ್ಟು?

”ಪ್ರಶಸ್ತಿ ಬರುತ್ತದೆ ಎಂಬ ಬಗ್ಗೆ ಜಾಸ್ತಿ ನಿರೀಕ್ಷೆ ಇರಲಿಲ್ಲ. ದೊಡ್ಡ ಸಿನಿಮಾಗಳು ತುಂಬಾ ಇತ್ತು, ಇಡೀ ತಂಡದಿಂದ ಬಹುತೇಕ ಎಲ್ಲರು ಕಾಲ್ ಮಾಡಿ ಸಂತಸ ವ್ಯಕ್ತಪಡಿಸುತ್ತಿದ್ದಾರೆ. ರಕ್ಷಿತ್ ಸರ್, ಪರಂವಃ, ನನಗೆ ಮೂರು ಮಂದಿಗೂ ಮೊದಲ ನ್ಯಾಷನಲ್ ಅವಾರ್ಡ್ ಸಿಗ್ತಾ ಇರೋದು. ಲೈವ್ ಅನೌನ್ಸ್ಮೆಂಟ್ ವಿಡಿಯೋ ಅಮ್ಮನ ಜೊತೆ ನೋಡುತ್ತಿದ್ದೆ. ಎಲ್ಲರೂ ಖುಷಿ ಪಟ್ಟಿದ್ದಾರೆ, ಚಾರ್ಲಿಗೆ ಪ್ರಶಸ್ತಿ ಬಂದಿರೋದು ಜವಬ್ದಾರಿಯನ್ನು ತುಂಬಾನೇ ಜಾಸ್ತಿ ಮಾಡಿದೆ ಎಂದಿದ್ದಾರೆ.

‘777 ಚಾರ್ಲಿ’ ಸಿನಿಮಾ ನಾಯಿಯ ಕುರಿತಾದ ಸಿನಿಮಾ ಆಗಿತ್ತು. ಸಿನಿಮಾವನ್ನು ಪ್ಯಾನ್ ಇಂಡಿಯಾ ಲೆವೆಲ್​ನಲ್ಲಿ ರಕ್ಷಿತ್ ಶೆಟ್ಟಿ ಬಿಡುಗಡೆ ಮಾಡಿದ್ದರು. ಭಾರಿ ಯಶಸ್ಸು ಕಂಡ ಈ ಸಿನಿಮಾ ನೂರು ಕೋಟಿಗೂ ಹೆಚ್ಚು ಹಣವನ್ನು ಬಾಕ್ಸ್ ಆಫೀಸ್​ನಲ್ಲಿ ಕಲೆ ಹಾಕಿತು. ರಕ್ಷಿತ್ ಶೆಟ್ಟಿಗೆ ಇದು ಮೊದಲ ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದರೆ, ಕಿರಣ್ ರಾಜ್​ಗೆ ಇದು ಮೊತ್ತ ಮೊದಲ ನಿರ್ದೇಶನದ ಸಿನಿಮಾ. ಮೊದಲ ನಿರ್ದೇಶನದ ಸಿನಿಮಾಕ್ಕೆ ಪ್ರಶಸ್ತಿ ಬಂದಿರುವುದು ಸಹಜವಾಗಿಯೇ ಅವರಿಗೆ ಖುಷಿ ತಂದಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ