ಬರಲಿದೆ ‘ಎ’ ಪಾರ್ಟ್ 2, ಚಿತ್ರಕತೆ ರೆಡಿ, ಆದರೆ ಉಪೇಂದ್ರ ನಿರ್ದೇಶಿಸುತ್ತಾರಾ?
ಕನ್ನಡದ ಕಲ್ಟ್ ಸಿನಿಮಾಗಳಲ್ಲಿ ಒಂದಾದ ‘ಎ’ 26 ವರ್ಷದ ಬಳಿಕ ಮತ್ತೆ ಬಿಡುಗಡೆ ಆಗಿ ಸೂಪರ್ ಹಿಟ್ ಆಗಿದೆ. ಇದೀಗ ‘ಎ’ ಸಿನಿಮಾದ ಎರಡನೇ ಭಾಗ ನಿರ್ಮಾಣವಾಗಲಿದೆ ಎಂದು ಚಿತ್ರತಂಡ ಘೋಷಿಸಿದೆ.
ಉಪೇಂದ್ರ (Upendra) ನಟಿಸಿ, ನಿರ್ದೇಶನ ಮಾಡಿರುವ ‘ಎ’ ಸಿನಿಮಾ (A Cinema) 26 ವರ್ಷಗಳ ಬಳಿಕ ಇತ್ತೀಚೆಗಷ್ಟೆ ಮರು ಬಿಡುಗಡೆ ಆಗಿ ಮತ್ತೆ ಸೂಪರ್ ಹಿಟ್ ಎನಿಸಿಕೊಂಡಿದೆ. 26 ವರ್ಷಗಳ ಬಳಿಕವೂ ಜನ ಮುಗಿಬಿದ್ದು ಸಿನಿಮಾ ನೋಡಿದ್ದಾರೆ. ಚಿತ್ರತಂಡ ಸಂಭ್ರಮಾಚರಣೆ ಮಾಡಿದೆ. ಮಾತ್ರವಲ್ಲದೆ ಈ ಸಂಭ್ರಮಾಚರಣೆಯಲ್ಲಿ ಚಿತ್ರತಂಡ ಹೊಸ ಘೋಷಣೆಯನ್ನು ಸಹ ಮಾಡಿದೆ. ಅದುವೇ ‘ಎ’ ಪಾರ್ಟ್ 2. ಕತೆ, ಚಿತ್ರಕತೆ ಈಗಾಗಲೇ ಪೂರ್ಣವಾಗಿ ರೆಡಿಯಾಗಿದ್ದು, ‘ಎ’ ಪಾರ್ಟ್ 2 ಖಂಡಿತ ನಿರ್ಮಾಣವಾಗುತ್ತದೆ ಎಂದಿದ್ದಾರೆ.
ಸಂಭ್ರಮಾಚರಣೆಯಲ್ಲಿ ಮಾತನಾಡಿದ ‘ಎ’ ಸಿನಿಮಾದ ನಟಿ ಚಾಂದಿನಿ, ‘ಎ’ ಸಿನಿಮಾವನ್ನು ಮೆಚ್ಚದ ಜನರಿಲ್ಲ. ಬಾಲಿವುಡ್ನ ಹಲವು ಸಿನಿಮಾಗಳಲ್ಲಿ ‘ಎ’ ಸಿನಿಮಾದ ಛಾಯೆ ಕಾಣುತ್ತದೆ. ಬಾಲಿವುಡ್ನವರು ಸಹ ಈ ಸಿನಿಮಾ ನೋಡಿ ಬೆರಗಾಗಿದ್ದರು. ಈಗ ಇಲ್ಲಿ ಒಂದು ಘೋಷಣೆ ಮಾಡಲಿದ್ದೇವೆ, ‘ಎ’ ಸಿನಿಮಾದ ಎರಡನೇ ಭಾಗ ರೆಡಿಯಾಗುತ್ತಿದೆ. ನಮ್ಮೊಟ್ಟಿಗೆ ಬರಹಗಾರರ ತಂಡವೇ ಇದೆ. ಈಗಾಗಲೇ ನಾವು ಕತೆ, ಚಿತ್ರಕತೆಯನ್ನು ರೆಡಿ ಮಾಡಿಕೊಂಡಿದ್ದೇವೆ. ಸಂಭಾಷಣೆ ಬರೆಯಬೇಕಿದೆ’ ಎಂದಿದ್ದಾರೆ.
ಇದನ್ನೂ ಓದಿ:‘ಯುಐ’ ಅಂತರಾಷ್ಟ್ರೀಯ ಸ್ಪರ್ಷ, ಹಂಗೆರಿಯಲ್ಲಿ ಉಪೇಂದ್ರ, ಅಜನೀಶ್
ಚಿತ್ರತಂಡದಲ್ಲಿ ಸದ್ಯಕ್ಕೆ ನಾನು, ಗುರುಕಿರಣ್, ಅಸಿಸ್ಟೆಂಟ್ಗಳು ಇನ್ನೂ ಕೆಲವರು ಇದ್ದೇವೆ. ನಾವೆಲ್ಲ ಕೂತು ಸಂಭಾಷಣೆ, ಪೋಸ್ಟ್ ಪ್ರೊಡಕ್ಷನ್ ಅಂತಿಮಗೊಳಿಸಿಕೊಳ್ಳುತ್ತೇವೆ ಆ ನಂತರ ಉಪೇಂದ್ರ ಅವರ ಬಳಿ ಹೋಗಿ ನಾವು ಅವರನ್ನು ಮನವಿ ಮಾಡುತ್ತೇವೆ, ಈ ಸಿನಿಮಾವನ್ನು ನೀವೇ ನಿರ್ದೇಶಿಸಿ ಅಂತ. ಅವರು ಒಪ್ಪುತ್ತಾರೆಂಬ ನಂಬಿಕೆ ಇದೆ. ನಿರ್ದೇಶನ ಮಾಡುವುದು ಮಾತ್ರವೇ ಅಲ್ಲ, ಅವರು ಈ ಸಿನಿಮಾದಲ್ಲಿ ನಟನೆ ಸಹ ಮಾಡಬೇಕು ಎಂದು ನಾವು ಕೇಳಲಿದ್ದೇವೆ. ಒಟ್ಟಾರೆ ನಾವು ಈ ಸಿನಿಮಾ ಮಾಡಲಿದ್ದೇವೆ’ ಎಂದಿದ್ದಾರೆ ಚಾಂದಿನಿ.
‘ಎ’ ಸಿನಿಮಾದ ಚಿತ್ರೀಕರಣದ ಸಮಯದಲ್ಲಿ ನಡೆದ ಕೆಲವು ಘಟನೆಗಳನ್ನು ನೆನಪು ಮಾಡಿಕೊಂಡ ಚಾಂದಿನಿ, ಆಗಿನ್ನೂ ನಾನು ಚಿಕ್ಕ ಹುಡುಗಿ. ನನ್ನ ಎರಡು ಫೋಟೊಗಳನ್ನಷ್ಟೆ ನೋಡಿ ಉಪೇಂದ್ರ ಅವರು ನಾಯಕಿಯಾಗಿ ಸೆಲೆಕ್ಟ್ ಮಾಡಿದ್ದರು. ಅದು ನನಗೆ ಆಶ್ಚರ್ಯವಾಗಿತ್ತು. ನಾನು ನಟಿಸಿದ ಮೊದಲ ಶಾಟ್ನಲ್ಲಿಯೇ ನನ್ನನ್ನು ಗುರುಕಿರಣ್ ತಳ್ಳಿ ಬೀಳಿಸಿದ್ದರು. ಆ ದಿನ ನನಗೆ ಶಾಕ್ ಆಗಿತ್ತು. ನಾನು ನಿಜಕ್ಕೂ ನೆಲಕ್ಕೆ ಬಿದ್ದಿದ್ದೆ. ನನಗೆ ಅಳು ತಡೆದುಕೊಳ್ಳಲು ಆಗಿರಲಿಲ್ಲ. ನನ್ನ ತಾಯಿಯೂ ಅಳುತ್ತಿದ್ದರು. ಅಸಲಿಗೆ ಈ ಚಿತ್ರರಂಗಕ್ಕೆ ನನ್ನನ್ನು ತಳ್ಳಿದವರು ಗುರುಕಿರಣ್’ ಎಂದಾಯಿತು ಎಂದು ತಮಾಷೆ ಮಾಡಿದರು ಚಾಂದಿನಿ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ