ಬಹುನಿರೀಕ್ಷಿತ ‘ಯುಐ’ (UI Movie) ಸಿನಿಮಾದ ಹೊಸ ಹಾಡು ಬಿಡುಗಡೆಯಾಗಿ ಸಖತ್ ಸದ್ದು ಮಾಡುತ್ತಿದೆ. ‘ಟ್ರೋಲ್ ಸಾಂಗ್’ (Troll Song) ಸಾಹಿತ್ಯ ಕೇಳಿದ ಎಲ್ಲರೂ ಭೇಷ್ ಎನ್ನುತ್ತಿದ್ದಾರೆ. ಉಪೇಂದ್ರ ನಿರ್ದೇಶನದ ಈ ಸಿನಿಮಾದ ಮೇಲಿನ ಹೈಪ್ ಹೆಚ್ಚಾಗಲು ಈ ಸಾಂಗ್ ಕಾರಣ ಆಗಿದೆ. ನರೇಶ್ ಕುಮಾರ್ ಎಚ್.ಎನ್. ಅವರು ಇದರ ಸಾಹಿತ್ಯ ಬರೆದಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಟ್ರೋಲ್ ಆದ ವಿಚಾರಗಳನ್ನೇ ಒಂದಕ್ಕೊಂದು ಪೋಣಿಸಿ ಈ ಗೀತೆಯನ್ನು ಬರೆಯಲಾಗಿದೆ. ಉಪೇಂದ್ರ ಅವರ ಸಿನಿಮಾಗಳಲ್ಲಿ ಇಂಥ ಪ್ರಯೋಗಗಳು ಹಲವು ಬಾರಿ ನಡೆದಿವೆ. ಈ ಹಿಂದೆ ಉಪೇಂದ್ರ (Upendra) ಅವರು ಮಾಡಿದ ಸಾಹಿತ್ಯದ ಪ್ರಯೋಗಗಳು ಒಂದೆರಡಲ್ಲ.
ಉಪೇಂದ್ರ ನಟನೆಯ ‘ಓಂಕಾರ’ ಸಿನಿಮಾದ ಹಾಡುಗಳು ಗುರುಕಿರಣ್ ಅವರ ಸಂಗೀತದಲ್ಲಿ ಮೂಡಿಬಂದಿವೆ. ಈ ಸಿನಿಮಾ 2004ರಲ್ಲಿ ಬಿಡುಗಡೆ ಆಯಿತು. ಈ ಸಿನಿಮಾದಲ್ಲಿದ್ದ ‘ಬಾಲೋ ಭಾಷಿ ಬೆಂಗಾಲಿಲಿ..’ ಸಾಂಗ್ ತುಂಬ ವಿಶೇಷವಾಗಿದೆ. ‘ಐ ಲವ್ ಯೂ’ ಎಂಬ ವಾಕ್ಯವನ್ನು ಕನ್ನಡ, ಬೆಂಗಾಲಿ, ಹಿಂದಿ, ಇಂಗ್ಲಿಷ್, ಸ್ಪಾನಿಶ್, ಮಲಯಾಳಂ, ತಮಿಳು, ತೆಲುಗು, ಫ್ರೆಂಚ್, ಲ್ಯಾಟಿನ್, ಇಟಲಿಯಾನ್, ಸಂಸ್ಕೃತ, ಚೈನೀಸ್ ಮುಂತಾದ ಭಾಷೆಗಳಲ್ಲಿ ಹೇಗೆ ಹೇಳಲಾಗುತ್ತದೆ ಎಂಬುದನ್ನು ಈ ಹಾಡಿನಲ್ಲಿ ತಿಳಿಸಲಾಗಿದೆ. ಈ ಹಾಡು ಬರೆದಿದ್ದು ಉಪೇಂದ್ರ.
ಉಪೇಂದ್ರ ಮತ್ತು ಗುರುಕಿರಣ್ ಸೇರಿದರೆ ಅಲ್ಲಿ ಹೊಸತನ ಖಂಡಿತ ಇರುತ್ತದೆ. ಅದಕ್ಕೆ ಅನೇಕ ಸಾಕ್ಷಿಗಳಿವೆ. ‘ಉಪೇಂದ್ರ’ ಸಿನಿಮಾದಲ್ಲಿ ‘ಓಳು ಬರೀ ಓಳು’ ಹಾಡಿಗೆ ಸಾಹಿತ್ಯ ಬರೆದ ಉಪೇಂದ್ರ ಅವರು ಆಗಿನ ಕಾಲದಲ್ಲಿ ಹೆಚ್ಚು ಚಾಲ್ತಿಯಲ್ಲಿದ್ದ ಟಿವಿ ಚಾನೆಲ್ಗಳ ಹೆಸರನ್ನೇ ಜೋಡಿಸಿ ಹಾಡು ಸೃಷ್ಟಿ ಮಾಡಿದ್ದರು. ‘ಎಂ ಟಿವಿ ಸುಬ್ಬುಲಕ್ಷ್ಮಿಗೆ ಬರಿ ಓಳು.. ಜೀ ಟಿವಿ ಮಾದೆ ಗೌಡ್ರುಗೆ ಬರೀ ಓಳು’ ಎಂಬ ಈ ಹಾಡಿನಲ್ಲಿ ಉದಯ ಟಿವಿ, ಸಿಟಿ ಚಾನೆಲ್, ಸನ್ ಟಿವಿ, ವಿ ಚಾನೆಲ್ ಮುಂತಾದ ವಾಹಿನಿಗಳ ಹೆಸರನ್ನು ಬಳಸಿಕೊಂಡು ಈ ಸಾಂಗ್ ಬರೆಲಾಗಿದೆ.
ಉಪೇಂದ್ರ ಹೀರೋ ಆಗಿ ನಟಿಸಿದ್ದ ‘ಎ’ ಸಿನಿಮಾದಲ್ಲಿ ಹತ್ತು ಹಲವು ಪ್ರಯೋಗ ಮಾಡಲಾಗಿತ್ತು. ಆ ಸಿನಿಮಾದಲ್ಲಿದ್ದ ‘ಇದು ಒನ್ ಡೇ ಮ್ಯಾಚು ಕಣೋ..’ ಹಾಡು ಇಂದಿಗೂ ಎವರ್ಗ್ರೀನ್ ಆಗಿದೆ. ಕ್ರಿಕೆಟ್ ಕಾಮೆಂಟರಿಯ ರೀತಿಯಲ್ಲಿ ಉಪೇಂದ್ರ ಅವರು ಈ ಸಾಂಗ್ ಬರೆದಿದ್ದಾರೆ. ಹೀರೋ-ಹೀರೋಯಿನ್ ನಡುವೆ ಪ್ರೀತಿ ಹುಟ್ಟುವ ಆ ಕ್ಷಣವನ್ನು ಕ್ರಿಕೆಟ್ ಮ್ಯಾಚ್ಗೆ ಹೋಲಿಸಿ ಬರೆದ ಈ ಹಾಡು ಸೂಪರ್ ಹಿಟ್ ಆಯಿತು.
‘ಎಚ್2ಒ’ ಸಿನಿಮಾದ ಎಲ್ಲ ಹಾಡುಗಳು ಸೂಪರ್ ಹಿಟ್. ಸಾಧು ಕೋಕಿಲ ಅವರು ಸಂಗೀತ ನೀಡಿದ ಈ ಸಿನಿಮಾದಲ್ಲಿ ‘ಐ ವನಾ ಸೀ ಮೈ ಡಾರ್ಲಿಂಗ್..’ ಹಾಡಿನ ಸಾಹಿತ್ಯ ತುಂಬ ಡಿಫರೆಂಟ್ ಆಗಿದೆ. ಇದನ್ನು ಕೂಡ ಉಪೇಂದ್ರ ಅವರೇ ಬರೆದಿದ್ದಾರೆ. ಹಲವು ದೇಶ ಮತ್ತು ಸ್ಥಳಗಳ ಹೆಸರುಗಳನ್ನು ಬಳಸಿಕೊಂಡು ಈ ಹಾಡನ್ನು ಬರೆಲಾಗಿದೆ. ಅನೇಕ ದೇಶಗಳ ಫೇಮಸ್ ಅಂಶಗಳನ್ನು ಹೆಣ್ಣಿನ ಅಂದಕ್ಕೆ ಹೋಲಿಸಲಾಗಿದೆ.
ಉಪೇಂದ್ರ ನಟನೆಯ ‘ನ್ಯೂಸ್’ ಸಿನಿಮಾ 2005ರಲ್ಲಿ ಬಿಡುಗಡೆ ಆಯಿತು. ಈ ಸಿನಿಮಾದಲ್ಲಿ ಕವಿರಾಜ್ ಬರೆದ ‘ಗುಡ್ ಮಾರ್ನಿಂಗ್ ಇಂಡಿಯಾ ಟುಡೇ..’ ಹಾಡು ಕೂಡ ಭಿನ್ನವಾಗಿದೆ. ಇಂಡಿಯಾ ಟುಡೇ, ಈ ಸಂಜೆ, ಟೈಮ್ಸ್ ಆಫ್ ಇಂಡಿಯಾ, ಸಿತಾರಾ, ಮಯೂರ, ತುಷಾರಾ, ಉದಯವಾಣಿ, ವಿಜಯ ಕರ್ನಾಟಕ, ಪ್ರಜಾವಾಣಿ, ಸಂಯುಕ್ತ ಕರ್ನಾಟಕ, ಔಟ್ ಲುಕ್, ಸಂಜೆ ವಾಣಿ, ಕನ್ನಡ ಪ್ರಭ, ರೂಪತಾರ, ಕರ್ಮವೀರ, ಗೃಹಶೋಭಾ, ಅರಗಿಣಿ, ಚಂದಮಾಮಾ ಮುಂತಾದ ಪತ್ರಿಕೆ ಹಾಗೂ ಮ್ಯಾಗಜಿನ್ಗಳ ಹೆಸರನ್ನು ಪೋಣಿಸಿ ಕವಿರಾಜ್ ಅರು ಈ ಹಾಡು ಬರೆದಿದ್ದಾರೆ. ‘ನ್ಯೂಸ್’ ಚಿತ್ರಕ್ಕೆ ಗುರುಕಿರಣ್ ಅವರ ಸಂಗೀತವಿದೆ.
ಜಗತ್ತಿನ ವಿದ್ಯಮಾನಗಳಿಗೆ ತಕ್ಕಂತೆ ಉಪೇಂದ್ರ ಹಾಡು ಬರೆಯುತ್ತಾರೆ. 2001ರ ಸೆಪ್ಟೆಂಬರ್ 9ರಂದು ಅಲ್-ಖೈದಾ ಉಗ್ರರು ಅಮೆರಿಕದ ಮೇಲೆ ಆತ್ಮಾಹುತಿ ದಾಳಿ ಮಾಡಿದ ಬಳಿಕ ತಾಲಿಬಾನ್ ಹಾಗೂ ಒಸಾಮಾ ಬಿನ್ ಲಾಡೆನ್ ಹೆಸರುಗಳು ಪದೇಪದೇ ಸುದ್ದಿಯಾಗಲು ಆರಂಭಿಸಿದವು. 2002ರ ಏಪ್ರಿಲ್ನಲ್ಲಿ ಬಂದ ‘ಅಪ್ಪು’ ಸಿನಿಮಾದಲ್ಲಿ ‘ತಾಲಿಬಾನ್ ಅಲ್ಲ ಅಲ್ಲ, ಬಿನ್ ಲಾಡೆನ್ ಅಲ್ವೇ ಅಲ್ಲ..’ ಎಂದು ಹಾಡು ಬರೆಯುವ ಮೂಲಕ ಉಪೇಂದ್ರ ಅವರು ಎಲ್ಲರ ಗಮನ ಸೆಳೆದರು.
ಇದನ್ನೂ ಓದಿ: ಸಾಧುಗೆ ‘ಕೋಕಿಲ’ ಹೆಸರು ಕೊಟ್ಟಿದ್ದು ಉಪೇಂದ್ರ; ಇದರ ಹಿಂದಿದೆ ಇಂಟರೆಸ್ಟಿಂಗ್ ಕಥೆ
ಹೀಗೆ ಗೀತರಚನೆಯಲ್ಲಿ ಅವರು ಹಲವು ಪ್ರಯೋಗಗಳನ್ನು ಮಾಡಿದ್ದಾರೆ. ಎರಡು ಹೃದಯಗಳ ನಡುವೆ ಆ್ಯಕ್ಸಿಡೆಂಟ್ ಆಗಿದೆ ಎಂಬರ್ಥದಲ್ಲಿ ಅವರು ಬರೆದ ‘ಸುಮ್ ಸುಮ್ನೇ ನಗ್ತಾಳೆ..’ ಹಾಡು ಅಷ್ಟೇ ಡಿಫರೆಂಟ್ ಆಗಿದೆ. ಇದಕ್ಕೆ ಹೇಳೋದು ಉಪೇಂದ್ರಗೆ ಉಪೇಂದ್ರನೇ ಸಾಟಿ ಅಂತ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.