ಡಾ ರಾಜ್ಕುಮಾರ್ (Dr Rajkumar) ವೃತ್ತಿ ಜೀವನದ ಅನೇಕ ಬ್ಲಾಕ್ ಬಸ್ಟರ್ ಹಿಟ್ಗಳಲ್ಲಿ ಆಕಸ್ಮಿಕ (Aakasmika) ಸಿನಿಮಾ ಸಹ ಒಂದು. ಆ ಸಿನಿಮಾದ ಹಾಡುಗಳಂತೂ ಇನ್ನೂ ನೂರು ವರ್ಷವಾದರೂ ಜನಮಾನಸದಲ್ಲಿ ಇರುತ್ತವೆ. ಸಿನಿಮಾದಲ್ಲಿ ಅಣ್ಣಾವ್ರ ನಟನೆಯಂತೂ ಅದ್ಭುತ, ಸಿನಿಮಾ ನೀಡಿದ ಸಂದೇಶವೂ ಸಾರ್ವಕಾಲಿಕ. ಆದರೆ ಅಸಲಿಗೆ ಆ ಸಿನಿಮಾದ ಕತೆಯನ್ನು ಹೆಣೆದಿದ್ದು ಡಾ ರಾಜ್ಕುಮಾರ್ ಅವರಿಗಾಗಿ ಅಲ್ಲ ಬದಲಿಗೆ ಶಿವರಾಜ್ ಕುಮಾರ್ (Shiva Rajkumar) ಅವರಿಗಾಗಿ. ಆದರೆ ಸಿನಿಮಾದಲ್ಲಿ ಅಣ್ಣಾವ್ರು ನಟಿಸಿದ್ದು ಹೇಗೆ ಎಂಬುದನ್ನು ನಿರ್ದೇಶಕ ನಾಗಾಭರಣ ಹಿಂದೊಮ್ಮೆ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
ಆಕಸ್ಮಿಕ ಸಿನಿಮಾದ ಕತೆ ಮಾಡಿಕೊಂಡು ಅಣ್ಣಾವ್ರ ಮನೆಗೆ ಹೋಗಿದ್ದರಂತೆ ಟಿಎಸ್ ನಾಗಾಭರಣ. ಅಣ್ಣಾವ್ರು ಕೂತು ಬಹಳ ಆಸ್ಥೆಯಿಂದ ಕತೆ ಕೇಳಿದ್ದಾರೆ. ಕತೆ ಮುಗಿದ ಕೂಡಲೇ ಸುಮ್ಮನೆ ಎದ್ದು ಹೋಗಿಬಿಟ್ಟರಂತೆ. ಓಹ್ ಅಣ್ಣಾವ್ರಿಗೆ ಕತೆ ಇಷ್ಟವಾಗಿಲ್ಲವಿರಬೇಕು ಎನಿಸಿತಂತೆ ನಾಗಾಭರಣಗೆ. ಆದರೆ ಅಣ್ಣಾವ್ರು, ಈಗ ಊಟ ಮಾಡೋಣ, ಊಟ ಮುಗಿದ ಮೇಲೆ ಇಬ್ಬರು ಬರುತ್ತಾರೆ ಅವರಿಗೂ ಕತೆ ಹೇಳಿ ಎಂದರಂತೆ.
ಆದರೆ ನಾಗಾಭರಣಗೆ ಪೀಕಲಾಟ, ಈಗಾಗಲೇ ಹೇಳಿರುವ ಕತೆಯನ್ನು ಮತ್ತೆ ಹೇಳಬೇಕೆ ಎಂದುಕೊಂಡು, ”ನನ್ನ ಬಳಿ ಇನ್ನೊಂದು ಕತೆ ಇದೆ ಜನುಮದ ಜೋಡಿ ಎಂದು ಅದನ್ನು ಹೇಳುತ್ತೇನೆ” ಎಂದರಂತೆ. ಅದಕ್ಕೆ ಅಣ್ಣಾವ್ರು ಬೇಡ ಬೇಡ ಇದೆ ಕತೆ ಹೇಳಿ ಎಂದರಂತೆ. ಊಟವಾದ ಬಳಿಕ ಪಾರ್ವತಮ್ಮ ರಾಜ್ಕುಮಾರ್ ಹಾಗೂ ವರದಪ್ಪನವರು ಬಂದಿದ್ದಾರೆ. ಆಗ ಮತ್ತೆ ನಾಗಾರಭರಣ ಆಕಸ್ಮಿಕ ಕತೆ ಹೇಳಿದ್ದಾರೆ. ಕತೆ ಪೂರಾ ಕೇಳಿದ ವರದಪ್ಪನವರು, ಈ ಸಿನಿಮಾಕ್ಕೆ ಶಿವಣ್ಣನೇ ನಾಯಕ ಆಗಬೇಕಾ? ಎಂದರಂತೆ. ಈ ಪ್ರಶ್ನೆ ಕೇಳಿ ಗಾಬರಿಯಾದ ನಾಗಾಭರಣ, ಇನ್ಯಾರ ಹೆಸರನ್ನು ವರದಪ್ಪನವರು ಸೂಚಿಸಿ ಬಿಡುತ್ತಾರೋ ಎಂದುಕೊಂಡು ಇಲ್ಲ ನಾನು ಶಿವಣ್ಣನಿಗಾಗಿಯೇ ಕತೆ ಬರೆದಿದ್ದೇನೆ ಎಂದರಂತೆ.
ಇದನ್ನೂ ಓದಿ:Dr. Rajkumar Birth Anniversary: ಜಪಾನ್ನಲ್ಲಿ ಡಾ. ರಾಜ್ಕುಮಾರ್ ಹುಟ್ಟುಹಬ್ಬ ಆಚರಿಸಿದ ಫ್ಯಾನ್ಸ್
ಯಾಕೆ ಶಿವಣ್ಣನೇ ಆಗಬೇಕು? ಅಣ್ಣಾವ್ರು ನಟಿಸಿದರೆ ಆಗುವುದಿಲ್ಲವಾ? ಎಂದರಂತೆ. ಅಣ್ಣಾವ್ರನ್ನು ಕತೆಯ ಪಾತ್ರವಾಗಿ ಯೋಚಿಸಿಯೇ ಇರದಿದ್ದ ನಾಗಾಭರಣಗೆ ಈ ಬಾರಿ ಇನ್ನೂ ಶಾಕ್ ಆಗಿ ಬಿಟ್ಟಿದೆ. ಏನೂ ಮಾತನಾಡದೆ ಸುಮ್ಮನೆ ಕೂತುಬಿಟ್ಟರಂತೆ. ”ನನಗೆ ಒಂದು ವಾರ ಸಮಯ ಕೊಡಿ ಹೇಳುತ್ತೇನೆ” ಎಂದರಂತೆ. ಆದರೆ ವರದಪ್ಪನವರು ಸಮಯ ಯಾಕೆ ಈಗಲೇ ಹೇಳಿ ಎಂದು ಒತ್ತಾಯಿಸಿದ್ದಾರೆ, ಆದರೆ ನಾಗಾಭರಣ ಅವರ ಪೀಕಲಾಟ ಅರಿತ ಪಾರ್ವತಮ್ಮನವರು ಸರಿ ಒಂದು ವಾರ ಸಮಯ ತೆಗೆದುಕೊಳ್ಳಿ ಎಂದರಂತೆ.
”ಕತೆ ಬರೆಯುವಾಗ ಒಬ್ಬ ನಾಯಕನ ವ್ಯಕ್ತಿತ್ವ ಹಾವ ಭಾವವನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಕತೆ ಬರೆದಿರುತ್ತೇವೆ, ಹೇಳಿರುತ್ತೇವೆ. ಒಮ್ಮೆಲೆ ಆ ಪಾತ್ರಕ್ಕೆ ಬೇರೆ ವ್ಯಕ್ತಿ ಎಂದಾಗ ಮನಸ್ಸಿನೊಳಗೆ ಅಲ್ಲೋಲ-ಕಲ್ಲೋಲ ಆಗಿಬಿಡುತ್ತದೆ. ಆಕಸ್ಮಿಕ ಸಿನಿಮಾದ ನಾಯಕನ ಪಾತ್ರಕ್ಕೆ ನಾನು ಅಣ್ಣಾವ್ರ ಕಲ್ಪನೆಯನ್ನೂ ಮಾಡಿಕೊಂಡಿರಲಿಲ್ಲ. ಒಮ್ಮೆಲೆ ಅವರು ಅಣ್ಣಾವ್ರು ಆದರೆ ಹೇಗಿರುತ್ತೆ ಎಂದಾಗ ನನಗೆ ಏನೂ ಹೇಳಲು ಗೊತ್ತಾಗಿರಲಿಲ್ಲ” ಎಂದಿದ್ದರು ನಾಗಾಭರಣ.
ಒಂದು ವಾರ ಸಮಯ ತೆಗೆದುಕೊಂಡು ಬಂದ ನಾಗಾಭರಣ, ತಮ್ಮ ಪರಿಚಯದವರು ಯಾರೆ ಸಿಕ್ಕಿದರೂ ಅವರಿಗೆ ಆಕಸ್ಮಿಕ ಕತೆ ಹೇಳಿ ಇದಕ್ಕೆ ಅಣ್ಣಾವ್ರು ಆದರೆ ಹೇಗಿರುತ್ತದೆ ಎಂದು ಕೇಳುತ್ತಿದ್ದರಂತೆ. ಬಹುತೇಕರು ಚೆನ್ನಾಗಿರುತ್ತೇ ಎಂದೇ ಹೇಳಿದರಂತೆ. ಆದರೆ ಈ ಪ್ರಾಸೆಸ್ನಲ್ಲಿ ಆಕಸ್ಮಿಕ ಕತೆಯ ನಾಯಕ ಅಣ್ಣಾವ್ರೇ ಎಂಬುದು ಅವರ ಸ್ಮೃತಿಗೆ ದಾಖಲಾಗಿ ಹೋಯ್ತಂತೆ. ಅಣ್ಣಾವ್ರ ವ್ಯಕ್ತಿತ್ವಕ್ಕೆ ತಕ್ಕಂತೆ ಚಿತ್ರಕತೆಯಲ್ಲೂ ಕೆಲವು ಸಣ್ಣ ಪುಟ್ಟ ಬದಲಾವಣೆಗಳನ್ನು ಮಾಡಿಕೊಂಡರು ನಾಗಾರಭಣ. ಬಳಿಕ ಮತ್ತೆ ಹೋಗಿ ಅಣ್ಣಾವ್ರು ಓಕೆ ಎಂದು ಹೇಳಿ ಸಿನಿಮಾ ಶುರು ಮಾಡಿದರಂತೆ. ಆಮೇಲಿನದ್ದು ಈಗ ಇತಿಹಾಸ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ