ನಟ ಅರುಣ್ ಸಾಗರ್ ಕನ್ನಡದಲ್ಲಿ ಸಾಕಷ್ಟು ಖ್ಯಾತಿ ಗಳಿಸಿಕೊಂಡಿದ್ದಾರೆ. ಅವರು ಹಲವು ಸ್ಟಾರ್ ನಟರ ಜತೆ ತೆರೆ ಹಂಚಿಕೊಂಡಿದ್ದಾರೆ. ಈಗ ಟಾಲಿವುಡ್ನ ಖ್ಯಾತ ನಿರ್ದೇಶಕ ರಾಜಮೌಳಿ ಅವರ ‘ಆರ್ಆರ್ಆರ್’ ಸಿನಿಮಾದಲ್ಲಿ ಕೆಲಸ ಮಾಡುವ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಜನವರಿ 7ರಂದು ತೆರೆಗೆ ಬರುತ್ತಿರುವ ‘ಆರ್ಆರ್ಆರ್’ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಅರುಣ್ ಸಾಗರ್ ನಟಿಸಿದ್ದಾರೆ. ಈ ವಿಚಾರ ಕೇಳಿ ಕನ್ನಡಿಗರು ಸಖತ್ ಖುಷಿಯಾಗಿದ್ದಾರೆ.
ರಾಜಮೌಳಿಗೂ ಕರ್ನಾಟಕಕ್ಕೂ ಒಳ್ಳೆಯ ನಂಟಿದೆ. ಅವರ ಮೂಲತಃ ರಾಯಚೂರಿನವರು . ಕನ್ನಡದ ಸ್ಟಾರ್ ನಟ ಕಿಚ್ಚ ಸುದೀಪ್ ಅವರು ರಾಜಮೌಳಿ ನಿರ್ದೇಶನದ ಸೂಪರ್ ಹಿಟ್ ಚಿತ್ರ ‘ಈಗ’ದಲ್ಲಿ ನೆಗೆಟಿವ್ ರೋಲ್ ಮಾಡಿದ್ದರು. ‘ಬಾಹುಬಲಿ’ ಚಿತ್ರದಲ್ಲಿ ಅವರು ಅತಿಥಿ ಪಾತ್ರದಲ್ಲಿ ಮಿಂಚಿದ್ದರು. ಈಗ ‘ಆರ್ಆರ್ಆರ್’ ಸಿನಿಮಾದಲ್ಲಿ ಅರುಣ್ ಸಾಗರ್ ಅವರಿಗೆ ರಾಜಮೌಳಿ ಅವಕಾಶ ನೀಡಿದ್ದಾರೆ.
ಅರುಣ್ ಸಾಗರ್ ಅವರು ರಂಗಭೂಮಿ ಪ್ರತಿಭೆ. ಕನ್ನಡ ಚಿತ್ರರಂಗದಲ್ಲಿ ನಟರಾಗಿ ಮತ್ತು ಕಲಾ ನಿರ್ದೇಶಕರಾಗಿ ಹೆಸರು ಮಾಡಿದ್ದಾರೆ. ಅವರ ನಟನೆಯನ್ನು ಸಾಕಷ್ಟು ಮಂದಿ ಮೆಚ್ಚಿಕೊಂಡಿದ್ದಾರೆ. ಹೀಗಾಗಿ, ರಾಜಮೌಳಿ ಅವರು ಅವಕಾಶ ನೀಡಿದ್ದಾರೆ. ಈ ಸಿನಿಮಾದಲ್ಲಿ ಬರುವ ಇಬ್ಬರು ಹೀರೋಗಳಲ್ಲಿ ಒಬ್ಬರಿಗೆ ಹೆಸರಿಡುವ ಪಾತ್ರದಲ್ಲಿ ಅರುಣ್ ಸಾಗರ್ ಕಾಣಿಸಿಕೊಳ್ಳುತ್ತಿದ್ದಾರೆ. ಹೀಗಾಗಿ, ಆರಂಭದಲ್ಲಿಯೇ ಅವರು ತೆರೆಮೇಲೆ ಬರಲಿದ್ದಾರೆ.
ರಾಜಮೌಳಿ ಸಿನಿಮಾ ಬಜೆಟ್ಗೆ ತಕ್ಕಂತೆ ಅದ್ದೂರಿಯಾಗಿ ಮೂಡಿ ಬರುತ್ತದೆ. ‘ಆರ್ಆರ್ಆರ್’ ಸಿನಿಮಾ ಮೇಕಿಂಗ್ ಕೂಡ ಉತ್ಕೃಷ್ಟ ಮಟ್ಟದಿಂದ ಕೂಡಿರಲಿದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಡಿಸೆಂಬರ್ 3ರಂದು ಟ್ರೇಲರ್ ರಿಲೀಸ್ ಆಗಲಿದೆ. ಕರ್ನಾಟಕದಲ್ಲಿ ಗ್ರ್ಯಾಂಡ್ ಆಗಿ ಪ್ರೀ-ರಿಲೀಸ್ ಇವೆಂಟ್ ನಡೆಸಲು ಚಿತ್ರತಂಡ ನಿರ್ಧರಿಸಿದೆ. ಈ ಬಗ್ಗೆ ರಾಜಮೌಳಿ ಇತ್ತೀಚೆಗೆ ಮಾಹಿತಿ ನೀಡಿದ್ದರು. ಈ ಕಾರ್ಯ ಯಾವಾಗ ನಡೆಯಲಿದೆ ಎನ್ನುವ ಕುತೂಹಲ ಕನ್ನಡಿಗರಲ್ಲಿ ಮೂಡಿದೆ. ತೆಲುಗು, ತಮಿಳು, ಹಿಂದಿ, ಕನ್ನಡ ಹಾಗೂ ಮಲಯಾಳಂನಲ್ಲಿ ಸಿನಿಮಾ ಮೂಡಿ ಬರುತ್ತಿದೆ.
‘ಆರ್ಆರ್ಆರ್’ ಚಿತ್ರದಲ್ಲಿ ಜ್ಯೂ.ಎನ್ಟಿಆರ್ ಹಾಗೂ ರಾಮ್ ಚರಣ್ ಮುಖ್ಯ ಭೂಮಿಕೆಯಲ್ಲಿ ಇದ್ದಾರೆ. ‘ಆರ್ಆರ್ಆರ್’ ಚಿತ್ರದಲ್ಲಿ ನಾಯಕಿಯಾಗಿ ಆಲಿಯಾ ಭಟ್ ಅಭಿನಯಿಸಿದ್ದಾರೆ. ಇನ್ನೊಂದು ಮುಖ್ಯ ಪಾತ್ರದಲ್ಲಿ ಬಾಲಿವುಡ್ ನಟ ಅಜಯ್ ದೇವಗನ್ ಅವರು ಕಾಣಿಸಿಕೊಂಡಿದ್ದಾರೆ. ಈಗಾಗಲೇ ಬಿಡುಗಡೆ ಆಗಿರುವ ಟೀಸರ್, ಪೋಸ್ಟರ್ ಮತ್ತು ಹಾಡುಗಳು ಧೂಳೆಬ್ಬಿಸಿವೆ.
ಇದನ್ನೂ ಓದಿ: RRR ಚಿತ್ರತಂಡದಿಂದ ಹೊಸ ಅಪ್ಡೇಟ್; ಆ ದಿನ ಕೊನೆಗೂ ಬಂತು
ಪುನೀತ್ ನಿವಾಸಕ್ಕೆ ಭೇಟಿ ನೀಡಿ ಅಶ್ವಿನಿಗೆ ರಾಜಮೌಳಿ ಸಾಂತ್ವನ; ಆರ್ಆರ್ಆರ್ ನಿರ್ದೇಶಕ ಹೇಳಿದ್ದೇನು?