ಸುದೀಪ್ಗಾಗಿ ದೇವಸ್ಥಾನ: ಕಿಚ್ಚನ 4 ಅಡಿ ಮೂರ್ತಿ ಎದುರು ಪುನೀತ್ ರಾಜ್ಕುಮಾರ್ ಭಾವಚಿತ್ರ
Kichcha Sudeep Temple: ಕಿಚ್ಚ ಸುದೀಪ್ ದೇವಸ್ಥಾನಕ್ಕಾಗಿ ಸುಮಾರು 15 ಲಕ್ಷ ರೂಪಾಯಿ ಖರ್ಚು ಮಾಡಲಾಗುತ್ತಿದೆ. ಗ್ರಾಮಸ್ಥರಿಂದಲೇ ಸಂಗ್ರಹಿಸಿದ ದೇಣಿಗೆ ಹಣದಲ್ಲಿ ದೇವಸ್ಥಾನ ನಿರ್ಮಾಣ ಆಗುತ್ತಿದೆ.
ಸಿನಿಮಾ ನಟರನ್ನು ಆರಾಧಿಸುವ ಅಭಿಮಾನಿಗಳು ಸಾಕಷ್ಟು ಮಂದಿ ಇರುತ್ತಾರೆ. ನೆಚ್ಚಿನ ನಟನನ್ನು ದೇವರ ರೀತಿ ನೋಡುವ ಫ್ಯಾನ್ಸ್ ಕೂಡ ಇದ್ದಾರೆ. ಕಿಚ್ಚ ಸುದೀಪ್ (Kichcha Sudeep) ಅವರು ಅಂತಹ ಅಭಿಮಾನಿಗಳನ್ನು ಹೊಂದಿದ್ದಾರೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ರಾಯಚೂರು ಜಿಲ್ಲೆ ಶಿರವಾರ ತಾಲ್ಲೂಕಿನ ಕುರಕುಂದ ಗ್ರಾಮದಲ್ಲಿ ಸುದೀಪ್ಗಾಗಿ ದೇವಸ್ಥಾನ (Kichcha Sudeep Temple) ನಿರ್ಮಾಣ ಮಾಡಲಾಗಿದೆ ಎಂಬುದು ವಿಶೇಷ. ಎಲ್ಲ ಕಲಾವಿದರಿಗೂ ಈ ಪರಿ ಅಭಿಮಾನ ಸಿಗುವುದಿಲ್ಲ. ಕಿಚ್ಚ ಸುದೀಪ್ ನಟನೆ ಮಾತ್ರವಲ್ಲದೇ ಸಾಮಾಜಿಕ ಕೆಲಸಗಳಲ್ಲೂ ಗುರುತಿಸಿಕೊಂಡಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿರುವ ಅನೇಕರಿಗೆ ಆರ್ಥಿಕ ನೆರವು ನೀಡಿದ್ದಾರೆ. ಹಾಗಾಗಿ ಅವರನ್ನು ಅಭಿಮಾನಿಗಳು (Kichcha Sudeep Fans) ದೇವರಂತೆ ಕಾಣುತ್ತಾರೆ.
ಸುದೀಪ್ ಮೂರ್ತಿ ಇರುವ ದೇವಸ್ಥಾನ ನಿರ್ಮಾಣ ಮಾಡಲಾಗುತ್ತಿದೆ. ವಾಲ್ಮಿಕಿ ಮಹರ್ಷಿಯ 6 ಅಡಿ ಮೂರ್ತಿ ಕೂಡ ಇಲ್ಲಿದೆ. ಸುದೀಪ್ ಅವರ 4 ಅಡಿ ಎತ್ತರದ ಮೂರ್ತಿ ಪ್ರತಿಷ್ಠಾಪನೆಗೆ ಸಜ್ಜಾಗಿದೆ. ಅದರ ಎದುರು ಪುನೀತ್ ರಾಜ್ಕುಮಾರ್ ಅವರ ಭಾವಚಿತ್ರ ಇರಿಸಲಾಗಿದೆ. ಅಪ್ಪು ಫೋಟೋವನ್ನು ಎಲ್ಇಡಿ ಮಾದರಿಯಲ್ಲಿ ಅಳವಡಿಕೆ ಮಾಡಲಾಗಿದೆ. 30/40 ವಿಸ್ತೀರ್ಣದ ಜಾಗದಲ್ಲಿ ದೇವಸ್ಥಾನ ನಿರ್ಮಾಣ ಕಾರ್ಯ ನಡೆಯುತ್ತಿದೆ. ಇದಕ್ಕಾಗಿ ಸುಮಾರು 15 ಲಕ್ಷ ರೂಪಾಯಿ ಖರ್ಚು ಮಾಡಲಾಗುತ್ತಿದೆ. ಗ್ರಾಮಸ್ಥರಿಂದಲೇ ಸಂಗ್ರಹಿಸಿದ ದೇಣಿಗೆ ಹಣದಲ್ಲಿ ದೇವಸ್ಥಾನ ನಿರ್ಮಾಣ ಆಗುತ್ತಿದೆ.
ದೇವಸ್ಥಾನ ನಿರ್ಮಾಣದ ಬಗ್ಗೆ ಸುದೀಪ್ ಅವರನ್ನು ಭೇಟಿ ಮಾಡಿ ಗ್ರಾಮಸ್ಥರು ಅನುಮತಿ ಪಡೆದಿದ್ದರು. ಮೂರು ಬಾರಿ ಭೇಟಿ ಮಾಡಿದ ಬಳಿಕ ಅನುಮತಿ ಸಿಕ್ಕಿತ್ತು. ಕಳೆದ 75 ದಿನಗಳಿಂದ ಕಾಮಗಾರಿ ನಡೆಯುತ್ತಿದೆ. ಗಾರ್ಡನ್, ಸಿಸಿಟಿವಿ ಅಳವಡಿಕೆ, ಗ್ಲಾಸ್ ಫಿಟ್ಟಿಂಗ್ ಸೇರಿ ಕೆಲವು ಕೆಲಸಗಳು ಬಾಕಿ ಉಳಿದಿವೆ. ಇನ್ನೊಂದು ತಿಂಗಳಲ್ಲಿ ದೇವಸ್ಥಾನ ಕಾಮಗಾರಿ ಪೂರ್ಣಗೊಳ್ಳಲಿದೆ. ದೇವಸ್ಥಾನ ಉದ್ಘಾಟನೆಗೆ ಬರುವುದಾಗಿ ಸುದೀಪ್ ಹೇಳಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ:
ಕ್ರಿಕೆಟ್, ಸಿನಿಮಾ ಪ್ರಿಯರಿಗೆ ಗುಡ್ ನ್ಯೂಸ್; ‘83’ ಟೀಮ್ ಜತೆ ಸೇರಿಕೊಂಡ ಕಿಚ್ಚ ಸುದೀಪ್
ರವಿಚಂದ್ರನ್ ಜತೆ ಸುದೀಪ್ ‘ದೃಶ್ಯ’ ಚಿತ್ರ ಮಾಡ್ಬೇಕಿತ್ತು; ಆದರೆ ಮಿಸ್ ಆಗಿದ್ದು ಹೇಗೆ?
Published On - 1:12 pm, Thu, 2 December 21