ಯುವತಿಯರ ಬೆತ್ತಲೆ ಮೆರವಣಿಗೆ ಪ್ರಕರಣ: ಬೇಟಿ ಬಚಾವೋ ನಾಟಕಕ್ಕೆ ಧಿಕ್ಕಾರ ಕೂಗಿದ ನಟ ಕಿಶೋರ್

|

Updated on: Jul 20, 2023 | 4:35 PM

Manipur: ಮಣಿಪುರದಲ್ಲಿ ನಡೆದಿರುವ ಮನುಕುಲವೇ ತಲೆತಗ್ಗಿಸುವ ಘಟನೆ ಕುರಿತು ನಟ ಕಿಶೋರ್ ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದು, ಮೋದಿಯ 'ಭೇಟಿ ಬಚಾವ್ ಭೇಟಿ ಪಡಾವೊ' ಹೇಳಿಕೆಯ ವಿಫಲತೆಯನ್ನು ಟೀಕಿಸಿದ್ದಾರೆ.

ಯುವತಿಯರ ಬೆತ್ತಲೆ ಮೆರವಣಿಗೆ ಪ್ರಕರಣ: ಬೇಟಿ ಬಚಾವೋ ನಾಟಕಕ್ಕೆ ಧಿಕ್ಕಾರ ಕೂಗಿದ ನಟ ಕಿಶೋರ್
ಕಿಶೋರ್-ಮೋದಿ
Follow us on

ಮನುಕುಲವೇ ತಲೆತಗ್ಗಿಸುವ ಹೇಯ ಕೃತ್ಯ ಮಣಿಪುರದಲ್ಲಿ (Manipura) ನಡೆದಿದೆ. ಇಬ್ಬರು ಯುವತಿಯರ ಬಟ್ಟೆ ಬಿಚ್ಚಿ ಮೆರವಣಿಗೆ ಮಾಡಿ ಅವರ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಲಾಗಿದೆ. ಅಮಾನುಷ ಕೃತ್ಯ ನಡೆದು 73 ದಿನಗಳ ಬಳಿಕ ಘಟನೆ ಬೆಳಕಿಗೆ ಬಂದಿದೆ. ಇಡೀ ರಾಷ್ಟ್ರವೇ ಇದನ್ನು ಖಂಡಿಸಿದೆ. ಪ್ರಧಾನಿ ಮೋದಿ ಸೇರಿದಂತೆ ರಾಷ್ಟ್ರ, ರಾಜ್ಯ ರಾಜಕಾರಣಿಗಳು, ಸಿನಿಮಾ ನಟ-ನಟಿಯರು ಸಹ ಈ ಅಮಾನುಷ ಕೃತ್ಯವನ್ನು ಕಟು ಶಬ್ದಗಳಲ್ಲಿ ನಿಂದಿಸುತ್ತಿದ್ದಾರೆ. ಬಹುಭಾಷಾ ನಟ, ಕನ್ನಡಿಗ ಕಿಶೋರ್ (Kishore) ಸಹ ಈ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದು ವಿಭಜನಾ ರಾಜಕೀಯ ಮಾಡುವ ರಾಜಕಾರಣಿಗಳು ಹಾಗೂ ಪ್ರಧಾನಿ ಮೋದಿ ಮೇಲೆ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.

”ಕೇವಲ ಮತ ​​ಮತ್ತು ಅಧಿಕಾರಕ್ಕಾಗಿ ಜನರನ್ನು ವಿಭಜಿಸುವ ನಿಮ್ಮ ರಾಜಕೀಯ, ಇಂದು ನಮ್ಮನ್ನು ಇಲ್ಲಿಗೆ ತಂದು ನಿಲ್ಲಿಸಿದೆ. ನೀವು ಈಗಲಾದರೂ ನಿಮ್ಮ ಬಾಯಿ ತೆರೆದು ಈ ಮಹಿಳೆಯರಲ್ಲಿ ಕ್ಷಮೆಯಾಚಿಸದಿದ್ದರೆ ನಿಮ್ಮ 56 ಇಂಚಿನ ಬಡಾಯಿಗೆ ಧಿಕ್ಕಾರವಿರಲಿ. ನಿಮ್ಮಿಂದ ನಾವು ಏನನ್ನಾದರೂ ನಿರೀಕ್ಷಿಸಲು ಹೇಗೆ ಸಾಧ್ಯ? ಮಹಿಳಾ ಕುಸ್ತಿಪಟುಗಳ ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಗಳನ್ನು ಸದ್ದಿಲ್ಲದೆ ಬೆಂಬಲಿಸಿದವರು ನೀವೇ ಅಲ್ಲವೇ? ಬಿಲ್ಕಿಸ್ ಬಾನು ಪ್ರಕರಣದ ಆರೋಪಿಗಳನ್ನು ಸದ್ದಿಲ್ಲದೆ ಬಿಡುಗಡೆ ಮಾಡಿ ಸಂಭ್ರಮಿಸಿದವರು ನೀವೇ ಅಲ್ಲವೇ? ಹಾತ್ರಸ್ ನ ದಲಿತ ಹೆಣ್ಣುಮಕ್ಕಳ ಮೇಲೆ ನಡೆದ ಅತ್ಯಾಚಾರ ಮತ್ತು ಹತ್ಯೆಯನ್ನು ಮುಚ್ಚಿ ಮುಗಿಸಿದವರು ನೀವೇ ಅಲ್ಲವೇ? ನಿಮ್ಮ ಘೋಷಣೆಗಳನ್ನು ನಿಲ್ಲಿಸಿ ಮೊದಲು ಕೆಲಸ ಮಾಡಿ” ಎಂದು ಖಾರವಾಗಿ ಸಾಮಾಜಿಕ ಜಾಲತಾಣದಲ್ಲಿ ಕಿಶೋರ್ ಬರೆದುಕೊಂಡಿದ್ದಾರೆ.

ಇದನ್ನೂ ಓದಿ:ಮಣಿಪುರದಲ್ಲಿ ಮಹಿಳೆಯರ ಬೆತ್ತಲೆ ಮೆರವಣಿಗೆ ಪ್ರಕರಣ; ಸರ್ಕಾರ ಕ್ರಮ ಕೈಗೊಳ್ಳದಿದ್ದರೆ ನಾವು ಮಾಡುತ್ತೇವೆ: ಸುಪ್ರೀಂಕೋರ್ಟ್

ಮೇ 4 ರಂದು ಮಣಿಪುರದ ರಾಜಧಾನಿ ಇಂಫಾಲ್​ನಿಂದ 35 ಕಿ.ಮೀ ದೂರದಲ್ಲಿರುವ ಕಾಂಗ್ ಪೋಕ್ಪಿ ಜಿಲ್ಲೆಯಲ್ಲಿ ಈ ಅಮಾನುಷ ಘಟನೆ ನಡೆದಿದೆ. ಕುಕಿ ಸಮುದಾಯದ ಇಬ್ಬರು ಯುವತಿಯರ ಬಟ್ಟೆ ಕಿತ್ತೊಗೆದ ಪುರುಷರ ಗುಂಪೊಂದು ಅವರನ್ನು ಬೆತ್ತಲೆಗೊಳಿಸಿ ಮೆರವಣಿಗೆ ಮಾಡಿದೆ, ಮೆರವಣಿಗೆ ವೇಳೆ ತೀರ ಕೆಟ್ಟದಾಗಿ ಅವರ ಅಂಗಾಂಗಗಳನ್ನು ಮುಟ್ಟಲಾಗಿದೆ. ಬಳಿಕ ತೋಟವೊಂದಕ್ಕೆ ಕರೆದುಕೊಂಡು ಹೋಗಿ ಇಬ್ಬರೂ ಯುವತಿಯರ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಲಾಗಿದೆ. ಅದಕ್ಕೂ ಮುನ್ನ ಆ ಯುವತಿಯರ ತಂದೆ ಹಾಗೂ ಸಹೋದರರನ್ನು ಕೊಲ್ಲಲಾಗಿದೆ. ಪುರುಷರ ಗುಂಪು ಆ ಇಬ್ಬರು ಯುವತಿಯರನ್ನು ಪೊಲೀಸರ ಸುಪರ್ಧಿಯಿಂದಲೇ ಕಸಿದುಕೊಂಡು ಹೋಗಿದ್ದರು! ಈ ಘಟನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ರಾಷ್ಟ್ರದೆಲ್ಲೆಡೆ ವಿರೋಧ ವ್ಯಕ್ತವಾಗಿದೆ.

ಘಟನೆ ನಡೆದು 73 ದಿನಗಳಾಗಿದ್ದು ಈವರೆಗೆ ಕೇವಲ ಒಬ್ಬ ಆರೋಪಿಯನ್ನು ಮಾತ್ರವೇ ಬಂಧಿಸಲಾಗಿದೆ. ಆ ಬಂಧನ ಆಗಿರುವುದು ಇಂದು (ಜುಲೈ 20). ಈ ಘಟನೆ ನಡೆದಿದ್ದಕ್ಕೆ ಹಾಗೂ ಇಷ್ಟು ತಡವಾದರೂ ತಡವಾಗಿ ಕ್ರಮ ಜರುಗಿಸಿದ್ದು ಆಡಳಿತ ಪಕ್ಷದ ವೈಫಲ್ಯವನ್ನು ತೋರಿಸುತ್ತಿದೆ ಎಂದು ವಿಪಕ್ಷಗಳು ವಾಗ್ದಾಳಿ ನಡೆಸಿವೆ. ಉದ್ದೇಶಪೂರ್ವಕವಾಗಿ ಈ ಘಟನೆಯ ಮಾಹಿತಿಯನ್ನು ಇಷ್ಟು ದಿನ ಮುಚ್ಚಿಡಲಾಗಿತ್ತು ಎಂಬ ಮಾತುಗಳು ಸಹ ಕೇಳಿ ಬಂದಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ