ಇತ್ತೀಚೆಗೆ ಒಡಿಶಾದಲ್ಲಿ ನಡೆದ ಭೀಕರ ರೈಲು ದುರಂತದಲ್ಲಿ (Train Collision) 280ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದರು. ಗಾಯಗೊಂಡವರ ಸಂಖ್ಯೆ ಸಾವಿರ ದಾಟಿದೆ. ಅಪಘಾತ ಸಂಭವಿಸಿದ 51 ಗಂಟೆಗಳ ಬಳಿಕ ಮತ್ತೆ ರೈಲು ಸಂಚಾರ ಆರಂಭ ಆಗಿದೆ. ಇತ್ತೀಚೆಗೆ ನಡೆದ ಅತಿ ಭೀಕರ ರೈಲ್ವೆ ದುರಂತ ಎಂದು ಇದನ್ನು ಬಣ್ಣಿಸಲಾಗಿದೆ. ಈ ಬಗ್ಗೆ ಅನೇಕ ಸೆಲೆಬ್ರಿಟಿಗಳು ಸಂತಾಪ ಸೂಚಿಸಿದ್ದಾರೆ. ಈ ರೀತಿಯ ಘಟನೆ ನಡೆಯಬಾರದಿತ್ತು ಎಂದಿದ್ದಾರೆ. ಈ ಬಗ್ಗೆ ನಟ ಕಿಶೋರ್ (Kishore) ಕೂಡ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಕಿಶೋರ್ ಅವರು ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಹಲವು ಘಟನೆಗಳ ಬಗ್ಗೆ ಅವರು ಪ್ರತಿಕ್ರಿಯೆ ನೀಡುತ್ತಾರೆ. ಈಗ ಅವರು ರೈಲು ದುರಂತದ ಕುರಿತು ಮಾತನಾಡಿದ್ದಾರೆ. ‘ಕಠಿಣ ಕ್ರಮದ ಶಪಥ ಮಾಡಿದ ಪ್ರಧಾನಿ; ಸಾವಿನ ಸಂಖ್ಯೆ 288 ಏರಿಕೆ’ ಎಂಬ ಸುದ್ದಿಯನ್ನು ಕಿಶೋರ್ ಶೇರ್ ಮಾಡಿಕೊಂಡಿದ್ದಾರೆ. ಈ ಫೋಟೋಗೆ ಅವರು ಉದ್ದನೆಯ ಕ್ಯಾಪ್ಶನ್ ನೀಡಿದ್ದಾರೆ.
‘ಯಾರ ಮೇಲೆ ಕಠಿಣ ಕ್ರಮ‘? ಯಾರು ಕಾರಣ? ಇಷ್ಟು ಭೀಕರ ಸಾವು ನೋವು ತಡೆಗಟ್ಟಬಹುದಿತ್ತೇ? ಇಂದಿಗೂ ಖಾಲಿಯಿರುವ 3 ಲಕ್ಷಕ್ಕೂ ಹೆಚ್ಚು ರೈಲ್ವೆ ನೌಕರರನ್ನು, 1500ಕ್ಕೂ ಹೆಚ್ಚು ಸುರಕ್ಷತೆಗೆ ಬೇಕಾದ ಹುದ್ದೆ ಖಾಲಿ ಆಗಿಯೇ ಇದೆ. ಇದನ್ನು ಸರ್ಕಾರ ತುಂಬಿ ಹಳಿ ನಿರ್ವಹಣೆ ಸಮರ್ಪಕವಾಗಿಸಬಹುದಿತ್ತೇ? ಕೋಟ್ಯಂತರ ರೂಪಾಯಿ ವ್ಯಯಿಸಿ ತಿಂಗಳಿಗೊಂದು ರೈಲಿಗೆ ಹಸಿರು ನಿಶಾನೆ ತೋರಿಸಿ ಫೋಟೋ ಕ್ಲಿಕ್ಕಿಸಿಕೊಳ್ಳುವ ಬದಲು, ‘ಕವಚ’ ತಂತ್ರಜ್ಞಾನಕ್ಕೆ ಪ್ರಾಮುಖ್ಯತೆ ಕೊಟ್ಟು ಎಲ್ಲೆಡೆ ಅಳವಡಿಸಬಹುದಿತ್ತೇ’ ಎಂದು ಕಿಶೋರ್ ಪ್ರಶ್ನೆ ಮಾಡಿದ್ದಾರೆ.
‘ಹಾಗೆ ನೋಡಿದರೆ ಕಳೆದ 6-7 ವರ್ಷಗಳಲ್ಲಿ 1000 ಕ್ಕೂ ಹೆಚ್ಚು ರೈಲುಗಳು ಹಳಿತಪ್ಪಿ ಅಪಘಾತಕ್ಕೀಡಾಗಿದ್ದರೂ, ಸುರಕ್ಷತೆಗಿಂತ ದೇಶದ ಸ್ವತ್ತನ್ನು ಮಾರಿ ದುಡ್ಡು ಮಾಡುವುದರಲ್ಲೇ ನಿರತವಾದ ಸರ್ಕಾರವೇ ಈ ದುರಂತಕ್ಕೆ ಕಾರಣವಲ್ಲವೇ? ಅಪರಾಧಿ ಸರ್ಕಾರವೇ ಅಪರಾಧದ ತನಿಖೆ ಮಾಡಿ ಅಪರಾಧಿ ಯಾರೆಂದು ಕಂಡು ಹಿಡಿಯುತ್ತದಂತೆ, ಎಂಥ ವಿಪರ್ಯಾಸ! ಇಲ್ಲಿ ಹಳಿ ತಪ್ಪಿರುವುದು ರೈಲು ಬೋಗಿಗಳಲ್ಲ, ನಮ್ಮ ಸರ್ಕಾರ’ ಎಂದು ಕಿಡಿಕಾರಿದ್ದಾರೆ ಕಿಶೋರ್.
ಇದನ್ನೂ ಓದಿ: ಹಿಜಾಬ್ ಬ್ಯಾನ್ ಮೂಲಕ ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆದ ಮನುವಾದಿಗಳು: ನಟ ಕಿಶೋರ್
ಮಡಿದ ನೂರಾರು ಅಮಾಯಕರ ಜೀವಗಳಿಗೆ ಅಶ್ರುತರ್ಪಣ. ಇನ್ನಾದರೂ ಸರ್ಕಾರಗಳು ಎಚ್ಚೆತ್ತುಕೊಳ್ಳಲಿ. ಚುನಾವಣೆಯಾಚೆಗಿನ ಕರ್ತವ್ಯವನ್ನು ಇನ್ನಾದರೂ ನಿಭಾಯಿಸಲಿ’ ಎಂದು ಕಿಶೋರ್ ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:36 am, Tue, 6 June 23