
ನಟ ರಕ್ಷಕ್ (Rakshak) ಅವರ ಹೆಸರು ಒಂದಲ್ಲಾ ಒಂದು ವಿವಾದದಲ್ಲಿ ತಳುಕು ಹಾಕಿಕೊಳ್ಳುತ್ತಿದೆ. ನಟ ಪ್ರಥಮ್ ಮೇಲೆ ಹಲ್ಲೆ ಯತ್ನ ನಡೆದಾಗ ರಕ್ಷಕ್ ಇದ್ದರು ಎಂಬ ವಿಚಾರವಾಗಿ ಸಾಕಷ್ಟು ವಿವಾದ ಆಗಿದೆ. ಅದರ ಬೆನ್ನಲ್ಲೇ ರಕ್ಷಕ್ ಇನ್ನೊಂದು ಎಡವಟ್ಟು ಮಾಡಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ಬೈಕ್ ಸವಾರನಿಗೆ ರಕ್ಷಕ್ ಅವರ ಕಾರು (Rakshak Bullet Car) ಡಿಕ್ಕಿ ಆಗಿದೆ. ಅಜಾಗರೂಕತೆಯಿಂದ ಕಾರು ಚಲಾಯಿಸಿದ್ದರಿಂದ ಡಿಕ್ಕಿ ಆಗಿದೆ ಎನ್ನಲಾಗಿದೆ. ಶಿಡ್ಲಘಟ್ಟ ಮೂಲದ ಯುವಕ ವೇಣುಗೋಪಾಲ್ ಎನ್ನುವವರಿಗೆ ಪೆಟ್ಟಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಾನ್ಯತಾ ಟೆಕ್ ಪಾರ್ಕ್‌ನ ಶಿವರಾಜ್ಕುಮಾರ್ ಅವರ ಮನೆ ಬಳಿಯ ತಿರುವಿನಲ್ಲಿ ಆಕ್ಸಿಡೆಂಟ್ ಆಗಿದೆ. ಗುರುವಾರ (ಜುಲೈ 31) ಬೆಳಗ್ಗೆ 11.30ರ ಸುಮಾರಿಗೆ ಈ ಘಟನೆ ನಡೆದಿದೆ. ವೇಣುಗೋಪಾಲ್ ಮತ್ತು ಸ್ನೇಹಿತೆ ಬೈಕ್ನಲ್ಲಿ ಬರುತ್ತಿದ್ದಾಗ ಅಪಘಾತ ಸಂಭವಿಸಿದೆ. ರಕ್ಷಕ್ ಮಾಡಿದ ಎಡವಟ್ಟಿನಿಂದ ಯುವಕನ ಕಾಲು ಮುರಿದಿದೆ. ಬಳಿಕ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು.
ಕಾರು, ಬೈಕ್ ಡಿಕ್ಕಿ ಆದಾಗ ನೋವು ತಡೆಯಲಾರದೆ ಗಾಯಾಳು ಕಿರುಚಾಡುತ್ತಿರುವ ದೃಶ್ಯ ಸ್ಥಳೀಯರ ಮೊಬೈಲ್ನಲ್ಲಿ ಸೆರೆಯಾಗಿದೆ. ಅಪಘಾತ ಆದ ನಂತರ ಟ್ಯಾಕ್ಸಿಯಲ್ಲಿ ಹೆಬ್ಬಾಳ ಬಳಿಯ ಖಾಸಗಿ ಆಸ್ಪತ್ರೆಗೆ ವೇಣುಗೋಪಾಲ್ ಅವರನ್ನು ದಾಖಲಿಸಿ ಚಿಕಿತ್ಸೆ ನೀಡಲಾಯಿತು. ಬೈಕ್‌ನವರೇ ಸ್ಪೀಡ್ ಆಗಿ ಬಂದರು ಎಂದು ರಕ್ಷಕ್ ಅವರು ಹೇಳುತ್ತಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ವೇಣುಗೋಪಾಲ್ ತಂದೆ ಪ್ರಕಾಶ್ ಹೇಳಿಕೆ ನೀಡಿದ್ದಾರೆ. ‘ನಿನ್ನೆ ಮಧ್ಯಾಹ್ನ 2 ಗಂಟೆಯಲ್ಲಿ ಅಪಘಾತದ ವಿಚಾರ ಗೊತ್ತಾಯ್ತು. ಯಾರು ಮಾಡಿದ್ದಾರೆ ಅಂತ ಕೇಳಿದಾಗ ರಕ್ಷಕ್ ಎಂಬುದು ತಿಳಿಯಿತು. ಬೇರೆ ಕಾರಿನಲ್ಲಿ ಆಸ್ಪತ್ರೆಗೆ ದಾಖಲಿಸಿದ್ರು. ಕೊಟೇಷನ್ ಹಾಕುವಾಗ ಖರ್ಚು ಎಷ್ಟಾದ್ರು ನೋಡ್ಕೊತಿನಿ ಅಂದಿದ್ರು. ಆದರೆ ಮತ್ತೆ ಅವರು ಸೆಟಲ್ಮೆಂಟ್ಗೆ ಬಂದಿಲ್ಲ. ಮಗನಿಗೆ ಬೆರಳು, ಕಾಲು ಮೂಳೆ ಮುರಿದಿದೆ. ಸದ್ಯಕ್ಕೆ ಜೀವಕ್ಕೆ ಯಾವುದೇ ಅಪಾಯವಿಲ್ಲ ಅಂತ ವೈದ್ಯರು ಹೇಳಿದ್ದಾರೆ. ಅಷ್ಟು ಹಣ ಕೊಡೋಕೆ ಆಗೋದಿಲ್ಲ ಅಂತ ರಕ್ಷಕ್ ಹೇಳಿದ್ರು. ಅದಕ್ಕೆ ಈಗ ಪೊಲೀಸರಿಗೆ ದೂರು ನೀಡಿದ್ದೇವೆ’ ಎಂದು ವೇಣುಗೋಪಾಲ್ ತಂದೆ ಪ್ರಕಾಶ್ ಹೇಳಿದ್ದಾರೆ.
ಇದನ್ನೂ ಓದಿ: ಪ್ರಥಮ್ ಮೇಲೆ ಅಟ್ಯಾಕ್: ಅಲ್ಲೇ ಇದ್ದರು ರಕ್ಷಕ್ ಸುಮ್ಮನಿದ್ದಿದ್ದು ಏಕೆ?
ಯುವತಿಯ ಸಹೋದರ ಪವನ್ ಸಹ ಈ ಬಗ್ಗೆ ಮಾತನಾಡಿದ್ದಾರೆ. ‘ಆಸ್ಪತ್ರೆಗೆ ಹೋಗಿ ನೋಡಿದಾಗ ಚಿಕಿತ್ಸೆ ಕೊಡ್ತಿದ್ರು. ನಂತರ ರಕ್ಷಕ್ ಬುಲೆಟ್ ಅವರ ಕಾರು ಅಂತ ಗೊತ್ತಾಗಿದೆ. ನನ್ನ ತಂಗಿಗೂ ಸಣ್ಣಪುಟ್ಟ ಗಾಯ ಆಗಿದೆ. ಹಂಪ್ಸ್ ನೋಡಿಕೊಳ್ಳದೇ ಸ್ಪೀಡ್ ಆಗಿ ಬಂದು ಆಕ್ಸಿಡೆಂಟ್ ಮಾಡಿದ್ದಾರೆ. ಅಪಘಾತದ ನಂತರ ಅವರೇ ಆಸ್ಪತ್ರೆಗೆ ಸೇರಿಸಿದ್ದಾರೆ. ನಿನ್ನೆ ಬಂದಿದ್ರು, ಮತ್ತೆ ಇವತ್ತು ಬಂದಿಲ್ಲ’ ಎಂದು ಅವರು ಹೇಳಿದ್ದಾರೆ.
ವರದಿ: ಪ್ರದೀಪ್ ಚಿಕ್ಕಾಟೆ, ಟಿವಿ9 ಬೆಂಗಳೂರು
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 10:17 pm, Fri, 1 August 25