ಮಾಧ್ಯಮಗಳ ವಿರುದ್ಧ ಪ್ರತಿಬಂಧಕಾಜ್ಞೆ ತಂದ ಸುದೀಪ್, ಅಪಪ್ರಚಾರದ ವಿರುದ್ಧ ಮುನ್ನೆಚ್ಚರಿಕೆ ಎಂದ ನಟ

|

Updated on: Apr 11, 2023 | 10:45 PM

Kichcha Sudeep: ಮಾಧ್ಯಮಗಳ ವಿರುದ್ಧ ಪ್ರತಿಬಂಧಕಾಜ್ಞೆ ತಂದ ಕಿಚ್ಚ ಸುದೀಪ್, ಅಪಪ್ರಚಾರದ ವಿರುದ್ಧ ಮುನ್ನೆಚ್ಚರಿಕೆ ಎಂದ ನಟ

ಮಾಧ್ಯಮಗಳ ವಿರುದ್ಧ ಪ್ರತಿಬಂಧಕಾಜ್ಞೆ ತಂದ ಸುದೀಪ್, ಅಪಪ್ರಚಾರದ ವಿರುದ್ಧ ಮುನ್ನೆಚ್ಚರಿಕೆ ಎಂದ ನಟ
ಸುದೀಪ್
Follow us on

ನಟ ಕಿಚ್ಚ ಸುದೀಪ್ (Sudeep) ಬಿಜೆಪಿಗೆ (BJP) ಬೆಂಬಲ ಸೂಚಿಸಿದ ಬೆನ್ನಲ್ಲೆ, ಕೆಲವು ಕಿಡಿಗೇಡಿಗಳು, ಸುದೀಪ್ ಅವರ ಖಾಸಗಿ ವಿಡಿಯೋ ಲೀಕ್ ಮಾಡುವ ಬೆದರಿಕೆ ಹಾಕಿದ್ದರು. ಆ ಬಗ್ಗೆ ದೂರು ಸಹ ದಾಖಲಾಗಿ ತನಿಖೆ ನಡೆಯುತ್ತಿದೆ. ಈ ನಡುವೆ ಸುದೀಪ್ ಅವರು ಮಾಧ್ಯಮಗಳ ವಿರುದ್ಧ ಪ್ರತಿಬಂಧಕಾಜ್ಞೆ ತಂದಿದ್ದಾರೆ. ದುರುಳರು ತಮ್ಮ ತಿರುಚಿದ ವಿಡಿಯೋ, ಫೇಕ್ ವಿಡಿಯೋಗಳ ಮೂಲಕ ಮಾನಹಾನಿಗೆ ಯತ್ನಿಸುವ ಅಪಾಯವಿದೆಯಾದ್ದರಿಂದ ಇದು ಮುನ್ನೆಚ್ಚರಿಕಾ ಕ್ರಮವಷ್ಟೆ ಎಂದಿದ್ದಾರೆ ನಟ ಸುದೀಪ್.

ಈ ಬಗ್ಗೆ ಮಾಧ್ಯಮಗಳಿಗೂ ಮನವಿ ಮಾಡಿರುವ ನಟ ಸುದೀಪ್, ”ನನ್ನ-ನಿಮ್ಮ ಅವಿನಾಭಾವ ಸಂಬಂಧ ಒಂದು ಕುಟುಂಬದಂತದ್ದು. ಕೆಲವು ಕಿಡಿಗೇಡಿಗಳು ನನ್ನದಲ್ಲದ ತಿರುಚಿದ ಜೋಡಿಸಿದ ಕೃತಕವಾದ (morphed) ವೀಡಿಯೋ ತುಣುಕುಗಳ ವಿರುದ್ಧದ ಮುನ್ನೆಚರಿಕೆಯಷ್ಟೇ ಇದು. ಮಾಧ್ಯಮವೆಂದರೆ ಇವತ್ತಿಗೆ ನಿಮ್ಮಗಳ ಜೊತೆಗೇ ಸಾಮಾಜಿಕ ಜಾಲತಾಣ ಸೇರಿದಂತೆ ಹಲವಾರು ಡಿಜಿಟಲ್ ವೇದಿಕೆಗಳಿವೆ. ಅವುಗಳನ್ನು ದುರ್ಬಳಕೆ ಮಾಡಿಕೊಂಡು ಚಾರಿತ್ರ್ಯವಧೆ ಮಾಡುವ ಹುನ್ನಾರದ ವಿರುದ್ಧ ಈ ತಡೆಯಾಜ್ಞೆಯನ್ನು ವಕೀಲರ ಸಲಹೆ ಮೇರೆಗೆ ತಂದಿದ್ದೇನೆ ವಿನಃ ಬೇರೆ ಯಾವ ಕಾರಣಕ್ಕೂ ಅಲ್ಲ. ಜೊತೆಗೆ ನಿಮ್ಮಗಳನ್ನು ಹೊರತುಪಡಿಸಿ ಸಾಮಾಜಿಕ ಜಾಲತಾಣ, ಡಿಜಿಟಲ್ ವೇದಿಕೆಗಳ ಮೇಲೆ ನ್ಯಾಯಾಲಯ ತಡೆಯಾಜ್ಞೆ ಕೊಡದು. ಈ ಸೂಕ್ಷ್ಮ ತಮಗೂ ಗೊತ್ತಿದೆ ಹಾಗಾಗಿ ಅನ್ಯಥಾ ಭಾವಿಸಬಾರದಾಗಿ ವಿನಂತಿ ಎಂದಿದ್ದಾರೆ ನಟ ಸುದೀಪ್.

ಸುದೀಪ್, ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಬೆಂಬಲ ನೀಡಿರುವ ಬೆನ್ನಲ್ಲೆ ಸುದೀಪ್ ಅವರ ಖಾಸಗಿ ವಿಡಿಯೋ ಲೀಕ್ ಮಾಡುವುದಾಗಿ ಬೆದರಿಕೆ ಪತ್ರ ಬರೆದಿದ್ದರು. ಆ ಬಗ್ಗೆ ಮಾತನಾಡಿದ್ದ ನಟ ಸುದೀಪ್, ಈ ಕಾರ್ಯವನ್ನು ಚಿತ್ರರಂಗದವರೇ ಮಾಡಿರುವ ಗುಮಾನಿ ವ್ಯಕ್ತಪಡಿಸಿದ್ದಲ್ಲದೆ, ಆ ಬಗ್ಗೆ ದೂರು ಸಹ ದಾಖಲಾಗಿತ್ತು. ತನಿಖೆ ನಡೆಸಿರುವ ಪೊಲೀಸರಿಗೆ ಬೆದರಿಕೆ ಪತ್ರ ಕಳಿಸಲಾಗಿರುವುದು ಆಗಿರುವುದು ದೊಮ್ಮಲೂರು ಅಂಚೆ ಕಚೇರಿಯಿಂದ ಎಂಬುದು ಗೊತ್ತಾಗಿದೆ.

ಬೆದರಿಕೆ ಪತ್ರದ ಮೂಲ ಹುಡುಕಿ ಹೊರಟಾಗ ಇನ್ನಷ್ಟು ವಿವರಗಳು ಲಭ್ಯವಾಗಿದ್ದು, ದುಷ್ಕರ್ಮಿಗಳು ಸ್ವಿಫ್ಟ್ ಕಾರಿನಲ್ಲಿ ಬಂದು ಪೋಸ್ಟ್ ಬಾಕ್ಸ್​ಗೆ ಬೆದರಿಕೆ ಪತ್ರ ಹಾಕಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆದರೆ ಈ ಕಾರಿನ ನಂಬರ್​ ಪ್ಲೇಟ್​ ಆದರಿಸಿ ತನಿಖೆ ನಡೆಸಿದಾಗ ನಂಬರ್ ಪ್ಲೇಟ್ ನಕಲಿ ಎಂಬುದು ತಿಳಿದು ಬಂದಿದೆ. ಕೆಂಗೇರಿ ಬಳಿಯ ವ್ಯಕ್ತಿಯೊಬ್ಬರಿಗೆ ಸೇರಿರುವ ಸ್ವಿಫ್ಟ್ ಕಾರಿನ ಸಂಖ್ಯೆಯನ್ನು ಕಿಡಿಗೇಡಿಗಳು ಬಳಸಿದ್ದಾರೆ. ಆದರೆ ಬೆದರಿಕೆ ಪತ್ರಕ್ಕೂ ತನಗೂ ಯಾವುದೇ ಸಂಬಂಧವಿಲ್ಲ ಎಂದು ಆ ವ್ಯಕ್ತಿ ಹೇಳಿದ್ದಾರೆ. ನಂಬರ್ ಪ್ಲೇಟ್​ ಬದಲಿಸಿ ಕಿಡಿಗೇಡಿಗಳು ಈ ಕೆಲಸ ಮಾಡಿದ್ದಾರೆ. ಬೆದರಿಕೆ ಪತ್ರ ಬರೆದ ದುಷ್ಕರ್ಮಿಗಳಿಗಾಗಿ ಪೊಲೀಸರು ಹುಡುಕಾಟ ಮುಂದುವರಿಸಿದ್ದಾರೆ. ಆದಷ್ಟು ಬೇಗ ಕಿಡಿಗೇಡಿಗಳು ಪತ್ತೆಯಾಗಲಿ ಎಂದು ಸುದೀಪ್​ ಫ್ಯಾನ್ಸ್​ ಕಾಯುತ್ತಿದ್ದಾರೆ.

ಬೆದರಿಕೆ ಪತ್ರ ಬಂದಿರುವುದರ ಹಿಂದೆ ರಾಜಕೀಯದವರ ಕೈವಾಡ ಇರಬಹುದು ಎಂದು ಊಹಿಸಲಾಗಿತ್ತು. ಆದರೆ ಈ ವಿಚಾರಕ್ಕೆ ಸಂಬಂಧಿಸಿದಂತೆ ಸುದೀಪ್​ ಅವರು ಏಪ್ರಿಲ್​ 5ರಂದು ಪ್ರತಿಕ್ರಿಯೆ ನೀಡಿದ್ದರು. ಬೆದರಿಕೆ ಪತ್ರ ಬರೆದಿರುವುದು ರಾಜಕೀಯದವರಿಂದಲ್ಲ ಎಂದಿದ್ದ ಸುದೀಪ್ ‘ಖಂಡಿತ ಇದನ್ನ ಚಿತ್ರರಂಗದವರೇ ಮಾಡಿಸಿದ್ದಾರೆ. ಯಾರು ಅಂತ ಗೊತ್ತಿದ್ದರೂ ಕೂಡ ಈಗ ಸೈಲೆಂಟಾಗಿ ಇರುತ್ತೇನೆ. ಅದಕ್ಕೆ ಹೇಗೆ ಉತ್ತರ ಕೊಡಬೇಕು ಅಂತ ನನಗೆ ಗೊತ್ತಿದೆ. ಇವೆಲ್ಲ ಕಾನೂನಿನ ಪ್ರಕಾರ ಹೋದರೆ ಒಳ್ಳೆಯದು’ ಎಂದು ಸುದೀಪ್​ ಹೇಳಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:44 pm, Tue, 11 April 23