
ನಟಿ ಅಮೂಲ್ಯ (Amulya) ಅವರು ಕನ್ನಡ ಚಿತ್ರರಂಗದಲ್ಲಿ ಹೀರೋಯಿನ್ ಆಗಿ ಮಿಂಚಿದವರು. ಸಖತ್ ಬೇಡಿಕೆ ಇರುವಾಗಲೇ ಅವರು ಮದುವೆ ಮಾಡಿಕೊಂಡರು. ಮದುವೆ ನಂತರ ಕುಟುಂಬದ ಕಡೆಗೆ ಹೆಚ್ಚು ಗಮನ ಹರಿಸಿದ್ದರು. ಆದಷ್ಟು ಬೇಗ ಅವರು ನಟನೆಗೆ ಮರಳಲಿ ಎಂಬುದು ಅಭಿಮಾನಿಗಳ ಆಸೆ ಆಗಿತ್ತು. ಕಮ್ಬ್ಯಾಕ್ ಮಾಡಲು ಒಂದು ಒಳ್ಳೆಯ ಕಥೆ ಮತ್ತು ಪಾತ್ರ ಬೇಕು ಎಂದು ಇಷ್ಟು ದಿನ ಅಮೂಲ್ಯ ಅವರು ಕಾದಿದ್ದರು. ಈಗ ಅವರು ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ. ಈ ಚಿತ್ರಕ್ಕೆ ‘ಪೀಕಬೂ’ (Peekaboo) ಎಂದು ಶೀರ್ಷಿಕೆ ಇಡಲಾಗಿದೆ.
ಬರೋಬ್ಬರಿ 8 ವರ್ಷಗಳ ಬಳಿಕ ನಾಯಕಿಯಾಗಿ ನಟಿಸಲು ಅಮೂಲ್ಯ ಅವರು ಸಜ್ಜಾಗಿದ್ದಾರೆ. ‘ಶ್ರಾವಣಿ ಸುಬ್ರಮಣ್ಯ’ ಸಿನಿಮಾ ಖ್ಯಾತಿಯ ನಿರ್ದೇಶಕ ಮಂಜು ಸ್ವರಾಜ್ ಅವರ ಜೊತೆ ಅಮೂಲ್ಯ ಸಿನಿಮಾ ಮಾಡುತ್ತಿದ್ದಾರೆ. ಹೊಸ ಸಿನಿಮಾಗೆ ಅವರು ಸಹಿ ಹಾಕಿದ್ದಾರೆ. ವಿಶೇಷ ಏನೆಂದರೆ, ಇಂದು (ಸೆಪ್ಟೆಂಬರ್ 14) ಅಮೂಲ್ಯ ಅವರ ಹುಟ್ಟುಹಬ್ಬ. ಆ ಪ್ರಯುಕ್ತ ಹೊಸ ಸಿನಿಮಾ ‘ಪೀಕಬೂ’ ಸಿನಿಮಾ ಅನೌನ್ಸ್ ಆಗಿದೆ.
ಚಿಕ್ಕದಾದ ಟೀಸರ್ ಮೂಲಕ ಅಮೂಲ್ಯ ಅವರ ರೀ ಎಂಟ್ರಿಗೆ ಸಿನಿಮಾ ತಂಡ ಸ್ವಾಗತ ಕೋರಿದೆ. ಕಮ್ ಬ್ಯಾಕ್ ಸಿನಿಮಾ ಸಲುವಾಗಿ ಅಮೂಲ್ಯ ಅವರು ಸಂಪೂರ್ಣ ತಯಾರಾಗಿದ್ದಾರೆ. ಮೊದಲಿನಂತೆ ಅವರು ಕಾಣುತ್ತಿದ್ದಾರೆ. ಡ್ಯಾನ್ಸ್ ಮಾಡುತ್ತಾ, ಟೀಸರ್ನಲ್ಲಿ ಎನರ್ಜಿ ತೋರಿಸಿದ್ದಾರೆ. ವಿ. ನಾಗೇಂದ್ರ ಅವರು ಕೊರಿಯೋಗ್ರಫಿ ಮಾಡಿದ್ದಾರೆ. ಅಮೂಲ್ಯ ಅವರ ಹೊಸ ಚಿತ್ರದ ಬಗ್ಗೆ ಕುತೂಹಲ ಮೂಡಿದೆ.
ನಿರ್ದೇಶಕ ಮಂಜು ಸ್ವರಾಜ್ ಅವರು ‘ಪೀಕಬೂ’ ಎಂಬ ಶೀರ್ಷಿಕೆ ಮೂಲಕ ಕುತೂಹಲ ಹುಟ್ಟಿಸಲು ಪ್ರಯತ್ನಿಸಿದ್ದಾರೆ. ಪೀಕಬೂ ಎಂದರೆ ಮಕ್ಕಳನ್ನ ನಗಿಸಲು ಬಳಸುವ ಪದ ಎಂದು ಚಿತ್ರತಂಡ ಹೇಳಿದೆ. ಒಂದೊಳ್ಳೆ ಮೆಸೇಜ್ ಹಾಗೂ ಕಮರ್ಷಿಯಲ್ ಅಂಶಗಳು ಈ ಸಿನಿಮಾದಲ್ಲಿ ಇರಲಿವೆಯಂತೆ. ಈಗ ಹೀರೋಯಿನ್ ಎಂಟ್ರಿ ಸಲುವಾಗಿ ಟೀಸರ್ ಬಿಡುಗಡೆ ಮಾಡಿರುವ ಚಿತ್ರತಂಡದವರು ಶೀಘ್ರದಲ್ಲೇ ಚಿತ್ರೀಕರಣ ಆರಂಭ ಮಾಡಲಿದ್ದಾರೆ.
ಇದನ್ನೂ ಓದಿ: ಮಕ್ಕಳೊಂದಿಗೆ ನಲಿಯುತ್ತಾ ಗಣೇಶ ಚತುರ್ಥಿ ಆಚರಿಸಿದ ನಟಿ ಅಮೂಲ್ಯ
ಗಣೇಶ್ ಕೆಂಚಾಂಬಾ ಅವರು ‘ಶ್ರೀ ಕೆಂಚಾಂಬಾ ಫಿಲ್ಮ್ಸ್’ ಮೂಲಕ ‘ಪೀಕಬೂ’ ಸಿನಿಮಾವನ್ನ ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರಕ್ಕೆ ಅಮೂಲ್ಯ ನಾಯಕಿ ಎಂಬುದು ಗೊತ್ತಾಗಿದೆ. ಆದರೆ ಹೀರೋ ಯಾರು ಎಂಬುದನ್ನು ಚಿತ್ರತಂಡ ಇನ್ನೂ ಬಹಿರಂಗಪಡಿಸಿಲ್ಲ. ಮುಂದಿನ ದಿನಗಳಲ್ಲಿ ಆ ಬಗ್ಗೆ ತಿಳಿಯಲಿದೆ. ಸುರೇಶ್ ಬಾಬು ಅವರು ಛಾಯಾಗ್ರಹಣ ಮಾಡಲಿದ್ದಾರೆ. ವೀರ್ ಸಮರ್ಥ್ ಅವರ ಸಂಗೀತ ಈ ಚಿತ್ರಕ್ಕೆ ಇರಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.