‘ಕಾಂತಾರ’ಕ್ಕಾಗಿ ನಡೆಯಿತು ಸಂಧಾನ, ಪರಿಹಾರವಾಯ್ತು ವರ್ಷಗಳ ಸಮಸ್ಯೆ
Kantara Chapter 1: ರಿಷಬ್ ಶೆಟ್ಟಿ ನಟಿಸಿ, ನಿರ್ದೇಶನ ಮಾಡಿರುವ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಅನ್ನು ಕೇರಳದಲ್ಲಿ ಬಿಡುಗಡೆ ಮಾಡಲು ಅವಕಾಶ ನೀಡುವುದಿಲ್ಲ ಎಂದು ಚಿತ್ರಪ್ರದರ್ಶಕರು ಅಬ್ಬರಿಸಿದ್ದರು. ಆದರೆ ಇದೀಗ ಸಂಧಾನ ನಡೆಸಲಾಗಿದ್ದು, ಸಿನಿಮಾ ಬಿಡುಗಡೆಗೆ ಇದ್ದ ಎಲ್ಲ ಅಡ್ಡಿ-ಆತಂಕಕಗಳು ಮರೆಯಾಗಿವೆ.

ಹೊಂಬಾಳೆ (Hombale) ನಿರ್ಮಾಣ ಮಾಡಿರುವ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಇನ್ನೆರಡು ವಾರಗಳ ಬಳಿಕ ಬಿಡುಗಡೆ ಆಗಿಲಿದೆ. ಸಿನಿಮಾದ ವಿತರಣೆ ಹಕ್ಕುಗಳಿಗಾಗಿ ಈಗಾಗಲೇ ನೂಕು-ನುಗ್ಗಲು ಶುರುವಾಗಿದ್ದು ಪ್ರತಿ ರಾಜ್ಯಗಳಲ್ಲಿ ದೊಡ್ಡ ದೊಡ್ಡ ವಿತರಣಾ ಸಂಸ್ಥೆಗಳು, ನಿರ್ಮಾಣ ಸಂಸ್ಥೆಗಳು ಭಾರಿ ಹಣದ ಥೈಲಿ ನೀಡಿ ವಿತರಣೆ ಹಕ್ಕುಗಳನ್ನು ಖರೀದಿ ಮಾಡುತ್ತಿದೆ. ಆದರೆ ಹೊಂಬಾಳೆ ವ್ಯಾಪಾರದ ಜೊತೆಗೆ ಆತ್ಮೀಯತೆಗೂ ಬೆಲೆ ನೀಡುತ್ತಿದೆ. ಇದೇ ಕಾರಣಕ್ಕೆ ತಮ್ಮೊಂದಿಗೆ ವರ್ಷಗಳಿಂದಲೂ ಆತ್ಮೀಯತೆ ಉಳಿಸಿಕೊಂಡಿರುವ ಕೇರಳದ ಸ್ಟಾರ್ ನಟ ಪೃಥ್ವಿರಾಜ್ ಸುಕುಮಾರನ್ ಅವರಿಗೆ ನೀಡಲಾಗಿತ್ತು. ಆದರೆ ಕೇರಳದಲ್ಲಿ ‘ಕಾಂತಾರ’ ಬಿಡುಗಡೆಗೆ ಸಮಸ್ಯೆ ಒಂದು ಎದುರಾಗಿತ್ತು.
ಕೇರಳದಲ್ಲಿ ಕಳೆದ ಕೆಲ ವರ್ಷಗಳಿಂದಲೂ ಚಿತ್ರಮಂದಿರ ಮಾಲೀಕರು, ವಿತರಕರು ಹಾಗೂ ನಿರ್ಮಾಪಕರ ನಡುವೆ ಲಾಭ ಹಂಚಿಕೆ ವಿಚಾರದಲ್ಲಿ ಮನಸ್ಥಾಪ ಉಂಟಾಗಿದೆ. ಚಿತ್ರಮಂದಿರ ಮಾಲೀಕರು ಹೆಚ್ಚಿನ ಲಾಭಕ್ಕೆ ಬೇಡಿಕೆ ಇಟ್ಟಿದ್ದಾರೆ. ಈಗ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಬಿಡುಗಡೆ ಹಕ್ಕು ಪೃಥ್ವಿರಾಜ್ ಸುಕುಮಾರನ್ ಪಡೆದ ಬಳಿಕ ಚಿತ್ರಮಂದಿರಗಳ ಮಾಲೀಕರು ತಮ್ಮ ಲಾಭದ ಒತ್ತಾಯವನ್ನು ಹೆಚ್ಚು ಮಾಡಿದ್ದರು. ‘ಕಾಂತಾರ’ ಬಿಡುಗಡೆಗೆ ಅವಕಾಶ ಮಾಡಿಕೊಡುವುದಿಲ್ಲ ಎಂದು ಕೆಲವರು ಎಚ್ಚರಿಕೆ ಸಹ ನೀಡಿದ್ದರು.
ಆದರೆ ಈಗ ಸಮಸ್ಯೆ ಪರಿಹಾರ ಆಗಿದ್ದು ಕೇರಳದಲ್ಲಿ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಬಿಡುಗಡೆಗೆ ಇದ್ದ ಅಡ್ಡಿ ನಿವಾರಣೆ ಆಗಿದೆ. ಎಫ್ಇಯುಒಕೆ (ಕೇರಳ ಸಿನಿಮಾ ಪ್ರದರ್ಶಕರ ಒಕ್ಕೂಟ), ಕೇರಳ ಸಿನಿಮಾ ನಿರ್ಮಾಪಕರ ಸಂಘ ಮತ್ತು ವಿತರಕರ ಒಕ್ಕೂಟವನ್ನು ಕೇರಳ ಫಿಲಂ ಚೇಂಬರ್ ಸಭೆ ಕರೆದು ಸಂಧಾನ ಮಾಡಿಸಿದ್ದು, ಇದೀಗ ಕೇರಳ ಸಿನಿಮಾ ಪ್ರದರ್ಶಕರ ಒಕ್ಕೂಟವು ‘ಕಾಂತಾರ: ಚಾಪ್ಟರ್ 1’ ಸಿನಿಮಾ ಬಿಡುಗಡೆಗೆ ಯಾವುದೇ ಅಡ್ಡಿ ಇಲ್ಲ ಎಂದು ಹೇಳಿದೆ.
ಇದನ್ನೂ ಓದಿ:‘ಕಾಂತಾರ: ಚಾಪ್ಟರ್ 1’ ಅದೆಷ್ಟು ಬೃಹತ್ ಸಿನಿಮಾ ಗೊತ್ತೆ?
ಸಿನಿಮಾ ವಿತರಕರಿಗೆ ಸಿನಿಮಾದ ಮೊದಲ ಎರಡು ವಾರದ ಗಳಿಕೆಯಲ್ಲಿ 55% ಹಣವನ್ನು ನೀಡಬೇಕು ಎಂಬ ಸಾಮಾನ್ಯ ಒಪ್ಪಂದಕ್ಕೆ ವಿತರಕರು ಮತ್ತು ಚಿತ್ರಪ್ರದರ್ಶಕರು ಬಂದಿದ್ದು, ಪೃಥ್ವಿರಾಜ್ ಸುಕುಮಾರನ್ ಅವರು ಸಹ ಒಪ್ಪಿಕೊಂಡಿದ್ದಾರೆ. ಹಾಗಾಗಿ ‘ಕಾಂತಾರ: ಚಾಪ್ಟರ್ 1’ ಸಿನಿಮಾದ ಬಿಡುಗಡೆಗೆ ಅಡ್ಡಿ ಪಡಿಸುವುದಿಲ್ಲ ಬದಲಿಗೆ ಸ್ವಾಗತಿಸಲಾಗುವುದು ಎಂದು ಚಿತ್ರ ಪ್ರದರ್ಶಕರು ಹೇಳಿದ್ದಾರೆ.
ಈ ಮೊದಲು ಸಿನಿಮಾ ಪ್ರದರ್ಶಕರು ಕೇವಲ ಒಂದು ವಾರವಷ್ಟೆ 55% ಕಲೆಕ್ಷನ್ ಅನ್ನು ಕೊಡುವುದಾಗಿ ಹೇಳಿದ್ದರು. ಆದರೆ ಸಂಧಾನದಲ್ಲಿ ಎರಡು ವಾರಗಳ ಲಾಭ ಹಂಚಿಕೆಗೆ ಒಪ್ಪಿಗೆ ನೀಡಿದ್ದಾರೆ. ಈ ಹಿಂದೆ 2022 ರಲ್ಲಿ ಬಿಡುಗಡೆ ಆಗಿದ್ದ ‘ಕಾಂತಾರ’ ಸಿನಿಮಾ ಸಹ ಕೇರಳದಲ್ಲಿ ಒಳ್ಳೆಯ ಪ್ರದರ್ಶನ ಕಂಡಿತ್ತು. ಆಗಲೂ ಆ ಸಿನಿಮಾವನ್ನು ಪೃಥ್ವಿರಾಜ್ ಸುಕುಮಾರನ್ ಅವರೇ ವಿತರಣೆ ಮಾಡಿದ್ದರು. ಅದಕ್ಕೆ ಮುಂಚಿನ ಹೊಂಬಾಳೆಯ ‘ಕೆಜಿಎಫ್ 2’ ಸಿನಿಮಾವನ್ನೂ ಅವರೇ ವಿತರಣೆ ಮಾಡಿದ್ದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




