ಮಲಯಾಳಂ ಚಿತ್ರರಂಗದ ಭಯಾನಕತೆ ಬಿಚ್ಚಿಟ್ಟ ನಟಿ ಸುಮಲತಾ

|

Updated on: Sep 07, 2024 | 6:24 PM

Sumalatha Ambareesh: ಮಲಯಾಳಂನ ಹಲವಾರು ಸಿನಿಮಾಗಳಲ್ಲಿ ನಟಿಸಿರುವ ನಟಿ, ಮಾಜಿ ಸಂಸದ ಸುಮಲತಾ ಅಂಬರೀಶ್ ಅವರು ಹೇಮಾ ಸಮಿತಿ ವರದಿ ಬಗ್ಗೆ ಮಾತನಾಡಿದ್ದು, ಮಲಯಾಳಂ ಚಿತ್ರರಂಗದ ಭಯಾನಕ ವಿಷಯಗಳ ಬಗ್ಗೆಯೂ ಮಾತನಾಡಿದ್ದಾರೆ.

ಮಲಯಾಳಂ ಚಿತ್ರರಂಗದ ಭಯಾನಕತೆ ಬಿಚ್ಚಿಟ್ಟ ನಟಿ ಸುಮಲತಾ
Follow us on

ಮಾಜಿ ಸಂಸದೆ, ನಟಿ ಸುಮಲತಾ ಬಹುಭಾಷಾ ನಟಿಯಾಗಿದ್ದವರು. ಕನ್ನಡ, ತಮಿಳು, ತೆಲುಗು, ಮಲಯಾಳಂ, ಹಿಂದಿ ಸಿನಿಮಾಗಳಲ್ಲಿಯೂ ಸಹ ಸುಮಲತಾ ನಾಯಕಿಯಾಗಿ ನಟಿಸಿದ್ದಾರೆ. ಮಲಯಾಳಂ ಚಿತ್ರರಂಗದಲ್ಲಿ ಸುಮಾರು 50 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಸುಮಲತಾ ನಟಿಸಿದ್ದಾರೆ. ಇದೀಗ ರಾಜಕೀಯಕ್ಕೆ ಪ್ರವೇಶಿಸಿದ ಬಳಿಕ ಸಿನಿಮಾಗಳಿಂದ ಬಹುತೇಕ ದೂರ ಉಳಿದಿರುವ ನಟಿ ಸುಮಲತಾ, ಇತ್ತೀಚೆಗಷ್ಟೆ ರಾಷ್ಟ್ರೀಯ ಮಾಧ್ಯಮವೊಂದರೊಟ್ಟಿಗೆ ಮಾತನಾಡುತ್ತಾ, ಮಲಯಾಳಂ ಚಿತ್ರರಂಗದ ಭಯಾನಕ ವಿಷಯಗಳ ಬಗ್ಗೆ ಮಾತನಾಡಿದ್ದಾರೆ.

‘ಮಲಯಾಳಂ ಚಿತ್ರರಂಗದಲ್ಲಿ ನಾನು ನಟಿಸುವಾಗ ನನಗೆ ಯಾವುದೇ ಕೆಟ್ಟ ಅನುಭವಗಳು ಆಗಿರಲಿಲ್ಲ. ಆದರೆ ಬೇರೆ ನಟಿಯರಿಗೆ ಆದ ಕೆಟ್ಟ ಅನುಭವದ ಬಗ್ಗೆ ಕತೆಗಳನ್ನು ಕೇಳಿದ್ದೇನೆ. ಕೆಲವು ನಟಿಯರು ಅವರ ಕೆಟ್ಟ ಅನುಭವವನ್ನು ತಮ್ಮ ಬಳಿ ಹಂಚಿಕೊಂಡಿದ್ದಾರೆ’ ಎಂದು ಸುಮಲತಾ ಹೇಳಿದ್ದಾರೆ. ‘ಚಿತ್ರರಂಗದಲ್ಲಿ ‘ಪವರ್​ ಗ್ರೂಪ್​’ಗಳು ಗುಂಪುಗಾರಿಕೆ ಇದ್ದೇ ಇರುತ್ತವೆ. ಚಿತ್ರರಂಗದಲ್ಲಿ ಮಹಿಳೆಯರ ಸುರಕ್ಷತೆ ಬಗ್ಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಕ್ರಮ ಕೈಗೊಳ್ಳಬೇಕು’ ಎಂದಿದ್ದಾರೆ.

ಮುಂದುವರೆದು, ‘ನಾನು ಕೆಲಸ ಮಾಡಿದ ಸಿನಿಮಾ ಸೆಟ್​ಗಳಲ್ಲಿ ಕುಟುಂಬದ ರೀತಿಯ ವಾತಾವರಣವಿತ್ತು, ಆದರೆ ನಾನು ಮಲಯಾಳಂ ಚಿತ್ರರಂಗದ ಕೆಲವು ಭಯಾನಕ ಕತೆಗಳನ್ನು ಇತರೆ ನಟಿಯರಿಂದ ಕೇಳಿದ್ದೆ. ಕೆಲವು ನಟಿಯರು ಖುದ್ದಾಗಿ ನನ್ನ ಬಳಿಯೇ ತಾವು ಅನುಭವಿಸಿದ ಲೈಂಗಿಕ ದೌರ್ಜನ್ಯದ ಬಗ್ಗೆ ಹೇಳಿಕೊಂಡಿದ್ದರು. ಚಿತ್ರರಂಗದ ಪುರುಷರು ಅವಕಾಶ ನೀಡಲು ಇನ್ನಿತರೆ ಕಾರಣಗಳಿಗೆ ಅವರೊಟ್ಟಿಗೆ ಸಹಕಾರ ನೀಡುವಂತೆ ಕೇಳುತ್ತಿದ್ದರಂತೆ. ಒಂದೊಮ್ಮೆ ನಟಿಯರು ನಿರಾಕರಿಸಿದರೆ ಅವರಿಗೆ ಅವಕಾಶ ಸಿಗುತ್ತಿರಲಿಲ್ಲ, ನಿರಾಕರಿಸುವ ನಟಿಯರ ವೃತ್ತಿಯನ್ನು ಮುಗಿಸುವ ಪ್ರಯತ್ನವೂ ಆಗುತ್ತಿತ್ತು. ಈ ವಿಷಯಗಳನ್ನು ಬಹಿರಂಗಪಡಿಸಿದ್ದರೆ ನಟಿಯರು ಹಲವು ಸಮಸ್ಯೆಗಳನ್ನು ಎದುರಿಸಬೇಕಿತ್ತು ಹಾಗಾಗಿ ಯಾರೂ ಸಹ ಇಂಥಹಾ ವಿಷಯಗಳ ಬಗ್ಗೆ ಮಾತನಾಡುತ್ತಿರಲಿಲ್ಲ’ ಎಂದಿದ್ದಾರೆ ಸುಮಲತಾ.

ಇದನ್ನೂ ಓದಿ:ಅಮೇರಿಕದ ಜೈಲುಗಳಲ್ಲೂ ಕೈದಿಗಳು ಫೋನ್ ಬಳಸುತ್ತಾರೆ, ಡ್ರಗ್ಸ್ ಸಿಗುತ್ತವೆ: ಸುಮಲತಾ ಅಂಬರೀಶ್

‘ಈಗ ಸಮಯ ಬದಲಾಗಿದೆ, ಬದಲಾವಣೆ ಆಗಿರುವುದು ಒಳ್ಳೆಯದೇ ಆಗಿದೆ. ನಾನು ಅಂಥಹಾ ಕೆಟ್ಟ ಅನುಭವ ಎದಿರಸಲಿಲ್ಲ, ಆದರೆ ದೌರ್ಜನ್ಯ ಪ್ರಕರಣಗಳು ನಡೆದೇ ಇಲ್ಲ ಎಂದು ಹೇಳಲಾಗದು. ನಟಿಯರು ಉಳಿದುಕೊಂಡಿರುವ ಹೋಟೆಲ್​ ರೂಂನ ಬಾಗಿಲುಗಳನ್ನು ಪುರುಷರು ಬಡಿದಿರುವ ಭಯಾನಕ ಸಂಗತಿಗಳನ್ನು ಸಹ ನಾನು ಕೇಳಿದ್ದೀನಿ’ ಎಂದಿದ್ದಾರೆ ಸುಮಲತಾ.

ಹೇಮಾ ವರದಿಯಿಂದಾಗಿ ಮಲಯಾಳಂ ಚಿತ್ರರಂಗದಲ್ಲಿ ಮಹಿಳೆಯ ಮೇಲಾಗುತ್ತಿರುವ ದೌರ್ಜನ್ಯದ ಬಗ್ಗೆ ಮಾಹಿತಿ ಬಹಿರಂಗವಾಗಿದೆ. ಹಲವು ನಟಿಯರು, ಹಿರಿಯ ನಟಿಯರು ಮುಂದೆ ಬಂದು ತಮಗೆ ಆಗಿರುವ ದೌರ್ಜನ್ಯವನ್ನು ಬಹಿರಂಗವಾಗಿ ಹೇಳಿಕೊಂಡಿದ್ದಾರೆ. ಕೆಲವು ಹಿರಿಯ ನಟ, ನಿರ್ದೇಶಕರ ಮೇಲೆ ದೂರುಗಳು ಸಹ ದಾಖಲಾಗಿವೆ. ಕರ್ನಾಟಕದಲ್ಲಿಯೂ ಸಹ ಕನ್ನಡ ಚಿತ್ರರಂಗದಲ್ಲಿ ಮಹಿಳೆಯರ ಮೇಲೆ ಆಗುತ್ತಿರುವ ದೌರ್ಜನ್ಯ ತಡೆಗೆ ಸಮಿತಿಯೊಂದನ್ನು ಪ್ರಾರಂಭಿಸಬೇಕು ಎಂಬ ಒತ್ತಾಯ ಕೇಳಿ ಬರುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ