ನಟಿ ಮಿನುಗುತಾರೆ ಕಲ್ಪನಾ ಅವರು ಗೋಟೂರ್ ಬಂಗಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಬೆಳಗಾವಿಯ ಗೋಟೂರ್ ಪ್ರವಾಸ ಮಂದಿರದಲ್ಲಿ ಅವರು ಮೃತಪಟ್ಟಿದ್ದರು. ಆಗ ಅವರಿಗೆ ಕೇವಲ 36 ವರ್ಷ ವಯಸ್ಸು. ಹಾಗಾದರೆ ಕಲ್ಪನಾ ಅವರು ಮೃತಪಟ್ಟ ಬಂಗಲೆಯಲ್ಲಿ ಭೂತದ ಕಾಟ ಇತ್ತೇ? ಈ ರೀತಿಯ ಅನುಭವದ ಬಗ್ಗೆ ಮುಖ್ಯಮಂತ್ರಿ ಚಂದ್ರು ಮಾತನಾಡಿದ್ದಾರೆ. ‘ಕಲಾ ಮಾಧ್ಯಮ’ ಯೂಟ್ಯೂಬ್ ಚಾನೆಲ್ಗೆ ನೀಡಿದ್ದ ಸಂದರ್ಶನದಲ್ಲಿ ಅವರು ಈ ಬಗ್ಗೆ ಮಾತನಾಡಿದ್ದಾರೆ.
ಮಿನುಗುತಾರೆ ಕಲ್ಪನಾ ಅವರ ಅಭಿಮಾನಿ ಆಗಿದ್ದರು ಮುಖ್ಯಮಂತ್ರಿ ಚಂದ್ರು. ಆದರೆ, ಅವರ ಜೊತೆ ಸಿನಿಮಾ ಮಾಡೋಕೆ ಸಾಧ್ಯವಾಗಿರಲಿಲ್ಲ. ‘ಜನತಾ ಪಾರ್ಟಿಯಲ್ಲಿ ನಾನಿದ್ದೆ. ನಾನು ನಾಗಾರಾಜ್ಮೂರ್ತಿ ಜೊತೆ ಕಾರು ತೆಗೆದುಕೊಂಡು ಬೆಳಗಾವಿಗೆ ಹೋಗಿದ್ದೆವು. ಬರುವಾಗ ಈ ಐಬಿ ತಲುಪಿದೆವು. ರಾತ್ರಿ 11.30 ಆಗಿತ್ತು. ಅಲ್ಲಿ ಹೆಚ್ಚು ಜನ ಬರುತ್ತಿರಲಿಲ್ಲ’ ಎಂದು ಕಥೆ ಆರಂಭಿಸಿದ್ದರು ಮುಖ್ಯಮಂತ್ರಿ ಚಂದ್ರು.
‘ಅಲ್ಲಿ ದೂರದಲ್ಲಿ ಓರ್ವ ಬೀಡಿ ಸೇದುತ್ತಾ ಇದ್ದ. ನಾಗರಾಜ್ ಮೂರ್ತಿ ಅವರನ್ನು ಕರೆದ. ಅವನು ಬಂದು ನಮಸ್ಕಾರ ಮಾಡಿದ. ಬೀಗ ತೆಗಿ ಎಂದು ನಾಗಾರಾಜ ಮೂರ್ತಿ ಹೇಳಿದರು. ಅವನು ಒಂದಲ್ಲಾ ಒಂದು ಕಾರಣ ಕೊಡುತ್ತಾ ಇದ್ದಾ. 30 ಕಿ.ಮೀ ದೂರದಲ್ಲಿ ಬೇರೊಂದು ಐಬಿ ಅಲ್ಲಿಗೆ ಹೋಗಿ ಎಂದ. ಆದರೂ ಕೇಳದೆ ನಾವು ಹೋಗಿ ಅದೇ ಐಬಿಯಲ್ಲಿ ಮಲಗಿದೆವು’ ಎಂದಿದ್ದಾರೆ ಅವರು.
‘ಮಲಗಿ 20 ನಿಮಿಷ ಆಗಿರಬಹುದು. ಕಿಲ ಕಿಲ ನಗು. ನನ್ನ ಸುತ್ತವೇ ಯಾರೋ ನಕ್ಕಂತೆ ಆಗುತ್ತಿದೆ. ಕೆಟ್ಟ ನಗು ಅದು. ನಾನು ಎದ್ದೆ. ನಾಗಾರಾಜ ಮೂರ್ತಿ ಎದ್ದುಕೋ ಎಂದೆ. ಇಲ್ಲಿ ಬೇಡ ಎಂದೆ. ಆದರೆ ನಾಗರಾಜಮೂರ್ತಿ ಒಪ್ಪಿಲ್ಲ. 10 ನಿಮಿಷ ಬಿಟ್ಟು ನಾಗಾರಾಜ ಮೂರ್ತಿಗೆ ಗೆಜ್ಜೆ ಶಬ್ದ ಕೇಳಿತು. ಇಬ್ಬರಿಗೂ ಭಯ ಆಯಿತು. ನಂತರ ಅಲ್ಲಿಂದ ಓಡಿದೆವು’ ಎಂದಿದ್ದಾರೆ ಮುಖ್ಯಮಂತ್ರಿ ಚಂದ್ರು.
ಇದನ್ನೂ ಓದಿ: ‘ಕಲ್ಪನಾ ಮತ್ತು ಮಂಜುಳಾಗೆ ಇಂಥ ಸಾವು ಬೇಕಿತ್ತಾ?’; ಮಿಂಚಿ ಮರೆಯಾದ ನಟಿಯರ ಬಗ್ಗೆ ರಾಜೇಶ್ ವಿಷಾದದ ಮಾತು
‘ಅವರು ಸತ್ತಾಗಿನಿಂದ ಇಲ್ಲಿ ಸಮಸ್ಯೆ ಆಗ್ತಿದೆ. ಹೇಗೆ ಹೇಳಬೇಕು ಅನ್ನೋದು ಗೊತ್ತಾಗಿಲ್ಲ. ದಯವಿಟ್ಟು ಇಲ್ಲಿಂದ ಹೊರಟುಬಿಡಿ. ನಾನು ಹೋಗ್ತೀನಿ’ ಎಂದು ಅಲ್ಲಿ ಕೆಲಸಕ್ಕೆ ಇದ್ದ ವ್ಯಕ್ತಿ ಹೇಳಿದ್ದರು. ‘ಅದು ಭ್ರಮೆಯಲ್ಲಿ ಆಯ್ತೋ, ನಿಜವಾಗಿ ಆಯ್ತೋ ಗೊತ್ತಿಲ್ಲ. ನಮಗೆ ಆ ಅನುಭವ ಆಗಿದ್ದಂತೂ ಹೌದು’ ಎಂದಿದ್ದಾರೆ ಚಂದ್ರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 11:54 am, Sat, 14 September 24