‘ಲಂಗೋಟಿ ಮ್ಯಾನ್’ ಸಿನಿಮಾದ ಅಸಲಿ ವಿಷಯ ಏನು? ಸೆ.20ಕ್ಕೆ ತಿಳಿಯುತ್ತೆ ಸತ್ಯ

ಟ್ರೇಲರ್ ನೋಡಿದ ಎಲ್ಲರಿಗೂ ‘ಲಂಗೋಟಿ ಮ್ಯಾನ್’ ಸಿನಿಮಾದ ಕಥೆಯ ಮೇಲೆ ಕೌತುಕ ಹೆಚ್ಚಾಗಿದೆ. ಸೆ.20ರಂದು ಈ ಸಿನಿಮಾ ತೆರೆಕಾಣಲಿದೆ. ‘ತನು ಟಾಕೀಸ್’ ಮೂಲಕ ನಿರ್ಮಾಣವಾದ ಈ ಸಿನಿಮಾಗೆ ನಿರ್ದೇಶಕಿ ಸಂಜೋತಾ ಭಂಡಾರಿ ಅವರು ಆ್ಯಕ್ಷನ್​-ಕಟ್​ ಹೇಳಿದ್ದಾರೆ. ಆಕಾಶ್​ ಅವರು ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಈ ಚಿತ್ರದ ಟ್ರೇಲರ್​ ಗಮನ ಸೆಳೆದಿದೆ.

‘ಲಂಗೋಟಿ ಮ್ಯಾನ್’ ಸಿನಿಮಾದ ಅಸಲಿ ವಿಷಯ ಏನು? ಸೆ.20ಕ್ಕೆ ತಿಳಿಯುತ್ತೆ ಸತ್ಯ
ಸ್ನೇಹಾ ಖುಷಿ, ಆಕಾಶ್​, ಸಂಹಿತಾ ವಿನ್ಯಾ, ಸಂಜೋತಾ ಭಂಡಾರಿ
Follow us
|

Updated on: Sep 13, 2024 | 10:50 PM

ಟ್ರೇಲರ್​ ಮತ್ತು ಟೈಟಲ್​ ಕಾರಣದಿಂದ ‘ಲಂಗೋಟಿ ಮ್ಯಾನ್​’ ಸಿನಿಮಾ ಒಂದಷ್ಟು ಅನುಮಾನಗಳನ್ನು ಹುಟ್ಟುಹಾಕಿದೆ. ಆ ಎಲ್ಲ ಅನುಮಾನಗಳಿಗೆ ಸೆಪ್ಟೆಂಬರ್​ 20ರಂದು ಉತ್ತರ ಸಿಗಲಿದೆ. ಅಂದರೆ, ಈ ಸಿನಿಮಾ ಸೆ.20ರಂದು ಬಿಡುಗಡೆ ಆಗಲಿದ್ದು, ಇದರ ಅಸಲಿ ಕಹಾನಿ ಏನು ಎಂಬುದು ಅಂದೇ ಬಹಿರಂಗ ಆಗಲಿದೆ. ಸದ್ಯಕ್ಕಂತೂ ‘ಲಂಗೋಟಿ ಮ್ಯಾನ್​’ ಟ್ರೇಲರ್ ನೋಡಿದವರು ಸಿಕ್ಕಾಪಟ್ಟೆ ನಗುತ್ತಿದ್ದಾರೆ. ಇನ್ನು, ಪೂರ್ತಿ ಸಿನಿಮಾ ಎಷ್ಟು ಕಾಮಿಡಿಯಾಗಿ ಇರಬಹುದು ಎಂಬ ನಿರೀಕ್ಷೆ ಮೂಡಿದೆ. ಇತ್ತೀಚೆಗೆ ಈ ಸಿನಿಮಾದ ಸುದ್ದಿಗೋಷ್ಠಿ ನಡೆಯಿತು.

‘ಲಂಗೋಟಿ ಮ್ಯಾನ್​’ ಚಿತ್ರವು ‘ತನು ಟಾಕೀಸ್’ ಮೂಲಕ ನಿರ್ಮಾಣ ಆಗಿದೆ. ಈ ಚಿತ್ರಕ್ಕೆ ಸಂಜೋತಾ ಭಂಡಾರಿ ಅವರು ನಿರ್ದೇಶನ ಮಾಡಿದ್ದಾರೆ. ‘ಈ ಸಿನಿಮಾ ಅನಗತ್ಯ ಕಾರಣದಿಂದ ವಿವಾದಕ್ಕೆ ಎಡೆಮಾಡಿಕೊಟ್ಟಿದೆ. ಸಿನಿಮಾ ನೋಡಿದ ನಂತರ ಈ ಶೀರ್ಷಿಕೆ ಯಾಕೆ ಇಟ್ಟಿದ್ದೇವೆ ಎಂಬುದು ಗೊತ್ತಾಗಲಿದೆ. ಯಾವ ಸಮುದಾಯವನ್ನೂ ನಾವು ಅವಮಾನ ಮಾಡಿಲ್ಲ. ಯಾರನ್ನೂ ನೋಯಿಸುವ ಉದ್ದೇಶ ನಮಗಿಲ್ಲ’ ಎಂದು ನಿರ್ದೇಶಕಿ ಸಂಜೋತಾ ಹೇಳಿದ್ದಾರೆ.

ನಟ ಧರ್ಮೇಂದ್ರ ಕೂಡ ಸಿನಿಮಾ ಬಗ್ಗೆ ಮಾಹಿತಿ ನೀಡಿದರು. ‘ಲಂಗೋಟಿ ವಿಷಯವನ್ನು ಕೇಂದ್ರವಾಗಿ ಇಟ್ಟುಕೊಂಡು ಈ ಸಿನಿಮಾ ಮಾಡಲಾಗಿದೆ. ತಾತನಿಗೆ ಸಂಪ್ರದಾಯ, ಆಚಾರ-ವಿಚಾರ ಪಾಲಿಸಬೇಕು ಎನ್ನುವ ನಂಬಿಕೆ. ಆದರೆ ಆ ಸಂಪ್ರದಾಯಗಳ ಹೇರಿಕೆಯಿಂದ ನಾಯಕ ರೆಬೆಲ್ ಆಗುತ್ತಾನೆ. ಈ ಸಿನಿಮಾದ ಕಥೆ ಆಸಕ್ತಿಕರವಾಗಿದೆ. ಇದೊಂದು ಉತ್ತಮ ಕೌಟುಂಬಿಕ ಸಿನಿಮಾ’ ಎಂದು ಅವರು ಹೇಳಿದ್ದಾರೆ.

ಲಂಗೋಟಿ ಮ್ಯಾನ್​ ಟ್ರೇಲರ್:

ಆಕಾಶ್ ರಾಂಬೋ ಅವರು ಈ ಸಿನಿಮಾದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ. ‘ತಾತ ಹಾಗೂ ಮೊಮ್ಮಗನ ಸುತ್ತ ನಡೆಯುವ ಕಥೆ ಇದು. ಮೊಮ್ಮಗ ಲಂಗೋಟಿ ಹಾಕಿಕೊಳ್ಳಬೇಕು‌ ಎಂಬುದು ತಾತನ ಬಯಕೆ. ಮೊಮ್ಮಗನಿಗೆ ಅಂಡರ್​ವೇರ್ ಹಾಕಿಕೊಳ್ಳುವ ಆಸೆ. ತಾತಾ ಬದುಕಿರುವ ತನಕ ಅಂಡರ್​ವೇರ್ ಹಾಕಲು ಬಿಡುವುದಿಲ್ಲ. ಈ ರೀತಿಯ ಹಾಸ್ಯಮಯ ಕಥೆ ನಮ್ಮ ಸಿನಿಮಾದಲ್ಲಿದೆ’ ಎಂದು ಆಕಾಶ್​ ಹೇಳಿದ್ದಾರೆ.

ಇದನ್ನೂ ಓದಿ: ‘ಅಮ್ಮಾವ್ರ ಗಂಡ’ ಚಿತ್ರದ ನಟಿ ಭಾಗ್ಯಶ್ರೀ ಪುತ್ರಿಯ ಸಿನಿಮಾಗೆ ನಾಗಶೇಖರ್​ ನಿರ್ದೇಶನ

ಈ ಸಿನಿಮಾದಲ್ಲಿ ಸಂಹಿತಾ ವಿನ್ಯಾ, ಹುಲಿ ಕಾರ್ತಿಕ್​, ಸ್ನೇಹಾ ಖುಷಿ, ಪಲ್ಟಿ ಗೋವಿಂದ್​, ಸಾಯಿ ಪವನ್​ ಕುಮಾರ್​ ಮುಂತಾದವರು ನಟಿಸಿದ್ದಾರೆ. ಪೊಲೀಸ್​ ಪಾತ್ರದಲ್ಲಿ ಸಂಹಿತಾ ವಿನ್ಯಾ ಅಭಿನಯಿಸಿದ್ದಾರೆ. ‘ಕಾಮಿಡಿ ಸಿನಿಮಾದ ಮೂಲಕ ಕೆಲವು ಗಂಭೀರ ವಿಷಯಗಳನ್ನು ಹೇಳಿದ್ದೇವೆ’ ಎಂದಿದ್ದಾರೆ ನಟ ಹುಲಿ ಕಾರ್ತಿಕ್​.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.