Leelavathi: ಪಶು ಆಸ್ಪತ್ರೆ ನಿರ್ಮಾಣಕ್ಕೆ ಮುಂದಾದ ಹಿರಿಯ ನಟಿ ಲೀಲಾವತಿ

|

Updated on: Mar 20, 2023 | 8:10 PM

ಕೆಲವು ತಿಂಗಳ ಹಿಂದಷ್ಟೆ ಆಸ್ಪತ್ರೆಯನ್ನು ಕಟ್ಟಿಸಿ ಲೋಕಾರ್ಪಣೆ ಮಾಡಿದ್ದ ಹಿರಿಯ ನಟಿ ಲೀಲಾವತಿ ಹಾಗೂ ಅವರ ಪುತ್ರ ವಿನೋದ್ ರಾಜ್ ಇದೀಗ ಪಶು ಆಸ್ಪತ್ರೆ ನಿರ್ಮಾಣಕ್ಕೆ ಮುಂದಾಗಿದ್ದು, ಗುದ್ದಲಿ ಪೂಜೆ ನೆರವೇರಿಸಿದ್ದಾರೆ.

Leelavathi: ಪಶು ಆಸ್ಪತ್ರೆ ನಿರ್ಮಾಣಕ್ಕೆ ಮುಂದಾದ ಹಿರಿಯ ನಟಿ ಲೀಲಾವತಿ
ವಿನೋದ್-ರಾಜ್
Follow us on

ಚಿತ್ರರಂಗದಿಂದ ದೂರಾಗಿ ನೆಲಮಂಗಲದ ಬಳಿ ಹಳ್ಳಿಯೊಂದರಲ್ಲಿ ನೆಲೆಸಿರುವ ನಟ ವಿನೋದ್ ರಾಜ್ (Vinod Raj) ಹಾಗೂ ಅವರ ತಾಯಿ ಹಿರಿಯ ನಟಿ ಲೀಲಾವತಿ (Leelavathi) ಅಲ್ಲಿಯೇ ಅಚ್ಚುಕಟ್ಟಾಗಿ ಜೀವನ ನಡೆಸುತ್ತಿರುವ ಜೊತೆಗೆ ಸಮಾಜ ಸೇವೆಯಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಕೆಲ ತಿಂಗಳ ಹಿಂದಷ್ಟೆ ತಾವು ನೆಲೆಸಿರುವ ಊರಲ್ಲೇ ಆಸ್ಪತ್ರೆಯೊಂದನ್ನು ಕಟ್ಟಿ ಲೋಕಾರ್ಪಣೆ ಮಾಡಿದ ಈ ಅಮ್ಮ-ಮಗ ಇದೀಗ ಪಶುಗಳಿಗಾಗಿ ಆಸ್ಪತ್ರೆಯೊಂದನ್ನು ಕಟ್ಟಲು ಮುಂದಾಗಿದ್ದಾರೆ. ಪಶು ಆಸ್ಪತ್ರೆ ನಿರ್ಮಾಣಕ್ಕೆ ಇಂದು (ಮಾರ್ಚ್ 20) ಗುದ್ದಲಿ ಪೂಜೆ ನೆರವೇರಿಸಿದ್ದಾರೆ.

ಪಶು ಆಸ್ಪತ್ರೆ ನಿರ್ಮಿಸಬೇಕು ಎಂಬುದು ಲೀಲಾವತಿಯವರ ಆಸೆ, ಅದರಂತೆಯೇ ಇಂದು ನೆಲಮಂಗಲದ ಬಳಿಕ ಧರ್ಮನಾಯಕನ ತಾಂಡ್ಯಾದಲ್ಲಿ ವಿನೋದ್ ರಾಜ್, ಲೀಲಾವತಿ, ಶಾಸಕ ಶ್ರೀನಿವಾಸ ಮೂರ್ತಿ, ಎಂಎಲ್​ಸಿ ರವಿ ಅವರುಗಳು ಒಟ್ಟಿಗೆ ಗುದ್ದಲಿ ಪೂಜೆ ನೆರವೇರಿಸಿದ್ದಾರೆ.

ಕಾರ್ಯಕ್ರಮದ ಸಂದರ್ಭದಲ್ಲಿ ಮಾಧ್ಯಮಗಳೊಟ್ಟಿಗೆ ಮಾತನಾಡಿದ ವಿನೋದ್ ರಾಜ್, ”ಮನುಷ್ಯರಿಗಾಗಿ ಆಸ್ಪತ್ರೆ ಕಟ್ಟಿಸಿದ್ದಾಯಿತು, ಮಾತು ಬಾರದ ಪ್ರಾಣಿಗಳಿಗಾಗಿಯೂ ಏನಾದರೂ ಮಾಡಬೇಕು ಎಂದು ತಾಯಿವರು ಹೇಳಿದರು. ಅವರಿಗೆ ಪ್ರಾಣಿಗಳ ಮೇಲೆ ವಿಶೇಷ ಮಮತೆ. ಕಳೆದ ಕೆಲವು ವರ್ಷಗಳಿಂದಲೂ ಹಲವು ನಾಯಿಗಳನ್ನು ಅವರು ಸಾಕುತ್ತಿದ್ದಾರೆ. ಅವರ ಆಸೆಯಂತೆ ಪಶು ಆಸ್ಪತ್ರೆ ನಿರ್ಮಾಣ ಮಾಡಲಾಗುತ್ತಿದೆ. ಪಶು ಆಸ್ಪತ್ರೆ ನಿರ್ಮಾಣಕ್ಕಾಗಿ ಸ್ಥಳವನ್ನು ನೀಡಿರುವ ಪಂಚಾಯಿತಿಯವರಿಗೆ ನಾನು ಧನ್ಯವಾದ ಅರ್ಪಿಸುತ್ತೇನೆ. ಅಮ್ಮನವರ ಮೇಲೆ ನಂಬಿಕೆ ಇಟ್ಟು ಅವರು ಜಾಗ ಕೊಟ್ಟಿದ್ದಾರೆ” ಎಂದಿದ್ದಾರೆ.

ಇನ್ನು ಹಿರಿಯ ನಟಿ ಲೀಲಾವತಿ ಮಾತನಾಡಿ, ಪ್ರಾಣಿಗಳು ನನ್ನ ಪ್ರಾಣದಂತೆ. ಅವುಗಳಿಗಾಗಿ ಏನನ್ನಾದರೂ ಮಾಡಬೇಕು ಎಂದುಕೊಂಡು ಈಗ ಆಸ್ಪತ್ರೆ ಕಟ್ಟಿಸುತ್ತಿದ್ದೇವೆ. ಒಬ್ಬಳ ಕೈಯಿಂದಲೇ ಆಗುವಂಥಹಾ ಕೆಲಸಗಳು ಇವಲ್ಲ. ಇದಕ್ಕೆ ಎಲ್ಲರ ಸಹಕಾರ ಬೇಕು ಎಂದ ಲೀಲಾವತಿಯವರು, ನಾನು ಸಿಎಂಗೆ ಮನವಿ ಮಾಡುತ್ತೇನೆ. ಆಸ್ಪತ್ರೆಗೆ ಬೇಕಾದ ವೈದ್ಯರು ಇತರೆ ವ್ಯವಸ್ಥೆಗಳನ್ನು ಅವರು ಮಾಡಿಕೊಡಬೇಕು ಎಂದಿದ್ದಾರೆ.

ಲೀಲಾವತಿ ಹಾಗೂ ಅವರ ಪುತ್ರ ವಿನೋದ ರಾಜ್ ಸೇರಿ ಈಗಾಗಲೇ ಆಸ್ಪತ್ರೆಯೊಂದನ್ನು ನಿರ್ಮಿಸಿದ್ದಾರೆ. ಕಳೆದ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ ಆಸ್ಪತ್ರೆಯ ಉದ್ಘಾಟನೆ ಸಹ ನಡೆದಿದೆ. ಆಸ್ಪತ್ರೆ ನಿರ್ಮಾಣ ಮಾಡಿ ಅದನ್ನು ಸರ್ಕಾರದ ಸುಪರ್ದಿಗೆ ಒಪ್ಪಿಸಿದ್ದಾರೆ. ಸರ್ಕಾರವು ವೈದ್ಯರು ಇತರೆ ಉಪಕರಣವನ್ನು ಆಸ್ಪತ್ರೆಗೆ ನೀಡಿದೆ.

ಲೀಲಾವತಿಯವರಿಗೆ ಸುಮಾರು 85ಕ್ಕೂ ಹೆಚ್ಚು ವಯಸ್ಸಾಗಿದೆ. ಹಾಗಿದ್ದರೂ ಸಮಾಜ ಸೇವೆಯಲ್ಲಿ ತಮ್ಮನ್ನು ಅವರು ತೊಡಗಿಸಿಕೊಂಡಿದ್ದಾರೆ. ಇತ್ತೀಚೆಗಷ್ಟೆ ಅವರ ಆರೋಗ್ಯದಲ್ಲಿ ಏರು-ಪೇರಾಗಿದ್ದಾಗ ಹಿರಿಯ ನಟ ಶ್ರೀನಾಥ್ ಇನ್ನಿತರರು ಹೋಗಿ ಭೇಟಿಯಾಗಿ ಬಂದಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ