ಸುದೀಪ್ ಕಾಳಜಿ ಕಂಡು ಕಣ್ಣೀರು ಬಂತು: ಘಟನೆ ನೆನಪಿಸಿಕೊಂಡ ಡಾಲಿ ಧನಂಜಯ್
Daali Dhananjay-Sudeep: ಹೊಯ್ಸಳ ಸಿನಿಮಾ ಟ್ರೈಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಸುದೀಪ್ ಬಗ್ಗೆ ಮಾತನಾಡಿದ ಡಾಲಿ, ಸುದೀಪ್ ಮಾತು ಕೇಳಿ ಭಾವುಕರಾದ ಘಟನೆಯೊಂದನ್ನು ನೆನಪು ಮಾಡಿಕೊಂಡಿದ್ದಾರೆ.
ದಶಕಗಳಿಂದಲೂ ಚಿತ್ರರಂಗದಲ್ಲಿದ್ದು ಆಳುತ್ತಿರುವ ನಟ ಸುದೀಪ್ (Sudeep), ಹೊಸ ನಟರಿಗೆ, ಪ್ರತಿಭಾವಂತರಿಗೆ ಬೆಂಬಲ ನೀಡುತ್ತಲೇ ಬಂದಿದ್ದಾರೆ. ಯಾವುದೇ ಇರ್ಷ್ಯೆಗಳನ್ನು ಇಟ್ಟುಕೊಳ್ಳದ ಸುದೀಪ್ ವೃತ್ತಿ ಮತ್ಸರಗಳನ್ನು ದಾಟಿದ ದೊಡ್ಡ ನಟನಾಗಿ ಬೆಳೆದಿದ್ದು, ಬೆಳೆದ ಎತ್ತರವನ್ನು ಸದುಪಯೋಗಪಡಿಸಿಕೊಳ್ಳುತ್ತಾ ಹೊಸ ನಟರಿಗೆ, ಪ್ರತಿಭಾವಂತ ನಟರಿಗೆ ನೆರವಾಗುತ್ತಲೇ ಬಂದಿದ್ದಾರೆ. ಪ್ರತಿಭಾವಂತರನ್ನು ಗುರುತಿಸುವ ಅವರನ್ನು ಗೌರವಿಸುವ ಕಾರ್ಯವನ್ನು ಈಗಲೂ ಮುಂದುವರೆಸಿದ್ದಾರೆ.
ಡಾಲಿ ಧನಂಜಯ್ (Daali Dhananjay) ನಟನೆಯ ಹೊಯ್ಸಳ ಸಿನಿಮಾದ ಟ್ರೈಲರ್ ಇಂದು ಬಿಡುಗಡೆ ಆಗಿದ್ದು, ಟ್ರೈಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ನಟ ಸುದೀಪ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಸುದೀಪ್ ಹಾಗೂ ಧನಂಜಯ್ ಇಬ್ಬರೂ ಒಟ್ಟಿಗೆ ವೇದಿಕೆ ಏರಿದರು. ಮೊದಲಿಗೆ ಮಾತನಾಡಿದ ಡಾಲಿ ಧನಂಜಯ್ ಸುದೀಪ್ ವ್ಯಕ್ತಿತ್ವವನ್ನು ಬಣ್ಣಿಸುತ್ತಾ, ಸುದೀಪ್ ಮಾತನ್ನು ಕೇಳಿ ಕಣ್ಣು ತುಂಬಿ ಬಂದ ಇತ್ತೀಚಿಗಿನ ಘಟನೆಯೊಂದನ್ನು ನೆನಪಿಸಿಕೊಂಡರು.
ಹೊಯ್ಸಳ ಸಿನಿಮಾದ ಟ್ರೈಲರ್ ಬಿಡುಗಡೆ ಕಾರ್ಯಕ್ರಮಕ್ಕೆ ಆಹ್ವಾನಿಸಲೆಂದು ಡಾಲಿ, ಸುದೀಪ್ ಮನೆಗೆ ಹೋಗಿದ್ದರು. ಆಗ ಸುದೀಪ್, ಇಷ್ಟು ಖಡಕ್ ಆದ ಪೊಲೀಸ್ ಪಾತ್ರಧಾರಿ ಪಾತ್ರಕ್ಕೆ ಮೀಸೆ ಏಕೆ ಬಿಟ್ಟಿಲ್ಲ ಎಂದು ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ಡಾಲಿ, ನನಗೆ ಮೀಸೆ ಒಪ್ಪುವುದಿಲ್ಲ ಅನಿಸಿತು ಅದಕ್ಕೆ ಬಿಡಲಿಲ್ಲ ಎಂದಿದ್ದಾರೆ. ಅದಕ್ಕೆ ಸುದೀಪ್ ಹಾಗೇನಿಲ್ಲ ನಿನಗೆ ಮೀಸೆ ಚೆನ್ನಾಗಿ ಒಪ್ಪುತ್ತದೆ ನೋಡಿಲ್ಲಿ ಎಂದು ಡಾಲಿಯ ಚಿತ್ರಕ್ಕೆ ತಾವೇ ಮೀಸೆ ಬರೆದಿದ್ದ ಚಿತ್ರವನ್ನು ತೋರಿಸಿದರಂತೆ. ಇದನ್ನು ಕಂಡ ಡಾಲಿಗೆ ಆಶ್ಚರ್ಯವಾಗಿದೆ.
ನಾನೊಬ್ಬ ಸಾಮಾನ್ಯ ನಟನಷ್ಟೆ, ಅವರು ದೊಡ್ಡ ಸ್ಟಾರ್, ಹಾಗಿದ್ದರೂ ಅವರು ಅಷ್ಟು ಕಾಳಜಿವಹಿಸಿ ಮೀಸೆ ಇದ್ದರೆ ಹೀಗೆ ಕಾಣುತ್ತೀಯ ಎಂದು ಅವರು ತೋರಿದ ಕಾಳಜಿ ಬಹಳ ದೊಡ್ಡದು. ಅವರು ಅದನ್ನೆಲ್ಲ ಮಾಡಬೇಕಿಲ್ಲ ಆದರೂ ಮಾಡಿದರು. ಅವರು ಅಂದು ತೋರಿದ ಆತ್ಮೀಯತೆ, ಆಡಿದ ಮಾತುಗಳು ನನ್ನನ್ನು ವಿನೀತನನ್ನಾಗಿ ಮಾಡಿದವು. ಅಲ್ಲಿಂದ ಹೊರಗೆ ಬರಬೇಕಾದರೆ ನನಗೆ ಕಣ್ಣು ತುಂಬಿ ಬಂತು ಎಂದರು ಡಾಲಿ.
ಮತ್ತೊಂದು ಘಟನೆಯನ್ನು ಸಹ ನೆನಪಿಸಿಕೊಂಡ ಡಾಲಿ, ಅವರ ಮನೆ ನನ್ನ ಮನೆಗೆ ಬಹಳ ಹತ್ತಿರ ಆದರೆ ನನಗೆ ಹೋಗಲು ನನಗೆ ಹೆದರಿಕೆ. ಆದರೆ ಒಮ್ಮೆ ಅವರೇ ನಂಬರ್ ಪಡೆದುಕೊಂಡು ಮನೆಗೆ ಬರುವಂತೆ ಆಹ್ವಾನ ನೀಡಿದರು. ಹೋದಾಗ ಬಹಳ ಆತ್ಮೀಯವಾಗಿ ಮಾತನಾಡಿದರು. ಆಗ ನಾನು ಸ್ವಲ್ಪ ಹೊಟ್ಟೆ ಬಿಟ್ಟುಕೊಂಡು ಓಡಾಡುತ್ತಿದ್ದೆ. ಅದಕ್ಕೆ ಬೈದರು. ಏನಿದು? ಹೀಗೆ ಹೊಟ್ಟೆ ಬಿಟ್ಕೊಂಡು ಓಡಾಡ್ತಿದ್ದೀಯ? ಫಿಟ್ ಆಗಿ ಇರು ಎಂದರು. ನಾನು ಜಯರಾಜ್ ಪಾತ್ರಕ್ಕೆ ಸ್ವಲ್ಪ ದಪ್ಪ ಆಗಿದ್ದೀನಿ ಎಂದೆ. ದಪ್ಪ ಆಗುವುದಕ್ಕು ಫಿಟ್ ಆಗಿಲ್ಲದೇ ಇರುವುದಕ್ಕೂ ವ್ಯತ್ಯಾಸ ಇದೆ. ಹೀಗೆ ಇರಬೇಡ ಫಿಟ್ ಆಗಿರು ಎಂದು ಬುದ್ಧಿವಾದ ಹೇಳಿದರು. ನಿಜಕ್ಕೂ ನಾನು ಇಂಥಹಾ ಅಣ್ಣನನ್ನು ಪಡೆಯಲು ಪುಣ್ಯ ಮಾಡಿದ್ದೇನೆ ಎಂದರು ಡಾಲಿ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:25 pm, Mon, 20 March 23