ಸಿನಿಮಾಟೋಗ್ರಾಫ್ ಕಾಯ್ದೆಗೆ ಕೆಲವು ತಿದ್ದುಪಡಿ ತರಲು ಕೇಂದ್ರ ಸರ್ಕಾರ ಮುಂದಾಗಿದೆ. ಸೆನ್ಸಾರ್ಶಿಪ್ನಲ್ಲಿ ಬದಲಾವಣೆ ತರುವುದು ಈ ನಿಯಮದ ಮುಖ್ಯ ಉದ್ದೇಶ. ಈ ಬಗ್ಗೆ ಸಲಹೆ ನೀಡಲು ಸಾರ್ವಜನಿಕರಿಗೆ ಕೇಂದ್ರ ಸರ್ಕಾರ ಮುಕ್ತ ಅವಕಾಶ ನೀಡಿದೆ. ಈಗ ನಟಿ, ರಾಜಕಾರಣಿ ರಮ್ಯಾ ಈ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
‘ಭಾರತೀಯ ಸಿನಿಮಾ ದಾಳಿಗೆ ಒಳಗಾಗಿದೆ’ ಎಂದು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಳ್ಳಲಾದ ಪೋಸ್ಟ್ಅನ್ನು ರಮ್ಯಾ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಶೇರ್ ಮಾಡಿಕೊಂಡು, ಆ ಬಗ್ಗೆ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಅಲ್ಲದೆ, ಕೇಂದ್ರ ಸರ್ಕಾರ ಮಾಡಲು ಹೊರಟಿರುವ ಬದಲಾವಣೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.
‘ನಾವು ನೋಡುವ ವಿಚಾರದ ಮೇಲೆ ಕೇಂದ್ರ ಸರ್ಕಾರ ಏಕೆ ಹಸ್ತಕ್ಷೇಪ ಮಾಡುತ್ತಿದೆ? ಕೇಂದ್ರದವರು ಎಲ್ಲಾ ಕಡೆಗಳಲ್ಲೂ ಇದ್ದಾರೆ. ನಮ್ಮ ಹಕ್ಕುಗಳನ್ನು ಕಿತ್ತುಕೊಳ್ಳುತ್ತಿದ್ದಾರೆ. ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ (ಸಿಬಿಎಫ್ಸಿ) ಈಗಾಗಲೇ ಎಲ್ಲವನ್ನೂ ರೆಗ್ಯೂಲೇಟ್ ಮಾಡುತ್ತಿದೆ’ ಎಂದು ಹೇಳುವ ಮೂಲಕ ಸರ್ಕಾರದ ನಡೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.
ಸದ್ಯದ ಕಾನೂನಿನ ಪ್ರಕಾರ, ಒಮ್ಮೆ ಸೆನ್ಸಾರ್ ಮಂಡಳಿ ಸದಸ್ಯರು ಸಿನಿಮಾಗೆ ಸೆನ್ಸಾರ್ ಪ್ರಮಾಣಪತ್ರ ನೀಡಿದ ಬಳಿಕ ಅದನ್ನು ಮತ್ತೆ ಪ್ರಶ್ನಿಸುವ ಅಧಿಕಾರ ಕೇಂದ್ರ ಸರ್ಕಾರಕ್ಕೆ ಇಲ್ಲ. ಆದರೆ ಸಿನಿಮಾಟೋಗ್ರಾಫ್ ಕಾಯ್ದೆಗೆ ತಿದ್ದುಪಡಿ ಮಾಡುವ ಮೂಲಕ ಆ ಅಧಿಕಾರವನ್ನು ಕೇಂದ್ರ ಸರ್ಕಾರ ಪಡೆದುಕೊಳ್ಳಲು ಆಲೋಚಿಸಿದೆ. ಒಮ್ಮೆ ಸೆನ್ಸಾರ್ ಆದ ಚಿತ್ರವು ರಿಲೀಸ್ ಆದ ಬಳಿಕ ಜನರಿಂದ ತೀವ್ರ ಆಕ್ಷೇಪಕ್ಕೆ ಗುರಿಯಾದರೆ ಅಂತಹ ಸಿನಿಮಾವನ್ನು ಮತ್ತೊಮ್ಮೆ ಮರು ಸೆನ್ಸಾರ್ ಮಾಡಲು ಆದೇಶಿಸುವ ಅಧಿಕಾರವನ್ನು ಕೇಂದ್ರ ಸರ್ಕಾರ ಪಡೆದುಕೊಳ್ಳಲಿದೆ. ಇದರ ಜತೆಗೆ ವೀಕ್ಷಕರ ವಯಸ್ಸಿನ ಆಧಾರದ ಮೇಲೆ ಇನ್ನಷ್ಟು ವರ್ಗೀಕರಣ ಮಾಡಲು ಕೇಂದ್ರ ತೀರ್ಮಾನಿಸಿದೆ. ಈ ಬಗ್ಗೆ ಜನರಿಂದ ಪ್ರತಿಕ್ರಿಯೆ ಸ್ವೀಕರಿಸಲಾಗುತ್ತಿದೆ.
ಇದನ್ನೂ ಓದಿ: ವಿದೇಶಕ್ಕೆ ಹೋದಾಗ ರಾಹುಲ್ ಗಾಂಧಿ ವಿಚಾರದಲ್ಲಿ ಮಾಡಿದ್ದ ದೊಡ್ಡ ತಪ್ಪಿನ ಬಗ್ಗೆ ಬಾಯ್ಬಿಟ್ಟ ರಮ್ಯಾ