‘ಭಜರಂಗಿ’ ನಟಿ ವಿದ್ಯಾ ಹತ್ಯೆ ಆರೋಪಿ ನಂದೀಶ್ ಬಂಧನ

|

Updated on: May 22, 2024 | 9:39 PM

ಸೋಮವಾರದಂದು ಕೊಲೆಯಾಗಿದ್ದ ನಟಿ, ರಾಜಕಾರಣಿ ವಿದ್ಯಾರ ಕೊಲೆ ಆರೋಪಿ ಪತಿ ನಂದೀಶ್​ನನ್ನು ಪೊಲೀಸರು ಪತ್ತೆ ಹಚ್ಚಿ ಬಂಧಿಸಿದ್ದಾರೆ. ಆರೋಪಿ ನಂದೀಶ್ ಮಂಡ್ಯದಲ್ಲಿ ತಲೆಮರೆಸಿಕೊಂಡಿದ್ದ ಎನ್ನಲಾಗಿದ್ದು, ಬನ್ನೂರು ಪೊಲೀಸ್ ಠಾಣೆಯ ಪೊಲೀಸರು ನಂದೀಶ್​ನನ್ನು ಬಂಧಿಸಿದ್ದಾರೆ.

‘ಭಜರಂಗಿ’ ನಟಿ ವಿದ್ಯಾ ಹತ್ಯೆ ಆರೋಪಿ ನಂದೀಶ್ ಬಂಧನ
Follow us on

ಭಜರಂಗಿ’ (Bhajarangi) ಸೇರಿದಂತೆ ಇನ್ನೂ ಕೆಲವು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದ ನಟಿ ಹಾಗೂ ರಾಜಕಾರಣಿಯೂ ಆಗಿದ್ದ ವಿದ್ಯಾ ಎಂಬುವರನ್ನು ಕೊಂದಿದ್ದ ಆಕೆಯ ಪತಿ ನಂದೀಶ್​ನನ್ನು ಪೊಲೀಸರು ಬಂಧಿಸಿದ್ದಾರೆ. ಮೇ 20 ರ ತಡರಾತ್ರಿ ಮೈಸೂರಿನ ಟಿ ನರಸೀಪುರ ತಾಲ್ಲೂಕು ತುರುಗನೂರಿನ ವಿದ್ಯಾರ ಪತಿ ನಂದೀಶ್​ರ ಮನೆಯಲ್ಲಿಯೇ ಆಕೆಯ ಕೊಲೆಯಾಗಿತ್ತು. ತಲೆಗೆ ಸುತ್ತಿಗೆಯಿಂದ ಬಲವಾದ ಪೆಟ್ಟು ತಿಂದು ವಿದ್ಯಾ ಮೃತಪಟ್ಟಿದ್ದರು. ಅಂದಿನಿಂದಲೂ ನಂದೀಶ್ ಪರಾರಿಯಾಗಿದ್ದರು, ಇದೀಗ ಪೊಲೀಸರು ನಂದೀಶ್​ನನ್ನು ಬಂಧಿಸಿದ್ದಾರೆ.

ವಿದ್ಯಾರ ಕೊಲೆ ಮಾಡಿದ್ದ ನಂದೀಶ್​ ಮೈಸೂರಿನಿಂದ ಪರಾರಿಯಾಗಿದ್ದ. ಆತ ಮಂಡ್ಯದಲ್ಲಿ ತಲೆಮರೆಸಿಕೊಂಡಿದ್ದಾನೆಂದು ಪತ್ತೆ ಮಾಡಿದ ಪೊಲೀಸರು ಘಟನೆ ನಡೆದ ಎರಡು ದಿನಗಳ ಒಳಗಾಗಿ ಆರೋಪಿಯನ್ನು ಬಂಧಿಸಿದ್ದಾರೆ. ಬನ್ನೂರು ಪೊಲೀಸ್ ಠಾಣೆ ಇನ್​ಸ್ಪೆಕ್ಟರ್ ನೇತೃತ್ವದಲ್ಲಿ ತನಿಖೆ ನಡೆಯುತ್ತಿದ್ದು, ಅವರ ನೇತೃತ್ವದ ತಂಡ ಆರೋಪಿ ನಂದೀಶ್​ನನ್ನು ಬಂಧಿಸಿ ಬನ್ನೂರು ಠಾಣೆಗೆ ಕರೆತಂದಿದೆ. ನಾಳೆ ನ್ಯಾಯಾಲಯದ ಮುಂದೆ ಆರೋಪಿಯನ್ನು ಹಾಜರುಪಡಿಸುವ ನಿರೀಕ್ಷೆ ಇದೆ.

ಇದನ್ನೂ ಓದಿ:Actress Vidya: ಪತಿಯಿಂದಲೇ ಕೊಲೆಯಾದ ‘ಭಜರಂಗಿ’ ನಟಿ ವಿದ್ಯಾ ನಂದೀಶ್, ಗಂಡ ಪರಾರಿ

ಕೌಟುಂಬಿಕ ಕಲಹದಿಂದಲೇ ನಂದೀಶ್, ನಟಿ, ರಾಜಕಾರಣಿ ವಿದ್ಯಾರನ್ನು ಕೊಲೆ ಮಾಡಿದ್ದಾನೆಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ನಟಿ ವಿದ್ಯಾ, 2018ರಲ್ಲಿ ನಂದೀಶ್ ಎಂಬುವರೊಟ್ಟಿಗೆ ವಿವಾಹವಾಗಿದ್ದರು. ಆರಂಭದ ಕೆಲ ದಿನಗಳ ಬಳಿಕ ಇಬ್ಬರ ನಡುವೆ ಮನಸ್ತಾಪ ಏರ್ಪಟ್ಟಿತ್ತು. ಇಬ್ಬರ ನಡುವೆ ಸಲಹ ಸಾಮಾನ್ಯವಾಗಿತ್ತು. ಆಗಾಗ್ಗೆ ಈ ದಂಪತಿಗಳು ಜಗಳ ಮಾಡುತ್ತಲೇ ಇದ್ದರು. ವಿಚ್ಛೇದನಕ್ಕೂ ಸಹ ಇವರು ಪ್ರಯತ್ನಿಸಿದ್ದರು ಆದರೆ ಪೋಷಕರು ಬುದ್ಧಿವಾದ ಹೇಳಿ ಇಬ್ಬರನ್ನೂ ಒಂದು ಮಾಡಿದ್ದರು. ಆದರೆ ಜಗಳ ಹಾಗೆಯೇ ಮುಂದುವರೆದಿತ್ತು. ಇತ್ತೀಚೆಗೆ ಮತ್ತೊಮ್ಮೆ ಇಬ್ಬರ ನಡುವೆ ಜಗಳ ನಡೆದಿತ್ತು. ಆಗ ವಿದ್ಯಾ, ಗಂಡನ ಮನೆಯಿರುವ ಮೈಸೂರಿನ ತುರಗನೂರಿನಿಂದ, ತಮ್ಮ ತವರು ಮನೆಯಾದ ಬೆಂಗಳೂರಿನ ಶ್ರೀರಾಮಪುರಕ್ಕೆ ಬಂದಿದ್ದರು.

ಮೇ 20 ರಂದು ಸಹ ನಂದೀಶ್ ಹಾಗೂ ವಿದ್ಯಾ ನಡುವೆ ಫೋನ್​ನಲ್ಲಿ ಜಗಳ ನಡೆದಿತ್ತು. ಜಗಳ ತಾರಕಕ್ಕೆ ಹೋಗಿ ವಿದ್ಯಾ ರಾತ್ರೋರಾತ್ರಿ ಶ್ರೀರಾಮಪುರದಿಂದ ಹೊರಟು ಮೈಸೂರಿನ ತುರುಗನೂರಿಗೆ ತಲುಪಿ ಗಂಡನೊಟ್ಟಿಗೆ ಮುಖಾ-ಮುಖಿ ಜಗಳಕ್ಕೆ ನಿಂತಿದ್ದರು. ಅಲ್ಲಿಯೂ ಸಹ ಜಗಳ ತಾರಕಕ್ಕೆ ಹೋದಾಗ ಪತಿ ನಂದೀಶ್, ಸುತ್ತಿಗೆಯಿಂದ ವಿದ್ಯಾ ಮೇಲೆ ಹಲ್ಲೆ ಮಾಡಿದ್ದಾರೆ. ಹೊಡೆತದ ರಭಸಕ್ಕೆ ವಿದ್ಯಾ ಸ್ಥಳದಲ್ಲಿಯೇ ಪ್ರಾಣ ಬಿಟ್ಟಿದ್ದಾರೆ. ಬಳಿಕ ನಂದೀಶ್ ಅಲ್ಲಿಂದ ಪರಾರಿಯಾಗಿದ್ದ, ಇದೀಗ ಪೊಲೀಸರಿಗೆ ಸಿಕ್ಕಿಬಿದ್ದಿದ್ದು, ಪ್ರಕರಣದ ವಿಚಾರಣೆ ನಡೆಯಲಿದೆ.

ವಿದ್ಯಾ, ಶಿವರಾಜ್ ಕುಮಾರ್ ನಟನೆಯ ‘ಭಜರಂಗಿ’, ‘ವೇದ’, ‘ಜೈ ಮಾರುತಿ 800’, ‘ಅಜಿತ್’ ಇನ್ನೂ ಕೆಲವು ಸಿನಿಮಾಗಳಲ್ಲಿ ಪೋಷಕ ನಟಿಯಾಗಿ ನಟಿಸಿದ್ದರು. ರಾಜಕೀಯದಲ್ಲೂ ಸಕ್ರಿಯರಾಗಿದ್ದ ವಿದ್ಯಾ, ಮೈಸೂರು ಜಿಲ್ಲಾ ಕಾಂಗ್ರೆಸ್​ನ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದರು. ವಿದ್ಯಾರ ಹತ್ಯೆಯನ್ನು ಆಸ್ತಿ ಹೊಡೆಯುವ ಸಂಚೆಂದು ಅವರ ಕುಟುಂಬಸ್ಥರು ಆರೋಪಿಸಿದ್ದು, ನಂದೀಶ್​ಗೆ ಕಠಿಣ ಶಿಕ್ಷೆಯಾಗಬೇಕೆಂದು ಒತ್ತಾಯಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:38 pm, Wed, 22 May 24