ಖ್ಯಾತ ನಟಿ ಅದಾ ಶರ್ಮಾ ಅವರು ಇಂದು (ಮೇ 11) ಜನ್ಮದಿನ (Adah Sharma Birthday) ಆಚರಿಸಿಕೊಳ್ಳುತ್ತಿದ್ದಾರೆ. ಹಿಂದಿ, ತೆಲುಗು, ತಮಿಳು ಮಾತ್ರವಲ್ಲದೇ ಕನ್ನಡ ಸಿನಿಪ್ರಿಯರಿಗೂ ಅವರು ಪರಿಚಿತರು. ಮನಸೆಳೆಯುವ ಸೌಂದರ್ಯ ಮತ್ತು ಗಮನಾರ್ಹ ನಟನೆ ಮೂಲಕ ಅದಾ ಶರ್ಮಾ (Adah Sharma) ಅವರು ಗುರುತಿಸಿಕೊಂಡಿದ್ದಾರೆ. ಕನ್ನಡದಲ್ಲಿ ಪುನೀತ್ ರಾಜ್ಕುಮಾರ್ ಜೊತೆ ತೆರೆ ಹಂಚಿಕೊಳ್ಳುವ ಅವಕಾಶ ಅದಾ ಶರ್ಮಾ ಅವರಿಗೆ ಸಿಕ್ಕಿತ್ತು. ‘ರಣವಿಕ್ರಮ’ (Ranavikrama Movie) ಸಿನಿಮಾದಲ್ಲಿ ಅದಾ ಶರ್ಮಾ ಮತ್ತು ಪುನೀತ್ ರಾಜ್ಕುಮಾರ್ ಜೋಡಿ ಆಗಿದ್ದರು. ಪವನ್ ಒಡೆಯರ್ ನಿರ್ದೇಶನದ ಆ ಸಿನಿಮಾವನ್ನು ನೋಡಿ ಫ್ಯಾನ್ಸ್ ಖುಷಿಪಟ್ಟಿದ್ದರು. ತೆಲುಗು, ತಮಿಳಿನ ಸ್ಟಾರ್ ಕಲಾವಿದರ ಜೊತೆ ನಟಿಸಿ ಫೇಮಸ್ ಆದ ಈ ಸುಂದರಿಗೆ ಹುಟ್ಟುಹಬ್ಬದ ಪ್ರಯುಕ್ತ ಶುಭಾಶಯಗಳು ಹರಿದುಬರುತ್ತಿವೆ. ಸಿನಿಮಾ ಮಾತ್ರವಲ್ಲದೇ ವೆಬ್ ಸಿರೀಸ್, ಕಿರುಚಿತ್ರ, ಮ್ಯೂಸಿಕ್ ವಿಡಿಯೋ ಸೇರಿದಂತೆ ಮನರಂಜನೆಯ ಹಲವು ಪ್ರಕಾರಗಳಲ್ಲಿ ಅದಾ ಶರ್ಮಾ ತೊಡಗಿಕೊಂಡಿದ್ದಾರೆ. ಈ ಜನಪ್ರಿಯ ಕಲಾವಿದೆಯ ಬಗೆಗಿನ ಕೆಲವು ಇಂಟರೆಸ್ಟಿಂಗ್ ವಿಚಾರಗಳು ಇಲ್ಲಿವೆ..
ಸಿನಿಮಾ ಬಗ್ಗೆ ಅದಾ ಶರ್ಮಾ ಅವರಿಗೆ ಚಿಕ್ಕ ವಯಸ್ಸಿನಲ್ಲೇ ಅಪಾರ ಆಸಕ್ತಿ ಮೂಡಿತ್ತು. ಹಾಗಾಗಿ ಅವರ ಶಾಲೆ ತೊರೆಯಲು ನಿರ್ಧರಿಸಿದ್ದರು. 10ನೇ ತರಗತಿಯಲ್ಲೇ ಅವರು ಶಾಲೆಗೆ ವಿದಾಯ ಹೇಳುವ ಬಗ್ಗೆ ಆಲೋಚಿಸಿದ್ದರು. ಆದರೆ ಅದಕ್ಕೆ ಅವರ ಪೋಷಕರು ಅವಕಾಶ ನೀಡಲಿಲ್ಲ. ಕೊನೇ ಪಕ್ಷ ಪಿಯುಸಿ ಶಿಕ್ಷಣವನ್ನಾದರೂ ಪಡೆಯುವಂತೆ ಸೂಚಿಸಿದರು. ಹಾಗಾಗಿ 12ನೇ ತರಗತಿವರೆಗೆ ಓದಿದ ಅದಾ ಶರ್ಮಾ ಅವರು ನಂತರ ಕಾಲೇಜಿಗೆ ಗುಡ್ಬೈ ಹೇಳಿ ನೇರವಾಗಿ ಚಿತ್ರರಂಗದ ಕಡೆಗೆ ಹೆಜ್ಜೆ ಹಾಕಿದರು.
ಯಾವುದೇ ಗಾಡ್ ಫಾದರ್ ಇಲ್ಲದೇ ಬೆಳೆದು ಬಂದವರು ಅದಾ ಶರ್ಮಾ. ಮುಂಬೈನಲ್ಲಿ ಅವರು ಅವಕಾಶಕ್ಕಾಗಿ ನಾಲ್ಕು ವರ್ಷ ಅಲೆದಾಡಿದರು. ನಂತರ ಅವರಿಗೆ ‘1920’ ಸಿನಿಮಾದಲ್ಲಿ ಅವಕಾಶ ಸಿಕ್ಕಿತು. 2008ರಲ್ಲಿ ತೆರೆಕಂಡ ಈ ಹಿಂದಿ ಚಿತ್ರದಲ್ಲಿ ಹಾರರ್ ಕಥೆ ಇತ್ತು. ಸವಾಲಿನ ಪಾತ್ರದಲ್ಲಿ ನಟಿಸುವ ಮೂಲಕ ಮೊದಲ ಸಿನಿಮಾದಲ್ಲೇ ಅದಾ ಶರ್ಮಾ ಅವರು ಎಲ್ಲರ ಗಮನ ಸೆಳೆದರು. ‘ಅತ್ಯುತ್ತಮ ಹೊಸ ನಟಿ’ ಫಿಲ್ಮ್ಫೇರ್ ಪ್ರಶಸ್ತಿಗೆ ಅವರು ನಾಮಿನೇಟ್ ಆಗಿದ್ದರು. 2013ರ ತನಕ ಬಾಲಿವುಡ್ನಲ್ಲೇ ಬ್ಯುಸಿ ಆಗಿದ್ದ ಅವರು, ನಂತರ ದಕ್ಷಿಣ ಭಾರತದ ಕಡೆಗೆ ಪಯಣ ಬೆಳೆಸಿದರು. ‘ಹಾರ್ಟ್ ಅಟ್ಯಾಕ್’ ಚಿತ್ರದಲ್ಲಿ ನಿತಿನ್ ಜೊತೆ ನಟಿಸಿ ಚಪ್ಪಾಳೆ ಗಿಟ್ಟಿಸಿಕೊಂಡರು. ಅಲ್ಲು ಅರ್ಜುನ್ ಅಭಿನಯದ ‘ಸನ್ ಆಫ್ ಸತ್ಯಮೂರ್ತಿ’ ಸಿನಿಮಾದಲ್ಲಿ ನಟಿಸುವ ಅವಕಾಶ ಕೂಡ ಅದಾ ಶರ್ಮಾ ಅವರಿಗೆ ಸಿಕ್ಕಿತು.
ಅದಾ ಶರ್ಮಾ ಅತ್ಯುತ್ತಮ ಡ್ಯಾನ್ಸರ್ ಕೂಡ ಹೌದು. ಬಾಲ್ಯದಲ್ಲಿಯೇ ನೃತ್ಯದ ಬಗ್ಗೆ ಆಸಕ್ತಿ ಹೊಂದಿದ್ದ ಅವರು ಬ್ಯಾಲೆ, ಕಥಕ್ ಮುಂತಾದ ಡ್ಯಾನ್ಸ್ ಪ್ರಕಾರಗಳಲ್ಲಿ ಪರಿಣತಿ ಹೊಂದಿದ್ದಾರೆ. ಅವರು ಬೆಲ್ಲಿ ಡ್ಯಾನ್ಸರ್ ಕೂಡ ಹೌದು. ಪ್ರಾಣಿಗಳ ಬಗ್ಗೆ ಅದಾ ಶರ್ಮಾ ಅವರು ಕಳಕಳಿ ಹೊಂದಿದ್ದಾರೆ. ದುಬಾರಿ ಬೆಲೆಯ ವಿದೇಶಿ ನಾಯಿಗಳನ್ನು ಸಾಕುವ ಬದಲು ಭಾರತದ ಬೀದಿ ನಾಯಿಗಳನ್ನು ಸಾಕುವಂತೆ ಅವರು ಜನರಲ್ಲಿ ಅರಿವು ಮೂಡಿಸುತ್ತಿದ್ದಾರೆ. ಈ ಕಾರ್ಯಕ್ಕಾಗಿ ಅವರು ಕೆಲವು ಸಂಘಟನೆಗಳ ಜೊತೆ ಕೈ ಜೋಡಿಸಿದ್ದಾರೆ.
ಈ ಸುದ್ದಿಯನ್ನು ಹಿಂದಿಯಲ್ಲಿ ಓದಲು ಇಲ್ಲಿ ಕ್ಲಿಕ್ ಮಾಡಿ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:12 am, Wed, 11 May 22