ನಟಿ ಅದ್ವಿತಿ ಶೆಟ್ಟಿ (Adhvithi Shetty) ಅವರು ಕನ್ನಡ ಚಿತ್ರರಂಗದಲ್ಲಿ ಬ್ಯುಸಿ ಇದ್ದಾರೆ. ಅವರ ನಟನೆಯ ‘ಬ್ರಹ್ಮ ಕಮಲ’ ಸಿನಿಮಾ ಸಾಕಷ್ಟು ಸುದ್ದಿಯಲ್ಲಿದೆ. ಅವರ ಸಿನಿಮಾ ದಾದಾ ಸಾಹೇಬ್ ಫಾಲ್ಕೆ ಚಿತ್ರೋತ್ಸವಕ್ಕೆ ಆಯ್ಕೆ ಆಗಿ, ಕಳೆದ ತಿಂಗಳು ಪ್ರದರ್ಶನ ಕಂಡಿತ್ತು. ಈಗ ವಿದೇಶದ ಸಿನಿಮೋತ್ಸವಕ್ಕೆ ‘ಬ್ರಹ್ಮ ಕಮಲ’ (Brahma Kamala Movie) ಆಯ್ಕೆ ಆಗಿದೆ. ‘ಮೆಲ್ಬೋರ್ನ್ ಇಂಡಿಯನ್ ಫಿಲ್ಮ್ ಫೆಸ್ಟಿವಲ್’ನಲ್ಲಿ ಈ ಸಿನಿಮಾ ಪ್ರದರ್ಶನ ಕಾಣುತ್ತಿದೆ ಅನ್ನೋದು ವಿಶೇಷ. ಸಿದ್ದು ಪೂರ್ಣಚಂದ್ರ ಅವರು ‘ಬ್ರಹ್ಮಕಮಲ’ ಚಿತ್ರನ್ನು ನಿರ್ದೇಶನ ಮಾಡಿದ್ದಾರೆ. ಈಗಾಗಲೇ ಪ್ರಪಂಚದ ವಿವಿಧ ಕಡೆಗಳಲ್ಲಿ ಈ ಸಿನಿಮಾ ಪ್ರದರ್ಶನ ಕಂಡಿದೆ. ಈಗ ‘ಮೆಲ್ಬೋರ್ನ್ ಇಂಡಿಯನ್ ಫಿಲ್ಮ್ ಫೆಸ್ಟಿವಲ್’ನಲ್ಲಿ ಸಿನಿಮಾ ಸ್ಕ್ರೀನಿಂಗ್ ಆಗಲಿದೆ. ವಿಶ್ವದ ಪ್ರತಿಷ್ಠಿತ ಚಲನಚಿತ್ರೋತ್ಸವಗಳಲ್ಲಿ ಇದೂ ಒಂದು.
ಈಗಾಗಲೇ ಫ್ರಾನ್ಸ್ನಲ್ಲಿ ನಡೆದ ‘ಈಡಿಪ್ಲೇ ಇಂಟರ್ ನ್ಯಾಷನಲ್ ಫಿಲ್ಮ್ ಫೆಸ್ಟಿವಲ್’ನಲ್ಲಿ ಅತ್ಯುತ್ತಮ ಚಿತ್ರ ಪ್ರಶಸ್ತಿಯನ್ನು ‘ಬ್ರಹ್ಮ ಕಮಲ’ ಪಡೆದಿದೆ. ಸಿಡ್ನಿಯ ‘ವಂಡರ್ ಲ್ಯಾಂಡ್ ಇಂಟರ್ ನ್ಯಾಷನಲ್ ಫಿಲ್ಮ್ ಫೆಸ್ಟಿವಲ್’ನಲ್ಲಿ ಬೆಸ್ಟ್ ಫೀಚರ್ ಫಿಲ್ಮ್ ಪ್ರಶಸ್ತಿ ಪಡೆದಿದೆ. ನೇಪಾಳದ ‘ಓಲ್ಡ್ ಮಾಂಕ್ ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್’ನಲ್ಲೂ ಬೆಸ್ಟ್ ಫೀಚರ್ ಫಿಲ್ಮ್ ಪ್ರಶಸ್ತಿ ಮತ್ತು ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಸಿನಿಮಾಗೆ ಸಿಕ್ಕಿದೆ. ‘ಇಂಡೋ ಸಿಂಗಾಪುರ್ ಫಿಲ್ಮ್ ಫೆಸ್ಟಿವಲ್’ನಲ್ಲಿ ಅದ್ವಿತಿ ಶೆಟ್ಟಿಗೆ ಅತ್ಯುತ್ತಮ ನಟಿ ಪ್ರಶಸ್ತಿ ಬಂದಿತ್ತು. ಈ ಯಶಸ್ಸಿನ ಬಗ್ಗೆ ಚಿತ್ರದ ನಾಯಕಿ ಅದ್ವಿತಿ ಶೆಟ್ಟಿ, ನಿರ್ದೇಶಕ ಪೂರ್ಣಚಂದ್ರ ಅವರು ಖುಷಿ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ದಾದಾ ಸಾಹೇಬ್ ಫಾಲ್ಕೆ ಚಿತ್ರೋತ್ಸವಕ್ಕೆ ಆಯ್ಕೆ ಆದ ಅದ್ವಿತಿ ಶೆಟ್ಟಿ ನಟನೆಯ ‘ಬ್ರಹ್ಮ ಕಮಲ’ ಸಿನಿಮಾ
ಅದ್ವಿತಿ ಶೆಟ್ಟಿ ಅವರು ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಹಲವು ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ಈಗ ‘ಬ್ರಹ್ಮ ಕಮಲ’ ಸಿನಿಮಾ ಮೂಲಕ ಅವರು ಜನಪ್ರಿಯತೆ ಹೆಚ್ಚಾಗಿದೆ. ‘ಬ್ರಹ್ಮ ಕಮಲ’ ಸಿನಿಮಾ ಮಹಿಳಾ ಪ್ರಧಾನ ಸಿನಿಮಾ. ಅದ್ವಿತಿ ಪಾತ್ರಕ್ಕೆ ಹೆಚ್ಚು ಪ್ರಾಧಾನ್ಯತೆ ಇದೆ. ಮಾರ್ಚ್ನಲ್ಲಿ ನಡೆದ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ ಈ ಚಿತ್ರ ಪ್ರದರ್ಶನ ಕಂಡಿತ್ತು. ಅದ್ವಿತಿ ಶೆಟ್ಟಿ ಜೊತೆಗೆ ಋತುಚೈತ್ರ, ಲೋಕೇಂದ್ರಸೂರ್ಯ, ಬಲ ರಾಜವಾಡಿ, ಗಂಡಸಿ ಸದಾನಂದಸ್ವಾಮಿ, ಕವಿತ ಕಂಬಾರ್, ರಾಧಾ ರಾಮಚಂದ್ರ ಮೊದಲಾದವರು ಆಭಿನಯಿಸಿದ್ದಾರೆ.
‘ದಾರಿ ಯಾವುದಯ್ಯ ವೈಕುಂಠಕೆ’ ಚಿತ್ರ ನಿರ್ದೇಶಿಸಿದ್ದ ಸಿದ್ದು ಪೂರ್ಣಚಂದ್ರ ಅವರು ‘ಬ್ರಹ್ಮ ಕಮಲ’ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಈ ಕಥೆ ರಾಮನಗರದ ಹತ್ತಿರದ ಒಂದು ಹಳ್ಳಿಯಲ್ಲಿ ನಡೆದ ನೈಜ ಘಟನೆಯನ್ನು ಆಧರಿಸಿ ಸಿದ್ಧಗೊಂಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ