ನಟಿ ಅದಿತಿ ಪ್ರಭುದೇವ ಅವರು ಸ್ಯಾಂಡಲ್ವುಡ್ನಲ್ಲಿ ಬೇಡಿಕೆ ಸೃಷ್ಟಿಸಿಕೊಂಡಿದ್ದಾರೆ. ಕಿರುತೆರೆಯಿಂದ ಬಣ್ಣದ ಬದುಕು ಆರಂಭಿಸಿದ ಅವರು ಈಗ ಹಿರಿತೆರೆಯಲ್ಲಿ ಮಿಂಚುತ್ತಿದ್ದಾರೆ. ಈಗ ಅವರ ಕಡೆಯಿಂದ ಗುಡ್ನ್ಯೂಸ್ ಸಿಕ್ಕಿದೆ! ಅವರು ಸೈಲೆಂಟ್ ಆಗಿ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಈ ಬೆನ್ನಲ್ಲೇ ಅವರು ಹುಡಗನೊಬ್ಬನ ಜತೆ ಇರುವ ಫೋಟೋ ಹಾಕಿದ್ದಾರೆ. ಈ ಫೋಟೋದಲ್ಲಿ ಉಂಗುರ ಹೈಲೈಟ್ ಆಗಿದೆ. ಅವರಿಗೆ ಎಲ್ಲರೂ ಶುಭಾಶಯ ಹೇಳುತ್ತಿದ್ದಾರೆ. ನಿಜಕ್ಕೂ ಅವರು ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರಾ ಎನ್ನುವ ಪ್ರಶ್ನೆಗೆ ಅವರ ಕಡೆಯಿಂದಲೇ ಉತ್ತರ ಸಿಗಬೇಕಿದೆ.
ಭಾನುವಾರ (ಡಿಸೆಂಬರ್ 26) ಅದಿತಿ ಅವರು ಹೊಳೆನರಸೀಪುರದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಈ ಕಾರ್ಯಕ್ರಮಕ್ಕೆ ಕೇವಲ ಆಪ್ತರಿಗೆ ಅಷ್ಟೇ ಆಹ್ವಾನ ಇತ್ತು ಎಂದು ಮೂಲಗಳು ತಿಳಿಸಿವೆ. ಫೋಟೋದಲ್ಲಿರುವ ಹುಡುಗ ಉದ್ಯಮಿ ಆಗಿದ್ದು, ದಾವಣಗೆರೆ ಮೂಲದವರು ಎಂದು ತಿಳಿದು ಬಂದಿದೆ.
ಇನ್ಸ್ಟಾಗ್ರಾಮ್ನಲ್ಲಿ ಫೋಟೋ ಪೋಸ್ಟ್ ಮಾಡಿರುವ ಅದಿತಿ, ‘ಒಂದು ಕನಸಿನಂತೆ ಈ ಕನಸು ನನಸಾಯಿತು’ ಎಂದು ಬರೆದುಕೊಂಡಿದ್ದಾರೆ. ಈ ಫೋಟೋದಲ್ಲಿ ಅದಿತಿ ಕೈಯಲ್ಲಿರುವ ಉಂಗುರ ಹೈಲೈಟ್ ಆಗಿದೆ. ಸದ್ಯ, ಈ ವಿಚಾರದ ಬಗ್ಗೆ ಅದಿತಿ ಮೌನ ವಹಿಸಿದ್ದಾರೆ. ಅವರ ಕಡೆಯಿಂದ ಈ ಬಗ್ಗೆ ಪ್ರತಿಕ್ರಿಯೆ ಬರಬೇಕಿದೆ.
ಇತ್ತೀಚೆಗೆ ಅದಿತಿ ನಟನೆಯ ‘ಆನ’ ಸಿನಿಮಾ ತೆರೆಗೆ ಬಂದಿತ್ತು. ಈ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಅಲ್ಲದೆ, ದೊಡ್ಡದೊಡ್ಡ ಸಿನಿಮಾಗಳು ಕೂಡ ಇದೇ ಸಂದರ್ಭದಲ್ಲಿ ರಿಲೀಸ್ ಆಗಿದ್ದರಿಂದ ಈ ಚಿತ್ರಕ್ಕೆ ಹೆಚ್ಚು ಚಿತ್ರಮಂದಿರ ಸಿಕ್ಕಿರಲಿಲ್ಲ.
ಬೆಳಗಾವಿಯಲ್ಲಿ ಕನ್ನಡ ಬಾವುಟಕ್ಕೆ ಅವಮಾನ ಆದ ಬಗ್ಗೆ ಅದಿತಿ ಮಾತನಾಡಿದ್ದರು. ‘ಕನ್ನಡ ಭಾಷೆ ಮತ್ತು ಧ್ವಜಕ್ಕೆ ಅವಮಾನ ಮಾಡಿದ್ರೆ ನಮ್ಮ ತಾಯಿಗೆ ಅವಮಾನ ಆದಂತೆ. ಸಾಮಾನ್ಯವಾಗಿ ನಮ್ಮ ತಾಯಿಗೆ ಯಾರಾದ್ರೂ ಸ್ವಲ್ಪ ಅಗೌರವ ತೋರಿಸಿದ್ದರೂ ನಾವು ಸಾಯ್ಸೋಕೂ ಹೇಸಲ್ಲ. ಅಷ್ಟು ಕೋಪ ಬರುತ್ತದೆ. ಅಂಥದ್ರಲ್ಲಿ ಕೋಟ್ಯಂತರ ಜನರ ತಾಯಿ ಕನ್ನಡಾಂಬೆಗೆ ಅವಮಾನ ಆಗಿದ್ದರೂ ನಾವು ಸುಮ್ಮನೆ ಇದ್ದೀವಿ ಅಂದ್ರೆ ನಾವು ಎಂಥವರು? ಅ ಪದ ಉಪಯೋಗಿಸೋಕೆ ನನಗೆ ಇಷ್ಟ ಇಲ್ಲ. ನಾವು ಅಂಥವರು ಅಂತ ಸಾಬೀತು ಮಾಡೋದು ಬೇಡ. ಎಲ್ಲರೂ ಒಟ್ಟಾಗಿ ಶಾಂತಿಯುತವಾಗಿ, ಸೂಕ್ತ ಮಾರ್ಗದಲ್ಲಿ ಇದಕ್ಕೆಲ್ಲ ಅಂತ್ಯ ಹಾಡಬೇಕು. ಒಂದು ದಿನ ಬಂದ್ ಮಾಡಿ ಸುಮ್ಮನಾಗುವುದಲ್ಲ’ ಎಂದು ಅದಿತಿ ಪ್ರಭುದೇವ ಹೇಳಿದ್ದರು.
ಇದನ್ನೂ ಓದಿ: ಆ ಸಿನಿಮಾ ನೋಡದೆಯೂ ಅದಿತಿಗೆ ಫ್ಯಾನ್ ಆದ ಮೇಘನಾ ರಾಜ್ ಸರ್ಜಾ; ಯಾವುದು ಆ ಚಿತ್ರ?
ಅದಿತಿ ಪ್ರಭುದೇವ ನಮ್ ಇಂಡಸ್ಟ್ರಿಯ ಮಹಾಲಕ್ಷ್ಮೀ ಎಂದ ‘ದುನಿಯಾ’ ವಿಜಯ್
Published On - 4:44 pm, Mon, 27 December 21