
ರಾಮ್ ಗೋಪಾಲ್ ವರ್ಮಾ (Ram Gopal Varma) ಅವರು ಇತ್ತೀಚೆಗೆ ಕನ್ನಡಿಗರನ್ನು ಕೆಣಕುವ ಕೆಲಸ ಮಾಡಿದ್ದರು. ‘ಕಮಲ್ ಹಾಸನ್ ಕ್ಷಮೆ ಕೇಳದಿದ್ದರೆ ಕರ್ನಾಟಕದಲ್ಲಿ ಥಗ್ ಲೈಫ್ ಸಿನಿಮಾವನ್ನು ಬ್ಯಾನ್ ಮಾಡಬೇಕು ಅಂತ ಬೆದರಿಕೆ ಹಾಕುವುದು ಹೊಸ ಥರದ ಗೂಂಡಾಗಿರಿ’ ಎಂದು ರಾಮ್ ಗೋಪಾಲ್ ಹೇಳಿ ಕನ್ನಡಿಗರ ಕೋಪಕ್ಕೆ ಕಾರಣ ಆಗಿದ್ದರು. ಈಗ ಅವರು ಅಮಿತಾಭ್ ಬಚ್ಚನ್ ಹೊಗಳುವ ಭರದಲ್ಲಿ ಅಣ್ಣಾವ್ರನ್ನು ಹೀಗಳೆದಿದ್ದಾರೆ. ಇದನ್ನು ಸಹಿಸೋಕೆ ಸಾಧ್ಯವಿಲ್ಲ ಎಂದು ಅನೇಕರು ಹೇಳಿದ್ದಾರೆ.
ರಾಮ್ ಗೋಪಾಲ್ ವರ್ಮಾ ನಿರ್ದೇಶಕ. ಆದರೆ, ಅವರು ನಿರ್ದೇಶನದ ಮೂಲಕ ಸುದ್ದಿ ಆಗುವುದು ಬಿಟ್ಟು ಅವರು ಸದಾ ವಿವಾದದ ಮೂಲಕ ಸುದ್ದಿ ಆಗುತ್ತಾರೆ. ವಿವಾದ ಮಾಡಿಕೊಳ್ಳಲು ಯಾವ ವಿಚಾರ ಸಿಗುತ್ತೆ ಎಂದು ನೋಡುತ್ತಾರೆ. ಇಷ್ಟೇ ಅಲ್ಲ, ತಮಗೆ ಸಂಬಂಧ ಇಲ್ಲದ ವಿಚಾರದಲ್ಲಿ ಕಡ್ಡಿ ಆಡಿಸಿ ಖುಷಿ ಪಡೆಯುತ್ತಾರೆ. ಈಗ ಅವರು ‘ಅಮಿತಾಭ್ ಬಚ್ಚನ್ ಅವರ ಚಿತ್ರಗಳನ್ನು ರಿಮೇಕ್ ಮಾಡಿ ರಾಜ್‌ಕುಮಾರ್ ಯಶಸ್ಸು ಕಂಡರು’ ಎಂದು ಹೇಳಿ ಸುದ್ದಿ ಆಗಿದ್ದಾರೆ.
‘70 ಮತ್ತು 80ರ ದಶಕಗಳಲ್ಲಿ ಅಮಿತಾಭ್ ಬಚ್ಚನ್ ಅವರ ಸಿನಿಮಾಗಳನ್ನು ರೀಮೇಕ್ ಮಾಡುವ ಮೂಲಕ ಅನೇಕರು ಖ್ಯಾತಿ ಪಡೆದರು. ರಜನಿಕಾಂತ್, ಚಿರಂಜೀವಿ, ಎನ್ ಟಿ ರಾಮರಾವ್ ಮತ್ತು ರಾಜ್‌ಕುಮಾರ್ ಅವರಂತಹ ನಟರು ಈ ರಿಮೇಕ್‌ಗಳ ಮೂಲಕ ಭಾರಿ ಜನಪ್ರಿಯತೆಯನ್ನು ಗಳಿಸಿದರು. 90 ರ ದಶಕದಲ್ಲಿ ಬಚ್ಚನ್ ಐದು ವರ್ಷಗಳ ವಿರಾಮ ತೆಗೆದುಕೊಂಡರು. ಈ ವೇಳೆ ಬಾಲಿವುಡ್ ನಿರ್ದೇಶಕರು ಕೂಡ ಜಾಗತಿಕವಾಗಿ ಹೆಚ್ಚು ಪ್ರಭಾವಿತರಾದರು. ಆದರೆ ದಕ್ಷಿಣದ ಸಿನಿಮಾ ನಿರ್ದೇಶಕರು ಮಾತ್ರ ಬಚ್ಚನ್ ಶೈಲಿಯಾದ ಮಾಸ್ ಮಸಾಲಾ ರೀತಿಯಲ್ಲಿ ಕಥೆ ಹೇಳುವುದನ್ನ ಮುಂದುವರಿಸಿದರು’ ಎಂದು ಆರ್ಜಿವಿ ಹೇಳಿದ್ದಾರೆ.
ಇದನ್ನೂ ಓದಿ: ಹುಡುಗಿಯರ ಖಾಸಗಿ ಭಾಗಕ್ಕೆ ಮಾರುಹೋದ ಆರ್ಜಿವಿ; ನಿರ್ದೇಶಕನ ಹೇಳಿಕೆಗೆ ತೀವ್ರ ಟೀಕೆ
ಸದ್ಯ ರಾಮ್ ಗೋಪಾಲ್ ವರ್ಮಾ ನೀಡಿರುವ ಹೇಳಿಕೆಯ ಬಗ್ಗೆ ಚರ್ಚೆಗಳು ಹುಟ್ಟಿಕೊಂಡಿವೆ. ಅವರು ಈ ರೀತಿಯಲ್ಲಿ ಹೇಳಿಕೆ ನೀಡಬಾರದಿತ್ತು ಎಂದು ಅನೇಕರು ಹೇಳಿದ್ದಾರೆ. ಏಕೆಂದರೆ ರಾಜ್‌ಕುಮಾರ್ ಅವರು ಸಾಕಷ್ಟು ಪೌರಾಣಿಕ ಪಾತ್ರಗಳನ್ನು ಮಾಡಿದ್ದಾರೆ. ಇಲ್ಲಿನ ಮಣ್ಣಿನ ಕಥೆಯನ್ನು ಜನರ ಎದುರು ಇಟ್ಟಿದ್ದಾರೆ. ಈ ಕಾರಣಕ್ಕೆ ಅವರು ಎಲ್ಲರಿಗೂ ಇಷ್ಟ ಆದರೇ ಹೊರತು, ರಿಮೇಕ್ ಮಾಡಿ ಫೇಮಸ್ ಆದರು ಎಂಬುದರಲ್ಲಿ ಅರ್ಥವಿಲ್ಲ ಎಂದು ಅನೇಕರು ಅಭಿಪ್ರಾಯ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.