‘ಗೂಳಿ’ ನಟಿಗೆ ಕ್ಯಾನ್ಸರ್ ಬಳಿಕ ಮತ್ತೊಂದು ಕಾಯಿಲೆ; ಮಾಸುತ್ತಿದೆ ಚರ್ಮದ ಬಣ್ಣ

| Updated By: ರಾಜೇಶ್ ದುಗ್ಗುಮನೆ

Updated on: Jan 16, 2023 | 3:11 PM

ಇನ್​​ಸ್ಟಾಗ್ರಾಮ್​​ನಲ್ಲಿ ಮಮತಾ ಅವರು ಕೆಲ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ಅವರು ದೇಹದ ಕೆಲ ಭಾಗಗಳಲ್ಲಿ ಬಣ್ಣ ಕಳೆದುಕೊಂಡಿರುವುದು ಗೊತ್ತಾಗುತ್ತದೆ.

‘ಗೂಳಿ’ ನಟಿಗೆ ಕ್ಯಾನ್ಸರ್ ಬಳಿಕ ಮತ್ತೊಂದು ಕಾಯಿಲೆ; ಮಾಸುತ್ತಿದೆ ಚರ್ಮದ ಬಣ್ಣ
ಮಮತಾ ಮೋಹನ್​ದಾಸ್
Follow us on

ಮಲಯಾಳಂ ನಟಿ ಮಮತಾ ಮೋಹನ್​ದಾಸ್ ಅವರು ಸುದೀಪ್ (Sudeeep) ನಟನೆಯ ‘ಗೂಳಿ’ ಚಿತ್ರದಲ್ಲಿ ನಾಯಕಿ ಆಗಿ ನಟಿಸಿದ್ದರು. ಇದು ಅವರು ಕನ್ನಡದಲ್ಲಿ ನಟಿಸಿದ ಮೊದಲ ಹಾಗೂ ಕೊನೆಯ ಸಿನಿಮಾ. ಅವರು ಈ ಮೊದಲು ಕ್ಯಾನ್ಸರ್ ಗೆದ್ದು ಬಂದಿದ್ದರು. ಈಗ ಮಮತಾಗೆ (Mamta Mohandas) ಮತ್ತೊಂದು ಕಾಯಿಲೆ ಕಾಣಿಸಿಕೊಂಡಿದೆ. ಅದರ ಹೆಸರು ವಿಟಲೈಗೋ. ಈ ಕಾಯಿಲೆ ಕಾಣಿಸಿಕೊಂಡ ನಂತರದಲ್ಲಿ ಅವರ ಚರ್ಮದ ಬಣ್ಣ ಅಲ್ಲಲ್ಲಿ ಮಾಸುತ್ತಿದೆ. ಈ ಸುದ್ದಿಯನ್ನು ಮಮತಾ ಸೋಶಿಯಲ್ ಮೀಡಿಯಾದಲ್ಲಿ ತಿಳಿಸಿದ್ದಾರೆ.

ಇನ್​​ಸ್ಟಾಗ್ರಾಮ್​​ನಲ್ಲಿ ಮಮತಾ ಅವರು ಕೆಲ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ಅವರು ದೇಹದ ಕೆಲ ಭಾಗಗಳಲ್ಲಿ ಬಣ್ಣ ಕಳೆದುಕೊಂಡಿರುವುದು ಗೊತ್ತಾಗುತ್ತದೆ. ‘ಸೂರ್ಯನೇ ನಾನು ನಿನ್ನನ್ನು ಅಪ್ಪಿಕೊಳ್ಳುತ್ತಿದ್ದೇನೆ. ನಾನು ಬಣ್ಣವನ್ನು ಕಳೆದುಕೊಳ್ಳುತ್ತಿದ್ದೇನೆ. ಸಾಕಷ್ಟು ಮುಂಜಾನೆ ನಿನ್ನ ಕಿರಣಗಳನ್ನು ನೋಡಬೇಕೆಂದು ನಿನಗಿಂತ ಮೊದಲು ನಾನು ಎದ್ದಿದ್ದೇನೆ. ನಿನ್ನ ಕೃಪೆಗೆ ನಾನು ಸದಾ ಋಣಿ’ ಎಂದು ಅವರು ಬರೆದುಕೊಂಡಿದ್ದಾರೆ.

ಮಮತಾ ಬೇಗ ಚೇತರಿಕೆ ಕಾಣಲಿ ಎಂದು ಫ್ಯಾನ್ಸ್ ಹಾಗೂ ಸೆಲೆಬ್ರಿಟಿಗಳು ಪ್ರಾರ್ಥಿಸಿದ್ದಾರೆ. ಅವರ ಪೋಸ್ಟ್​ಗೆ ಸಾಕಷ್ಟು ಕಮೆಂಟ್​ಗಳು ಬಂದಿವೆ. ಅವರು ಈ ರೋಗವನ್ನು ಗೆದ್ದು ಬರಲಿ ಎಂದು ಅನೇಕರು ಹಾರೈಸಿದ್ದಾರೆ. ಸದ್ಯ ಈ ಕಾಯಿಲೆಗೆ ಮಮತಾ ಚಿಕಿತ್ಸೆ ಪಡೆಯುತ್ತಿದ್ದಾರೆ.

ಏನಿದು ವಿಟಲೈಗೋ ಕಾಯಿಲೆ?

ವಿಟಲೈಗೋ ಕಾಯಿಲೆ ಕಾಣಿಸಿಕೊಂಡರೆ ವ್ಯಕ್ತಿಯ ಚರ್ಮದ ಮೇಲೆ ಬಿಳಿ ಬಣ್ಣದ ಮಚ್ಚೆಗಳು ಕಾಣಿಸಿಕೊಳ್ಳುತ್ತವೆ. ಚರ್ಮದ ಬಣ್ಣಕ್ಕೆ ಕಾರಣವಾದ ಮೆಲನಿನ್ ಕೊರತೆಯಿಂದ ಈ ರೀತಿ ಆಗುತ್ತದೆ. ಮೆಲನೋಸೈಟ್​ನಲ್ಲಿ ಮೆಲನಿನ್ ಉತ್ಪಾದನೆ ಆಗುತ್ತದೆ. ಈ ಕಾಯಿಲೆ ಕಾಣಿಸಿಕೊಂಡರೆ ಮೆಲನೋಸೈಟ್​​ಗಳು ನಾಶವಾಗುತ್ತವೆ.

ಕ್ಯಾನ್ಸರ್​​ನಿಂದ ಬಳಲಿದ್ದ ನಟಿ

2010ರಲ್ಲಿ ಮಮತಾಗೆ ಕ್ಯಾನ್ಸರ್ ಕಾಣಿಸಿಕೊಂಡಿತ್ತು. ಕ್ಯಾನ್ಸರ್​​ಗೆ ಚಿಕಿತ್ಸೆ ಪಡೆಯಲು ಅವರು ಅಮೆರಿಕಕ್ಕೆ ತೆರಳಿದ್ದರು. ಅಲ್ಲಿ ಚಿಕಿತ್ಸೆ ಪಡೆದು ಕ್ಯಾನ್ಸರ್​ನಿಂದ ಮುಕ್ತಿ ಪಡೆದಿದ್ದರು. ಈಗ ಅವರಿಗೆ ಮತ್ತೊಂದು ಕಾಯಿಲೆ ಕಾಣಿಸಿಕೊಂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 2:42 pm, Mon, 16 January 23