‘ಶೈತಾನ್’ (Shaitaan Movie) ರೀತಿಯ ಸೂಪರ್ ಹಿಟ್ ಚಿತ್ರಗಳಿಗೆ ಸಂಗೀತ ಸಂಯೋಜನೆ ಮಾಡಿರೋ ಹಿಂದಿ ಗಾಯಕ, ಸಂಗೀತ ನಿರ್ದೇಶಕ ಅಮಿತ್ ತ್ರಿವೇದಿ ಈಗ ಕನ್ನಡಕ್ಕೆ ಬಂದಿದ್ದಾರೆ. ಶಿವರಾಜ್ಕುಮಾರ್ ಹಾಗೂ ಡಾಲಿ ಧನಂಜಯ್ ನಟನೆಯ ‘ಉತ್ತರಕಾಂಡ’ ಚಿತ್ರಕ್ಕೆ ಅವರು ಸಂಗೀತ ಸಂಯೋಜನೆ ಮಾಡಲಿದ್ದಾರೆ. ಈ ವಿಚಾರವನ್ನು ತಂಡದವರೇ ರಿವೀಲ್ ಮಾಡಿದ್ದಾರೆ. ಇದನ್ನು ಕೇಳಿ ಫ್ಯಾನ್ಸ್ ಸಖತ್ ಖುಷಿಪಟ್ಟಿದ್ದಾರೆ.
ಅಮಿತ್ ತ್ರಿವೇದಿ ಅವರು ಭಾರತ ಚಿತ್ರರಂಗದ ಬೇಡಿಕೆಯ ಸಂಗೀತ ನಿರ್ದೇಶಕರಲ್ಲಿ ಒಬ್ಬರು. 2008ರಲ್ಲಿ ‘ಆಮಿರ್’ ಸಿನಿಮಾ ಮೂಲಕ ಸಂಗೀತ ಸಂಯೋಜಕರಾಗಿ ಬಣ್ಣದ ಲೋಕಕ್ಕೆ ಕಾಲಿಟ್ಟರು. 2009ರಲ್ಲಿ ‘ದೇವ್.ಡಿ’ ಸಿನಿಮಾಗೆ ಸಂಗೀತ ಸಂಯೋಜನೆ ಮಾಡಿ ರಾಷ್ಟ್ರಪ್ರಶಸ್ತಿ ಪಡೆದರು. ‘ವೇಕ್ ಅಪ್ ಸಿಡ್’, ‘ಕ್ವೀನ್’, ‘ಇಂಗ್ಲಿಷ್ ವಿಂಗ್ಲಿಷ್’, ‘ಉಡ್ತಾ ಪಂಜಾಬ್’, ‘ಡಿಯರ್ ಜಿಂದಗಿ, ‘ಅಂಧಾದೂನ್’, ‘ಶೈತಾನ್’ ಸೇರಿ ಅನೇಕ ಸೂಪರ್ ಹಿಟ್ ಚಿತ್ರಗಳಲ್ಲಿ ಅವರು ಕೆಲಸ ಮಾಡಿದ್ದಾರೆ. ಈಗ ಅವರು ಕನ್ನಡ ಸಿನಿಮಾಗೆ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ.
‘ಉತ್ತರಕಾಂಡ’ ಪ್ರೋಮೋ ಈ ಮೊದಲು ಬಿಡುಗಡೆ ಆಗಿತ್ತು. ಆಗ ಚರಣ್ ರಾಜ್ ಸಂಗೀತ ಸಂಯೋಜನೆ ಮಾಡಿದ್ದರು. ಈಗ ಸಿನಿಮಾಗೆ ಅಮಿತ್ ತ್ರಿವೇದಿ ಸಂಗೀತ ಸಂಯೋಜನೆ ಮಾಡಲಿದ್ದಾರೆ. ಈ ಬಗ್ಗೆ ನಿರ್ದೇಶಕ ರೋಹಿತ್ ಪದಕಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅವರ ಸಂಗೀತ ಸಂಯೋಜನೆಯಿಂದ ಸಿನಿಮಾದ ಮೆರಗು ಹೆಚ್ಚಲಿದೆ ಎನ್ನುವ ಭರವಸೆಯಲ್ಲಿದ್ದಾರೆ.
ಇದನ್ನೂ ಓದಿ: ‘ಉತ್ತರಕಾಂಡ’ ಸಿನಿಮಾದಿಂದ ಹೊರಬಂದ ರಮ್ಯಾ; ಅಭಿಮಾನಿಗಳಿಗೆ ನಿರಾಸೆ
‘ಉತ್ತರಕಾಂಡ’ ಸಿನಿಮಾ ಉತ್ತರಕರ್ನಾಟಕದ ಹಳ್ಳಿಗಾಡಿನ ಕಥೆಯನ್ನು ಹೊಂದಿದೆ. ಸಖತ್ ರಗಡ್ ಭಾಷೆಯೊಂದಿಗೆ ಸಿನಿಮಾ ಮೂಡಿ ಬರುತ್ತಿದೆ. ಇಂಥ ಕಥೆಗೆ ಅಮಿತ್ ತ್ರಿವೇದಿ ಅವರ ಸಂಗೀತದಿಂದ ತೂಕ ಹೆಚ್ಚಲಿದೆ ಎನ್ನುವ ಭರವಸೆ ಚಿತ್ರತಂಡದ್ದು. ‘ಉತ್ತರಕಾಂಡ’ ಚಿತ್ರವನ್ನು ಕೆಆರ್ಜಿ ಸ್ಟೂಡಿಯೋಸ್ ಬ್ಯಾನರ್ ಅಡಿಯಲ್ಲಿ ಕಾರ್ತಿಕ್ ಗೌಡ ಮತ್ತು ಯೋಗಿ ಜಿ. ರಾಜ್ ನಿರ್ಮಾಣ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ಶಿವರಾಜ್ಕುಮಾರ್ ಮತ್ತು ಡಾಲಿ ಧನಂಜಯ್ ಮುಖ್ಯ ಭೂಮಿಕೆ ನಿರ್ವಹಿಸಿದ್ದಾರೆ. ಏಪ್ರಿಲ್ 15ರಿಂದ ಸಿನಿಮಾದ ಶೂಟಿಂಗ್ ಆರಂಭ ಆಗಲಿದೆ. ಈ ಸಿನಿಮಾದಲ್ಲಿ ರಮ್ಯಾ ನಟಿಸಲಿದ್ದಾರೆ ಎಂದು ಘೋಷಣೆ ಆಗಿತ್ತು. ಆದರೆ, ಅವರು ಸಿನಿಮಾದಿಂದ ಹೊರನಡೆದಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ