AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಉತ್ತರಕಾಂಡ’ ಸಿನಿಮಾದಿಂದ ಹೊರಬಂದ ರಮ್ಯಾ; ಅಭಿಮಾನಿಗಳಿಗೆ ನಿರಾಸೆ

ಡಾಲಿ ಧನಂಜಯ್​ ನಟನೆಯ ‘ಉತ್ತರಕಾಂಡ’ ಸಿನಿಮಾದಲ್ಲಿ ರಮ್ಯಾ ದಿವ್ಯ ಸ್ಪಂದನಾ ಅವರು ನಟಿಸುತ್ತಿದ್ದರು. ಆದರೆ ಆ ಚಿತ್ರದಿಂದ ಅವರೀಗ ಹೊರಬಂದಿದ್ದಾರೆ. ಸ್ವತಃ ಅವರೇ ಈ ವಿಚಾರವನ್ನು ತಿಳಿಸಿದ್ದಾರೆ. ರಮ್ಯಾ ಅವರ ಈ ನಿರ್ಧಾರದಿಂದ ಅಭಿಮಾನಿಗಳಿಗೆ ಬೇಸರ ಆಗಿದೆ. ರಮ್ಯಾ ನಟಿಸುತ್ತಾರೆ ಎಂಬ ಕಾರಣಕ್ಕೆ ಸಿನಿಪ್ರಿಯರು ಈ ಚಿತ್ರದ ಮೇಲೆ ಸಖತ್​ ನಿರೀಕ್ಷೆ ಇಟ್ಟುಕೊಂಡಿದ್ದರು.

‘ಉತ್ತರಕಾಂಡ’ ಸಿನಿಮಾದಿಂದ ಹೊರಬಂದ ರಮ್ಯಾ; ಅಭಿಮಾನಿಗಳಿಗೆ ನಿರಾಸೆ
ರಮ್ಯಾ, ಡಾಲಿ ಧನಂಜಯ್
ಮದನ್​ ಕುಮಾರ್​
|

Updated on: Mar 26, 2024 | 5:03 PM

Share

ಒಂದು ಕಾಲದಲ್ಲಿ ಸಖತ್​ ಬ್ಯುಸಿ ನಟಿಯಾಗಿದ್ದ ರಮ್ಯಾ (Ramya) ಅವರು ರಾಜಕೀಯದ ಕಾರಣಕ್ಕೆ ಸಡನ್​ ಆಗಿ ನಟನೆಯಿಂದ ದೂರಾಗಿದ್ದರು. ಆದರೆ ಇತ್ತೀಚಿನ ವರ್ಷಗಳಲ್ಲಿ ಅವರು ಮತ್ತೆ ಸಿನಿಮಾಗಳ ಬಗ್ಗೆ ಆಸಕ್ತಿ ತೋರಿಸಲು ಆರಂಭಿಸಿದ್ದು ಅವರ ಅಭಿಮಾನಿಗಳಿಗೆ ಖುಷಿ ನೀಡಿತ್ತು. ‘ಉತ್ತರಕಾಂಡ’ (Uttarakaanda) ಸಿನಿಮಾವನ್ನು ಅವರು ಒಪ್ಪಿಕೊಂಡಾಗ ನಿರೀಕ್ಷೆ ಡಬಲ್​ ಆಗಿತ್ತು. ಟೀಸರ್​ನಲ್ಲಿ ಅವರ ಖಡಕ್​ ಡೈಲಾಗ್​ ಕೂಡ ಹೈಲೈಟ್​ ಆಗಿತ್ತು. ಆದರೆ ಈಗ ರಮ್ಯಾ (Ramya Divya Spandana) ಅವರು ತಮ್ಮ ಅಭಿಮಾನಿಗಳಿಗೆ ನಿರಾಸೆ ಮಾಡಿದ್ದಾರೆ. ‘ಉತ್ತರಕಾಂಡ’ ಸಿನಿಮಾದಿಂದ ಹೊರಬಂದಿರುವುದಾಗಿ ಅವರು ಬ್ರೇಕಿಂಗ್​ ನ್ಯೂಸ್​ ನೀಡಿದ್ದಾರೆ.

ಸೋಶಿಯಲ್​ ಮೀಡಿಯಾದಲ್ಲಿ ರಮ್ಯಾ ಅವರು ಆ್ಯಕ್ಟೀವ್​ ಆಗಿದ್ದಾರೆ. ಇನ್​ಸ್ಟಾಗ್ರಾಮ್​ ಸ್ಟೋರಿ ಮೂಲಕ ಅವರು ಈ ಸುದ್ದಿ ನೀಡಿದ್ದಾರೆ. ‘ಉತ್ತರಕಾಂಡ’ ಸಿನಿಮಾದಲ್ಲಿ ತಾವು ನಟಿಸುತ್ತಿಲ್ಲ ಎಂಬುದನ್ನು ಅವರು ತಿಳಿಸಿದ್ದಾರೆ. ಹಾಗಂತ ರಾಜಕೀಯದಲ್ಲಿ ತೊಡಗಿಕೊಳ್ಳಬಹುದೇ ಎಂಬ ಅನುಮಾನ ಮೂಡುವುದು ಸಹಜ. ಆದರೆ ಆ ಬಗ್ಗೆ ಕೂಡ ಅವರು ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ: ‘ಸಿದ್ಲಿಂಗು 2’ ಚಿತ್ರದಲ್ಲಿ ರಮ್ಯಾ ಇರ್ತಾರಾ? ಉತ್ತರಿಸಿದ ‘ಲೂಸ್ ಮಾದ’ ಯೋಗಿ

‘ಡೇಟ್ಸ್​ ಕೊರತೆಯಿಂದಾಗಿ ನಾನು ಉತ್ತರಕಾಂಡದಲ್ಲಿ ಕೆಲಸ ಮಾಡುತ್ತಿಲ್ಲ. (ಸಿನಿಮಾ ಮತ್ತು ರಾಜಕೀಯದ ಕೆಲಸಗಳನ್ನು ನಾನು ಸದ್ಯಕ್ಕೆ ಸ್ಥಗಿತಗೊಳಿಸಿದ್ದೇನೆ.) ಚಿತ್ರತಂಡಕ್ಕೆ ನಾನು ಶುಭ ಹಾರೈಸುತ್ತೇನೆ’ ಎಂದು ರಮ್ಯಾ ಅವರು ಬರೆದುಕೊಂಡಿದ್ದಾರೆ. ಡಾಲಿ ಧನಂಜಯ್​ ನಟನೆಯ ‘ಉತ್ತರಕಾಂಡ’ ಸಿನಿಮಾಗೆ ರೋಹಿತ್​ ಪದಕಿ ನಿರ್ದೇಶನ ಮಾಡುತ್ತಿದ್ದಾರೆ. ರಮ್ಯಾ ಅವರು ಸಿನಿಮಾದಿಂದ ಹೊರಬಂದಿರುವುದರಿಂದ ಚಿತ್ರದ ಕೆಲಸಗಳು ಇನ್ನಷ್ಟು ತಡವಾಗಬಹುದು.

ಇದನ್ನೂ ಓದಿ: ‘ಒಂದು ಸರಳ ಪ್ರೇಮಕಥೆ’ಯ ಕೊಂಡಾಡಿದ ರಮ್ಯಾ, ವಿನಯ್ ಗುಣಗಾನ

ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ರಮ್ಯಾ ಅವರು ರಾಜ್​ ಬಿ. ಶೆಟ್ಟಿ ನಿರ್ದೇಶನದ ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಸಿನಿಮಾದ ಮೂಲಕ ಕಮ್​ಬ್ಯಾಕ್​ ಮಾಡಬೇಕಿತ್ತು. ಆ ಸಿನಿಮಾವನ್ನು ನಿರ್ಮಾಣ ಮಾಡುವುದರ ಜೊತೆಗೆ ನಾಯಕಿಯಾಗಿ ಅಭಿನಯಿಸಲು ಅವರು ಮೊದಲು ಒಪ್ಪಿಕೊಂಡಿದ್ದರು. ಆದರೆ ನಂತರದಲ್ಲಿ ಅವರು ಕೇವಲ ನಿರ್ಮಾಪಕಿಯಾಗಿ ಮಾತ್ರ ಮುಂದುವರಿದರು. ನಾಯಕಿಯ ಸ್ಥಾನಕ್ಕೆ ಬೇರೆ ನಟಿಯ ಆಗಮನ ಆಗಿತ್ತು. ಈಗ ‘ಉತ್ತರಕಾಂಡ’ ಚಿತ್ರದಿಂದಲೂ ರಮ್ಯಾ ಹೊರಬಂದಿರುವುದು ಸಜಹವಾಗಿಯೇ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.