‘ಒಂದು ಸರಳ ಪ್ರೇಮಕಥೆ’ಯ ಕೊಂಡಾಡಿದ ರಮ್ಯಾ, ವಿನಯ್ ಗುಣಗಾನ
Ondu Sarala Prema Kathe: ನಟಿ ರಮ್ಯಾ ‘ಒಂದು ಸರಳ ಪ್ರೇಮಕಥೆ’ ಸಿನಿಮಾ ವೀಕ್ಷಿಸಿದ್ದು, ಸಿನಿಮಾದ ಬಗ್ಗೆ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಜೊತೆಗೆ ವಿನಯ್ ರಾಜ್ಕುಮಾರ್ ಬಗ್ಗೆ ಪ್ರೀತಿಭರಿತ ಮಾತುಗಳನ್ನಾಡಿದ್ದಾರೆ.
ವಿನಯ್ ರಾಜ್ಕುಮಾರ್ (Vinay Rajkumar) ನಟಿಸಿರುವ ‘ಒಂದು ಸರಳ ಪ್ರೇಮಕಥೆ’ ಸಿನಿಮಾ ನಿನ್ನೆಯಷ್ಟೆ ಬಿಡುಗಡೆ ಆಗಿದೆ. ಸಿಂಪಲ್ ಸುನಿ ನಿರ್ದೇಶಿಸಿರುವ ಈ ಸಿನಿಮಾದ ಬಗ್ಗೆ ಧನಾತ್ಮಕ ಅಭಿಪ್ರಾಯಗಳು ಎಲ್ಲೆಡೆ ವ್ಯಕ್ತವಾಗುತ್ತಿದೆ. ಕೆಲವು ಸಿನಿಮಾ ತಾರೆಯರು ಸಹ ‘ಒಂದು ಸರಳ ಪ್ರೇಮಕಥೆ’ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ. ಇದೀಗ ನಟಿ ರಮ್ಯಾ ಸಹ ‘ಒಂದು ಸರಳ ಪ್ರೇಮಕಥೆ’ ಸಿನಿಮಾ ವೀಕ್ಷಿಸಿದ್ದು, ಸಿನಿಮಾದ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಜೊತೆಗೆ ವಿನಯ್ ಜೊತೆಗಿನ ತಮ್ಮ ಹಳೆಯ ಚಿತ್ರವನ್ನು ಸಹ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
ಹೆಸರೇ ಹೇಳುವಂತೆ ‘ಒಂದು ಸರಳ ಪ್ರೇಮಕಥೆ’ ಸಿನಿಮಾ ಸರಳ, ಸುಂದರವಾದ ಪ್ರೇಮಕಥೆ. ಸಿನಿಮಾದಲ್ಲಿ ಸಾಕಷ್ಟು ಫ್ರೆಶ್ನೆಸ್ ಹಾಗೂ ಹಾಸ್ಯ ಅಡಕವಾಗಿದೆ. ಗೆಳೆಯರು, ಕುಟುಂಬದವರೊಟ್ಟಿಗೆ ಸೇರಿ ಖುಷಿಯಿಂದ ವೀಕ್ಷಿಸಬಹುದಾದ ಸಿನಿಮಾವನ್ನು ಸಿಂಪಲ್ ಸುನಿ ಮಾಡಿದ್ದಾರೆ. ಸಿನಿಮಾ ನೋಡಲು ಕುಟುಂಬದವರು ಬರುತ್ತಿದ್ದು ಚಿತ್ರಮಂದಿರಗಳು ತುಂಬುತ್ತಿವೆ. ಕನ್ನಡದ ಸಿನಿಮಾ ಒಂದಕ್ಕೆ ಈ ಮಟ್ಟಿಗೆ ಕುಟುಂಬಗಳು ಬರುತ್ತಿರುವುದು ಬಹಳ ಖುಷಿಯ ವಿಚಾರ’ ಎಂದಿದ್ದಾರೆ ರಮ್ಯಾ.
ಇದನ್ನೂ ಓದಿಮದುವೆ ಆಗುವ ಹುಡುಗಿ ಹೇಗಿರಬೇಕು: ವಿನಯ್ ರಾಜ್ಕುಮಾರ್ ಕಲ್ಪನೆ ಹೀಗಿದೆ
‘ವಿನಯ್ ನೀವು ಹಾಸ್ಯ, ಭಾವುಕ ಸನ್ನಿವೇಶ ಎಲ್ಲವನ್ನೂ ಅದ್ಭುತವಾಗಿ ನಿರ್ವಹಿಸಿದ್ದೀರಿ. ನಿಮ್ಮ ಈವರೆಗಿನ ಪಯಣ ಅದ್ಭುತವಾದುದು. ನಿಮ್ಮ ಮೊದಲ ಸಿನಿಮಾದಿಂದ ಇಷ್ಟು ದೂರ ನೀವು ಬಂದಿದ್ದೀರಿ. ನೀವು ಒಂದು ಪರಂಪರೆಯನ್ನು ಪ್ರತಿನಿಧಿಸುತ್ತೀರ. ಆ ಪರಂಪರೆಯ ಗೌರವವನ್ನು ಚೆನ್ನಾಗಿ ಕಾಪಾಡುತ್ತಿದ್ದೀರಿ. ನಿಮ್ಮ ಪಯಣದ ಬಗ್ಗೆ ನನಗೆ ಬಹಳ ಹೆಮ್ಮೆ ಇದೆ. ಇದನ್ನು ಬರೆಯುತ್ತಾ ನಾನು ಭಾವುಕಳಾಗುತಿದ್ದೇನೆ. ನಾನು ಪ್ರತಿಬಾರಿ ನಿನ್ನನ್ನು ಕರೆಯುವಂತೆ, ‘ಐ ಲವ್ ಯು ವಿನೂ’ ಎಂದಷ್ಟೆ ಹೇಳುತ್ತೇನೆ’ ಎಂದಿದ್ದಾರೆ ರಮ್ಯಾ.
‘ಕುಟುಂಬದವರನ್ನು, ಸ್ನೇಹಿತರನ್ನು ‘ಒಂದು ಸರಳ ಪ್ರೇಮಕಥೆ’ ಸಿನಿಮಾಕ್ಕೆ ಕರೆದೊಯ್ಯಿರಿ. ಸಿನಿಮಾವು ಒಂದು ಬೆಚ್ಚನೆಯ ಅನುಭವವನ್ನು ನಿಮಗೆ ಕೊಡುತ್ತದೆ. ಆ ಅನುಭವ ಬಹಳ ಕಾಲದ ವರೆಗೆ ನಿಮ್ಮೊಂದಿಗೆ ಉಳಿಯಲಿದೆ’ ಎಂದಿದ್ದಾರೆ ರಮ್ಯಾ. ‘ಒಂದು ಸರಳ ಪ್ರೇಮಕಥೆ’ ಸಿನಿಮಾಕ್ಕೆ ರಮ್ಯಾ ಮೊದಲಿನಿಂದಲೂ ಬೆಂಬಲ ನೀಡುತ್ತಾ ಬಂದಿದ್ದಾರೆ. ಸಿನಿಮಾದ ಹಾಡು ಸಹ ಅವರು ಬಿಡುಗಡೆ ಮಾಡಿ ಶುಭ ಹಾರೈಸಿದ್ದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ