ಮಲೈಕಾಳ ರಿಪೋರ್ಟ್ ಹರಿಬಿಟ್ಟವರ ವಿರುದ್ಧ ಹರಿಹಾಯ್ದ ಅಮೃತಾ

  • Updated On - 9:40 pm, Tue, 8 September 20
ಮಲೈಕಾಳ ರಿಪೋರ್ಟ್ ಹರಿಬಿಟ್ಟವರ ವಿರುದ್ಧ ಹರಿಹಾಯ್ದ ಅಮೃತಾ

ಸೋಮವಾರದಂದು ಖ್ಯಾತ ನಟಿ ಮತ್ತು ಡ್ಯಾನ್ಸರ್ ಮಲೈಕಾ ಅರೋರಾ, ತನ್ನ ಕೊವಿಡ್-19 ಲ್ಯಾಬ್ ರಿಪೋರ್ಟ್ ಪಾಸಿಟಿವ್ ಬಂದಿದೆ ಎಂದು ಹೇಳುವ ಮೊದಲೇ ಆಕೆಯ ಮೆಡಿಕಲ್ ರಿಪೋರ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಲು ಶುರುವಾಗಿದ್ದು ಮಲೈಕಾಳ ಸಹೋದರಿ ಮತ್ತು ನಟಿ ಅಮೃತಾ ಅರೋರಾಗೆ ಪಿತ್ತ ನೆತ್ತಿಗೇರುವಂತೆ ಮಾಡಿದೆ.

ತನ್ನ ಇನ್​ಸ್ಟಾಗ್ರಾಮ್ ಪೋಸ್ಟ್​ನಲ್ಲಿ ರಿಪೋರ್ಟನ್ನು ಹರಿಬಿಟ್ಟವರ ವಿರುದ್ಧ ಕಿಡಿ ಕಾರಿರುವ ಅಮೃತಾ, ತನ್ನಕ್ಕ ಸೆಲೆಬ್ರಿಟಿಯಾಗಿರುವುದಕ್ಕೆ ದಂಡ ತೆರಬೇಕಾಗಿದೆ ಎಂದಿದ್ದಾರೆ. ‘‘ಹೊಸ ಪ್ರಕ್ರಿಯೊಂದು ಪ್ರಾರಂಭವಾಗಿರುವಂತಿದೆ. ನನ್ನ ಅಕ್ಕನ ರಿಸಲ್ಟ್ ಹಲವಾರು ವಾಟ್ಸ್ಯಾಪ್ ಗ್ರೂಪ್​ಗಳಲ್ಲಿ, ಫೇಸ್​ಬುಕ್ ಅಕೌಂಟ್​ಗಳಲ್ಲಿ ಇನ್ನಿತರ ಮಾಧ್ಯಮಗಳಲ್ಲಿ ಪೋಸ್ಟ್ ಮಾಡಲಾಗಿದೆ. ಆಕೆ ತನ್ನ ರಿಸಲ್ಟ್ ನೆಗೆಟಿವ್ ಬರಲಿ ಎಂಬ ನಿರೀಕ್ಷೆಯೊಂದಿಗೆ ದೇವರಿಗೆ ಪ್ರಾರ್ಥನೆ ಮಾಡುತ್ತಿರಬೇಕಾದರೆ, ಉಳಿದವರಿಗೇನು ಅದರಿಂದ ಸಮಸ್ಯೆ? ಅವರು ಮಾಡಿರೋದು ಸರಿಯಾ? ಮಾನವರಾಗಿ ನಾವು ಎತ್ತ ಸಾಗುತ್ತಿದ್ದೇವೆ ಅನ್ನೋದನ್ನ ಯೋಚನೆ ಮಾಡಿದರೆ, ಮನಸ್ಸು ಕ್ಷೋಬೆಗೊಳಗಾಗುತ್ತದೆ, ದುಖಃವಾಗುತ್ತದೆ’’ ಎಂದು ಅಮೃತಾ ಬರೆದುಕೊಂಡಿದ್ದಾರೆ.

ಮತ್ತೊಂದು ಪೋಸ್ಟ್​ನಲ್ಲಿ ಅಮೃತಾ, ‘‘ಮಲೈಕಾಳ ರಿಪೋರ್ಟ್ ಪೋಸ್ಟ್ ಮಾಡುವುದರಿಂದ ಅವರಿಗಾಗುವ ಪ್ರಯೋಜನವಾದರೂ ಏನು? ಒಬ್ಬ ಜವಾಬ್ದಾರಿಯುತ ಮಹಿಳೆಯಾಗಿ ಆಕೆಯೇ ಲ್ಯಾಬ್ ರಿಸಲ್ಟ್ ಎಲ್ಲರೊಂದಿಗೆ ಹಂಚಿಕೊಳ್ಳುತ್ತಿದ್ದಳು. ಕೆಲವರಂತೂ ಯಾವ ಮಟ್ಟಕ್ಕೆ ಇಳಿದು ಪೋಸ್ಟ್ ಮಾಡಿದ್ದಾರೆಂದರೆ, ಅವಳಿಗೆ ತಕ್ಕ ಶಾಸ್ತಿ ಆಗಿದೆ, ಹಾಗೆಯೇ ಆಗಬೇಕಿತ್ತು ಎಂದಿದ್ದಾರೆ! ಇದರರ್ಥ ಏನು?’’ ಎಂದು ಬರೆದಿದ್ದಾರೆ.

Click on your DTH Provider to Add TV9 Kannada