
ಯೂಟ್ಯೂಬ್ ಕಿರುಚಿತ್ರಗಳ ಮೂಲಕ ಫೇಮಸ್ ಆದ ಸುಧಾಕರ್ ಗೌಡ (Sudhakar Gowda) ಅಲಿಯಾಸ್ ಸ್ಟ್ರಾಂಗ್ ಸುಧಾಕರ ಅವರು ‘ಅಮೃತ ಅಂಜನ್’ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರ ಜನವರಿ 30ರಂದು ಬಿಡುಗಡೆ ಆಗಲಿದೆ. ಸೋಶಿಯಲ್ ಮೀಡಿಯಾದಲ್ಲಿ ಸುಧಾಕರ್ ಅವರು ಬಹಳ ಆ್ಯಕ್ಟೀವ್ ಆಗಿದ್ದಾರೆ. ಈ ಮೊದಲು ಧ್ರುವ ಸರ್ಜಾ ನಟನೆಯ ‘ಮಾರ್ಟಿನ್’ ಸಿನಿಮಾ ಬಿಡುಗಡೆ ಆದಾಗ ಸುಧಾಕರ್ ಅವರು ವಿಮರ್ಶೆ (Martin Review) ಮಾಡಿದ್ದು ವಿವಾದಕ್ಕೆ ಕಾರಣ ಆಗಿತ್ತು. ಆ ಘಟನೆಗೆ ಸಂಬಂಧಿಸಿದಂತೆ ಸುಧಾಕರ್ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಅಲ್ಲದೇ, ತಾವು ನಟಿಸಿರುವ ‘ಅಮೃತ ಅಂಜನ್’ (Amrutanjan) ಸಿನಿಮಾಗೆ ಧ್ರುವ ಸರ್ಜಾ ಅವರಿಂದಲೇ ಬೆಂಬಲ ಸಿಗುವ ನಿರೀಕ್ಷೆ ಇದೆ ಎಂದು ಅವರು ಹೇಳಿದ್ದಾರೆ.
‘ನಾನು ಈಗ ಚಿತ್ರರಂಗಕ್ಕೆ ಬಂದವನಲ್ಲ. 2016ರಲ್ಲಿ ಎಸ್. ನಾರಾಯಣ್ ನಿರ್ದೇಶನದ ಮನಸು ಮಲ್ಲಿಗೆ ಸಿನಿಮಾದಲ್ಲಿ ಸ್ನೇಹಿತನ ಪಾತ್ರ ಮಾಡಿದ್ದೆ. ಇಡೀ ಸಿನಿಮಾದಲ್ಲಿ ಆ ಪಾತ್ರ ಇತ್ತು. 10 ವರ್ಷಗಳಿಂದಲೂ ಚಿತ್ರರಂಗದಲ್ಲಿ ಇದ್ದೇನೆ. ಆದರೆ ಜನರಿಗೆ ಗೊತ್ತಾಗಿದ್ದು ನಮ್ಮ ಶಾರ್ಟ್ ಫಿಲ್ಮ್ ಮತ್ತು ರೀಲ್ಸ್ ಮೂಲಕ. ಅಂದು ನಾನು ಅನಿಸಿದ್ದನ್ನು ಹೇಳಿದ್ದೆ. ನಾನು ಹೇಳಿದ ರೀತಿ ತಪ್ಪು ಇರಬಹುದು ಅಥವಾ ನಾನು ಹೇಳಿದ್ದೇ ತಪ್ಪು ಇರಬಹುದು. ನನಗೆ ಗೊತ್ತಿಲ್ಲ. ಅಂದು ಕ್ಷಮೆ ಕೇಳಿದ್ದೆ, ಇಂದು ಕೂಡ ಕ್ಷಮೆ ಕೇಳುತ್ತೇನೆ’ ಎಂದು ಸುಧಾಕರ್ ಅವರು ಹೇಳಿದ್ದಾರೆ.
‘ತಪ್ಪಾಗಿದೆ, ದಯವಿಟ್ಟು ಕ್ಷಮಿಸಿ. ಅದನ್ನು ಯಾರೂ ಕೂಡ ಮನಸ್ಸಿನಲ್ಲಿ ಇಟ್ಟುಕೊಳ್ಳಬೇಡಿ. ಅದೇ ಕೊನೇ ಸಿನಿಮಾ. ಆ ಬಳಿಕ ನಾನು ಯಾವುದೇ ಸಿನಿಮಾಗೆ ವಿಮರ್ಶೆಯನ್ನೇ ಮಾಡಿಲ್ಲ’ ಎಂದು ಸುಧಾಕರ್ ಹೇಳಿದ್ದಾರೆ. ‘ನಮ್ಮ ಸಿನಿಮಾದ ನಿರ್ದೇಶಕರು ಧ್ರುವ ಸರ್ಜಾ ಅವರಿಗೆ ಆಪ್ತರಾಗಿದ್ದಾರೆ. ಅವರ ಕೆಲಸವನ್ನು ಧ್ರುವ ಸರ್ಜಾ ಅವರು ಹೊಗಳಿದ್ದರು. ನಮ್ಮ ಸಿನಿಮಾದ ಶೂಟಿಂಗ್ ಬಗ್ಗೆಯೂ ಅವರಿಗೆ ಮಾಹಿತಿ ಇತ್ತು. ಈಗ ಚರ್ಚೆ ನಡೆಯುತ್ತಿದೆ. ಈಗ ಧ್ರುವ ಸರ್ಜಾ ಅವರು ಬಂದರೆ ನಮಗೆ ಸಹಾಯ ಆಗುತ್ತದೆ. ಅವರು ಈ ವಿಡಿಯೋ ನೋಡುತ್ತಿದ್ದರೆ ನಾನು ಕೂಡ ಮನವಿ ಮಾಡಿಕೊಳ್ಳುತ್ತೇನೆ’ ಎಂದಿದ್ದಾರೆ ಸುಧಾಕರ್.
‘ನಮ್ಮದು ಕಾಮಿಡಿ ಸಿನಿಮಾ. ಅದರ ಜೊತೆಗೆ ಅಮ್ಮ-ಅಪ್ಪನ ಸೆಂಟಿಮೆಂಟ್ ಹಾಗೂ ಒಂದು ಚಿಕ್ಕ ಲವ್ ಸ್ಟೋರಿ ಕೂಡ ಇದೆ. ಏನೋ ಹೊಸದಾಗಿ ಮಾಡಿದ್ದೇವೆ ಅನ್ನೋ ಥರ ಏನಿಲ್ಲ. ಸಿನಿಮಾ ನೋಡುವವರು ಒಂದು ಗಂಟೆ ಬಿದ್ದು ಬಿದ್ದು ನಗುವ ರೀತಿ ಸಿನಿಮಾ ಇರುತ್ತದೆ. ಜನರಿಗೆ ಬೇಕಿರುವುದೇ ಮನರಂಜನೆ. ನಾವು ಕಾಮಿಡಿ ಆಯ್ಕೆ ಮಾಡಿಕೊಂಡು ಜನರನ್ನು ನಗಿಸುತ್ತೇನೆ’ ಎಂದು ಸುಧಾಕರ್ ಹೇಳಿದ್ದಾರೆ.
ಇದನ್ನೂ ಓದಿ: ಸಿನಿಮಾ ಸಾಹಸಕ್ಕೆ ಕೈ ಹಾಕಿದ ‘ಅಮೃತಾಂಜನ್’ ಕಿರುಚಿತ್ರದ ಹುಡುಗರು
‘ನಮ್ಮ ಟ್ರೇಲರ್ ಬಿಡುಗಡೆ ಆದ್ಮೇಲೆ ಸಿನಿಮಾಗೆ ಹೈಪ್ ಸಿಗುತ್ತದೆ. ಟ್ರೇಲರ್ ನೋಡಿದರೆ ಈ ಹುಡುಗರು ಏನೋ ಮಾಡಿದ್ದಾರೆ ಎಂಬುದು ಜನರಿಗೆ ತಿಳಿಯುತ್ತದೆ. ಟ್ರೇಲರ್ ರೀಚ್ ಆದರೆ ಖಂಡಿತವಾಗಿಯೂ ಜನರು ಚಿತ್ರಮಂದಿರಕ್ಕೆ ಬಂದು ನಮ್ಮ ಸಿನಿಮಾ ನೋಡುತ್ತಾರೆ. ಪ್ರೇಕ್ಷಕರಿಗೆ ನಾವು ನಿರಾಸೆ ಮಾಡಲ್ಲ’ ಎಂದು ಸುಧಾಕರ್ ಅವರು ಭರವಸೆ ವ್ಯಕ್ತಪಡಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.