ಡಾಲಿ ಧನಂಜಯ್ (Daali Dhananjay) ನಟನೆಯ ಹೊಯ್ಸಳ (Hoysala) ಸಿನಿಮಾ ಇಂದಷ್ಟೆ (ಮಾರ್ಚ್ 30) ಬಿಡುಗಡೆ ಆಗಿದೆ. ಸಿನಿಮಾದಲ್ಲಿ ಅಮೃತಾ ಐಯ್ಯಂಗಾರ್ ನಾಯಕಿಯಾಗಿ ನಟಿಸಿದ್ದು, ಡಾಲಿ ಹಾಗೂ ಅಮೃತಾ ಅವರಿಗೆ ಇದು ಮೂರನೇ ಸಿನಿಮಾ. ಈ ಜೋಡಿಯನ್ನು ಪ್ರೇಕ್ಷಕರು ಬಹುವಾಗಿ ಮೆಚ್ಚಿದ್ದಾರೆ. ತೆರೆಯ ಮೇಲೆ ಒಳ್ಳೆಯ ಕೆಮಿಸ್ಟ್ರಿ ಹೊಂದಿರುವ ಡಾಲಿ ಹಾಗೂ ಅಮೃತಾ ನಿಜ ಜೀವನದಲ್ಲಿಯೂ ಒಳ್ಳೆಯ ಗೆಳೆಯರು. ಹೊಯ್ಸಳ ಸಿನಿಮಾದ ಪ್ರಚಾರಕ್ಕೆ ನೀಡಿದ ಸಂದರ್ಶನದಲ್ಲಿ ಅಮೃತಾ ಐಯ್ಯಂಗಾರ್ ಮೊದಲ ಬಾರಿ ಡಾಲಿ ಧನಂಜಯ್ ಅವರನ್ನು ಭೇಟಿಯಾದ ಸಂದರ್ಭ ನೆನಪಿಸಿಕೊಂಡಿದ್ದಾರೆ. ಡಾಲಿಯನ್ನು ತಾವು ಒಂದು ಹಳೆಯ ಬಾರಿನಲ್ಲಿ ಭೇಟಿಯಾಗಿದ್ದಾಗಿ ಹೇಳಿದ್ದಾರೆ!
ಅದಾಗಲೇ ಲವ್ ಮಾಕ್ಟೆಲ್ ಸೇರಿದಂತೆ ಇನ್ನೂ ಎರಡು ಸಿನಿಮಾಗಳಲ್ಲಿ ನಟಿಸಿದ್ದ ಅಮೃತಾ ಐಯ್ಯಂಗಾರ್ ಮೊದಲ ಬಾರಿಗೆ ಡಾಲಿ ಜೊತೆ ನಟಿಸಿದ್ದು ಪಾಪ್ಕಾರ್ನ್ ಮಂಕಿ ಟೈಗರ್ ಸಿನಿಮಾದಲ್ಲಿ. ಆ ಸಿನಿಮಾದ ಸೆಟ್ನಲ್ಲಿಯೇ ಅಂತೆ ಮೊದಲು ಅಮೃತಾ, ಡಾಲಿಯವರನ್ನು ಭೇಟಿಯಾಗಿದ್ದು. ”ಅದೊಂದು ಬಹಳ ಹಳೆಯ ಬಾರು, ಅದರ ಒಳಕ್ಕೆ ನನ್ನನ್ನು ಸೂರಿ ಅವರು ಕರೆದುಕೊಂಡು ಹೋದರು. ಅಲ್ಲಿ ಕೊಳಚೆ ಮಧ್ಯೆ, ರಕ್ತ ಮೆತ್ತಿಕೊಂಡು ಡಾಲಿ ಕೂತಿದ್ದರು. ನನಗೆ ನೋಡಿದಾಗ ಇವರೇನಾ ಧನಂಜಯ್ ಎಂದು ಆಶ್ಚರ್ಯವಾಯಿತು. ಆದರೆ ಅಂದು ಭಯಾನಕವಾಗಿ ಡಾಲಿ ಕಾಣುತ್ತಿದ್ದರು. ಕೈ ಕೊಡಲು ಸಹ ನನಗೆ ಭಯವಾಗಿತ್ತು” ಎಂದು ಅಮೃತಾ ಐಯ್ಯಂಗಾರ್ ನೆನಪಿಸಿಕೊಂಡಿದ್ದಾರೆ.
ಆದರೆ ತಾವು ಸದಾ ಡಾಲಿಯ ಅಭಿಮಾನಿ ಎಂದಿರುವ ಅಮೃತಾ, ಅವರನ್ನು ಭೇಟಿಯಾಗುವ ಮುಂಚೆಯೂ ನಾನು ಅವರ ಅಭಿಮಾನಿ ಆಗಿದ್ದೆ. ಈಗಲೂ ನಾನು ಅವರ ಅಭಿಮಾನಿಯೇ. ಅವರೊಟ್ಟಿಗೆ ಹಲವು ನಟಿಯರು ಹೇಳುತ್ತಿರುತ್ತಾರೆ, ಡಾಲಿ ಬಹಳ ಬೆಂಬಲಿಸುತ್ತಾರೆ, ಚೆನ್ನಾಗಿ ಮಾತನಾಡುತ್ತಾರೆ, ನಟಿಸಲು ಸ್ಪೂರ್ತಿ ತುಂಬುತ್ತಾರೆ ಎಂದೆಲ್ಲ. ನಾನು ಮೂರನೇ ಬಾರಿ ಅವರೊಟ್ಟಿಗೆ ನಟಿಸುತ್ತಿದ್ದೇನೆ ಎಂಬುದು ನನಗೆ ಖುಷಿ ಎಂದಿದ್ದಾರೆ ಅಮೃತಾ.
ಇದನ್ನೂ ಓದಿ: Hoysala Review: ಹೆಚ್ಚಿಗೆ ಸುತ್ತಾಡಿದರೂ ಮೆಚ್ಚುಗೆ ಗಳಿಸುವ ಹೊಯ್ಸಳ; ಆ್ಯಕ್ಷನ್ ಜೊತೆ ಜಾತಿ, ಪ್ರೀತಿ, ನೀತಿ ಇತ್ಯಾದಿ..
ನಟ ಡಾಲಿ ಸಹ ಅದೇ ಸಂದರ್ಶನದಲ್ಲಿ, ಅಮೃತಾ ಅವರನ್ನು ಮೊದಲು ಭೇಟಿಯಾಗಿದ್ದು ಆಗ ಅವರ ಮನದಲ್ಲಿ ಮೂಡಿದ ವಿಷಯ ಹೇಳಿಕೊಂಡಿದ್ದು, ಅಮೃತಾ ಅವರನ್ನು ಪಾಪ್ ಕಾರ್ನ್ ಮಂಕಿ ಟೈಗರ್ ಸಿನಿಮಾದಲ್ಲಿ ಭೇಟಿಯಾದೆ. ಮೊದಲು ಭೇಟಿಯಾದಾಗ ಅವರು ಗರ್ಭಿಣಿಯ ವೇಷ ತೊಟ್ಟಿದ್ದರು. ಆದರೆ ಮೊದಲ ಬಾರಿಗೆ ಅವರೊಟ್ಟಿಗೆ ಕೆಲಸ ಮಾಡಿದಾಗಲೇ ಈ ಹುಡುಗಿಯಲ್ಲಿ ಟ್ಯಾಲೆಂಟ್ ಇದೆ, ಇವರಲ್ಲಿ ಹಠ ಇದೆ ಎನಿಸಿತ್ತು. ಅದ್ಭುತವಾಗಿ ನಟಿಸುತ್ತಿದ್ದಾರೆ. ಹಲವು ಸಿನಿಮಾಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅವರಿಗೆ ಒಳ್ಳೆಯ ಭವಿಷ್ಯವಿದೆ ಎಂದಿದ್ದಾರೆ.
ಧನಂಜಯ್ ಹಾಗೂ ಅಮೃತಾ, ಪಾಪ್ ಕಾರ್ನ್ ಮಂಕಿ ಟೈಗರ್, ಬಡವ ರಾಸ್ಕಲ್ ಹಾಗೂ ಇದೀಗ ಹೊಯ್ಸಳ ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ. ಮೊದಲೆರಡು ಸಿನಿಮಾಗಳಲ್ಲಿ ಗರ್ಲ್ಫ್ರೆಂಡ್ ಆಗಿ ನಟಿಸಿದ್ದ ಡಾಲಿ-ಅಮೃತಾ ಈ ಸಿನಿಮಾದಲ್ಲಿ ದಂಪತಿಯಾಗಿ ನಟಿಸಿದ್ದಾರೆ. ಹೊಯ್ಸಳ ಸಿನಿಮಾವು ಮಾರ್ಚ್ 30 ರಂದು ಬಿಡುಗಡೆ ಆಗಿದ್ದು, ಸಿನಿಮಾದಲ್ಲಿ ಗುಲ್ಟು ನವೀನ್ ವಿಲನ್ ಆಗಿ ನಟಿಸಿದ್ದಾರೆ. ರಾಜೇಶ್ ನಟರಂಗ, ಅಚ್ಯುತ್ ಕುಮಾರ್, ಕೆಜಿಎಫ್ ಖ್ಯಾತಿಯ ಆಂಡ್ರೊ, ನಾಗಭೂಷಣ್ ಇನ್ನೂ ಹಲವು ನಟರಿದ್ದಾರೆ.