ದಾದಾ ಸಾಹೇಬ್ ಫಾಲ್ಕೆ ಸ್ವೀಕರಿಸಿ ಜನ್ಮಭೂಮಿ, ಕರ್ಮಭೂಮಿಗೆ ನಮಿಸಿದ ಅನಂತ್ ನಾಗ್

ಗುಜರಾತ್​​ನ ಏಕತಾ ನಗರದಲ್ಲಿ ಹಮ್ಮಿಕೊಳ್ಳಲಾಗಿದ್ದ 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಟ ಅನಂತ್ ನಾಗ್​ ಅವರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ‘ದಾದಾ ಸಾಹೇಬ್ ಫಾಲ್ಕೆ’ ಪ್ರಶಸ್ತಿ ನೀಡಿ ಗೌರವಿಸಿದರು. ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾತನಾಡಿದ ಅನಂತ್ ನಾಗ್, ‘ಜನ್ಮ ಭೂಮಿ, ಕರ್ಮ ಭೂಮಿ, ಧರ್ಮ ಭೂಮಿ’ಗೆ ನಮಿಸಿದರು.

ದಾದಾ ಸಾಹೇಬ್ ಫಾಲ್ಕೆ ಸ್ವೀಕರಿಸಿ ಜನ್ಮಭೂಮಿ, ಕರ್ಮಭೂಮಿಗೆ ನಮಿಸಿದ ಅನಂತ್ ನಾಗ್
Anant Nag Speech

Updated on: Sep 22, 2026 | 6:11 PM

ಮುಖ್ಯಾಂಶಗಳು

  • ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಸ್ವೀಕರಿಸಿದ ಅನಂತ್ ನಾಗ್
  • ಜನ್ಮ ಭೂಮಿ, ಕರ್ಮಭೂಮಿ, ಧರ್ಮ ಭೂಮಿಗೆ ನಮಿಸಿದ ಅನಂತ್ ನಾಗ್
  • ಪ್ರಶಸ್ತಿಯನ್ನು ಎಲ್ಲರಿಗೂ ಅರ್ಪಿಸಿದ ಅನಂತ್ ನಾಗ್

ಕನ್ನಡ ಚಿತ್ರರಂಗದ ಹಿರಿಯ ನಟ ಅನಂತ್ ನಾಗ್ ಅವರಿಗೆ, ಭಾರತದ ಸಿನಿಮಾ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದವರಿಗೆ ಕೊಡಲಾಗುವ ಸರ್ವಶ್ರೇಷ್ಠ ಪ್ರಶಸ್ತಿ ಆಗಿರುವ ‘ದಾದಾ ಸಾಹೇಬ್ ಫಾಲ್ಕೆ’ ಪ್ರಶಸ್ತಿಯನ್ನು ನೀಡಲಾಯ್ತು. ಗುಜರಾತ್​​ನ ಏಕತಾ ನಗರದಲ್ಲಿ ಹಮ್ಮಿಕೊಳ್ಳಲಾಗಿದ್ದ 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಟ ಅನಂತ್ ನಾಗ್​ ಅವರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ‘ದಾದಾ ಸಾಹೇಬ್ ಫಾಲ್ಕೆ’ ಪ್ರಶಸ್ತಿ ನೀಡಿ ಗೌರವಿಸಿದರು. ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾತನಾಡಿದ ಅನಂತ್ ನಾಗ್, ‘ಜನ್ಮ ಭೂಮಿ, ಕರ್ಮ ಭೂಮಿ, ಧರ್ಮ ಭೂಮಿ’ಗೆ ನಮಿಸಿದರು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅನಂತ್ ನಾಗ್, ತಮ್ಮ ಜೀವನ ಮತ್ತು ಸಿನಿಮಾ ಪಯಣದ ಬಗ್ಗೆ ಚುಟುಕಾಗಿ ಮಾಹಿತಿ ಹಂಚಿಕೊಂಡರು. ಮೊದಲ 12-13 ವರ್ಷ ನಾನು ಮಠದಲ್ಲಿ ಇದ್ದೆ, ಬಳಿಕ ಮುಂಬೈಗೆ ಹೋದೆ, ಮುಂಬೈ ನಲ್ಲಿ ‘ಚೈತನ್ಯ ಮಹಾಪ್ರಭು’ ಸ್ವಾಮೀಜಿ ಬಗ್ಗೆ ಮಾಡಿದ ನಾಟಕ ನನ್ನ ನಟನಾ ವೃತ್ತಿಯ ಮೊದಲ ನಾಟಕವಾಯ್ತು, ಅಲ್ಲಿಂದಲೇ ನಟನಾ ವೃತ್ತಿ ಆರಂಭವಾಯ್ತು. ಮಠದಲ್ಲಿದ್ದಾಗ ಆದಿಶಂಕರಾಚಾರ್ಯ ಭಜಗೋವಿಂದಂ ಓದಿದ್ದೆ, ‘ಉದರನಿಮಿತ್ತಂ ಬಹುಕೃತ ವೇಷಂ’, ಕನಕದಾಸರ, ‘ಎಲ್ಲರೂ ಮಾಡುವುದು ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ’ ಎಂಬ ಮಾತಿನಂತೆ ಉದರ ನಿಮಿತ್ತವಾಗಿ ಆರಂಭಿಸಿದ ವೃತ್ತಿ ಇದು’ ಎಂದು ನೆನಪು ಮಾಡಿಕೊಂಡರು.

ಮುಂಬೈನಲ್ಲಿ ಇದ್ದ ಐದು ವರ್ಷಗಳಲ್ಲಿ 50 ನಾಟಕಗಳಲ್ಲಿ ನಟಿಸಿದೆ. ಬಳಿಕ ಸಿನಿಮಾನಲ್ಲಿ ಅವಕಾಶ ಸಿಕ್ಕಿತು, ಮೊದಲು ಕನ್ನಡದಲ್ಲಿ ನಟಿಸಲು ಅವಕಾಶ ಸಿಕ್ಕಿತು ಬಳಿಕ ಹಿಂದಿಯಲ್ಲಿ. ಎಂಎಸ್ ಸತ್ಯು, ಶ್ಯಾಮ್ ಬೆನಗಲ್ ಇನ್ನೂ ಹಲವರೊಟ್ಟಿಗೆ ಕೆಲಸ ಮಾಡಿದೆ. ಆಗ ಹೊಸ ಅಲೆಯ ಸಿನಿಮಾ, ಆರ್ಟ್ ಸಿನಿಮಾಗಳಿಗೆ ಅವಕಾಶ ಇತ್ತು. ಆ ಬಳಿಕ ಕರ್ನಾಟಕದಲ್ಲಿ ಅವಕಾಶ ನನಗೆ ಹೆಚ್ಚಾಗಿತ್ತು. ಹಾಗಾಗಿ ಕರ್ನಾಟಕಕ್ಕೆ ಮರಳಿದೆ. ಕರ್ನಾಟಕವೇ ನನ್ನ ಕರ್ಮಭೂಮಿ ಆಯ್ತು’ ಎಂದರು ಅನಂತ್ ನಾಗ್.

ಇದನ್ನೂ ಓದಿ:ಶಂಕರ್ ನಾಗ್ ನಿರ್ದೇಶನದಲ್ಲಿ ಒಟ್ಟಿಗೆ ನಟಿಸಬೇಕಿತ್ತು ಅನಂತ್ ನಾಗ್-ವಿಷ್ಣುವರ್ಧನ್ ಆದರೆ ಆಗಲಿಲ್ಲ

‘ಈ 50 ವರ್ಷಗಳಲ್ಲಿ ಬೇರೆ ಭಾಷೆಗಳಲ್ಲೂ ನಟಿಸಿದೆ. ಬೇರೆ ಭಾಷೆಗಳಲ್ಲಿ ನಟಿಸಲು ಹೋಗುವಾಗ ಕರ್ನಾಟಕದ ರಾಯಭಾರಿ ಆಗಿ ಹೋಗುತ್ತಿದ್ದೆ. ಇಷ್ಟು ವರ್ಷಗಳಲ್ಲಿ ನನಗೆ ಹೆಚ್ಚು ಅವಕಾಶ ಕೊಟ್ಟಿದ್ದು, ಆದರಿಸಿದ್ದು ಕನ್ನಡ ಸಿನಿಮಾಗಳು ಮತ್ತು ಪ್ರೇಕ್ಷಕರು. ಕಳೆದ ವರ್ಷ, ಇದೇ ಶ್ರೀಮತಿ ದ್ರೌಪದಿ ಮುರ್ಮು ಅವರಿಂದ ಪದ್ಮಭೂಷಣ ಪ್ರಶಸ್ತಿ ಪಡೆದುಕೊಂಡೆ. ಈ ಬಾರಿ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪಡೆದಿರುವುದು ಖುಷಿ ಇದೆ. ಆದರೆ ಈ ಪ್ರಶಸ್ತಿ ಕೇವಲ ನನ್ನೊಬ್ಬನದ್ದೇ ಅಲ್ಲ. ನನ್ನ ಸಿನಿಮಾಗಳ ನಿರ್ಮಾಪಕರು, ನಿರ್ದೇಶಕರು, ಸಹ ಕಲಾವಿದರು, ತೆರೆಯ ಮುಂದೆ, ಹಿಂದೆ ಕೆಲಸ ಮಾಡಿದ ಎಲ್ಲರಿಗೂ ಈ ಪ್ರಶಸ್ತಿಯನ್ನು ನಾನು ಅರ್ಪಿಸುತ್ತೇನೆ. ನನ್ನ ಜನ್ಮ ಭೂಮಿ, ಧರ್ಮ ಭೂಮಿ ಭಾರತ ಮತ್ತು ಕರ್ಮ ಭೂಮಿ ಕರ್ನಾಟಕಕ್ಕೆ ಋಣಿಯಾಗಿ ಇರುತ್ತೇನೆ’ ಎಂದರು ಅನಂತ್ ನಾಗ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:06 pm, Tue, 22 September 26

Loading...
Unable to load recommendations.
Follow Us