ಕಾವೇರಿ ವಿವಾದ: ಕಠಿಣ ನಿಲುವು ತೆಗೆದುಕೊಳ್ಳುವ ಸಮಯ ಬಂದಿದೆ: ಅನಂತ್​ನಾಗ್

|

Updated on: Sep 20, 2023 | 9:55 PM

Ananth Nag: ತಮಿಳುನಾಡಿನ ದ್ರಾವಿಡ ಪಕ್ಷಗಳು ಕರ್ನಾಟಕವನ್ನು ಪಾಕಿಸ್ತಾನದಂತೆ, ಶ್ರೀಲಂಕಾದಂತೆ ಕಾಣುತ್ತವೆ. ಕಾವೇರಿ ವಿಷಯದ ಬಗ್ಗೆ ನಾವೀಗ ಕಠಿಣವಾದ ನಿಲುವು ತಳೆಯಬೇಕಿದೆ ಎಂದಿದ್ದಾರೆ ಅನಂತ್​ನಾಗ್.

ಕಾವೇರಿ ವಿವಾದ: ಕಠಿಣ ನಿಲುವು ತೆಗೆದುಕೊಳ್ಳುವ ಸಮಯ ಬಂದಿದೆ: ಅನಂತ್​ನಾಗ್
ಅನಂತ್ ನಾಗ್
Follow us on

ಕಾವೇರಿ ವಿವಾದ ಮತ್ತೆ ಭುಗಿಲೆದ್ದಿದೆ. ತಮಿಳುನಾಡಿಗೆ ಕಾವೇರಿ ನೀರು ಹರಿಸದಂತೆ ಮಂಡ್ಯ, ಮೈಸೂರು, ಬೆಂಗಳೂರು ಸೇರಿದಂತೆ ಹಲವೆಡೆ ಪ್ರತಿಭಟನೆಗಳು ನಡೆದಿವೆ. ಕನ್ನಡ ಚಿತ್ರರಂಗವೂ ಸಹ ಪ್ರತಿಭಟನಾಕಾರರ ಜೊತೆ ನಿಂತಿದ್ದು, ಹಲವು ಚಿತ್ರತಾರೆಯರು ಕಾವೇರಿ ವಿವಾದದ ಬಗ್ಗೆ ಕರ್ನಾಟಕ ರೈತರ ಪರ ನಿಲುವು ತಳೆಯುವಂತೆ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಹಿರಿಯ ನಟ ಅನಂತ್​ನಾಗ್ (Ananth Nag) ಸಹ ಈ ಬಗ್ಗೆ ಸರ್ಕಾರವನ್ನು ಆಗ್ರಹಿಸಿದ್ದು, ವಿಡಿಯೋ ಮೂಲಕ ಮನವಿ ಮಾಡಿದ್ದಾರೆ.

”ಪ್ರತಿ ವರ್ಷದಂತೆ ಈ ವರ್ಷವೂ ತಮಿಳುನಾಡು ಖ್ಯಾತೆ ತೆಗೆದಿದೆ. ಮಳೆ ಕಡಿಮೆ ಇದ್ದಾಗ ಕಾವೇರಿ ವಿವಾದ ಮೇಲೇಳುವುದು ಸಾಮಾನ್ಯ ಎಂಬಂತಾಗಿದೆ. ಈ ಬಾರಿ ಮಳೆ ಕಡಿಮೆಯಾಗಿದ್ದು ತಮಿಳು ನಾಡು ಮತ್ತೊಮ್ಮೆ ಕಾವೇರಿ ವಿವಾದ ಪ್ರಾರಂಭ ಮಾಡಿದೆ. ಕಳೆದ 60 ವರ್ಷದಿಂದ ಇದನ್ನು ನೋಡುತ್ತಲೇ ಬಂದಿದ್ದೇವೆ. ತಮಿಳುನಾಡಿನಲ್ಲಿ ಹಳೆ ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಾಗಿನಿಂದಲೂ ಈ ಸಮಸ್ಯೆ ಇದ್ದೇ ಇದೆ. ಅಣ್ಣಾದೊರೈ ಕಾಲದ ನಂತರ ಬಹುತೇಖ ದ್ರಾವಿಡ ಪಕ್ಷಗಳೇ ಅಧಿಕಾರಕ್ಕೆ ಬರುತ್ತಿವೆ. ಈ ದ್ರಾವಿಡ ಪಕ್ಷಗಳು ಪದೇ-ಪದೇ ಅಲ್ಲಿನ ಜನರಿಗೆ ಕಾವೇರಿ ವಿಷಯದಲ್ಲಿ ತಪ್ಪು ದಾರಿಗೆ ಎಳೆದಿದ್ದಾರೆ. ಕರ್ನಾಟಕವು ಸದಾ ಕಾಲ ಕಾವೇರಿ ನೀರನ್ನು ಸೂಕ್ತವಾಗಿಯೇ ತಮಿಳುನಾಡಿಗೆ ಹರಿಸುತ್ತಿದ್ದೇವೆ. ಅಗತ್ಯಕ್ಕಿಂತಲೂ ಹೆಚ್ಚೇ ಕೊಡುತ್ತಿದ್ದೇವೆ. ತಮಿಳುನಾಡಿಗೆ ಹೆಚ್ಚು ನೀರು ಸಿಗುವಂತೆ ಮಾಡಿದ್ದು ಬ್ರಿಟೀಷರು. ಹಾಗಾಗಿ ಬ್ರಿಟೀಷರ ಕಾಲದಿಂದಲೂ ನಮಗೆ ಅನ್ಯಾಯವೇ ಆಗಿದೆ. ಹಾಗಾಗಿ ಈ ಬಾರಿ ನಾವುಗಳು ತುಸು ಕಠಿಣವಾದ ಪ್ರತಿಗಾಮಿ ನಿಲುವು ತೆಗೆದುಕೊಳ್ಳಬೇಕಿದೆ” ಎಂದು ಅನಂತ್​ನಾಗ್ ಒತ್ತಾಯಿಸಿದ್ದಾರೆ.

ಇದನ್ನೂ ಓದಿ:Yogi Mimicry: ಶಿವಣ್ಣ, ಅನಂತ್​ ನಾಗ್​ ರೀತಿ ಮಿಮಿಕ್ರಿ ಮಾಡಿದ ಯೋಗಿ ಪ್ರತಿಭೆ ಕಂಡು ಜಗ್ಗೇ​ಶ್​ ಫಿದಾ

ದ್ರಾವಿಡ ಪಕ್ಷಗಳು ಕರ್ನಾಟಕವನ್ನು ಪಾಕಿಸ್ತಾನ ಅಥವಾ ಶ್ರೀಲಂಕಾ ಅಂದುಕೊಂಡಿದ್ದಾರೆ. ಕಾವೇರಿ ವಿಷಯದಲ್ಲಿ ಯುದ್ಧಕ್ಕೆ ನಿಂತಂತೆ ಅವರ ನಿಲುವಿದೆ. ಅವರೊಟ್ಟಿಗೆ ಮಾತುಕತೆ ಸಾಧ್ಯವಿಲ್ಲ. ಅವರು ಒಗ್ಗಟ್ಟಾಗಿ ಕೇಂದ್ರ ಸರ್ಕಾರಕ್ಕೆ ಹೋಗಿ ಸಮಸ್ಯೆ ಬಗ್ಗೆ ಚರ್ಚಿಸುತ್ತಾರೆ. ಹಕ್ಕೊತ್ತಾಯ ಮಾಡುತ್ತಾರೆ. ಆದರೆ ನಮ್ಮಲ್ಲಿ ಹಾಗೆ ಒಕ್ಕೂರಲಿನಿಂದ ಒಗ್ಗಟ್ಟು ಪ್ರದರ್ಶಿಸಿದ್ದು ಅಷ್ಟಾಗಿ ಕಂಡಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಅನಂತ್​ನಾಗ್.

”ಕರ್ನಾಟಕದಲ್ಲಿಯೇ ಕುಡಿಯುವ ನೀರಿಗೆ ತತ್ವಾರ ಉಂಟಾಗಿದೆ. ಇಂಥಹಾ ಸಮಯದಲ್ಲಿ ತಮಿಳುನಾಡಿಗೆ ನೀರು ಬಿಡುವುದು ಹೇಗೆ. ಅವರಿಗೆ ನಾವು ಹರಿಸುತ್ತಿರುವ ನೀರನ್ನು ಅವರು ಉದ್ಯಮಕ್ಕೆ, ಕೃಷಿಗೆ ಬಳಕೆ ಮಾಡುತ್ತಿದ್ದಾರೆಯೇ ಹೊರತು ಕುಡಿಯುವ ನೀರಿಗೆ ಅಲ್ಲ. ಬಹುಷಃ 45 ನೇ ಬಾರಿ ಡಿಎಂಕೆ ಪಕ್ಷಗಳು ಹೀಗೆ ಕಾವೇರಿ ವಿವಾದ ಎಬ್ಬಿಸುತ್ತಿರುವುದು ಎನಿಸುತ್ತದೆ. ಆದರೆ ಈ ಬಾರಿಯಾದರು ನಾವೆಲ್ಲ ಒಗ್ಗಟ್ಟಾಗಿ ನಿಲ್ಲಬೇಕಿದೆ. ಸಿಎಂ ಸಿದ್ದರಾಮಯ್ಯ ಅವರು ಈ ವಿಷಯದಲ್ಲಿ ಸೂಕ್ತ ನಾಯಕತ್ವ ನೀಡಬೇಕು, ಕಠಿಣ ನಿಲುವು ತಳೆಯಬೇಕು, ಸಮಸ್ಯೆಯನ್ನು ಇನ್ನಿಲ್ಲದಂತೆ ಬಗೆಹರಿಸಬೇಕು. ನಮ್ಮ ಸಂಸದರು, ಕೇಂದ್ರದಲ್ಲಿ ಮಂತ್ರಿಯಾಗಿರುವ ಕನ್ನಡಿಗರು ದೆಹಲಿ ಮಟ್ಟದಲ್ಲಿ ಚಳವಳಿ ಮುನ್ನಡೆಸಬೇಕು, ಇಲ್ಲಿ ಸಿಎಂ ಸಿದ್ದರಾಮಯ್ಯ ನಾಯಕತ್ವ ನೀಡಬೇಕು. ಮುಂದಿನ 48 ಗಂಟೆಗಳಲ್ಲಿ ಕಠಿಣವಾದ ನಿರ್ಣಯವನ್ನು ಪ್ರಕಟಿಸಬೇಕು” ಎಂದಿದ್ದಾರೆ ಅನಂತ್​ನಾಗ್.

ಕಾವೇರಿ ವಿಷಯವಾಗಿ ನಟ ದರ್ಶನ್, ಸುದೀಪ್, ಶಿವರಾಜ್ ಕುಮಾರ್, ರಾಜ್ಯಸಭೆ ಸದಸ್ಯರೂ ಆಗಿರುವ ಜಗ್ಗೇಶ್, ಯುವನಟ ಅಭಿಷೇಕ್ ಅಂಬರೀಶ್, ವಿನೋದ್ ಪ್ರಭಾಕರ್ ಇನ್ನೂ ಕೆಲವರು ಕಾವೇರಿ ವಿವಾದದ ಬಗ್ಗೆ ಟ್ವೀಟ್​ಗಳನ್ನು ಮಾಡಿ ರಾಜ್ಯದ ರೈತರ ಪರ ನಿಲುವು ತಳೆಯುವಂತೆ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ