
ಹೊಂಬಾಳೆ (Hombale) ನಿರ್ಮಾಣ ಮಾಡಿ, ರಿಷಬ್ ಶೆಟ್ಟಿ ನಟಿಸಿ, ನಿರ್ದೇಶನ ಮಾಡಿರುವ ‘ಕಾಂತಾರ ಚಾಪ್ಟರ್ 1’ ಸಿನಿಮಾ ಬಿಡುಗಡೆಗೆ ಕೆಲವೇ ದಿನಗಳು ಬಾಕಿ ಇದೆ. ಸಿನಿಮಾದ ಬ್ಯುಸಿನೆಸ್ ಪ್ರಾರಂಭ ಆಗಿದ್ದು, ಪ್ರತಿ ಬಾರಿಯಂತೆ ಹೊಂಬಾಳೆ ಅದ್ಭುತವಾಗಿ ಪ್ರೀ ರಿಲೀಸ್ ಬ್ಯುಸಿನೆಸ್ ಮಾಡುತ್ತಿದೆ. ಹೊಂಬಾಳೆ ಸಂಸ್ಥೆಯು ಸಿನಿಮಾ ನಿರ್ಮಾಣ ಮತ್ತು ಅದರ ಮಾರಾಟದಲ್ಲಿ ಸದಾ ಮುಂದಿದೆ. ‘ನರಸಿಂಹ’ ಅಂಥಹಾ ಕಾರ್ಟೂನ್ ಸಿನಿಮಾ ಅನ್ನೇ ಬ್ಲಾಕ್ ಬಸ್ಟರ್ ಸಿನಿಮಾ ಮಾಡಿರುವ ಹೊಂಬಾಳೆ, ಈಗ ತಮ್ಮ ನಿರ್ಮಾಣ ಸಂಸ್ಥೆಯ ಟಾಪ್ ಪ್ರಾಜೆಕ್ಟ್ ಅನ್ನು ಇನ್ನೂ ಹೆಚ್ಚಿನ ಆಸ್ತೆಯಿಂದ ಜನರಿಗೆ ತಲುಪಿಸಲು ಸಜ್ಜಾಗಿದೆ.
‘ಕಾಂತಾರ: ಚಾಪ್ಟರ್ 1’ ಸಿನಿಮಾದ ವಿತರಣೆ ಹಕ್ಕುಗಳ ಮಾರಾಟದಲ್ಲಿ ಹೊಂಬಾಳೆ ತೊಡಗಿಕೊಂಡಿದೆ. ಈಗಾಗಲೇ ಕೇರಳ ರಾಜ್ಯದ ವಿತರಣೆ ಹಕ್ಕನ್ನು ತಮ್ಮ ಸಂಸ್ಥೆಯ ಹಳೆಯ ಗೆಳೆಯ, ಸ್ಟಾರ್ ನಟ ಪೃಥ್ವಿರಾಜ್ ಸುಕುಮಾರನ್ ಅವರಿಗೆ ನೀಡಿದೆ. ಆದರೆ ಆಂಧ್ರ ಪ್ರದೇಶದಲ್ಲಿ ‘ಕಾಂತಾರ: ಚಾಪ್ಟರ್ 1’ ಸಿನಿಮಾ ವಿತರಣೆ ಹಕ್ಕು ಖರೀದಿಗೆ ನೂಕು-ನುಗ್ಗಲು ಶುರುವಾಗಿದೆ. ಹಾಗಾಗಿ ಹೊಂಬಾಳೆ ಆಂಧ್ರದಲ್ಲಿ ಬರೋಬ್ಬರಿ ಆರು ಸಂಸ್ಥೆಗಳಿಗೆ ವಿತರಣೆ ವಿಷಯದಲ್ಲಿ ಒಪ್ಪಂದ ಮಾಡಿಕೊಂಡಿದೆ.
ಆರು ವಿವಿಧ ವಿತರಣೆ ಸಂಸ್ಥೆಗಳು ‘ಕಾಂತಾರ: ಚಾಪ್ಟರ್ 1’ ಸಿನಿಮಾ ಅನ್ನು ವಿತರಣೆ ಮಾಡಲಿವೆ. ಉತ್ತರ ಆಂಧ್ರ ಪ್ರದೇಶದಲ್ಲಿ ವಿಘ್ನೇಶ್ವರ ನಿರ್ಮಾಣ ಸಂಸ್ಥೆ ‘ಕಾಂತಾರ’ ಸಿನಿಮಾದ ವಿತರಣೆ ಮಾಡಲಿದೆ. ಪೂರ್ವ ಮತ್ತು ಪಶ್ಚಿಮ ಗೋಧಾವರಿ ಏರಿಯಾಗಳಲ್ಲಿ ಅಲ್ಲು ಅರವಿಂದ್ ಅವರ ಗೀತಾ ಆರ್ಟ್ಸ್ ಸಂಸ್ಥೆ ‘ಕಾಂತಾರ’ ಸಿನಿಮಾದ ವಿತರಣೆ ಮಾಡಲಿದೆ. ಇನ್ನು ಗುಂಟೂರಿನಲ್ಲಿ ಖ್ಯಾತ ನಿರ್ಮಾಣ ಸಂಸ್ಥೆಯಾಗಿರುವ ವಾರಾಹಿ ಪ್ರೊಡಕ್ಷನ್ಸ್ ವಿತರಣೆ ಮಾಡಲಿದೆ. ಕೃಷ್ಣ ಜಿಲ್ಲೆಯಲ್ಲಿ ಕೆಎಸ್ಎನ್ ಸಂಸ್ಥೆ ವಿತರಣೆ ಮಾಡಲಿದೆ. ನೆಲ್ಲೂರಿನಲ್ಲಿ ಎಸ್ವಿ ಸಿನಿಮಾಸ್ ವಿತರಣೆ ಮಾಡಲಿದೆ. ಸೀಡೆಡ್ ಪ್ರದೇಶದಲ್ಲಿ ಶಿಲ್ಪಕಲಾ ಎಂಟರ್ಟೈನ್ಮೆಂಟ್ನವರು ವಿತರಣೆ ಮಾಡಲಿದ್ದಾರೆ.
ಇದನ್ನೂ ಓದಿ:‘ಕಾಂತಾರ ಚಾಪ್ಟರ್ 1’ ವಿತರಣೆ ಹಕ್ಕು ಖರೀದಿಸಿದ ಸ್ಟಾರ್ ನಟ
2022 ರಲ್ಲಿ ಬಿಡುಗಡೆ ಆಗಿದ್ದ ‘ಕಾಂತಾರ’ ಸಿನಿಮಾ, ಆಂಧ್ರ ಮತ್ತು ತೆಲಂಗಾಣಗಳಲ್ಲಿ ಭರ್ಜರಿ ಕಲೆಕ್ಷನ್ ಮಾಡಿತ್ತು. ಅದೇ ಕಾರಣಕ್ಕೆ ಈಗ ‘ಕಾಂತಾರ: ಚಾಪ್ಟರ್ 1’ ಸಿನಿಮಾಕ್ಕೆ ಭಾರಿ ಬೇಡಿಕೆ ನಿರ್ಮಾಣ ಆಗಿದೆ. ಆಂಧ್ರ ಪ್ರದೇಶದಲ್ಲಿ ಮಾತ್ರವೇ ಅಲ್ಲದೆ ತೆಲಂಗಾಣದಲ್ಲಿಯೂ ಸಿನಿಮಾಕ್ಕೆ ಭಾರಿ ಬೇಡಿಕೆ ಇದ್ದು, ತೆಲಂಗಾಣದ ವಿತರಣೆ ಯಾರ ಕೈಸೇರಿದೆ ಎಂಬ ಮಾಹಿತಿಯನ್ನು ಹೊಂಬಾಳೆ ಇನ್ನಷ್ಟೆ ಹಂಚಿಕೊಳ್ಳಬೇಕಿದೆ. ಇನ್ನು ಉತ್ತರ ಭಾರತದ ವಿತರಣೆಯನ್ನು ಅನಿಲ್ ಟಂಡಾನಿ ಅವರಿಗೆ ನೀಡುವ ಸಾಧ್ಯತೆ ದಟ್ಟವಾಗಿದೆ. ಈ ಹಿಂದೆ ಹೊಂಬಾಳೆಯ ನಿರ್ಮಾಣದ ಸಿನಿಮಾಗಳಾಗಿದ್ದ ‘ಕಾಂತಾರ’ ಮತ್ತು ‘ಕೆಜಿಎಫ್’ ಸಿನಿಮಾಗಳನ್ನು ಉತ್ತರ ಭಾರತದಲ್ಲಿ ಅವರೇ ವಿತರಣೆ ಮಾಡಿದ್ದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:58 pm, Wed, 10 September 25