ಪ್ರಥಮ್ಗೆ ಧಮ್ಕಿ ಹಾಕಿದ ಕೇಸ್: ದರ್ಶನ್ ಇರುವ ಜೈಲಿಗೆ ಬೇಕರಿ ರಘು, ಯಶಸ್ವಿನಿ ಗೌಡ ಶಿಫ್ಟ್
ನಟ ಪ್ರಥಮ್ ಅವರಿಗೆ ಧಮ್ಕಿ ಹಾಕಿದ ಪ್ರಕರಣದಲ್ಲಿ ಬೇಕರಿ ರಘು, ಯಶಸ್ವಿನಿ ಗೌಡಗೆ ಜಾಮೀನು ಸಿಕ್ಕಿತ್ತು. ಆದರೆ ಜಾಮೀನು ಪಡೆದ ಬಳಿಕ ಮತ್ತೆ ಸೋಶಿಯಲ್ ಮೀಡಿಯಾದಲ್ಲಿ ಬೆದರಿಕೆ ಹಾಕಿದ ಆರೋಪ ಎದುರಾಯಿತು. ಹಾಗಾಗಿ ಅವರ ಜಾಮೀನು ರದ್ದು ಮಾಡಿ ಪರಪ್ಪನ ಅಗ್ರಹಾರ ಜೈಲಿಗೆ ಕಳಿಸಲಾಗಿದೆ. ಆ ಬಗ್ಗೆ ಇಲ್ಲಿದೆ ವಿವರ..

ರಾಮಯ್ಯನಪಾಳ್ಯ ಫಾರ್ಮ್ ಹೌಸ್ನಲ್ಲಿ ನಟ ಪ್ರಥಮ್ (Pratham) ಅವರಿಗೆ ಧಮ್ಕಿ ಹಾಕಿದ ಪ್ರಕರಣದಲ್ಲಿ ಬೇಕರಿ ರಘು (Bakery Raghu) ಮತ್ತು ಯಶಸ್ವಿನಿ ಗೌಡ (Yashaswini Gowda) ಪ್ರಮುಖ ಆರೋಪಿಗಳಾಗಿದ್ದಾರೆ. ಇಷ್ಟು ದಿನ ಅವರು ಜಾಮೀನು ಪಡೆದ ಹೊರಗಿದ್ದರು. ಆದರೆ ಈಗ ಅವರ ಜಾಮೀನು ರದ್ದು ಮಾಡಲಾಗಿದೆ. ದೊಡ್ಡಬಳ್ಳಾಪುರ ಜೆಎಂಎಫ್‌ಸಿ ನ್ಯಾಯಾಲಯದಿಂದ ಬೇಲ್ ರದ್ದಾಗಿದೆ. ಇಬ್ಬರನ್ನೂ ಜೈಲಿಗೆ ಕಳಿಸುವಂತೆ ನ್ಯಾಯಾಧೀಶರು ಆದೇಶ ನೀಡಿದ್ದಾರೆ. ದರ್ಶನ್ ಅಭಿಮಾನಿ ಆಗಿರುವ ಬೇಕರಿ ರಘು ಈಗ ದರ್ಶನ್ ಇರುವ ಪರಪ್ಪನ ಅಗ್ರಹಾರ ಜೈಲು ಪಾಲಾಗಿದ್ದಾನೆ.
ಹಲವು ಷರತ್ತುಗಳ ಮೇಲೆ ಬೇಕರಿ ರಘು ಮತ್ತು ಯಶಸ್ವಿನಿ ಗೌಡ ಜಾಮೀನು ಪಡೆದಿದ್ದರು. ಆದರೆ ಬೇಲ್ ಪಡೆದ ನಂತರವೂ ಪ್ರಥಮ್ ವಿರುದ್ಧ ಸಾಮಾಜಿಕ ಜಾಲತಾಣಗಳ ಮೂಲಕ ಧಮ್ಕಿ ಹಾಕಿದರು ಎಂಬ ಆರೋಪ ಎದುರಾಗಿದೆ. ಧಮ್ಕಿ ಬಗ್ಗೆ ಕಳೆದ ಶನಿವಾರ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಗೆ ನಟ ಪ್ರಥಮ್ ಅವರು ದೂರು ನೀಡಿದ್ದರು.
ಪ್ರಥಮ್ ನೀಡಿದ ದೂರಿನ ಪ್ರತಿಯನ್ನು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಇಂದು (ಸೆಪ್ಟೆಂಬರ್ 10) ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಧೀಶರು ಇಬ್ಬರ ಬೇಲ್ ಕ್ಯಾನ್ಸಲ್ ಮಾಡಿದರು. ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟ್ ಮಾಡುವಂತೆ ಆದೇಶಿಸಿದ್ದಾರೆ. ದರ್ಶನ್ ಇರುವ ಪರಪ್ಪನ ಅಗ್ರಹಾರ ಜೈಲಿಗೆ ಬೇಕರಿ ರಘು ಮತ್ತು ಯಶಸ್ವಿನಿ ಗೌಡ ಅವರನ್ನು ಕಳಿಸಲಾಗಿದೆ.
ದರ್ಶನ್ ಬಗ್ಗೆ ಪ್ರಥಮ್ ಅವರು ನೀಡಿದ ಕೆಲವು ಹೇಳಿಕೆಗಳಿಂದ ಡಿ ಬಾಸ್ ಅಭಿಮಾನಿಗಳು ಗರಂ ಆಗಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಮಾತ್ರವಲ್ಲದೇ ನೇರವಾಗಿಯೂ ಪ್ರಥಮ್ ಅವರಿಗೆ ಬೆದರಿಕೆ ಹಾಕಲಾಗಿತ್ತು. ಅವರ ಮೇಲೆ ಹಲ್ಲೆಗೆ ಯತ್ನ ನಡೆದಿತ್ತು. ಈ ಬಗ್ಗೆ ದರ್ಶನ್ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಲಿಲ್ಲ. ದರ್ಶನ್ ಪ್ರತಿಕ್ರಿಯಿಸಬೇಕು ಎಂದು ಪ್ರಥಮ್ ಪಟ್ಟು ಹಿಡಿದಿದ್ದರು.
ಇದನ್ನೂ ಓದಿ: ಯಶಸ್ವಿನಿ ಗೌಡ ವಿರುದ್ಧ ದೂರು ನೀಡಿದ ಪ್ರಥಮ್: ಹೇಳಿದ್ದೇನು?
‘ಈ ಘಟನೆಯಿಂದ ನನಗೆ ಬೇಸರ ಆಗಿದೆ. ಆದಷ್ಟು ಕಡಿಮೆ ಮಾತನಾಡೋಣ ಎಂದುಕೊಂಡಿದ್ದೇನೆ. ಶೀಘ್ರದಲ್ಲೇ ನಿಮ್ಮೆಲ್ಲರಿಗೆ ಸತ್ಯ ಗೊತ್ತಾಗಬೇಕು. ಕೋರ್ಟ್ ಕೇಸ್ ಬೆಳೆಸಬೇಕು ಎಂಬುದು ನನಗೆ ಇಲ್ಲ. ಯಾರನ್ನೋ ಅರೆಸ್ಟ್ ಮಾಡಿಸಿ ನಾನು ದೊಡ್ಡ ಮನುಷ್ಯ ಆಗಬೇಕಿಲ್ಲ. ಜೀವನದಲ್ಲಿ ನಾನು ಯಾರಿಗೂ ಏರು ಧ್ವನಿಯಲ್ಲಿ ಮಾತನಾಡಿದವರಲ್ಲ. ಊರಿನಲ್ಲಿ ನಾನು ತೋಟ ನೋಡಿಕೊಳ್ಳುತ್ತಾ ಆರಾಮಾಗಿ ಇದ್ದೇನೆ. ಮನಸ್ಸಿಗೆ ನೆಮ್ಮದಿ ಇದೆ. ಸಿನಿಮಾ ರಿಲೀಸ್ ಸಮಯಕ್ಕೆ ಬರುತ್ತೇನೆ’ ಎಂದು ಪ್ರಥಮ್ ಇತ್ತೀಚೆಗೆ ಹೇಳಿದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.







