‘ರುಧ’ ಚಿತ್ರತಂಡಕ್ಕೆ ಸಾಥ್ ನೀಡಿದ ಅನು ಪ್ರಭಾಕರ್, ರಘು ಮುಖರ್ಜಿ

ಶರತ್ ಶಿಡ್ಲಘಟ್ಟ ನಿರ್ದೇಶನ ಮಾಡುತ್ತಿರುವ ‘ರುಧ’ ಸಿನಿಮಾಗೆ ಪುಟ್ಟರಾಜು ಅವರು ಬಂಡವಾಳ ಹೂಡುತ್ತಿದ್ದಾರೆ. ಈ ಸಿನಿಮಾದ ಮುಹೂರ್ತ ಸಮಾರಂಭಕ್ಕೆ ಅನು ಪ್ರಭಾಕರ್ ಹಾಗೂ ರಘು ಮುಖರ್ಜಿ ಬಂದು ಕ್ಲ್ಯಾಪ್ ಮಾಡಿದರು. ವರಲಕ್ಷೀ, ಮಾನಸ ಗೌಡ, ರಥರ್ವ್ ಮುಂತಾದ ಕಲಾವಿದರು ‘ರುಧ’ ಸಿನಿಮಾದ ಪಾತ್ರವರ್ಗದಲ್ಲಿ ಇದ್ದಾರೆ.

‘ರುಧ’ ಚಿತ್ರತಂಡಕ್ಕೆ ಸಾಥ್ ನೀಡಿದ ಅನು ಪ್ರಭಾಕರ್, ರಘು ಮುಖರ್ಜಿ
Rudha Kannada Movie Muhurtha

Updated on: Nov 21, 2025 | 4:36 PM

ಇತ್ತೀಚೆಗೆ ‘ರುಧ’ ಸಿನಿಮಾದ (Rudha Movie) ಮುಹೂರ್ತ ಸಮಾರಂಭ ನಡೆಯಿತು. ಇದು ಮಹಿಳಾ ಪ್ರಧಾನ ಸಿನಿಮಾ ಆಗಿರಲಿದೆ ಎಂದು ಚಿತ್ರತಂಡ ಹೇಳಿದೆ. ಸಂಜಯ್‌ ನಗರದಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿಗಳ ಬೃಂದಾವನ ಸನ್ನಿಧಿಯಲ್ಲಿ ಈ ಸಿನಿಮಾಗೆ ಮುಹೂರ್ತ ಮಾಡಲಾಯಿತು. ಸಿನಿಮಾದ ಪ್ರಥಮ ದೃಶ್ಯಕ್ಕೆ ನಟಿ ಅನು ಪ್ರಭಾಕರ್ (Anu Prabhakar) ಹಾಗೂ ರಘು ಮುಖರ್ಜಿ ಅವರು ಕ್ಲ್ಯಾಪ್ ಮಾಡುವ ಮೂಲಕ ಚಿತ್ರತಂಡಕ್ಕೆ ಶುಭ ಕೋರಿದರು. ಕನಕಪುರ ಮೂಲದ ಉದ್ಯಮಿ ಪುಟ್ಟರಾಜು ಅವರು ‘ಕೆಪಿಜಿ ವಿಷನ್ಸ್’ ಬ್ಯಾನರ್ ಮೂಲಕ ಈ ಸಿನಿಮಾಗೆ ಬಂಡವಾಳ ಹೂಡುತ್ತಿದ್ದಾರೆ. ಇದು ಅವರ ಮೊದಲ ಸಿನಿಮಾ.

ಹಲವು ನಿರ್ದೇಶಕ ಜೊತೆ ಕೆಲಸ ಮಾಡಿ ಅನುಭವ ಪಡೆದಿರುವ ಶರತ್ ಶಿಡ್ಲಘಟ್ಟ ಅವರು ಈಗ ‘ರುಧ’ ಸಿನಿಮಾಗೆ ಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ವರಲಕ್ಷೀ ಅವರು ಈ ಸಿನಿಮಾದಲ್ಲಿ ಪೇದೆಯ ಪಾತ್ರ ಮಾಡಲಿದ್ದಾರೆ. ಮಾನಸ ಗೌಡ ಕೂಡ ಪಾತ್ರವರ್ಗದಲ್ಲಿ ಇದ್ದಾರೆ. ಮಧ್ಯಮ ವರ್ಗದ ಹುಡುಗನಾಗಿ, ಫೋಟೋ ಸ್ಟುಡಿಯೋ ಮಾಲಿಕನಾಗಿ ರಥರ್ವ್ ಅವರು ಕಾಣಿಸಿಕೊಳ್ಳಲಿದ್ದಾರೆ ಎಂದು ಚಿತ್ರತಂಡ ಮಾಹಿತಿ ನೀಡಿದೆ.

ರಾಜು ಹೆಮ್ಮಿಗೆಪುರ ಅವರು ‘ರುಧ’ ಸಿನಿಮಾಗೆ ಛಾಯಾಗ್ರಹಣ ಮಾಡಲಿದ್ದಾರೆ. ವಿಜಯ್ ಅವರು ಸಂಕಲನದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಕ್ರಿಯೇಟೀವ್ ಹೆಡ್ ಆಗಿ ಆರ್. ವಿಜಯ್ ಕೆಲಸ ಮಾಡುತ್ತಿದ್ದಾರೆ. ತಿರುಪತಿ ರೆಡ್ಡಿ ಅವರು ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ. ನವೆಂಬರ್ ಕೊನೆ ವಾರದಿಂದ ಚಿತ್ರೀಕರಣ ಆರಂಭಿಸಲು ‘ರುಧ’ ಸಿನಿಮಾ ತಂಡ ಸಜ್ಜಾಗಿದೆ.

ಮುಹೂರ್ತ ಸಮಾರಂಭದ ನಂತರ ಮಾಧ್ಯಮಗಳ ಜೊತೆ ನಿರ್ದೇಶಕರು ಮಾತನಾಡಿದರು. ‘2012ರಲ್ಲಿ ಕೇರಳದಲ್ಲಿ ನಡೆದ ಸತ್ಯ ಘಟನೆಯ ಒಂದು ಎಳೆಯನ್ನು ಇಟ್ಟುಕೊಂಡು ಅದಕ್ಕೆ ಸೆಸ್ಪೆನ್ಸ್ ಥ್ರಿಲ್ಲರ್ ಮಾದರಿಯಲ್ಲಿ ಕಾಲ್ಪನಿಕ ಕಥೆ ಹೆಣೆಯಲಾಗಿದೆ. ರುಧ ಸಂಸ್ಕೃತ ಪದವಾಗಿದ್ದು, ನಟೋರಿಯಸ್ ಎಂಬ ಅರ್ಥ ಕೊಡುತ್ತದೆ. ಚಿತ್ರದಲ್ಲಿ ರಕ್ತದೋಕುಳಿ ಹೆಚ್ಚು ಇರುತ್ತದೆ. ಇದು ಸನ್ನಿವೇಶಗಳಿಗೆ ಪೂರಕವಾಗಿರುತ್ತದೆ’ ಎಂದು ನಿರ್ದೇಶಕರು ಹೇಳಿದರು.

ಇದನ್ನೂ ಓದಿ: 3700 ಕೋಟಿ ನಷ್ಟ, ಚಿತ್ರರಂಗಕ್ಕೆ ವಿಲನ್, ಜನರಿಗೆ ಹೀರೋ ಯಾರು ಈ ಇಮ್ಮಡಿ ರವಿ?

‘ಮೂರು ಮುಖ್ಯ ಪಾತ್ರಗಳನ್ನು ಹೊರತುಪಡಿಸಿ, ಇನ್ನುಳಿದಂತೆ ಅನುಭವಿ ರಂಗಭೂಮಿ ಕಲಾವಿದರಿಗೆ ಅವಕಾಶ ಮಾಡಿಕೊಡಲಾಗುತ್ತಿದೆ. ಪ್ರಮೋದ್ ಮರವಂತೆ ಸಾಹಿತ್ಯದಲ್ಲಿ 3 ಹಾಡುಗಳು ಇರಲಿವೆ. ಸಂಗೀತ ಸಂಯೋಜಕರು ಸದ್ಯದಲ್ಲೇ ಆಯ್ಕೆ ಆಗಲಿದ್ದಾರೆ. ಕೊಡಗಿನ ಸುಂದರ ತಾಣಗಳಲ್ಲಿ ಒಂದೇ ಹಂತದಲ್ಲಿ ಶೂಟಿಂಗ್ ಮಾಡಲಿದ್ದೇವೆ’ ಎಂದರು ನಿರ್ದೇಶಕ ಶರತ್ ಶಿಡ್ಲಘಟ್ಟ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.