ಡಾ. ರಾಜ್ಕುಮಾರ್ ಕುಟುಂಬದ ಔದಾರ್ಯತೆ, ಆ ಕುಟುಂಬದವರ ಒಳ್ಳೆತನದ ಬಗ್ಗೆ ಮತ್ತೆ ವಿವರಿಸಿ ಹೇಳಬೇಕಿಲ್ಲ. ಇಂಥ ಕುಟುಂಬದ ಕುಡಿ ಪುನೀತ್ ರಾಜ್ಕುಮಾರ್ ಅವರು ನಿಧನ ಹೊಂದಿದ ಮೇಲೆ ಅಭಿಮಾನಿಗಳು ತುಂಬಾನೇ ಬೇಸರಗೊಂಡಿದ್ದಾರೆ. ಆದರೆ, ರಾಜ್ಕುಮಾರ್ ಕುಟುಂಬಕ್ಕೆ ಅವರು ಬೆಂಬಲವಾಗಿ ನಿಲ್ಲುವುದನ್ನು ಎಂದಿಗೂ ನಿಲ್ಲಿಸಿಲ್ಲ. ಈಗ ಅಶ್ವಿನಿ ಪುನೀತ್ ರಾಜ್ಕುಮಾರ್ ಅವರು ಮಾಡಿದ ಒಂದು ಒಳ್ಳೆಯ ಕೆಲಸ ದೊಡ್ಡ ಮಟ್ಟದಲ್ಲಿ ಚರ್ಚೆ ಆಗುತ್ತಿದೆ. ಅಭಿಮಾನಿಗಳು ಖುಷಿಪಟ್ಟಿದ್ದಾರೆ.
ಸಿನಿಮಾ ಇಂಡಸ್ಟ್ರಿಯಲ್ಲಿ ಸಂಭಾವನೆ ವಿಚಾರದಲ್ಲಿ ಜಗಳ, ವೈಮನಸ್ಸು ಏರ್ಪಟ್ಟ ಸಾಕಷ್ಟು ಉದಾಹರಣೆ ಇದೆ. ನಿರ್ಮಾಪಕರು ಸಂಭಾವನೆ ಕೊಟ್ಟಿಲ್ಲ ಎಂದು ದೂರುವ ಅನೇಕ ನಟ/ನಟಿಯರಿದ್ದಾರೆ. ನಿರ್ಮಾಪಕರೂ ಅಷ್ಟೇ, ಹೀರೋ/ಹೀರೋಯಿನ್ಗೆ ಹಣ ಕೊಟ್ಟ ಹೊರತಾಗಿಯೂ ಶೂಟಿಂಗ್ ಬಂದಿಲ್ಲ ಎಂದು ಹೇಳಿಕೊಂಡ ಹಲವಾರು ಪ್ರಕರಣಗಳು ಸಿಗುತ್ತವೆ. ಅಡ್ವಾನ್ಸ್ ಹಣ ಪಡೆದುಕೊಂಡ ನಂತರ ಸಿನಿಮಾ ಕ್ಯಾನ್ಸಲ್ ಆದರೆ, ನಿರ್ಮಾಪಕರಿಗೆ ಹಣ ಹಿಂದಿರುಗಿಸೋಕೆ ಯಾರೂ ಅಷ್ಟು ಸುಲಭವಾಗಿ ಮುಂದೆ ಬರುವುದಿಲ್ಲ. ಆದರೆ, ಪುನೀತ್ ಕುಟುಂಬದವರು ಆ ರೀತಿ ಅಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.
ಪುನೀತ್ ನಿಧನರಾಗುವುದಕ್ಕೂ ಮೊದಲು ಅನೇಕ ಚಿತ್ರಗಳನ್ನು ಒಪ್ಪಿಕೊಂಡಿದ್ದರು. ಈ ಪೈಕಿ ಅವರು ಮುಖ್ಯಭೂಮಿಕೆ ನಿರ್ವಹಿಸಿರುವ ‘ಜೇಮ್ಸ್’ ಹಾಗೂ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ‘ಲಕ್ಕಿ ಮ್ಯಾನ್’ ಚಿತ್ರದ ಕೆಲಸಗಳು ಪೂರ್ಣಗೊಂಡಿವೆ. ಉಳಿದ ಹಲವು ಚಿತ್ರಗಳು ಅರ್ಧಕ್ಕೆ ನಿಂತಿವೆ. ಈ ಪೈಕಿ ಕೆಲ ಸಿನಿಮಾಗಳಿಗೆ ಪುನೀತ್ ಅಡ್ವಾನ್ಸ್ ಕೂಡ ಪಡೆದುಕೊಂಡಿದ್ದರು. ಈ ಪೈಕಿ ಒಂದು ಸಿನಿಮಾದ ಅಡ್ವಾನ್ಸ್ ಅನ್ನು ಪುನೀತ್ ಪತ್ನಿ ಅಶ್ವಿನಿ ಅವರು ನಿರ್ಮಾಪಕರಿಗೆ ಹಿಂದಿರುಗಿಸಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಹಿರಿಯ ಪತ್ರಕರ್ತ ಶಶಿಧರ್ ಭಟ್ ಅವರು ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದಾರೆ. ‘ಅವರು ಕನ್ನಡ ಸಿನಿಮಾ ನಿರ್ಮಾಪಕರು. ಅವರು ನನ್ನ ಪಕ್ಕ ಕುಳಿತಿದ್ದರು. ಆಗ ಅವರಿಗೆ ದೂರವಾಣಿ ಕರೆಯೊಂದು ಬಂತು. ದೂರವಾಣಿ ಕರೆ ಮಾಡಿದವರು, ‘ಪುನೀತ್ ತಮ್ಮ ಡೈರಿಯಲ್ಲಿ ಬರೆದಿದ್ದಾರೆ. ನಿಮ್ಮಿಂದ ಸಿನಿಮಾ ಒಂದರ ಮುಂಗಡವಾಗಿ 2.50 ಕೋಟಿ ಪಡೆದಿದ್ದರಂತೆ. ನಾಳೆ ನೀವು ಮನೆಗೆ ಬಂದು ಈ ಹಣವನ್ನು ಪಡೆದುಕೊಂಡು ಹೋಗಿ’ ಎಂದರು ಆ ಮಹಿಳೆ. ಹೀಗೆ ಹೇಳಿದ ಮಹಿಳೆ ಅಶ್ವಿನಿ ಪುನೀತ್ ರಾಜ್ಕುಮಾರ್. ಇದು ಪ್ರಾಮಾಣಿಕತೆ. ಕನ್ನಡದ ಜನ ಈ ಕುಟುಂಬವನ್ನು ಪ್ರೀತಿಸುವುದು ಈ ಕಾರಣಕ್ಕಾಗಿ. ಕನ್ನಡಿಗರ ಆರಾಧ್ಯ ದೈವ ರಾಜ್ ಕುಟುಂಬ ಇರುವುದೇ ಹೀಗೆ’ ಎಂದು ಅವರು ಬರೆದುಕೊಂಡಿದ್ದಾರೆ. ಆದರೆ, ನಿರ್ಮಾಪಕರ ಹೆಸರನ್ನು ಎಲ್ಲಿಯೂ ಬಿಟ್ಟುಕೊಟ್ಟಿಲ್ಲ. ಸದ್ಯ, ಈ ಪೋಸ್ಟ್ ದೊಡ್ಡ ಮಟ್ಟದಲ್ಲಿ ಚರ್ಚೆ ಆಗುತ್ತಿದೆ.
ಇದನ್ನೂ ಓದಿ: ಪುನೀತ್ ಕಂಡ ಕನಸಿನ ಟೈಟಲ್ ಟೀಸರ್ ರಿಲೀಸ್ ದಿನಾಂಕ ಘೋಷಣೆ ಮಾಡಿದ ಅಶ್ವಿನಿ