‘ಅವತಾರ್’ ಟ್ರೈಲರ್: ಪ್ಯಾಂಡೋರಾದಲ್ಲಿ ಅಂತರ್ಯುದ್ಧ
Avatar Fire and Ash: ‘ಅವತಾರ್’ ಸಿನಿಮಾ ಸರಣಿಯ ಮೂರನೇ ಸಿನಿಮಾ ‘ಅವತಾರ್: ಫೈರ್ ಆಂಡ್ ಆಶ್’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಸಿನಿಮಾ ಇದೇ ವರ್ಷ ಡಿಸೆಂಬರ್ ತಿಂಗಳಲ್ಲಿ ತೆರೆಗೆ ಬರಲಿದ್ದು, ಸಿನಿಮಾದ ಟ್ರೈಲರ್ ಇದೀಗ ಬಿಡುಗಡೆ ಆಗಿದೆ. ‘ಅವತಾರ್ 2’ ಸಿನಿಮಾದ ಬಂದ ಟೀಕೆಯನ್ನು ನಿರ್ದೇಶಕ ಜೇಮ್ಸ್ ಕ್ಯಾಮರನ್ ಗಂಭೀರವಾಗಿ ಪರಿಗಣಿಸಿದಂತಿದೆ.
‘ಅವತಾರ್’ (Avatar) ಸಿನಿಮಾ ಸರಣಿಯ ಮೂರನೇ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. 2009 ರಲ್ಲಿ ಬಿಡುಗಡೆ ಆಗಿದ್ದ ‘ಅವತಾರ್’ ಸಿನಿಮಾ ಭಾರಿ ದೊಡ್ಡ ಯಶಸ್ಸು ಗಳಿಸಿತ್ತು. ಬಾಕ್ಸ್ ಆಫೀಸ್ನಲ್ಲಿ ಸಾರ್ವಕಾಲಿಕ ದಾಖಲೆಯನ್ನೇ ನಿರ್ಮಿಸಿತ್ತು. ಅದಾದ 13 ವರ್ಷಗಳ ಬಳಿಕ 2022 ರಲ್ಲಿ ‘ಅವತಾರ್: ದಿ ವೇ ಆಫ್ ವಾಟರ್’ ಸಿನಿಮಾ ಬಿಡುಗಡೆ ಆಯ್ತು. ಆ ಸಿನಿಮಾ ಸಹ ಹಿಟ್ ಎನಿಸಿಕೊಂಡಿತು. ಇದೀಗ ಅದೇ ಸಿನಿಮಾ ಸರಣಿಯ ಮತ್ತೊಂದು ಸಿನಿಮಾ ಬಿಡುಗಡೆಗೆ ಸಜ್ಜಾಗಿದ್ದು ‘ಅವತಾರ್: ಫೈರ್ ಆಂಡ್ ಆಶ್’ ಸಿನಿಮಾದ ಟ್ರೈಲರ್ ಇದೀಗ ಬಿಡುಗಡೆ ಆಗಿದೆ.
ಪಾಂಡೋರಾ ಎಂಬ ಕಲ್ಪಿತ ಪ್ರದೇಶದಲ್ಲಿ ನಡೆಯುವ ಮಾನವ ಮತ್ತು ನಾವಿ ಜನಾಂಗದ ನಡುವಿನ ಸಂಘರ್ಷದ ಕತೆಯನ್ನು ಮೊದಲ ಎರಡು ‘ಅವತಾರ್’ ಸಿನಿಮಾಗಳು ಹೊಂದಿದ್ದವು. 2022 ರ ‘ವೇ ಆಫ್ ವಾಟರ್’ ಸಿನಿಮಾ ಮಾನವ ಹಾಗೂ ನಾವಿಗಳ ನಡುವೆ ನೀರಿನ ಮೇಲೆ ನಡೆಯುವ ಸಂಘರ್ಷದ ಕತೆಯನ್ನು ಒಳಗೊಂಡಿತ್ತು. ಚಿತ್ರ ವಿಚಿತ್ರ ಜಲಚರಗಳನ್ನು ಸಿನಿಮಾದ ನಿರ್ದೇಶಕ ಜೇಮ್ಸ್ ಕ್ಯಾಮರನ್ ಸೃಷ್ಟಿಸಿದ್ದರು. ಆದರೆ ಆ ಸಿನಿಮಾದ ಬಗ್ಗೆ ತುಸು ಟೀಕೆ ವ್ಯಕ್ತವಾಗಿತ್ತು. 2009 ರ ‘ಅವತಾರ್’ ಸಿನಿಮಾ 2022 ರ ‘ಅವತಾರ್’ ಸಿನಿಮಾದ ಕತೆ ನಡೆಯುವ ಸ್ಥಳ, ಫೈಟ್ ಕೊರಿಯೋಗ್ರಫಿ ಬಿಟ್ಟರೆ ಬೇರೇನೂ ವ್ಯತ್ಯಾಸವಿಲ್ಲ ಎಂದು ಟೀಕಿಸಲಾಗಿತ್ತು. ಆ ಟೀಕೆಗಳಿಗೆ ಉತ್ತರದಂತಿದೆ ‘ಅವತಾರ್: ಫೈರ್ ಆಂಡ್ ಆಶ್’.
‘ಅವತಾರ’ ಸಿನಿಮಾ ಮಾನವ ಮತ್ತು ನಾವಿ ಜನಾಂಗದ ನಡುವಿನ ಸಂಘರ್ಷದ ಕತೆ ಒಳಗೊಂಡಿದೆ. ಆದರೆ ‘ಅವತಾರ್: ಫೈರ್ ಆಂಡ್ ಆಶ್’ ಸಿನಿಮಾನಲ್ಲಿ ನಾವಿ ಜನಾಂಗ ಬುಕಟ್ಟುಗಳ ನಡುವಿನ ಸಂಘರ್ಷದ ಕತೆಯನ್ನು ಒಳಗೊಂಡಿರುವ ಸುಳಿವನ್ನು ಸಿನಿಮಾದ ಟ್ರೈಲರ್ ನೀಡುತ್ತಿದೆ. ಪ್ರಕೃತಿಯನ್ನು ಆರಾಧಿಸುವ ನಾವಿಗಳು ಹಾಗೂ ಬೆಂಕಿಯನ್ನು ಆರಾಧಿಸುವ ಜನಾಂಗದ ನಡುವೆ ನಡೆಯುವ ಸಂಘರ್ಷದ ಕತೆಯನ್ನು ‘ಫೈರ್ ಆಂಡ್ ಆಶ್’ ಸಿನಿಮಾ ಒಳಗೊಂಡಿರುವಂತಿದೆ.
ಇದನ್ನೂ ಓದಿ:ಹಣ ಕೊಟ್ಟು ನೋಡಬೇಕು ‘ಅವತಾರ್ 3’ ಸಿನಿಮಾ ಟ್ರೇಲರ್; ಪ್ರೇಕ್ಷಕರು ಗರಂ
ಮಾನವರು ಆಯುಧಗಳ ಮೂಲಕ ನಾವಿಗಳನ್ನು ಗೆಲ್ಲಲಾಗದು ಎಂದು ತೀರ್ಮಾನಿಸಿ, ಅವರ ನಡುವೆಯೇ ಸಂಘರ್ಷ ಉಂಟುಮಾಡಿರುವಂತಿದೆ. ಸಂಘರ್ಷದ ಕತೆಯ ಜೊತೆಗೆ ‘ಅವತಾರ್’ ಸಿನಿಮಾ ಸರಣಿಯ ನಾಯಕ ಜೇಕ್ ಸೂಲಿ ಹಾಗೂ ಅವನ ಕುಟುಂಬದ ಕತೆ, ಸೆಂಟಿಮೆಂಟ್ ಇನ್ನಿತರೆಗಳನ್ನು ಸಹ ಸಿನಿಮಾ ಒಳಗೊಂಡಿರುವಂತಿದೆ. ‘ಅವತಾರ್: ದಿ ವೇ ಆಫ್ ವಾಟರ್’ ಸಿನಿಮಾದ ಅಂತ್ಯದಲ್ಲಿ ನಾವಿ ಅವರಿಂದ ಬೇರ್ಪಟ್ಟು ಮಾನವರನ್ನು ಸೇರಿದ್ದ ಸ್ಪೈಡರ್ ಗೆ ಈ ಸಿನಿಮಾದಲ್ಲಿ ಪ್ರಮುಖ ಪಾತ್ರ ಇದ್ದಂತಿದೆ. ‘ಅವತಾರ್: ಫೈರ್ ಆಂಡ್ ಆಶ್’ ಸಿನಿಮಾ ಡಿಸೆಂಬರ್ 19 ರಂದು ಬಿಡುಗಡೆ ಆಗಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




