ಪ್ರಶಸ್ತಿ ವಿಜೇತ ‘ಕೋಳಿ ಎಸ್ರು’, ‘ಹದಿನೇಳೆಂಟು’ ಸಿನಿಮಾಗಳ ಟ್ರೇಲರ್

|

Updated on: Jan 03, 2024 | 10:01 PM

Movie trailer: ಹಲವು ಅಂತರಾಷ್ಟ್ರೀಯ ಸಿನಿಮೋತ್ಸವಗಳಲ್ಲಿ ಪ್ರಶಸ್ತಿಗಳನ್ನು ಗೆದ್ದಿರುವ ಕನ್ನಡ ಸಿನಿಮಾಗಳಾದ ‘ಕೋಳಿ ಎಸ್ರು’ ಹಾಗೂ ‘ಹದಿನೇಳೆಂಟು’ ಸಿನಿಮಾದ ಟ್ರೈಲರ್ ಬಿಡುಗಡೆ ಆಗಿದ್ದು, ಸಿನಿಮಾಗಳು ಜನವರಿ 26 ರಂದು ಬಿಡುಗಡೆ ಆಗಲಿದೆ.

ಪ್ರಶಸ್ತಿ ವಿಜೇತ ‘ಕೋಳಿ ಎಸ್ರು’, ‘ಹದಿನೇಳೆಂಟು’ ಸಿನಿಮಾಗಳ ಟ್ರೇಲರ್
Follow us on

ಪಿಂಕಿ ಎಲ್ಲಿ’ (Pinki Elli) ಸಿನಿಮಾ ಮೂಲಕ ಗಮನ ಸೆಳೆದಿರುವ ನಿರ್ದೇಶಕ ಪೃಥ್ವಿ ಕೋಣನೂರು ನಿರ್ದೇಶಿಸಿರುವ ‘ಹದಿನೇಳೆಂಟು’ ಹಾಗೂ ಚಂಪಾ.ಪಿ. ಶೆಟ್ಟಿ ನಿರ್ದೇಶನದ “ಕೋಳಿ ಎಸ್ರು” ಸಿನಿಮಾಗಳ ಟ್ರೇಲರ್ ಬಿಡುಗಡೆ ಆಗಿದೆ. ಖ್ಯಾತ ನಿರ್ದೇಶಕ ಗಿರೀಶ್ ಕಾಸರವಳ್ಳಿ ಅವರು ‘ಕೋಳಿ ಎಸ್ರು’ ಸಿನಿಮಾದ ಟ್ರೇಲರ್ ಬಿಡುಗಡೆ ಮಾಡಿದರು. ಲೇಖಕ, ಪತ್ರಕರ್ತ ಜೋಗಿ ಅವರು ‘ಹದಿನೇಳೆಂಟು’ ಚಿತ್ರದ ಟ್ರೇಲರ್ ಅನ್ನು ಬಿಡುಗಡೆ ಮಾಡಿ ಶುಭ ಕೋರಿದರು.

ಚಂಪಾ ಶೆಟ್ಟಿ ಅವರು ಹಿಂದೆ ‘ಅಮ್ಮಚ್ಚಿಯೆಂಬ ನೆನಪು‘ ಸಿನಿಮಾ ನಿರ್ದೇಶನ ಮಾಡಿದ್ದರು. ಪೃಥ್ವಿ ಕೋಣನೂರು ಅವರು ‘ರೈಲ್ವೇ ಚಿಲ್ಡ್ರನ್‘ ಹಾಗೂ ‘ಪಿಂಕಿ ಎಲ್ಲಿ’ ಚಿತ್ರಗಳನ್ನು ನಿರ್ದೇಶಿಸಿದ್ದರು. ಈಗ ಇವರಿಬ್ಬರು ತಮ್ಮ ನಿರ್ದೇಶನದ ‘ಕೋಳಿ ಎಸ್ರು’ ಹಾಗೂ ‘ಹದಿನೇಳೆಂಟು’ ಚಿತ್ರಗಳನ್ನು ಜನವರಿ 26 ರಂದು ಬಿಡುಗಡೆ ಆಗಲಿದೆ. ಎರಡು ಸಿನಿಮಾದ ತಂಡಗಳು ಸೇರಿ ಬಿಡುಗಡೆಗೆ ಹೊಸ ಯೋಜನೆ ಹಾಕಿಕೊಂಡಿದ್ದಾರೆ. ಆ ಕುರಿತು ನಿರ್ದೇಶಕ ದ್ವಯರು ಮಾಹಿತಿ ಹಂಚಿಕೊಂಡಿದ್ದಾರೆ.

‘ಕೋಳಿ ಎಸ್ರು’ ಮತ್ತು ‘ಹದಿನೇಳೆಂಟು’ ಚಲನಚಿತ್ರಗಳು, ಬುಸಾನ್ ಅಂತರಾಷ್ಟ್ರೀಯ ಚಲನಚಿತ್ರೋತ್ಸವ, ಮಾಮಿ (MAMI), ಹಾಂಗ್ ಕಾಂಗ್ ಅಂತರಾಷ್ಟ್ರೀಯ ಚಲನಚಿತ್ರೋತ್ಸವ, ಕೋಲ್ಕತ್ತಾ ಅಂತರಾಷ್ಟ್ರೀಯ ಚಲನಚಿತ್ರೋತ್ಸವ, ಕೇರಳದ ಅಂತರಾಷ್ಟ್ರೀಯ ಚಲನಚಿತ್ರೋತ್ಸವ, TIFF ಕಿಡ್ಸ್, ಜಿಲನ್ ಚಲನಚಿತ್ರೋತ್ಸವ, ಮೆಲ್ಬೋರ್ನ್ ಫಿಲ್ಮ್ ಫೆಸ್ಟಿವಲ್ ಗೋವಾ ಸಿನಿಮೋತ್ಸವ, ಪ್ರೇಗ್ ಅಂತರಾಷ್ಟ್ರೀಯ ಚಲನಚಿತ್ರೋತ್ಸವ, ನ್ಯೂಯಾರ್ಕ್ ಇಂಡಿಯನ್ ಫಿಲ್ಮ್ ಫೆಸ್ಟಿವಲ್, ಒಟ್ಟಾವ ಇಂಡಿಯನ್ ಫಿಲ್ಮ್ ಫೆಸ್ಟಿವಲ್ ಮುಂತಾದ ಪ್ರತಿಷ್ಠಿತ ಚಿತ್ರೋತ್ಸವಗಳಿಗೆ ಆಯ್ಕೆ ಆಗಿದ್ದು ಮಾತ್ರವಲ್ಲ ಸುಮಾರು 50ಕ್ಕೂ ಹೆಚ್ಚು ಪ್ರಶಸ್ತಿಗಳಿಗೆ ನಾಮ ನಿರ್ದೇಶನ ಗೊಂಡು ಸುಮಾರು 24ಕ್ಕೂ ಹೆಚ್ಚು ಪ್ರಶಸ್ತಿಗಳನ್ನು ಗಳಿಸಿ ಪ್ರೇಕ್ಷಕರಿಂದ ಹಾಗೂ ವಿಮರ್ಶಕರಿಂದ ಮೆಚ್ಚುಗೆ ಪಡೆದಿವೆ.

ಇದನ್ನೂ ಓದಿ:‘ರಂಗಸಮುದ್ರ’ ಟ್ರೈಲರ್ ಬಿಡುಗಡೆ, ಅಪ್ಪು ನಟಿಸಬೇಕಿದ್ದ ಸಿನಿಮಾ ಇದು

ಇಂತಹ ಸದಭಿರುಚಿಯ ಚಿತ್ರಗಳು ಜನವರಿ 26 ರಂದು ರಾಜ್ಯಾದ್ಯಂತ ಮಲ್ಟಿಪ್ಲೆಕ್ಸ್ ಗಳಲ್ಲಿ ಬಿಡುಗಡೆಯಾಗುತ್ತಿದೆ. ಈ ಚಿತ್ರಗಳನ್ನು ಹೆಚ್ಚಿನ ಜನರಿಗೆ ತಲುಪಿಸುವ ಸಲುವಾಗಿ ನಾವು ಎರಡು ತಂಡದವರು ಸೇರಿ ಹೊಸ ಯೋಜನೆ ಹಾಕಿಕೊಂಡಿದ್ದೇವೆ. ಪರಸ್ಪರ ಲೈವ್ ಎಂಬ ವೆಬ್ ಸೈಟ್ ಮೂಲಕ ಎರಡು ಚಿತ್ರಗಳ ಟಿಕೇಟ್​ಗಳನ್ನು ಮಾರಾಟ ಮಾಡಲು ಆರಂಭಿಸಲಾಗಿದೆ. 400 ರೂಪಾಯಿ ಪಾವತಿಸಿ ಎರಡು ಚಿತ್ರಗಳ ಒಂದೊಂದು ಟಿಕೇಟ್ ಪಡೆಯಬಹುದು. ಒಂದಕ್ಕಿಂತ ಹೆಚ್ಚು ಟಿಕೆಟ್ ಗಳನ್ನೂ ಪಡೆಯಬಹುದು. ಈಗಿಂದಲೇ ಬುಕಿಂಗ್ ಓಪನ್ ಆಗಿದೆ. ಬಿಡುಗಡೆಯ ಹಿಂದಿನ ದಿನ ನಿಮಗೆ ಯಾವ ಮಲ್ಟಿಪ್ಲೆಕ್ಸ್ ಅನುಕೂಲವಾಗುತ್ತದೆಯೋ ಅಲ್ಲಿ ಟಿಕೇಟ್ ವ್ಯವಸ್ಥೆ ಮಾಡಿಕೊಡುತ್ತೇವೆ. ನಮ್ಮ ಈ ಪ್ರಯತ್ನಕ್ಕೆ ನಿಮ್ಮ ಬೆಂಬಲವಿರಲಿ ಎಂದು ನಿರ್ದೇಶಕರಾದ ಚಂಪಾ ಶೆಟ್ಟಿ ಹಾಗೂ ಪೃಥ್ವಿ ಕೋಣನೂರು ತಿಳಿಸಿದರು. ‘ಕೋಳಿ ಎಸ್ರು’ ಚಿತ್ರದಲ್ಲಿ ಅಭಿನಯಿಸಿರುವ ಅಕ್ಷತ ಪಾಂಡವಪುರ, ಅಪೇಕ್ಷ ನಾಗರಾಜ್ ಹಾಗೂ ‘ಹದಿನೇಳೆಂಟು’ ಚಿತ್ರದಲ್ಲಿ ನಟಿಸಿರುವ ನೀರಜ್ ಮ್ಯಾಥ್ಯೂ, ಶೆರ್ಲಿನ್ ತಮ್ಮ ಪಾತ್ರದ ಕುರಿತು ಮಾಹಿತಿ ನೀಡಿದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ